ಏರ್‌ಟೆಲ್ ಗ್ರಾಹಕರಿಗೆ ಶಾಕ್; ಕರ್ನಾಟಕವೂ ಸೇರಿದಂತೆ 7 ರಾಜ್ಯಗಳಲ್ಲಿ ರೀಚಾರ್ಜ್ ದರ ಹೆಚ್ಚಳ!
ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರಲ್ಲಿ ಏರ್‌ಟೆಕ್ ಅಗ್ರಸ್ಥಾನದಲ್ಲಿದ್ದು, ಭಾರತದಲ್ಲಿ ಬಹುಪಾಲು ಗ್ರಾಹಕರನ್ನು ಸೆಳದಿದೆ. ಇದರ ನಡುವೆ 5G ಸೇವೆ ಸಹ ನೀಡುತ್ತಿದ್ದು, ಏರ್‌ಟೆಲ್‌ನ ಗ್ರಾಹಕರು ಈವರೆಗೂ ಫುಲ್ ಖುಷಿಯಿಂದಲೇ ಇದ್ದರು. ಆದರೆ, ಕಂಪೆನಿಯ ಈ ಹೊಸ ನಿರ್ಧಾರದಿಂದ ಬೇಸರ ಪಡುವಂತಾಗಿದೆ. ಯಾಕೆಂದರೆ ತನ್ನ ಕನಿಷ್ಠ ರೀಚಾರ್ಜ್ ಪ್ಲ್ಯಾನ್ ದರವನ್ನು ಏರಿಕೆ ಮಾಡಿ ತನ್ನ ಗ್ರಾಹಕರಿಗೆ ಬೆಲೆ ಬಿಸಿ ಮುಟ್ಟಿಸಿದೆ.

ಹೌದು, ಏರ್‌ಟೆಲ್ 7 ರಾಜ್ಯಗಳಲ್ಲಿ ಕನಿಷ್ಠ ರೀಚಾರ್ಜ್ ದರಗಳನ್ನು ಹೆಚ್ಚಿಸಿದ್ದು, ಮೊದಲು ಈ ದರ ಏರಿಕೆ ಕ್ರಮವನ್ನು ಒಡಿಶಾ ಮತ್ತು ಹರಿಯಾಣದಲ್ಲಿ ಪ್ರಯೋಗಿಸಲಾಗಿತ್ತು. ಇದು ಏರ್‌ಟೆಲ್‌ಗೆ ಯಶಸ್ಸು ನೀಡಿದ ಬೆನ್ನಲ್ಲೇ ಈ ಎಲ್ಲಾ ರಾಜ್ಯಗಳಿಗೆ ವಿಸ್ತರಣೆ ಮಾಡಲಾಗಿದೆ. ಹಾಗಿದ್ರೆ, ಯಾವೆಲ್ಲಾ ರಾಜ್ಯಗಳಲ್ಲಿ ಇನ್ಮುಂದೆ ರೀಚಾರ್ಜ್ ಬೆಲೆ ಏರಿಕೆ?, ಹಳೆ ರೀಚಾರ್ಜ್ ಬೆಲೆ ಎಷ್ಟು? ಹಾಗೂ ಪರಿಷ್ಕೃತ ದರ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

57% ರಷ್ಟು ಹೆಚ್ಚಳ
ಯಾವುದೇ ಟೆಲಿಕಾಂ ಸೇವೆಗಳು ಅಲ್ಪಮಟ್ಟದಲ್ಲಿ ರೀಚಾರ್ಜ್ ಪ್ಲ್ಯಾನ್ ಏರಿಕೆ ಮಾಡುವುದು ಸಾಮಾನ್ಯದ ಸಂಗತಿ. ಆದರೆ, ಏರ್‌ಟೆಲ್ ಬರೋಬ್ಬರಿ 57% ರಷ್ಟು ಹೆಚ್ಚಳ ಮಾಡುವ ಮೂಲಕ ತನ್ನ ಗ್ರಾಹಕರಿಗೆ ಧಿಗ್ಭ್ರಮೆ ಮೂಡಿಸಿದೆ. ಇನ್ನು ಈ ಬೆಲೆ ಏರಿಕೆ ಕ್ರಮವನ್ನು ಒಂದು ವರ್ಷದ ಹಿಂದೆ ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದು.

ಹೊಸ ದರ ಎಷ್ಟು?
ಇನ್ಮುಂದೆ ಪ್ರಿಪೇಯ್ಡ್ ಬಳಕೆದಾರರು ಕನಿಷ್ಠ ಮಾಸಿಕ ರೀಚಾರ್ಜ್‌ಗೆ 155 ರೂ. ನೀಡಬೇಕಿದೆ. ಆದರೆ, ಈ ಪ್ಲ್ಯಾನ್‌ನಲ್ಲಿ ಅನಿಯಮಿತ ವಾಯ್ಸ್‌ಕಾಲ್ ಹಾಗೂ 1GB ಡೇಟಾ ಮತ್ತು 300 ಎಸ್‌ಎಮ್‌ಎಸ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು ಈ ಮೊದಲು ಇದ್ದ 99 ರೂ.ಗಳ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಬಳಕೆದಾರರು 200MB ಡೇಟಾ ಹಾಗೂ ಟಾಕ್ ಟೈಮ್ ಸೇವೆಯನ್ನು ಪಡೆದುಕೊಳ್ಳುತ್ತಿದ್ದರು. ಜೊತೆಗೆ ಈ ಪ್ಲ್ಯಾನ್ 28 ದಿನಗಳ ಮಾನ್ಯತೆ ಹೊಂದಿತ್ತು..ಆದರೆ, ಇನ್ಮುಂದೆ ಬಳಕೆದಾರರಿಗೆ ಇದು ಲಭ್ಯ ಇರುವುದಿಲ್ಲ. ಈ ಪ್ಲ್ಯಾನ್ ಅನ್ನು ಈಗ ಏರ್‌ಟೆಲ್ ಹಿಂತೆಗೆದುಕೊಂಡಿದೆ.

