ಆಂಡ್ರಾಯ್ಡ್ ಫೋನ್‌ಗಳಲ್ಲಿ ಪತ್ತೆಯಾಯ್ತು ದೋಷ, ಹಲವು ಬಳಕೆದಾರರಿಗೆ ಎದುರಾಯ್ತು ಆತಂಕ!
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು (Smartphones) ಆಗಾಗ್ಗೆ ದೊಡ್ಡ ರೀತಿಯ ಭದ್ರತಾ ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತವೆ. ಹೊಸ ಹೊಸ ಫೋನ್‌ಗಳಲ್ಲಿ ಎಷ್ಟೇ ಸುಧಾರಿತ ಫೀಚರ್ಸ್ ನೀಡಿದರೂ ಸಹ ಭದ್ರತಾ ಸಮಸ್ಯೆಗಳು ಮಾತ್ರ ಕಡಿಮೆ ಆಗುತ್ತಿಲ್ಲ ಎನ್ನುವ ಆರೋಪ ಇದೆ. ಅದರಂತೆ ಈಗ ಈ ಆಂಡ್ರಾಯ್ಡ್‌ಫೋನ್‌ಗಳಲ್ಲಿ(Android phone) ಹ್ಯಾಕರ್‌ಗಳು ನಿಮ್ಮ ಸ್ಥಳವನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದಾಗಿದೆ.
ಹೌದು, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂಗಳಲ್ಲಿ(Android operating system) ದುರ್ಬಲತೆ ಕಂಡುಬಂದಿದ್ದು, ಇದು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹೆಚ್ಚಿನ ಆತಂಕ ಉಂಟಾಗುವಂತೆ ಮಾಡಿದೆ. ಅಂದರೆ ನಿಮ್ಮ ನೈಜ ಸಮಯದ ಸ್ಥಳವನ್ನು ಹ್ಯಾಕರ್‌ಗಳು ಟ್ರ್ಯಾಕ್ ಮಾಡಬಹುದಾಗಿದೆ. ಈ ದೋಷವು ಟೆಕ್ಸ್ಟ್ ಮೆಸೆಜ್‌ನಲ್ಲಿ(Text message) ಕಾಣಿಸಿಕೊಂಡಿದೆ. ಹಾಗಿದ್ರೆ, ಈ ದೋಷದಿಂದ ಏನೆಲ್ಲಾ ಸಮಸ್ಯೆಗಳು ಸಂಭವಿಸುತ್ತವೆ?, ಇದರಿಂದ ಎಚ್ಚರಿಕೆ ವಹಿಸುವುದು ಹೇಗೆ? ಎಂಬ ಅಚ್ಚರಿ ಮಾಹಿತಿ ಇಲ್ಲಿದೆ ನೋಡಿ.

ಆಂಡ್ರಾಯ್ಡ್ ಫೋನ್‌ಗಳಲ್ಲಿ ದೋಷ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗಿದ್ದು, ಟೆಕ್ಸ್ಟ್ ಮೆಸೆಜ್‌ನಲ್ಲಿನ ಬಗ್‌ನ ಸಹಾಯದಿಂದ ಯಾವುದೇ ಬಳಕೆದಾರರ ನಿಖರ ಸ್ಥಳವನ್ನು ಹ್ಯಾಕರ್‌ಗಳು ಫೋನ್ ಸಂಖ್ಯೆಯ ಮೂಲಕವೇ ಟ್ರ್ಯಾಕ್ ಮಾಡಬಹುದು ಎಂದು ಎಂದು ಸಂಶೋಧಕರ ತಂಡ ಮಾಹಿತಿ ನೀಡಿದೆ. ಈ ಬಗ್ಗೆ ಯುಎಸ್ ಮೂಲದ ಈಶಾನ್ಯ ವಿಶ್ವವಿದ್ಯಾನಿಲಯದ ಪಿಎಚ್‌ಡಿ ವಿದ್ಯಾರ್ಥಿ ಇವಾಂಜೆಲೋಸ್ ಬಿಟ್ಸಿಕಾಸ್ ನೇತೃತ್ವದಲ್ಲಿ ಸಂಶೋಧನೆ ನಡೆಸಲಾಗಿದೆ.
