ಆಪಲ್, ಮೈಕ್ರೋಸಾಫ್ಟ್ vs ಗೂಗಲ್ ಟ್ಯಾಬ್ಲೆಟ್

Posted By: Varun
ಆಪಲ್, ಮೈಕ್ರೋಸಾಫ್ಟ್ vs ಗೂಗಲ್ ಟ್ಯಾಬ್ಲೆಟ್

ಸರ್ಫೇಸ್ ಎಂಬ ಹೆಸರಿನ ವಿಂಡೋಸ್ 8 ಆಧಾರಿತ ಟ್ಯಾಬ್ಲೆಟ್ ನೆನ್ನೆ ಮೈಕ್ರೋಸಾಫ್ಟ್ ಬಿಡುಗಡೆ ಮಾಡಿದ್ದು, ಆಪಲ್ ಹಾಗು ಗೂಗಲ್ ಇದರ ಬಗ್ಗೆ ಏನೂ ಪ್ರತ್ರಿಕ್ರಿಯೆ ನೀಡದಿದ್ದರೂ ಅವರ ನಿದ್ದೆ ಕೆಡಿಸಿರುವುದು ಗ್ಯಾರಂಟಿ ಅನ್ನೋದು ಟ್ಯಾಬ್ಲೆಟ್ ಉತ್ಪಾದಕರ ಅನಿಸಿಕೆ.

ಮೈಕ್ರೋಸಾಫ್ಟ್ ಹೇಗೆ ತನ್ನದೇ ಆದ ತಂತ್ರಾಂಶ ಉಪಯೋಗಿಸಿಕೊಂಡು ಟ್ಯಾಬ್ಲೆಟ್ ಮಾರುಕಟ್ಟೆಗೆ ಬರಲು ಸಿದ್ದವಾಗಿದೆಯೋ, ಹಾಗೆ ಗೂಗಲ್ ಕೂಡ ಆಂಡ್ರಾಯ್ಡ್ ಆಧಾರಿತ ಟ್ಯಾಬ್ಲೆಟ್ ಅನ್ನು ತಯಾರಿಸಲು ಅಸುಸ್ ಜೊತೆ ಕೈ ಜೋಡಿಸಿ ನೆಕ್ಸಸ್ ಹೆಸರಿನ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಹಲವಾರು ತಿಂಗಳುಗಳಿಂದ ಚಾಲ್ತಿಯಲ್ಲಿದ್ದು, ಈಗ ಅದು ಹೊರಬರುವ ಎಲ್ಲ ಸೂಚನೆಗಳು ಕಾಣುತ್ತಿದೆ.

ಹೌದು. ಗೂಗಲ್ ಆಂಡ್ರಾಯ್ಡ್ ಟ್ಯಾಬ್ಲೆಟ್, ಜೂನ್ 27ಕ್ಕೆ ಬಿಡುಗಡೆಯಾಗಲಿದೆ ಎಂಬ ಖಚಿತ ಮಾಹಿತಿಯನ್ನು ಡಿಜಿ ಟೈಮ್ಸ್ ವರದಿ ಮಾಡಿದೆ. ಅದರ ಪ್ರಕಾರ ಈ ನೆಕ್ಸಸ್ 7 ಇಂಚ್ ಟ್ಯಾಬ್ಲೆಟ್ ಅನ್ನು ಈಗಾಗೆಲೇ ರೀಟೈಲ್ ಮಳಿಗೆಗಳಿಗೆ ರವಾನೆ ಮಾಡಲಾಗಿದ್ದು, ಜುಲೈ ತಿಂಗಳಲ್ಲಿ ಗ್ರಾಹಕರಿಗೆ ಸಿಗುವಂತೆ ಮಾಡಾಲು ತಯಾರಿ ನಡೆದಿದೆಯಂತೆ.

ಅದೂ ಅಲ್ಲದೆ ಅಸುಸ್ ನ ಅಧ್ಯಕ್ಷ ಜಾನಿ ಶಿ ಹಾಗು ಗೂಗಲ್ ನ ಸಹ ಸಂಸ್ಥಾಪಕರು ಸೇರಿ ಬಿಡುಗಡೆ ಮಾಡಲಿದ್ದಾರಂತೆ. ಸುಮಾರು 199 ಡಾಲರ್ (11 ಸಾವಿರ ರೂಪಾಯಿ)ಗೆ ಬಿಡುಗಡೆ ಯಾಗಲಿರುವ ಈ ಟ್ಯಾಬ್ಲೆಟ್ 7 ಇಂಚ್ ಟಚ್ ಸ್ಕ್ರೀನ್ ಹೊಂದಿದ್ದು,ಆಂಡ್ರಾಯ್ಡ್ 4.0 ಐಸ್ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶದ ಜೊತೆಗೆ ಡ್ಯುಯಲ್ ಕೋರ್ ಮೊಬೈಲ್ ಪ್ರೊಸೆಸರ್ಹಾಗು ಗೂಗಲ್ ಕ್ರೋಮ್ ಬ್ರೌಸರ್ ಜೊತೆ ಪ್ರೀ-ಲೋಡೆಡ್ ಆಗಿ ಬರಲಿದೆಯಂತೆ.

ಈಗಾಗೆಲೇ ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಟ್ಯಾಬ್ಲೆಟ್ಟುಗಳು ಬಂದು ಗ್ರಾಹಕರು ಯಾವುದು ಕೊಳ್ಳಬೇಕೆಂಬ ಗೊಂದಲದಲ್ಲಿ ಇರುವುದರಿಂದ, ಗೂಗಲ್ ನ ಟ್ಯಾಬ್ಲೆಟ್ ಬಂದರೆ ಅನುಕೂಲವಾದೀತು. ಏಕೆಂದರೆ ಒಂದು ಕಡೆ ಆಪಲ್ ನ ಐಪ್ಯಾಡ್ ದುಬಾರಿಯಾದರೆ, ಮೈಕ್ರೋಸಾಫ್ಟ್ ನ ವಿಂಡೋಸ್ ಬರೋದು ಇನ್ನೂ ತಡವಾಗಲಿದೆ ಹಾಗು ವಿಂಡೋಸ್ 8 ತಂತ್ರಾಂಶ ಟ್ಯಾಬ್ಲೆಟ್ಗಳಿಗೆ ಹೇಗೆ ಹೊಂದಿಕೊಳ್ಳುತ್ತೆ ಎಂದು ಸ್ಪಷ್ಟವಾಗಿ ಗೊತ್ತಾಗಿಲ್ಲ.

ಹೀಗಾಗಿ, ಗೂಗಲ್ ನ ವಿಸ್ತಾರ ಹಾಗು ಅದರ ಆಪ್ ಮಳಿಗೆ ಹಾಗು ಏನೇ ಮಾಡಿದರೂ ಉತ್ಕೃಷ್ಟವಾಗಿ ಮಾಡಬೇಕೆಂಬ ನೀತಿ ಇಟ್ಟುಕೊಂಡಿರುವ ಗೂಗಲ್, ತನ್ನ ಟ್ಯಾಬ್ಲೆಟ್ ಮೂಲಕ ತನ್ನ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ ಎಂಬ ನಂಬಿಕೆ ನಮ್ಮದು.

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot