ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ 2022ರಲ್ಲಿ ಪಡೆದ ಸಂಬಳ ಎಷ್ಟೆಂದು ಗೊತ್ತಾ?: ಶಾಕ್ ಅಗ್ತೀರಾ!
ಟೆಕ್ ದೈತ್ಯ ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಅವರು 2022 ರಲ್ಲಿ ನಾವು ನೀವೆಲ್ಲಾ ಹುಬ್ಬೇರಿಸುವಷ್ಟು ವೇತನವನ್ನು ಗೂಗಲ್‌ನಿಂದ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸೆಕ್ಯುರಿಟೀಸ್ ಫೈಲಿಂಗ್‌ನಲ್ಲಿ ಮಾಹಿತಿ ಉಲ್ಲೇಖಿಸಲಾಗಿದ್ದು, ಇದನ್ನು ಪ್ರಮುಖ ಸುದ್ದಿ ಸಂಸ್ಥೆಯಾದ ರಾಯಿಟರ್ಸ್ ವರದಿ ಮಾಡಿದೆ.
ಹೌದು, ಗೂಗಲ್ ಈಗಾಗಲೇ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದ್ದು, ಈ ನಡುವೆ ಸಂಸ್ಥೆಯಲ್ಲಿ ಪ್ರಮುಖ ಬೆಳವಣಿಗೆ ಸಂಭವಿಸುತ್ತಿವೆ. ಆದರೆ, ಸಿಇಒ ವಿಚಾರದಲ್ಲಿ ಮಾತ್ರ ಆಶಾದಾಯಕ ಬೆಳವಣಿಗೆ ಕಂಡುಬಂದಿದ್ದು, ಈ ಮೂಲಕ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾರ್ಪೋರೇಟ್ ನಾಯಕರಲ್ಲಿ ಪ್ರಮುಖ ಎನಿಸಿಕೊಂಡಿದ್ದಾರೆ. ಹಾಗಿದ್ರೆ, ಗೂಗಲ್ ಇವರಿಗೆ ಪಾವತಿ ಮಾಡಿದ ವೇತನ ಎಷ್ಟು? ಗೂಗಲ್‌ನಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಿ.

ಹೆಚ್ಚಾದ ಪಿಚೈ ವೇತನ: ಸಿಇಒ ಸುಂದರ್ ಪಿಚೈ ಅವರು ಕಳೆದ ವರ್ಷ ಅಂದರೆ 2022 ರಲ್ಲಿ ಸುಮಾರು $218 ಮಿಲಿಯನ್ ಅಂದರೆ ಭಾರತೀಯ ರೂ. ಗಳಲ್ಲಿ 1,788 ಕೋಟಿ ಪಡೆದುಕೊಂಡಿದ್ದಾರೆ. ಪ್ರಮುಖ ವಿಷಯ ಎಂದರೆ ಆಲ್ಫಾಬೆಟ್ ಉದ್ಯೋಗಿಗಳು ಗಳಿಸುವ ಸರಾಸರಿ ವೇತನದ 800 ಪಟ್ಟು ಹೆಚ್ಚು ವೇತನವನ್ನು ಇವರು ಪಡೆದಿದ್ದಾರೆ ಎಂದು ಪ್ರಮುಖ ದಾಖಲೆಗಳಿಂದ ತಿಳಿದುಬಂದಿದೆ.
ಇಷ್ಟೊಂದು ವೇತನ ಯಾಕಾಗಿ?: ಪಿಚೈ ಅವರ ನಾಯಕತ್ವದಲ್ಲಿ ಗೂಗಲ್ ತನ್ನ ಪ್ರಮುಖ ಜಾಹೀರಾತು ಮತ್ತು ಯೂಟ್ಯೂಬ್ ವ್ಯವಹಾರದಿಂದ ಭಾರೀ ಲಾಭ ಗಳಿಸಿದೆ ಎನ್ನಲಾಗಿದೆ. ಅದರಲ್ಲೂ ಯಂತ್ರ ಕಲಿಕೆ, ಹಾರ್ಡ್‌ವೇರ್ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿಯೂ ಭಾರೀ ಹೂಡಿಕೆ ಮಾಡಿದೆಯಂತೆ. ಹೀಗಾಗಿ ಸ್ಟಾಕ್ ಪ್ರಶಸ್ತಿಯಿಂದಾಗಿ ಪಿಚೈಗೆ ಇಷ್ಟು ಸಂಬಳ ಬಂದಿದೆ ಎಂದು ಕಂಪನಿ ತಿಳಿಸಿದೆ.
ಪಿಚೈ ಅವರಿಗೆ ನೀಡಲಾದ ಹೆಚ್ಚಿನ ವೇತನದ ಅಂತರವು ಆದಾಯದ ಅಸಮಾನತೆ ಮತ್ತು ನ್ಯಾಯೋಚಿತ ಪರಿಹಾರದ ಅಭ್ಯಾಸಗಳ ಬಗ್ಗೆ ಕಳವಳ ಹುಟ್ಟುಹಾಕಿದೆ. ಸಂಸ್ಥೆಯು ತನ್ನ ಉದ್ಯೋಗಿಗಳ ಕಲ್ಯಾಣಕ್ಕಿಂತ ಕಾರ್ಯನಿರ್ವಾಹಕ ವೇತನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎನ್ನುವ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಈ ಟೀಕೆಗೆ ಕಾರಣ ಇತ್ತೀಚಿನ ತಿಂಗಳುಗಳಲ್ಲಿ ವಿಶ್ವಾದ್ಯಂತ ಆಲ್ಫಾಬೆಟ್‌ನ ವಿವಿಧ ಕಚೇರಿಗಳಲ್ಲಿ ವಜಾಗೊಳಿಸುವಿಕೆ ಪ್ರಕ್ರಿಯೆ ನಡೆಯುತ್ತಿರುವುದು.

