Apple: ಆಪಲ್‌ಗೆ ದೊಡ್ಡ ಮಟ್ಟದ ಸಂಕಷ್ಟ! ಒಂದೇ ದಿನದಲ್ಲಿ 113 ಬಿಲಿಯನ್ ಡಾಲರ್ ನಷ್ಟ.. ಯಾಕೆ ಗೊತ್ತಾ?
ಆಪಲ್ (Apple) ತನ್ನದೇ ಆದ ಭಿನ್ನ ಫೀಚರ್ಸ್ ಆಯ್ಕೆಯ ಡಿವೈಸ್‌ಗಳನ್ನು ಲಾಂಚ್ ಮಾಡುವ ಮೂಲಕ ಸ್ಮಾರ್ಟ್‌ಫೋನ್ ಹಾಗೂ ಇತರೆ ವಿಭಾಗದಲ್ಲಿ ದೈತ್ಯ ಎನಿಸಿಕೊಂಡಿದೆ. ಈ ನಡುವೆ ಹೊಸ ಸರಣಿಯ ಐಫೋನ್‌ಗಳನ್ನೂ ಸಹ ಲಾಂಚ್ ಮಾಡಲು ಎಲ್ಲಾ ಸಿದ್ಧತೆ ಸಹ ಮಾಡಿಕೊಂಡಿದೆ. ಆದರೆ ಈ ಎಲ್ಲಾ ಬೆಳವಣಿಗೆ ನಡುವೆ ದೊಡ್ಡ ನಷ್ಟವನ್ನು ಎದುರಿಸುವಂತೆ ಆಗಿದೆ.
ಹೌದು, ಆಪಲ್ ಇತ್ತೀಚೆಗೆ ವಿವಿಧ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಮೊದಲು ಚಿಕ್ಕ ಚಿಕ್ಕ ಸಂಸ್ಥೆಗಳಿಗೆ ಆಪಲ್‌ನಿಂದ ಸಮಸ್ಯೆ ಆಗುತ್ತಿದೆ ಎಂದು ದೂರಲಾಗುತ್ತಿತ್ತು. ಈ ಕಾರಣಕ್ಕೆ ಷೇರುಪೇಟೆಯಲ್ಲಿ ಶಾಕಿಂಗ್ ಬೆಳವಣಿಗೆ ಕಂಡುಬಂದಿದೆ. ಹಾಗಿದ್ರೆ, ಏನಿದು ಘಟನೆ?, ಇದರಿಂದ ಆಪಲ್‌ಗೆ ಏನೆಲ್ಲಾ ಸಮಸ್ಯೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಆಪಲ್‌ಗೆ ನಷ್ಟ: ಆಂಟಿಟ್ರಸ್ಟ್ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ (violating antitrust laws) ಯುಎಸ್ ಸರ್ಕಾರ ಆಪಲ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದೆ. ಅದರಂತೆ ಯುಎಸ್ ನ್ಯಾಯಾಂಗ ಇಲಾಖೆ ಮತ್ತು 16 ರಾಜ್ಯ ಅಟಾರ್ನಿ ಜನರಲ್ ಆಪಲ್ ವಿರುದ್ಧ ಆಂಟಿಟ್ರಸ್ಟ್ ಮೊಕದ್ದಮೆಯ ವಿಚಾರಣೆ ಆರಂಭ ಮಾಡಿದ್ದಾರೆ. ಇದೇ ವೇಳೆ ಯುರೋಪ್‌ನಲ್ಲಿ ಆಪಲ್ ಡಿಜಿಟಲ್ ಮಾರುಕಟ್ಟೆ ಕಾಯಿದೆಯನ್ನು ಅನುಸರಿಸುತ್ತಿದೆಯೇ ಎಂಬುದರ ಕುರಿತು ಪರಿಶೀಲನೆಯನ್ನು ಎದುರಿಸುವಂತೆ ಆಗಿದೆ.
ಈ ಕಾರಣಕ್ಕೆ ಷೇರುಗಳು ಕುಸಿದಿವೆ. ಅದರಂತೆ ಗುರುವಾರ ಆಪಲ್ ಕಂಪನಿಯ ಷೇರುಗಳು ಶೇಕಡಾ 4.1 ರಷ್ಟು ಕುಸಿದಿದೆ. ಪರಿಣಾಮ ಒಂದೇ ದಿನದಲ್ಲಿ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 113 ಬಿಲಿಯನ್ ಡಾಲರ್ ಇಳಿಕೆಯಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ ಈ ರೀತಿಯ ತನಿಖೆಗೆ ಒಳಪಟ್ಟಿರುವುದು ಆಪಲ್ ಇದೇ ಮೊದಲಲ್ಲ. ಕಂಪನಿ ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿಸ್ಪರ್ಧಿಗಳನ್ನು ಮಟ್ಟಹಾಕುವ ಉದ್ದೇಶವನ್ನೂ ಆಪಲ್ ಹೊಂದಿದೆ ಎನ್ನುವ ಆರೋಪ ಎದುರಿಸುತ್ತಿದೆ. ಈ ಮೂಲಕ ಹೆಚ್ಚಿನ ಲಾಭ ಪಡೆಯುತ್ತಿದೆ ಅನ್ನುವ ಆರೋಪ ಇದರ ಮೇಲೆ ಇದೆ. ಈ ಸಂಬಂಧ ವರ್ಷಗಳಿಂದ ಕಾನೂನು ಹೋರಾಟ ಮಾಡುತ್ತಲೇ ಬಂದಿದೆ.

ನ್ಯೂಜೆರ್ಸಿಯ ಫೆಡರಲ್ ನ್ಯಾಯಾಲಯದಲ್ಲಿ ಗುರುವಾರ ಸಲ್ಲಿಸಲಾದ ಅಮೇರಿಕನ್ ಮೊಕದ್ದಮೆಯಲ್ಲಿ, ಆಪಲ್ ತನ್ನ ಜನಪ್ರಿಯ ಡಿವೈಸ್‌ಗಳಲ್ಲಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಫೀಚರ್ಸ್ ಅನ್ನು ಪ್ರವೇಶಿಸದಂತೆ ಪ್ರತಿಸ್ಪರ್ಧಿಗಳನ್ನು ನಿರ್ಬಂಧಿಸುತ್ತವೆ ಎಂದು ಆರೋಪಿಸಿದೆ. ಅದರಂತೆ ಆಪಲ್‌ನ ಕೆಲವು ಪ್ರತಿಸ್ಪರ್ಧಿಗಳನ್ನು ಗುರಿಯಾಗಿಸಿಕೊಂಡಿರುವ ಯುರೋಪ್‌ನಲ್ಲಿನ ಸಂಭಾವ್ಯ ತನಿಖೆಗಳು, ಆಪ್ ಸ್ಟೋರ್ ಡೆವಲಪರ್‌ಗಳಿಗಾಗಿ ಸಂಸ್ಥೆಯ ಹೊಸ ಶುಲ್ಕಗಳು, ನಿಯಮಗಳು ಮತ್ತು ಷರತ್ತುಗಳ ಮೇಲೆ ಕೇಂದ್ರೀಕರಿಸಿದೆ.