ಈ ಸಂಶೋಧನೆಯಲ್ಲಿ ತಿಳಿದುಬಂದ ಅಚ್ಚರಿ ಮಾಹಿತಿ ಇದಾಗಿದೆ. ಟೆಕ್ಸ್ಟ್ ಮೆಸೆಜ್‌ಗಳನ್ನು ಎನ್‌ಕ್ರಿಪ್ಟ್ ಮಾಡಿದರೂ ಸಹ ಬಳಕೆದಾರರನ್ನು ಟ್ರ್ಯಾಕ್ ಮಾಡಬಹುದು ಎಂದು ತಿಳಿಸಲಾಗಿದೆ. ಆದರೂ ಸಹ ಅಂತಹ ಯಾವುದೇ ಟ್ರ್ಯಾಕಿಂಗ್ ಈವರೆಗೂ ವರದಿಯಾಗಿಲ್ಲ ಎನ್ನುವ ಸಮಾಧಾನಕರ ವಿಷಯವೂ ತಿಳಿದುಬಂದಿದೆ. ಆದರೆ, ಮುಂದಿನ ದಿನಗಳಲ್ಲಿ ಈ ಪ್ರಯೋಜನವನ್ನು ಪಡೆಯುವ ಮೂಲಕ ಸ್ಕ್ಯಾಮರ್‌ಗಳು ಬಳಕೆದಾರರನ್ನು ವಂಚಿಸಬಹುದು ಎಂದು ಎಚ್ಚರಿಸಲಾಗಿದೆ.
ಎಲ್ಲೆಲ್ಲಿ ಈ ದೋಷ? : ಈ ದೋಷ ನಿರ್ಧಿಷ್ಟವಾಗಿ ಇಂತಹ ಪ್ರದೇಶದಲ್ಲಿ ಎಂದು ಕಂಡುಬಂದಿಲ್ಲ. ಬದಲಾಗಿ ಪ್ರಪಂಚದ ಎಲ್ಲಾ ಆಂಡ್ರಾಯ್ಡ್ ಫೋನ್‌ಗಳಲ್ಲಿ(Android phone) ಕಂಡುಬಂದಿದೆ. ಇದರ ಸಹಾಯದಿಂದ ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಬಳಕೆದಾರರ ಸ್ಥಳವನ್ನು ಟ್ರ್ಯಾಕ್ (Location track) ಮಾಡಲು ಇದು ಅನುಕೂಲ ಮಾಡಿಕೊಡುತ್ತದಂತೆ.
ಇನ್ನು ಹ್ಯಾಕರ್‌ಗಳು ಬಳಕೆದಾರರಿಗೆ ಹಲವು ಮೆಸೆಜ್‌ಗಳನ್ನು ಕಳುಹಿಸುವ ಮೂಲಕ ಟ್ರ್ಯಾಕ್ ಮಾಡಬಹುದಾಗಿದೆ. ಈ ಹ್ಯಾಕಿಂಗ್ (Hacking) ಅನ್ನು ಕಾರ್ಯಗತಗೊಳಿಸಲು ಹ್ಯಾಕರ್‌ಗಳು ಮೊದಲು ಯಂತ್ರ ಕಲಿಕೆಯ ಮಾದರಿಯನ್ನು ಸ್ಥಾಪಿಸಿ ನಂತರ ಬಳಕೆದಾರರಿಗೆ ಟೆಕ್ಸ್ಟ್ ಮೆಸೆಜ್‌ಗಳನ್ನು ಕಳುಹಿಸುತ್ತಾರಂತೆ. ಆದರೆ, ಈ ದೋಷದ ಬಗ್ಗೆ ಟೆಕ್ ದೈತ್ಯ ಗೂಗಲ್ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ಪ್ರಮುಖ ವರದಿಯ ಪ್ರಕಾರ, ಸಂವಹನಗಳನ್ನು ಎನ್‌ಕ್ರಿಪ್ಟ್(Encrypt) ಮಾಡಲಾಗಿದೆಯೇ ಎಂಬುದನ್ನು ಲೆಕ್ಕಿಸದೆಯೇ ಈ ವಿಧಾನವು ಕಾರ್ಯನಿರ್ವಹಿಸುತ್ತದಂತೆ. ವಾಸ್ತವವಾಗಿ, ದೀರ್ಘಕಾಲದವರೆಗೆ ಎಸ್‌ಎಮ್‌ಎಸ್ ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಈ ಕಾರಣದಿಂದಾಗಿ ಹ್ಯಾಕರ್‌ಗಳು ಎಸ್‌ಎಮ್‌ಎಸ್ ವ್ಯವಸ್ಥೆಯ ನ್ಯೂನತೆಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು.