ಸಾವಿರಾರು ಉದ್ಯೋಗ ಕಡಿತ: ಗೂಗಲ್‌ನ ಮೂಲ ಕಂಪನಿ ಆಲ್ಫಾಬೆಟ್ ಜಾಗತಿಕವಾಗಿ ಉದ್ಯೋಗಗಳನ್ನು ಕಡಿತಗೊಳಿಸುತ್ತಿದ್ದು, ಇದರ ಭಾಗವಾಗಿಯೇ ಜನವರಿಯಲ್ಲಿ ವಿಶ್ವಾದ್ಯಂತ 12,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಣೆ ಮಾಡಿತ್ತು. ಅಂದರೆ ಜಾಗತಿಕ ಉದ್ಯೋಗಿಗಳ ಶೇಕಡಾ 6 ಕ್ಕೆ ಸಮಾನವಾದ ಉದ್ಯೋಗಗಳನ್ನು ಗೂಗಲ್ ಕಡಿತಗೊಳಿಸುತ್ತಿದೆ. ಇದಕ್ಕೂ ಮೊದಲು ಗೂಗಲ್‌ನ ಈ ಬೆಳವಣಿಗೆಗೆ ಹೆದರಿ ಕೆಲವು ಮಂದಿ ಕೆಲಸ ಸಹ ಬಿಟ್ಟಿದ್ದಾರೆ.
ಕಂಪೆನಿಯ ವೆಚ್ಚ ಕಡಿತ ಕ್ರಮಗಳ ಭಾಗವಾಗಿ ಈ ವರ್ಷ ಗೂಗಲ್‌ನ ಉನ್ನತ ಅಧಿಕಾರಿಗಳ ವೇತನ ಕಡಿತವಾಗುತ್ತದೆ ಎಂದು ಸುಂದರ್ ಪಿಚೈ ಈ ವರ್ಷದ ಜನವರಿಯಲ್ಲಿ ಘೋಷಣೆ ಮಾಡಿದ್ದರು. ಈ ಸಂಬಂಧ ಯುಎಸ್‌ನಲ್ಲಿರುವ ಉದ್ಯೋಗಿಗಳಿಗೆ ಪ್ರತ್ಯೇಕ ಇಮೇಲ್ ಅನ್ನು ಈಗಾಗಲೇ ಕಳುಹಿಸಲಾಗಿದೆ.ಆದರೆ, ಇತರ ದೇಶಗಳಲ್ಲಿ ಸ್ಥಳೀಯ ಕಾನೂನುಗಳಿಂದಾಗಿ ಪ್ರಕ್ರಿಯೆಯು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು.
ಇದಾದ ನಂತರ ಅಂದರೆ ಮಾರ್ಚ್‌ನಲ್ಲಿ ಸುಮಾರು 200 ಕ್ಕೂ ಹೆಚ್ಚು ಕೆಲಸಗಾರರನ್ನು ವಜಾಗೊಳಿಸಿದ ಬಳಿಕ ಗೂಗಲ್ ಉದ್ಯೋಗಿಗಳು ಕಂಪೆನಿಯ ಜ್ಯೂರಿಚ್ ಕಚೇರಿಗಳಲ್ಲಿ ಸಾರ್ವಜನಿಕ ವಾಕ್‌ಔಟ್ ನಡೆಸಿದರು. ಜೊತೆಗೆ ಈ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಆಡಳಿತ ಮಂಡಳಿ ತಪ್ಪು ನಿರ್ಧಾರ ಮಾಡುತ್ತಿದೆ ಎಂದು ನೌಕರರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಎಲ್ಲಾ ಕಾರಣಕ್ಕೆ ಪಿಚೈ ಅವರ ವೇತನಕ್ಕೆ ಸಂಬಂಧಿಸಿದಂತೆ ಉದ್ಯೋಗಿಗಳಲ್ಲಿ ಇನ್ನಷ್ಟು ಅಸಮಾಧಾನ ಹೆಚ್ಚಲಿದೆ.

ಕಂಪೆನಿಯು ತನ್ನಲ್ಲಿ ಉಂಟಾಗಿರುವ ಈ ಬಿಕ್ಕಟ್ಟನ್ನು ನಿವಾರಿಸಲು ವಿವಿಧ ಮಾರ್ಗಗಳ ಚಿಂತನೆಯಲ್ಲಿ ನಿರತವಾಗಿದೆ. ಜೊತೆಗೆ ಎಐ ಅನ್ನು ಪ್ರಾರಂಭಿಸಲು ಶ್ರಮಿಸುತ್ತಿದೆ. ಗೂಗಲ್ ಸರ್ಚ್‌ನಲ್ಲಿ ಹಲವು ಸಾಮರ್ಥ್ಯಗಳನ್ನು ಹೊಂದಿರುವ ಎಐ ಅನ್ನು ಪರಿಚಯಿಸಲು ಗೂಗಲ್ ಮ್ಯಾಗಿ ಎಂಬ ಕೋಡ್ ಹೆಸರಿನಲ್ಲಿ ಪ್ರಯೋಗಗಳನ್ನು ನಡೆಸುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.


Click it and Unblock the Notifications








