Hyundai vehicles: ವಾಹನ ಪ್ರಿಯರಿಗೆ ಸಿಹಿ ಸುದ್ದಿ: ಅಮೆಜಾನ್‌ನಲ್ಲಿಯೂ ಹ್ಯುಂಡೈ ವಾಹನಗಳನ್ನು ಖರೀದಿ ಮಾಡಬಹುದು!
ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಎಂದರೆ ಭಾರತದಲ್ಲಿ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ (Amazon, Flipkart). ಈ ಮೂಲಕ ಜನರು ತಮಗೆ ಇಷ್ಟ ಇರುವ ಯಾವುದೇ ವಸ್ತುಗಳನ್ನು ಆರ್ಡರ್ ಮಾಡುತ್ತಾರೆ ಅದೂ ಸಹ ಆಫರ್ ಬೆಲೆಗಳಲ್ಲಿ. ಆದರೆ, ಇನ್ಮುಂದೆ ಕಾರ್‌ಗಳನ್ನೂ ಸಹ ಅಮೆಜಾನ್‌ನಲ್ಲಿ ಆರ್ಡರ್ ಮಾಡಬಹುದು ಎಂದರೆ ನೀವು ನಂಬಲೇ ಬೇಕು.
ಹೌದು, ಈ ವಿಷಯ ಕೇಳಿ ನೀವು ಶಾಕ್ ಆಗಿರಬಹುದು. ಜೊತೆಗೆ ಆಟಿಕೆ ಕಾರುಗಳನ್ನು ಮಾರಬಹುದೇನೋ ಎಂದೂ ಸಹ ಅಂದುಕೊಂಡಿರಬಹುದು. ಆದರೆ, ಇದು ನಿಜವಲ್ಲ. ಬದಲಾಗಿ ಹ್ಯುಂಡೈ ವಾಹನಗಳನ್ನು (Hyundai vehicle) ನೀವು ಅಮೆಜಾನ್‌ನಲ್ಲಿ ಆರ್ಡರ್ ಮಾಡಲು ಅನುಕೂಲ ಮಾಡಿಕೊಡಲಾಗುತ್ತಿದೆ. ಹಾಗಿದ್ರೆ, ಏನಿದು ಹೊಸ ವಿಷಯ?, ನಿಜಕ್ಕೂ ಆನ್‌ಲೈನ್‌ನಲ್ಲಿ ಅದೂ ಅಮೆಜಾನ್‌ನಲ್ಲಿ ಹೇಗೆ ಇದನ್ನು ಆರ್ಡರ್ ಮಾಡುವುದು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಅಮೆಜಾನ್‌ನಲ್ಲಿ ಹ್ಯುಂಡೈ ಕಾರುಗಳು: ಅಮೆಜಾನ್ ಮುಂದಿನ ವರ್ಷದಿಂದ ಯುಎಸ್‌ನಲ್ಲಿ ಹ್ಯುಂಡೈ (005380.KS) ವಾಹನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಮುಂದಾಗಲಿದೆ ಎಂದು ಹ್ಯುಂಡೈ (Hyundai) ತಿಳಿಸಿದೆ. ಜೊತೆಗೆ ಈ ಸಂಬಂಧ ಎರಡೂ ಕಂಪೆನಿಗಳೂ ಸಹ ಒಪ್ಪಂದ ಮಾಡಿಕೊಂಡಿವೆ. ಗ್ರಾಹಕರು ಅಮೆಜಾನ್ ಮೂಲಕ ಕಾರು ಖರೀದಿಸಲು ಸಾಧ್ಯವಾಗುತ್ತದೆ ಮತ್ತು ಸ್ಥಳೀಯ ಹ್ಯುಂಡೈ ಡೀಲರ್ ಮೂಲಕ ವಿತರಣೆಯನ್ನು ಪಡೆಯಬಹುದು ಎಂದು ಈ ವೇಳೆ ಮಾಹಿತಿ ನೀಡಲಾಗಿದೆ.
ಇನ್ನು ಎರಡು ವರ್ಷಗಳ ಹಿಂದೆ ಅಮೆಜಾನ್‌ನ ಹ್ಯುಂಡೈನ ಡಿಜಿಟಲ್ ಶೋರೂಮ್ (Hyundai Digital Showroom) ಅನ್ನು ವಿಸ್ತರಿಸಲು ಘೋಷಿಸಲಾದ ಒಪ್ಪಂದದ ಭಾಗವಾಗಿ ಈ ಬೆಳವಣಿಗೆ ನಡೆದಿದೆ. ಈ ಒಪ್ಪಂದದ ಭಾಗವಾಗಿ ಗ್ರಾಹಕರಿಗೆ ವಾಹನವನ್ನು ಕಾನ್ಫಿಗರ್ ಮಾಡಲು, ಬೆಲೆಯನ್ನು ಲೆಕ್ಕಹಾಕಲು ಮತ್ತು ಮಾರಾಟವನ್ನು ಪೂರ್ಣಗೊಳಿಸಲು ಡೀಲರ್ ಅನ್ನು ಪತ್ತೆ ಹಚ್ಚುವ ಕೆಲಸ ಸೇರಿದಂತೆ ಅನೇಕ ರೀತಿಯ ಕಾರ್ಯಗಳಿಗೆ ಅನುವು ಮಾಡಿಕೊಡುತ್ತದೆ.
