ನಿಮಗೆ ತಿಳಿಯದಂತೆ ವಾಟ್ಸಾಪ್‌ನಲ್ಲಿ ಆನ್ ಆಗುತ್ತಿದೆಯಂತೆ ಮೈಕ್ರೋಫೋನ್?; ಭಾರತ ಸರ್ಕಾರ ಹೇಳಿದ್ದೇನು?
ವಾಟ್ಸಾಪ್ ಅನ್ನು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡಲು ಕಾರಣ ಅದರಲ್ಲಿ ಕಂಡುಬರುವ ಹೆಚ್ಚಿನ ಭದ್ರತಾ ಫೀಚರ್ಸ್. ಆದರೆ, ವಾಟ್ಸಾಪ್ ಬಳಕೆದಾರರು ವಾಟ್ಸಾಪ್ ಬಳಕೆ ಮಾಡಬೇಕೋ ಅಥವಾ ಬೇಡವೋ ಎನ್ನುವ ಆತಂಕ ಉಂಟಾಗುವ ಮಾಹಿತಿಯೊಂದು ಹೊರಬಿದ್ದಿದ್ದು, ಇದು ನಂಬಲು ಅರ್ಹ ಎಂಬಂತೆ ಮಸ್ಕ್ ಸಹ ವಾಟ್ಸಾಪ್ ಅನ್ನು ದೂರಿದ್ದಾರೆ.
ಹೌದು, ವಾಟ್ಸಾಪ್ ನಿಮ್ಮ ಖಾಸಗಿ ವಿಚಾರವನ್ನು ಕೇಳಿಸಿಕೊಳ್ಳುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ. ಯಾಕೆಂದರೆ ಹಿನ್ನೆಲೆಯಲ್ಲಿ ಮೈಕ್ರೊಫೋನ್ ಕೆಲಸ ಮಾಡುತ್ತಿದ್ದು, ಇದು ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಳ್ಳಲಿದೆ ಎನ್ನುವ ಆರೋಪ ಇದೆ. ಈ ಬಗ್ಗೆ ಎಲಾನ್ ಮಸ್ಕ್ ವಾಟ್ಸಾಪ್ಗೆ ಎಚ್ಚರಿಕೆ ನೀಡಿದ್ದು, ಭಾರತ ಸರ್ಕಾರ ಸಹ ಈ ಬಗ್ಗೆ ತನಿಖೆ ನಡೆಸುತ್ತದೆ ಎಂದು ತಿಳಿಸಿದೆ.ಹಾಗಿದ್ರೆ,ವಾಟ್ಸಾಪ್‌ನಲ್ಲಿ ಆಗುತ್ತಿರುವ ಬೆಳವಣಿಗೆ ಏನು?,ಈ ಭದ್ರತಾ ವೈಫಲ್ಯದಿಂದ ಏನೆಲ್ಲಾ ಸಮಸ್ಯೆಗಳು ನಿರ್ಮಾಣ ಆಗಲಿವೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಎಲಾನ್ ಮಸ್ಕ್‌ರಿಂದ ಜಗತ್ತಿಗೆ ತಿಳಿದ ವಿಚಾರ: ವಾಟ್ಸಾಪ್‌ನಲ್ಲಿ ಈ ವೈಫಲ್ಯದ ಬಗ್ಗೆ ಟ್ವಿಟ್ಟರ್ ಇಂಜಿನಿಯರ್ ಓರ್ವರು ಟ್ವೀಟ್ ಮಾಡಿದ್ದು, ಈ ಬಗ್ಗೆ ಮಾರ್ಕ್ ಜುಕರ್‌ಬರ್ಗ್ ಸಹ ವಾಟ್ಸಾಪ್ ಅನ್ನು ನಂಬಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದಾಗಿ ಬಹುಪಾಲು ವಾಟ್ಸಾಪ್ ಬಳಕೆದಾರರಿಗೆ ಶಾಕ್ ಹೊಡೆದಂತೆ ಆಗಿದೆ. ಯಾಕೆಂದರೆ, ಯುವಕರಿಂದ ಹಿಡಿದು ಮುದುಕರವರೆಗೂ ಇದನ್ನು ಬಳಕೆ ಮಾಡುತ್ತಿದ್ದು, ಈ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನೂ ಏನೇನೆಲ್ಲಾ ಸಮಸ್ಯೆ ಇರಬಹುದು ಎಂದು ಬೆಚ್ಚಿಬಿದ್ದಿದ್ದಾರೆ.
