ಸ್ಮಾರ್ಟ್‌ಫೋನ್ ಬಳಕೆದಾರರೇ ಈಗಲೇ ಈ ಆಪ್‌ಗಳನ್ನು ನಿಮ್ಮ ಫೋನ್‌ನಿಂದ ಹೊರದಬ್ಬಿ
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಸಾಮಾನ್ಯವಾಗಿ ಭದ್ರತಾ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದರ ಭಾಗವಾಗಿಯೇ ತಿಳಿದೋ ತಿಳಿಯದೋ ತಮ್ಮ ಫೋನ್‌ಗಳಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿರುವ ಈ ಆಪ್‌ಗಳನ್ನು ಈ ಕ್ಷಣವೇ ಅನ್‌ಇನ್‌ಸ್ಟಾಲ್ ಮಾಡಬೇಕಿದೆ. ಇಲ್ಲವಾದರೂ ಖಾಸಗಿ ವಿಷಯ ಹಾಗೂ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ತೊಂದರೆ ಎದುರಿಸಬೇಕಾಗುತ್ತದೆ.
ಹೌದು, ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಅಗತ್ಯವಾದ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವುದು ಸಾಮಾನ್ಯವಾದ ವಿಷಯ. ಕೆಲವರಂತೂ ಪ್ಲೇ ಸ್ಟೋರ್‌ನಲ್ಲಿ ಇದೆ ಎನ್ನುವ ಮಾತ್ರಕ್ಕೆ ಹಿಂದು ಮುಂದು ನೋಡದೆ ಆ ಆಪ್‌ಗಳನ್ನು ಕಣ್ಣು ಮುಚ್ಚಿಕೊಂಡು ಡೌನ್‌ಲೋಡ್ ಮಾಡಿಬಿಡುತ್ತಾರೆ. ಈ ನಡುವೆ 11 ಅಪಾಯಕಾರಿ ಆಪ್‌ಗಳನ್ನು ಪತ್ತೆ ಮಾಡಲಾಗಿದೆ. ಹಾಗಿದ್ರೆ, ಯಾವುವು ಆ ಆಪ್‌ಗಳು?, ಅವುಗಳಿಂದ ಸಮಸ್ಯೆ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ನೀವು ಈ ಆಪ್‌ಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ನಿಂದ ತೆಗೆದುಹಾಕದಿದ್ದರೆ ಹಣವನ್ನು ಕಳೆದುಕೊಳ್ಳಬಹುದು ಎಂದು ಸೈಬರ್ ಸೆಕ್ಯುರಿಟಿ ಸಂಸ್ಥೆ ಕ್ಯಾಸ್ಪರ್‌ಸ್ಕಿ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ಡೇಂಜರ್ ಆಪ್‌ಗಳ ಲಿಸ್ಟ್‌ನಲ್ಲಿ ವಿಡಿಯೋ ಎಡಿಟಿಂಗ್, ಫೋಟೋ ಎಡಿಟಿಂಗ್ ಆಪ್‌ಗಳು ಸೇರಿವೆ. ಈ ಆಪ್‌ಗಳು ಪ್ಲೇಕ್‌ಪೇ(Fleckpe) ಎಂಬ ಮಾಲ್‌ವೇರ್ ಅನ್ನು ಹೊಂದಿದ್ದು, ಇದು ಬಳಕೆದಾರರಿಗೆ ಸಾಕಷ್ಟು ತೊಂದರೆ ನೀಡಲಿದೆ ಎಂದು ತಿಳಿದುಬಂದಿದೆ.
ಈ ಮಾಲ್‌ವೇರ್ ನಿಮಗೆ ಅರಿವಿಲ್ಲದಂತೆ ಕೆಲಸ ಮಾಡುತ್ತದೆ: ಈ ಮಾಲ್‌ವೇರ್ ಹಿನ್ನೆಲೆಯಲ್ಲಿ ಕೆಲಸ ಮಾಡಲಿದ್ದು, ನಿಮಗೆ ಅರಿವಿಗೆ ಬರುವುದೇ ಇಲ್ಲ. ಜೊತೆಗೆ ಆ ಆಪ್‌ಗಳಲ್ಲಿ ಸುಲಭವಾಗಿ ಸಮಸ್ಯೆ ಇದೆ ಎಂದು ಕಂಡುಕೊಳ್ಳಲು ಸಾಧ್ಯವೇ ಆಗುವುದಿಲ್ಲವಂತೆ. ಹೀಗಾಗಿ ಯಾವುದೇ ಆಪ್ ಇನ್‌ಸ್ಟಾಲ್ ಮಾಡುವ ಮುನ್ನ ಆ ಆಪ್ ಬಗ್ಗೆ ವಿಮರ್ಶೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕಿದೆ ಎಂದು ಸೆಕ್ಯುರಿಟಿ ಸಂಸ್ಥೆ ತಿಳಿಸಿದೆ.

ಇನ್ನು ಈ ಆಪ್‌ಗಳು ನಿಮ್ಮ ಫೋನ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಆಪ್‌ಗಳಂತೆ ಕೆಲಸ ಮಾಡುತ್ತವೆ. ಅದರಲ್ಲಿ ಬ್ಯಾಟರಿ ಉಳಿಸುವ ಮತ್ತು ಆಪ್ಟಿಮೈಸ್ ಮಾಡುವ ಗೇಮ್‌ಗಳ ಮೂಲಕ ನಿಮಗೆ ಸಹಾಯ ಮಾಡುತ್ತಿರುವಂತೆ ಗುರುತಿಸಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ ಅವು ಮಾಡುವ ಕೆಲಸವೇ ಬೇರೆ ಆಗಿರುತ್ತದೆ. ಈ ಮೂಲಕ ಕುಕೀಗಳು ಮತ್ತು ಡೇಟಾ ಆನ್‌ಲೈನ್‌ನಲ್ಲಿ ನಿಮ್ಮ ಗೌಪ್ಯತೆಗೆ ಅಪಾಯವನ್ನು ಉಂಟು ಮಾಡುತ್ತಿರುತ್ತವೆ.
ಇವೇ ಆ ಡೇಂಜರ್ ಆಪ್‌ಗಳು: ಬ್ಯೂಟಿ ಕ್ಯಾಮೆರಾ ಪ್ಲಸ್, ಬ್ಯೂಟಿ ಫೋಟೋ ಕ್ಯಾಮೆರಾ, ಬ್ಯೂಟಿ ಸ್ಲಿಮ್ಮಿಂಗ್ ಫೋಟೋ ಎಡಿಟರ್, ಫಿಂಗರ್‌ಟಿಪ್ ಗ್ರಾಫಿಟಿ, GIF ಕ್ಯಾಮೆರಾ ಎಡಿಟರ್ , HD 4K ವಾಲ್‌ಪೇಪರ್, ಇಂಪ್ರೆಷನಿಸಂ ಪ್ರೊ ಕ್ಯಾಮೆರಾ, ಮೈಕ್ರೋಕ್ಲಿಪ್ ವಿಡಿಯೋ ಎಡಿಟರ್, ನೈಟ್ ಮೋಡ್ ಕ್ಯಾಮೆರಾ ಪ್ರೊ, ಫೋಟೋ ಕ್ಯಾಮೆರಾ ಎಡಿಟರ್, ಫೋಟೋ ಎಫೆಕ್ಟ್ ಎಡಿಟರ್.
ಸೈಬರ್ ಭದ್ರತಾ ತಜ್ಞರ ಬ್ಲಾಗ್ ಪೋಸ್ಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಅದರಂತೆ ಈ ಮೇಲೆ ತಿಳಿಸಿದ ಮಾಲ್‌ವೇರ್ ಇರುವ ಆಪ್‌ಗಳನ್ನು ಆರು ಲಕ್ಷಕ್ಕೂ ಅಧಿಕ ಮಂದಿ ಇನ್‌ಸ್ಟಾಲ್ ಮಾಡಿದ್ದಾರಂತೆ. ಜೊತೆಗೆ ನಿಮ್ಮ ಫೋನ್‌ನಲ್ಲಿ ಈ ನಕಲಿ ಆಪ್‌ಗಳನ್ನು ಡೌನ್‌ಲೋಡ್ ಮಾಡುವ ಮೊದಲು ಪರಿಶೀಲನೆ ನಡೆಸಿ ಎಂದು ತಿಳಿಸಲಾಗಿದ್ದು, ನೀವೇನಾದರೂ ಈ ಆಪ್ ಅನ್ನು ಹೆಚ್ಚಾಗಿ ಬಳಕೆ ಮಾಡಿದ್ದೇ ಆದರೆ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗಬಹುದು ಎಂದು ಎಚ್ಚರಿಸಲಾಗಿದೆ.

ನಕಲಿ ಆಪ್‌ಗಳ ಬಗ್ಗೆ ಇರಲಿ ಎಚ್ಚರ: ಸಾಮಾನ್ಯವಾಗಿ ನಕಲಿ ಆಪ್‌ಗಳು ತಾವು ಮಾಡುವ ಕೆಲಸದ ಜೊತೆಗೆ ವಿವಿಧ ಹಾಗೂ ಅನಗತ್ಯ ಕೆಲಸಗಳನ್ನೂ ಸಹ ಮಾಡುತ್ತಿರುತ್ತವೆ. ಅದರಲ್ಲೂ ಹೆಚ್ಚಿನ ಪ್ರಮಾಣದ ಜಾಹೀರಾತುಗಳನ್ನು ಈ ಆಪ್‌ಗಳಲ್ಲಿ ಗಮನಿಸಬಹುದು. ಹಾಗೆಯೇ ಬಳಕೆದಾರರನ್ನು ಬೇಗನೇ ನಂಬಿಸುವ ಉದ್ದೇಶದಿಂದ ಶಿಕ್ಷಣ, ಗೇಮಿಂಗ್ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುತ್ತವೆ. ಇದಿಷ್ಟೇ ಅಲ್ಲದೆ ಇತರೆ ಬೇರೆ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವಂತೆ ಬಳಕೆದಾರರನ್ನು ಪ್ರಚೋದಿಸುತ್ತಲೇ ಇರುತ್ತವೆ.


Click it and Unblock the Notifications