ಅದಾಗ್ಯೂ ಬಿಟ್ಸಿಕಾಸ್ ಪ್ರಕಾರ, ಮೂರು ದಶಕಗಳ ಹಿಂದೆ 2G ನೆಟ್‌ವರ್ಕ್ ಪ್ರಾರಂಭವಾದಾಗಿನಿಂದ ಎಸ್‌ಎಮ್‌ಎಸ್ ಸುರಕ್ಷತೆಯು ಸ್ವಲ್ಪಮಟ್ಟಿಗೆ ಸುಧಾರಿಸಿದ್ದು, ಬಳಕೆದಾರರು ಟೆಕ್ಸ್ಟ್ ಮೆಸೆಜ್‌ಗಳನ್ನು ಪಡೆದಾಗ, ಅವರ ಫೋನ್ ತಕ್ಷಣವೇ ಕಳುಹಿಸುವವರಿಗೆ ನೋಟಿಫಿಕೇಶನ್‌ಗಳನ್ನು ಕಳುಹಿಸುತ್ತದೆ, ಇದು ಒಂದು ರೀತಿ ವಿತರಣೆಯ ರಶೀದಿಯಂತೆ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ.

ಎಚ್ಚರಿಕೆ ವಹಿಸುವುದು ಹೇಗೆ?: ಈ ಬಗ್ಗೆ ಸಂಶೋಧಕರಾಗಲಿ ಅಥವಾ ಗೂಗಲ್ ಆಗಲಿ ಯಾವುದೇ ಪರಿಹಾರ ಮಾರ್ಗಗಳನ್ನು ನೀಡಿಲ್ಲ. ಬದಲಾಗಿ ಈ ದೋಷದ ಮೂಲಕ ಸ್ಕ್ಯಾಮರ್‌ಗಳು ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡುವುದು ಬಹಳ ಕಷ್ಟ ಎಂದು ಸಂಶೋಧಕರು ತಮ್ಮ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಯಾಕೆಂದರೆ ಈ ವಿಧಾನವನ್ನು ಸ್ಕೇಲಿಂಗ್ ಮಾಡುವುದು ಆಕ್ರಮಣಕಾರರಿಗೆ ಸವಾಲಾಗಿರಲಿದೆ.
ಇದನ್ನು ಸಾಧಿಸಲು ಅವರು ಪ್ರತಿ ಗಂಟೆಗೆ ಮೆಸೆಜ್‌ಗಳನ್ನು ಕಳುಹಿಸುವ ಮತ್ತು ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಲು ಹಲವು ಸ್ಥಳಗಳಲ್ಲಿ ಆಂಡ್ರಾಯ್ಡ್ ಡಿವೈಸ್‌ಗಳ ಅಗತ್ಯವಿರುತ್ತದೆ. ಇದು ಸ್ಲ್ಯಾಮರ್‌ಗಳಿಗೆ ಕಷ್ಟದ ಕೆಲಸವಾಗಬಹುದು. ಹಾಗಂದ ಮಾತ್ರಕ್ಕೆ ಮುಂದಿನ ದಿನಗಳಲ್ಲಿ ಸ್ಕ್ಯಾಮರ್‌ಗಳು ಇದನ್ನು ದುರಪಯೋಗಪಡಿಸಿಕೊಳ್ಳುವುದಿಲ್ಲ ಅಂತೇನು ಇಲ್ಲ ಎಂದೂ ಸಹ ಹೇಳಲಾಗುತ್ತಿದೆ.
ಈ ನಡುವೆ ಕೆಲವು ನಕಲಿ ಆಪ್‌ಗಳು ಸಹ ಸುಲಭವಾಗಿ ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡುವ ಕೆಲಸ ಮಾಡುತ್ತವೆ. ಇವುಗಳ ಬಗ್ಗೆಯೂ ಎಚ್ಚರಿಕೆ ವಹಿಸುವುದು ಅನಿವಾರ್ಯ. ಅಂದರೆ ನೀವು ಇನ್‌ಸ್ಟಾಲ್ ಮಾಡುವಾಗ ಅವು ಅನವಶ್ಯಕ ಅನುಮತಿಗಳನ್ನು ಕೇಳಿದರೆ ಒಮ್ಮೆ ಆ ಆಪ್‌ಬಗ್ಗೆ ಪರಿಶೀಲನೆ ನಡೆಸಿ, ಅನುಮಾನ ವ್ಯಕ್ತವಾದರೆ ಅದನ್ನು ನಿಮ್ಮ ಫೋನ್‌ನಲ್ಲಿ ಬಳಕೆ ಮಾಡಬೇಕು. ಈ ಮೂಲಕ ಸ್ಕ್ಯಾಮರ್‌ಗಳಿಂದ ಅಂತರ ಕಾಪಾಡಿಕೊಳ್ಳಬಹುದು.


Click it and Unblock the Notifications