ಇನ್ನು ಮಸ್ಕ್ ಅವರು ಮಾಡಿರುವ ವಾಟ್ಸಾಪ್ ಅನ್ನು ನಂಬಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿರುವ ಟ್ವೀಟ್ ಸಾವಿರಾರು ರೀಟ್ವೀಟ್‌ಗಳು, ಲೈಕ್‌ಗಳು ಮತ್ತು ಕಾಮೆಂಟ್‌ಗಳೊಂದಿಗೆ ವೈರಲ್ ಆಗಿದೆ. ಇದು ಭಾರತ ಸರ್ಕಾರ ಮತ್ತು ಭಾರತದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರ ಗಮನವನ್ನು ಸಹ ಸೆಳೆದಿದ್ದು, ಸರ್ಕಾರವು ಈ ವಿಷಯವನ್ನು ತನಿಖೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ವಾಟ್ಸಾಪ್‌ನಲ್ಲಿ ಕಂಡು ಬರುತ್ತಿರುವ ದೋಷ ಏನು?: ಟ್ವಿಟ್ಟರ್ ಇಂಜಿನಿಯರ್ ಫೋಡ್ ಡಬೀರಿ ಎಂಬುವರು ತಾವು ಮಲಗಿದ್ದಾಗ ಹಿನ್ನೆಲೆಯಲ್ಲಿ ಮೈಕ್ರೊಫೋನ್ ಬಳಕೆ ಆಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ತನ್ನ ಪಿಕ್ಸೆಲ್ ಫೋನ್‌ನ ಮೈಕ್ರೊಫೋನ್ ನಾವು ನಿದ್ರಿಸುತ್ತಿರುವಾಗ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ. ನಾನು ಮಲಗಿದ ನಂತರ ಮತ್ತು ಬೆಳಗ್ಗೆ 6 ಗಂಟೆಗೆ ಎಚ್ಚರವಾಗುವವರೆಗೂ ಇದು ಕೆಲಸ ಮಾಡುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಟ್ವಿಟರ್ ಇಂಜಿನಿಯರ್ ಫೋಡ್ ಡಬೀರಿ ಅವರ ಟ್ವೀಟ್ ಅನ್ನು ಉಲ್ಲೇಖಿಸಿರುವ ಚಂದ್ರಶೇಖರ್, ಇದು ಸ್ವೀಕಾರಾರ್ಹವಲ್ಲ, ಗೌಪ್ಯತೆಯ ಉಲ್ಲಂಘನೆಯಾಗಿದೆ. ನಾವು ಇದನ್ನು ತಕ್ಷಣವೇ ಪರಿಶೀಲಿಸುತ್ತೇವೆ ಮತ್ತು ಹೊಸ ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್ (#DPDP) ಅಡಿಯಲ್ಲಿ ಯಾವುದೇ ಗೌಪ್ಯತೆಯ ಉಲ್ಲಂಘನೆಯ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಲಾಗಿದೆ. ಈ ಮೂಲಕ ವಾಟ್ಸಾಪ್ ಬಳಕೆದಾರರು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ವಾಟ್ಸಾಪ್ ಹೇಳಿದ್ದೇನು?: ಈ ಎಲ್ಲಾ ಚರ್ಚೆಗಳ ನಡುವೆ ವಾಟ್ಸಾಪ್ ಸಹ ಈ ಸಮಸ್ಯೆಯನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. ಅದರೆ, ಸಂಪೂರ್ಣವಾಗಿ ಆಂಡ್ರಾಯ್ಡ್ ಅನ್ನು ದೂರಿದ್ದು, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಸಮಸ್ಯೆಯು ಆಂಡ್ರಾಯ್ಡ್‌ನಲ್ಲಿದೆ ಮತ್ತು ವಾಟ್ಸಾಪ್‌ನಲ್ಲಿ ಅಲ್ಲ ಎಂದು ಉಲ್ಲೇಖ ಮಾಡಲಾಗಿದೆ. ಜೊತೆಗೆ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುವ ಎಲ್ಲಾ ಮೆಸೆಜ್‌ಗಳು ಮತ್ತು ಕರೆಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿದ್ದು, ಇವುಗಳನ್ನು ಯಾವುದೇ ಮಧ್ಯವರ್ತಿಗಳು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಉಚ್ಚರಿಸಿದೆ.