ಹಾಗೆಯೇ ಡಿಸ್ಟ್ರಿಕ್ಟ್ ಆಫ್ ನ್ಯೂಜೆರ್ಸಿಗಾಗಿ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ದಾಖಲಾದ ಮೊಕದ್ದಮೆಯ ಕೆಲವು ಮಾಹಿತಿಗಳನ್ನು ಗಮನಿಸಿದ್ರೆ ಆಪಲ್‌ನ ಕ್ರಮಗಳು ಗ್ರಾಹಕರು ಮತ್ತು ಅದರ ಸೇವೆಗಳೊಂದಿಗೆ ಸ್ಪರ್ಧಿಸುವ ಸಣ್ಣ ಕಂಪನಿಗಳಿಗೆ ಹಾನಿ ಮಾಡುತ್ತವೆ ಅನ್ನೋದನ್ನು ಕಂಡುಕೊಂಡಿದೆ. ಆಪಲ್‌ನ ನಡವಳಿಕೆಯು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಏಕಸ್ವಾಮ್ಯವನ್ನು ಬಲಪಡಿಸಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಆಪಲ್ ಐಫೋನ್‌ನಲ್ಲಿನ ಆಪ್‌ನ ವಿತರಣೆಯ ಮೇಲೆ ತನ್ನ ಅಧಿಕಾರವನ್ನು ಬಳಸಿಕೊಂಡು ಗ್ರಾಹಕರು ಫೋನ್‌ಗಳನ್ನು ಬದಲಾಯಿಸಲು ಸುಲಭವಾಗುವಂತಹ ನಾವೀನ್ಯತೆಗಳನ್ನು ತಡೆಯಲು ಬಳಸಿದೆ ಎಂದು ಯುಎಸ್ ಮೊಕದ್ದಮೆಯಲ್ಲಿ ಉಲ್ಲೇಖ ಮಾಡಲಾಗಿದೆ. ಕಂಪನಿಯು ಕ್ರಾಸ್-ಪ್ಲಾಟ್‌ಫಾರ್ಮ್ ಮೆಸೇಜಿಂಗ್ ಆಪ್‌ಗಳು, ಸೀಮಿತ ಥರ್ಡ್ ಪಾರ್ಟಿ ಡಿಜಿಟಲ್ ವ್ಯಾಲೆಟ್‌ಗಳು ಮತ್ತು ಆಪಲ್ ಅಲ್ಲದ ಸ್ಮಾರ್ಟ್‌ವಾಚ್‌ಗಳನ್ನು ಬೆಂಬಲಿಸಲು ನಿರಾಕರಿಸಿದೆ ಮತ್ತು ಮೊಬೈಲ್ ಕ್ಲೌಡ್ ಸ್ಟ್ರೀಮಿಂಗ್ ಸೇವೆಗಳನ್ನೂ ನಿರ್ಬಂಧಿಸಿದೆ ಎಂದು ತಿಳಿಸಿದೆ.

ಈ ಸಂಬಂಧ ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿ ಲಾ ಸ್ಕೂಲ್‌ನ ಆಂಟಿಟ್ರಸ್ಟ್ ಪ್ರೊಫೆಸರ್ ಬಿಲ್ ಕೊವಾಸಿಕ್ ಮಾಹಿತಿ ನೀಡಿದ್ದು, ಹಲವಾರು ಪ್ರಕರಣಗಳು ಏಕಕಾಲದಲ್ಲಿ ಮುನ್ನೆಲೆಗೆ ಬರವುದರಿಂದ ಕಂಪನಿಯು ನಷ್ಟ ಅನುಭವಿಸುವುದು ಸಾಮಾನ್ಯ, ಅಲ್ಲದೆ ಕಂಪನಿಯು ಪ್ರಕರಣವನ್ನು ಗೆದ್ದರೂ, ಅವರು ಇನ್ನೂ ಇತರ ರೀತಿಯಲ್ಲಿ ಸೋತಿದ್ದಾರೆ ಎಂದು ಹೇಳಿದ್ದಾರೆ.
ಆಪಲ್ ಹೇಳಿದ್ದೇನು?: ಆಪಲ್ ಇದೀಗ ತನ್ನ ಮೇಲೆಯುಎಸ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ದಾಖಲಾದ ಮೊಕದ್ದಮೆಯನ್ನು ತಪ್ಪು ಎಂದು ಕರೆದಿದೆ. ಈ ಕ್ರಮವು ಕಂಪನಿಯ ಹೊಸತನದ ಸಾಮರ್ಥ್ಯಕ್ಕೆ ಧಕ್ಕೆ ತರುತ್ತದೆ ಎಂದಿದ್ದು, ತಂತ್ರಜ್ಞಾನ ವಿನ್ಯಾಸದಲ್ಲಿ ಸರ್ಕಾರದ ಹಸ್ತಕ್ಷೇಪವು ಅಪಾಯಕಾರಿಯಾಗಿದೆ ಎಂದಿದೆಯಾದರೂ ಯುರೋಪಿಯನ್ ತನಿಖೆಯ ಬಗ್ಗೆ ಆಪಲ್ ಪ್ರತಿಕ್ರಿಯಿಸಲಿಲ್ಲ.


Click it and Unblock the Notifications