ಯಾವೆಲ್ಲಾ ರಾಜ್ಯಗಳಲ್ಲಿ ಅನ್ವಯ?
ಪ್ರಮುಖವಾಗಿ ಕರ್ನಾಟಕವೂ ಸೇರಿದಂತೆ ಆಂಧ್ರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಈಶಾನ್ಯ ಭಾಗ, ರಾಜಸ್ಥಾನ, ಮತ್ತು ಯುಪಿ-ಪಶ್ಚಿಮದಲ್ಲಿ ತನ್ನ ಕಡಿಮೆ ರೀಚಾರ್ಜ್ ಯೋಜನೆಗಳನ್ನು ಸ್ಥಗಿತಗೊಳಿಸಿದ್ದು, ಇನ್ಮುಂದೆ ಏರ್‌ಟೆಲ್‌ನ ಗ್ರಾಹಕರು 57% ಹೆಚ್ಚಿನ ಬೆಲೆಯಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ.

ಇನ್ನು ಈ ದರ ಏರಿಕೆ ಕ್ರಮವನ್ನು ಮೊದಲು ಅಂದರೆ ಕಳೆದ ವರ್ಷದ ನವೆಂಬರ್‌ನಲ್ಲಿ ಒಡಿಶಾ ಹಾಗೂ ಹರಿಯಾಣದಲ್ಲಿ ಪರೀಕ್ಷೆ ಮಾಡಲಾಗಿತ್ತು. ಅಂದರೆ, ಮೊದಲು ಅಲ್ಲಿನ ಗ್ರಾಹಕರಿಗೆ ಈ ರೀಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಲಾಗಿತ್ತು. ಈಗ ಹೆಚ್ಚಿನ ರಾಜ್ಯಗಳ ಜನರು ಸಹ ಹೆಚ್ಚಿನ ದರದ ರೀಚಾರ್ಜ್ ಅನ್ನು ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಏರ್‌ಟೆಲ್ ಹೇಳಿದ್ದೇನು?
ಉತ್ತಮ ಗ್ರಾಹಕ ಅನುಭವವನ್ನು ಒದಗಿಸಲು ನಾವು ಇಂದಿನಿಂದ ಮೀಟರ್ಡ್ ಸುಂಕವನ್ನು ಸ್ಥಗಿತಗೊಳಿಸಿದ್ದೇವೆ. ಹಾಗೆಯೇ ಅನಿಯಮಿತ ವಾಯ್ಸ್ ಕಾಲ್, 1GB ಡೇಟಾ ಮತ್ತು 300 ಟೆಕ್ಸ್ಟ್ ಸಂದೇಶಗಳೊಂದಿಗೆ ಏಳು ವಲಯಗಳಲ್ಲಿ 155 ರೂ.ಗಳ ಪ್ರವೇಶ ಮಟ್ಟದ ರೀಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದ್ದೇವೆ ಎಂದು ಏರ್‌ಟೆಲ್ ವಕ್ತಾರರು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಈ ಹೊಸ ಕನಿಷ್ಠ ರೀಚಾರ್ಜ್ ಯೋಜನೆಗಳು ಗ್ರಾಹಕರಿಗೆ ಹೆಚ್ಚಿನ ನಮ್ಯತೆ ಮತ್ತು ಉತ್ತಮ ಮೌಲ್ಯವನ್ನು ನೀಡುತ್ತದೆ ಎಂದು ಏರ್‌ಟೆಲ್ ತಿಳಿಸಿದೆ.

ಏರ್‌ಟೆಲ್ ಗ್ರಾಹಕರೆಷ್ಟು?
ಏರ್‌ಟೆಲ್ ತನ್ನ 328 ಮಿಲಿಯನ್ ಭಾರತದ ಮೊಬೈಲ್ ಬಳಕೆದಾರರಲ್ಲಿ ಸುಮಾರು 109 ಮಿಲಿಯನ್ ಡೇಟಾ ಏತರ ಬಳಕೆದಾರರನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇದರಲ್ಲಿ ಸರಿಸುಮಾರು 33-40 ಮಿಲಿಯನ್ ಜನರು ಕನಿಷ್ಟ ರೀಚಾರ್ಜ್ ಯೋಜನೆಗಳಲ್ಲಿ ಸೇವೆ ಪಡೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.


Click it and Unblock the Notifications








