Amazon ನಲ್ಲಿ ಇನ್ಮುಂದೆ ಆರ್ಡರ್ ಮಾಡುವ ವಸ್ತುಗಳನ್ನು ನಿಮ್ಮಿಷ್ಟದಂತೆ ಕಸ್ಟಮೈಸ್ ಮಾಡಬಹುದು!
ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ (Amazon) ಈವರೆಗೂ ದೊಡ್ಡ ಪ್ರಮಾಣದ ರಿಯಾಯಿತಿಗಳನ್ನು ನೀಡುವ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ಆದರೆ, ಇನ್ಮುಂದೆ ತನ್ನ ಗ್ರಾಹಕರಿಗೆ ವಿಶೇಷವಾದ ಹೊಸ ಸೇವೆ ನೀಡಲು ಮುಂದಾಗಿದ್ದು, ಈ ಮೂಲಕ ಇತರೆ ಇ-ಕಾಮರ್ಸ್ ಸೈಟ್‌ಗಳಿಗೆ ತೀವ್ರ ಪೈಪೋಟಿ ನೀಡಲು ಮುಂದಾಗಿದೆ.
ಹೌದು, ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಇ-ಕಾಮರ್ಸ್ ಸೈಟ್‌ಗಳು ನಿತ್ಯವೂ ಒಂದಲ್ಲಾ ಒಂದು ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡುತ್ತವೆ. ಅದರಂತೆ ಈಗ ಅಮೆಜಾನ್ ಸಹ ತುಂಬಾ ವಿಶೇಷ ಎನಿಸುವ ಹಾಗೂ ಹಲವರಿಗೆ ಅಗತ್ಯವಾದ ಸೌಲಭ್ಯವನ್ನು ಘೋಷಣೆ ಮಾಡಿದ್ದು, ಈ ಮೂಲಕ ಗ್ರಾಹಕರು ತಮಗೆ ಇಷ್ಟವಾದ ಹಾಗೆ ವಸ್ತುಗಳನ್ನು ಕಸ್ಟಮೈಸ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಹಾಗಿದ್ರೆ, ಏನಿದು ಹೊಸ ಸೌಲಭ್ಯ?, ಯಾವೆಲ್ಲಾ ವಿಭಾಗದ ವಸ್ತುಗಳಿಗೆ ಇದು ಅನ್ವಯ ಆಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಇಷ್ಟದ ಉತ್ಪನ್ನಗಳನ್ನು ಕಸ್ಟಮೈಸ್ ಮಾಡಬಹುದು: ನೀವು ಇನ್ಮುಂದೆ ಅಮೆಜಾನ್‌ನಲ್ಲಿ ನಿಮ್ಮ ಮೆಚ್ಚಿನ ಉತ್ಪನ್ನಗಳನ್ನು ಕಸ್ಟಮೈಸ್ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಅಂದರೆ ಈವರೆಗೂ ಸಹ ಮಾರಾಟಗಾರರು ಹೇಗೆ ತಯಾರಿಸಿದ್ದಾರೋ ಅದನ್ನೇ ಇಷ್ಟ ಪಟ್ಟೋ ಅಥವಾ ಇಷ್ಟ ವಿಲ್ಲದೆಯೋ ಖರೀದಿ ಮಾಡಬೇಕಾಗಿತ್ತು. ಆದರೆ, ಈ ಹೊಸ ಸೌಲಭ್ಯದಿಂದ ಉತ್ಪನ್ನಗಳನ್ನು ನಿಮ್ಮ ಆಲೋಚನೆಗೆ ತಕ್ಕಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು.
ಈ ಸಂಬಂಧ ಅಮೆಜಾನ್ ಮಾಹಿತಿ ನೀಡಿದ್ದು, ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿದಾರರು ತಮ್ಮ ಉತ್ಪನ್ನಗಳನ್ನು ತಮ್ಮ ಭಾವನೆಗೆ ತಕ್ಕಂತೆ ಕಸ್ಟಮೈಸ್ ಮಾಡಲು ಅನುಮತಿಸುತ್ತದೆ ಎಂದು ಹೇಳಿದೆ. ಜೊತೆಗೆ 76 ವಿಭಿನ್ನ ವರ್ಗಗಳಿಂದ 10,000ಕ್ಕೂ ಹೆಚ್ಚು ಉತ್ಪನ್ನಗಳ ವ್ಯಾಪಕ ಆಯ್ಕೆಯಲ್ಲಿ ಈ ಸೌಲಭ್ಯ ಲಭ್ಯ ಇದೆ ಎಂದೂ ಸಹ ತಿಳಿಸಲಾಗಿದೆ. ಇದರಿಂದಾಗಿ ನೀವು ಅಮೆಜಾನ್‌ನಲ್ಲಿ ಆರ್ಡರ್ ಮಾಡುವಾಗ ನಿಮಗೆ ವಿವಿಧ ಕಸ್ಟಮೈಸ್ ಆಯ್ಕೆ ಲಭ್ಯ ಇರಲಿದೆ.