ಇನ್ನು ಕಳೆದ 24 ಗಂಟೆಗಳಲ್ಲಿ ನಾವು ಟ್ವಿಟರ್ ಇಂಜಿನಿಯರ್‌ನೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರು ತಮ್ಮ ಪಿಕ್ಸೆಲ್ ಫೋನ್ ಮತ್ತು ವಾಟ್ಸಾಪ್‌ನಲ್ಲಿ ಸಮಸ್ಯೆಯನ್ನು ಪೋಸ್ಟ್ ಮಾಡಿದ್ದಾರೆ. ಇದು ಆಂಡ್ರಾಯ್ಡ್ ನಲ್ಲಿನ ದೋಷವಾಗಿದ್ದು, ಅವರ ಗೌಪ್ಯತೆ ಡ್ಯಾಶ್‌ಬೋರ್ಡ್‌ನಲ್ಲಿ ಮಾಹಿತಿಯನ್ನು ತಪ್ಪಾಗಿ ಆಟ್ರಿಬ್ಯೂಟ್ ಮಾಡಲಿದೆ. ತನಿಖೆ ಮಾಡಲು ಗೂಗಲ್‌ಗೆ ಕೇಳಿದ್ದೇವೆ ಎಂದು ತಿಳಿಸಿದೆ.
ಅಷ್ಟೇ ಅಲ್ಲದೆ, ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಮೈಕ್ ಸೆಟ್ಟಿಂಗ್‌ಗಳ ಮೇಲೆ ಬಳಕೆದಾರರು ಸಂಪೂರ್ಣ ಕಂಟ್ರೋಲ್ ಅನ್ನು ಹೊಂದಿದ್ದಾರೆ. ಈ ಮೂಲಕ ಆಫ್ ಅಥವಾ ಆನ್ ಮಾಡಬಹುದು. ಜೊತೆಗೆ ಬಳಕೆದಾರರು ಕರೆ ಮಾಡುವಾಗ ಅಥವಾ ವಾಯ್ಸ್ ನೋಟ್ ಹಾಗೂ ವಿಡಿಯೋಗಳನ್ನು ರೆಕಾರ್ಡ್ ಮಾಡುವಾಗ ಮಾತ್ರ ವಾಟ್ಸಾಪ್ ಮೈಕ್ ಅನ್ನು ಬಳಕೆ ಮಾಡುತ್ತದೆ. ಈ ಎಲ್ಲಾ ಮೆಸೆಜ್ ಸಹ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನಿಂದ ರಕ್ಷಿಸಲಾಗುತ್ತದೆ ಆದ್ದರಿಂದ ವಾಟ್ಸಾಪ್ ಅವುಗಳನ್ನು ಕೇಳಲು ಸಾಧ್ಯವಿಲ್ಲ ಎಂದು ಉತ್ತರಿಸಿದೆ.
ಈ ಬಗ್ಗೆ ಪಬ್ಲಿಕ್ ಪಾಲಿಸಿ ಇಂಡಿಯಾದ ನಿರ್ದೇಶಕ ಶಿವನಾಥ್ ತುಕ್ರಾಲ್ ಮಾಹಿತಿ ನೀಡಿದ್ದು, ಇದು ಆಂಡ್ರಾಯ್ಡ್‌ನಲ್ಲಿನ ದೋಷ ಎಂದು ನಾವು ತಿಳಿದಿದ್ದೇವೆ. ಹಾಗೆಯೇ ಅವರು ಅದನ್ನು ಪರಿಶೀಲಿಸುತ್ತಿದ್ದಾರೆ. ನಿಮ್ಮ ಕರೆಗಳು ವಾಯ್ಸ್ ನೋಟ್ ಅನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನಿಂದ ರಕ್ಷಿಸಲ್ಪಟ್ಟಿವೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ಮೈಕ್ರೊಫೋನ್ ಮೂಲಕ ಏನನ್ನೂ ಕೇಳಲೂ ಸಾಧ್ಯವಿಲ್ಲ. ಗೌಪ್ಯತೆಯನ್ನು ಕಾಪಾಡುವಲ್ಲಿ ನಾವು ಮುಂದಾಗಿದ್ದೇವೆ ಎಂದಿದ್ದಾರೆ.


Click it and Unblock the Notifications