ಹಾಗೆಯೇ ಹ್ಯುಂಡೈ ತನ್ನ ಮೊದಲ ಡಿಜಿಟಲ್ ಶೋರೂಮ್ ಅನ್ನು ಅಮೆಜಾನ್‌ನಲ್ಲಿ 2018 ರಲ್ಲಿಯೇ ಆರಂಭ ಮಾಡಿದೆ. ಈ ನಡುವೆ ಇತ್ತೀಚಿನ ಆವೃತ್ತಿಯನ್ನು ಲಾಸ್ ಏಂಜಲೀಸ್ ಆಟೋ ಶೋನಲ್ಲಿ ಘೋಷಿಸಲಾಗಿದ್ದು, ಹೊಸ ಒಪ್ಪಂದದ ಪ್ರಕಾರ ಮುಂದಿನ ದಿನಗಳಲ್ಲಿ ಹೊಸ ಹ್ಯುಂಡೈ ವಾಹನಗಳನ್ನು ಖರೀದಿ ಮಾಡಲು ಅಮೆಜಾನ್‌ನ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ಬಳಕೆ ಮಾಡಬಹುದು ಎಂದೂ ಸಹ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಹ್ಯುಂಡೈ ಮೋಟಾರ್ ಸಿಇಒ ಜೇ ಚಾಂಗ್ ಮಾಹಿತಿ ನೀಡಿದ್ದು, ವಿಶ್ವದ ಅತ್ಯಂತ ಗ್ರಾಹಕ ಕೇಂದ್ರಿತ ಸಂಸ್ಥೆಗಳಲ್ಲಿ ಒಂದಾದ ಸಹಭಾಗಿತ್ವವು ನಮ್ಮ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು, ಮಾರಾಟ ಜಾಲವನ್ನು ಬೆಳೆಸಲು, ವಿದ್ಯುದ್ದೀಕರಣಕ್ಕೆ ಪರಿವರ್ತನೆ ಮತ್ತು ಸ್ಮಾರ್ಟ್ ಮೊಬಿಲಿಟಿಯ ಭವಿಷ್ಯವನ್ನು ಅರಿತುಕೊಳ್ಳಲು ನಂಬಲಾಗದ ಅವಕಾಶಗಳನ್ನು ತೆರೆಯುತ್ತೇವೆ ಎಂದಿದ್ದಾರೆ.
ಆರಂಭದಲ್ಲಿ ಇದನ್ನು ಅಮೆರಿಕದ ಗ್ರಾಹಕರಿಗೆ ಪರಿಚಯಿಸಲಾಗುತ್ತಿದ್ದು, ಇದಾದ ಬಳಿಕ ಭಾರತ ಸೇರಿದಂತೆ ಇತರೆ ಮಾರುಕಟ್ಟೆಗಳಲ್ಲಿ ಪರಿಚಯಿಸುವ ಸಾಧ್ಯತೆ ಇದೆ. ಇನ್ನು ಯುಎಸ್‌ನಲ್ಲಿರುವ ಅಮೆಜಾನ್ ಡಿಜಿಟಲ್ ಪ್ಲಾಟ್‌ಫಾರ್ಮ್ ಬಳಕೆದಾರರು ವಿವಿಧ ಬ್ರಾಂಡ್‌ಗಳಿಂದ ಕಾರು ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ. ಆದರೆ, ಖರೀದಿ ಮಾಡಲು ಅವರು ಪಟ್ಟಿ ಮಾಡಲಾದ ಡೀಲರ್‌ಶಿಪ್‌ನೊಂದಿಗೆ ಸಂಪರ್ಕ ಪಡೆಯಬೇಕಿದೆ.

ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಇದೇ ಮೊದಲು: ಈಗಾಗಲೇ ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ದ್ವಿಚಕ್ರ ವಾಹನಗಳನ್ನು ಖರೀದಿ ಮಾಡಬಹುದಾಗಿದೆ. ಆದರೆ ಈವರೆಗೂ ಕಾರುಗಳನ್ನು ಇ-ಕಾಮರ್ಸ್ ಸೈಟ್‌ನಲ್ಲಿ ಖರೀದಿ ಮಾಡಲು ಅವಕಾಶ ನೀಡಿರಲಿಲ್ಲ. ಆದರೆ, ಕೊನೆಗೂ ಅಮೆಜಾನ್‌ನಲ್ಲಿ ಈ ಸೇವೆ ಮೊದಲ ಬಾರಿಗೆ ಲಭ್ಯ ಆಗುತ್ತಿದೆ. ಇಷ್ಟೇ ಅಲ್ಲದೆ ಇ- ಕಾಮರ್ಸ್ ಸೈಟ್‌ಗಳು ನಿರಂತರವಾಗಿ ವಾಹನ ತಯಾರಿಕಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ವಿಶೇಷವಾದ ಸೇವೆ ನೀಡಲು ಸಜ್ಜಾಗಿವೆ.


Click it and Unblock the Notifications