ಇನ್ನು ನೀವು ಕಸ್ಟಮೈಸ್ ಆಯ್ಕೆಯಲ್ಲಿ ಯಾವುದೇ ಪ್ರೊಡಕ್ಟ್ ಅನ್ನು ನಿಮ್ಮಿಷ್ಟದ ಹಾಗೆ ಬದಲಾಯಿಸಲು ದೃಶ್ಯ ವಿನ್ಯಾಸದ ಟೂಲ್ಸ್ ಆಯ್ಕೆಯನ್ನು ಅಮೆಜಾನ್ ನೀಡುತ್ತದೆ. ಇದರೊಂದಿಗೆ ನೈಜ ಸಮಯದಲ್ಲಿ ಅಂತಿಮ ಉತ್ಪನ್ನವನ್ನು ಸಹ ವೀಕ್ಷಣೆ ಮಾಡಲು ಅನುವು ಮಾಡಿಕೊಡಲಿದ್ದು, ಆರ್ಡರ್ ನಿಮ್ಮ ಕೈಗೆ ತಲುಪುವ ಮುನ್ನವೇ ಅದು ಹೇಗೆ ಕಾಣಿಸಲಿದೆ ಎಂದು ಅಂದಾಜಿಸಿಕೊಳ್ಳಬಹುದು.

ಯಾವೆಲ್ಲಾ ಪ್ರೊಡಕ್ಸ್‌ಗಳಿಗೆ ಈ ಸೌಲಭ್ಯ?: ಅಮೆಜಾನ್‌ನಲ್ಲಿ ಲಭ್ಯ ಇರುವ ವಿಂಡೋ ಬ್ಲೈಂಡ್‌ಗಳು, ಬ್ಲಾಂಕೆಟ್‌ಗಳು, ಗೃಹಾಲಂಕಾರ ವಸ್ತುಗಳು, ವಾಲ್ ಆರ್ಟ್, ಸಿಗ್ನೇಜ್, ಪೀಠೋಪಕರಣಗಳು, ಪೆನ್ ಗಳು, ನೆಕ್ಲೇಸ್, ವಾಟರ್ ಬಾಟಲ್, ಮಗ್‌ಗಳು, ಉಡುಪುಗಳು, ಆಭರಣಗಳು, ಗಾಲ್ಫ್ ಕ್ಲಬ್‌ಗಳು, ಫೋನ್ ಕವರ್‌ಗಳು, ನೋಟ್‌ಬುಕ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ವೈಯಕ್ತೀಕರಿಸಲು ಅನುವು ಮಾಡಿಕೊಡಲಾಗಿದೆ.
ಇನ್ನು ಗ್ರಾಹಕೀಕರಣ ಆಯ್ಕೆಯಲ್ಲಿ ನವೀನ ಸಂದೇಶಗಳನ್ನು ಸಹ ಆಡ್ ಮಾಡಬಹುದಾಗಿದ್ದು, ಭಾವನೆಯನ್ನು ವ್ಯಕ್ತಪಡಿಸಲು ಚಿತ್ರಗಳನ್ನೂ ಸಹ ಬಳಕೆ ಮಾಡಬಹುದಾಗಿದೆ. ಇನ್ನು ಪಠ್ಯವನ್ನು ಸೇರಿಸಲು ಅಥವಾ ಪ್ರೊಡಕ್ಟ್ ಮೇಲೆ ಕೆತ್ತನೆ ಮಾಡಲು ವಿವಿಧ ರೀತಿಯ ಫಾಂಟ್ ಶೈಲಿಗಳು ಮತ್ತು ಬಣ್ಣಗಳ ಆಯ್ಕೆ ನೀಡಲಾಗಿದೆ. ಜೊತೆಗೆ ಮಾರಾಟಗಾರರು ಒದಗಿಸುವ ಇತರ ಕಸ್ಟಮೈಸೇಶನ್‌ಗಳಿಂದ ಗ್ರಾಹಕರಿಗೆ ಇನ್ನೂ ಹೆಚ್ಚಿನ ಆಯ್ಕೆ ಲಭ್ಯ ಆಗಲಿದೆ ಎನ್ನಲಾಗಿದೆ.
ಅಮೆಜಾನ್ ವಾರ್ಷಿಕ ಮಾರಾಟ: ಅಮೆಜಾನ್ ಇತ್ತ ಗ್ರಾಹಕರಿಗೆ ಈ ಗುಡ್ ನ್ಯೂಸ್ ನೀಡುವ ಜೊತೆಗೆ ತನ್ನ ವಾರ್ಷಿಕ ಎರಡು-ದಿನಗಳ ಸೇಲ್‌ಗೆ ತಯಾರಿ ನಡೆಸುತ್ತಿದೆ. ಇದನ್ನು ಪ್ರೈಮ್ ಡೇ 2023 ಎಂದು ಕರೆಯಲಾಗುತ್ತಿದ್ದು, ಈ ಮಾರಾಟವು ಜುಲೈ 15 ರಂದು 12:00 AM ಕ್ಕೆ ಆರಂಭ ಆಗಿ ಜುಲೈ 16, 2023 ರವರೆಗೆ ಇರುತ್ತದೆ. ಪ್ರೈಮ್ ಡೇನ ಏಳನೇ ಆವೃತ್ತಿ ಇದಾಗಿದ್ದು, ಈ ಬಾರಿ ಹೆಚ್ಚಿನ ಪ್ರೊಡಕ್ಟ್‌ಗಳಿಗೆ ದೊಡ್ಡ ರಿಯಾಯಿತಿ ಸಿಗಲಿದೆ ಎನ್ನಲಾಗಿದೆ. ಜೊತೆಗೆ ಲಾಂಚ್‌ಗಳು ಸಹ ಆಗಲಿವೆ.


Click it and Unblock the Notifications








