ಆಪಲ್ ಮ್ಯೂಸಿಕ್‌ನಲ್ಲಿ ಕರೋಕೆ ಫೀಚರ್ಸ್; ಹಾಡುಗಾರರಿಗೆ ಅನುಕೂಲ!
ಸಂಗೀತ ಎಲ್ಲವನ್ನೂ ನೋವು ನಲಿವುಗಳನ್ನು ಮರೆಸಿ, ಜೀವನದಲ್ಲಿ ಶಾಂತಿ, ನೆಮ್ಮದಿ ಸಂತೋಷ ತರಿಸುವ ಶಕ್ತಿ ಹೊಂದಿದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಅದರಲ್ಲಿ ಸಂಗೀತಕ್ಕೆ ಒಂದು ಆದ್ಯತೆ ಇದ್ದೇ ಇರುತ್ತದೆ. ಈ ಕಾರಣಕ್ಕೆ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಮ್ಯೂಸಿಕ್ ಆಪ್‌ಗಳು ಲಭ್ಯ ಇವೆ. ಇದರ ನಡುವೆ ಆಪಲ್ ಮ್ಯೂಸಿಕ್‌ನಲ್ಲಿ ಹೊಸದೊಂದು ಫೀಚರ್ಸ್ ಪರಿಚಯಿಸಲಾಗಿದ್ದು, ಇನ್ಮುಂದೆ ನೀವು ಅದ್ಭುತವಾಗಿ ಹಾಡಬಹುದು. ಅದನ್ನು ಶೇರ್ ಮಾಡಬಹುದು ಹಾಗೂ ಹೆಚ್ಚಿನ ಮನರಂಜನೆ ಪಡೆಯಬಹುದು.

ಹೌದು, ಆಪಲ್ ಸಂಸ್ಥೆಯು ತನ್ನ ಆಪಲ್ ಮ್ಯೂಸಿಕ್ ಸಿಂಗ್ ಎಂಬ ಕರೋಕೆ ಫೀಚರ್ಸ್ ಪರಿಚಯಿಸಿದೆ. ಈ ಹಿಂದೆ ಸ್ಮೂಲ್, ಬ್ಯಾಕ್‌ಟ್ರಾಕಿಟ್, ಟ್ಯೂನ್‌ವಿಕಿ ಸೇರಿದಂತೆ ಇನ್ನಿತರೆ ಆಪ್‌ಗಳನ್ನು ಬಳಕೆ ಮಾಡಿಕೊಂಡು ಈ ಸೇವೆ ಪಡೆಯಬೇಕಿತ್ತು. ಆದರೆ, ಆಪಲ್ ಮ್ಯೂಸಿಕ್‌ನಲ್ಲೇ ಈ ಸೇವೆ ಲಭ್ಯವಾಗುತ್ತಿರುವುದರಿಂದ ನಿಮ್ಮ ಹಾಡುಗಾರಿಕೆ ಇನ್ನಷ್ಟು ಆನಂದಮಯವಾಗಿರಲಿದೆ. ಅದರಲ್ಲೂ ನಿಮಗೆ ಬೇಕಾದ ಹಾಡಿನ ಬ್ಯಾಗ್ರೌಂಡ್ ಮ್ಯೂಸಿಕ್ ಅನ್ನು ನೀವೇ ರಚಿಸಿಕೊಳ್ಳಬಹುದಾಗಿದೆ.

ಕರೋಕೆ ಮೋಡ್
ನೈಜ ಸಮಯದ ಸಾಹಿತ್ಯದೊಂದಿಗೆ ಆಪಲ್ ಮ್ಯೂಸಿಕ್ ಕರೋಕೆ ಮೋಡ್ ಫೀಚರ್ಸ್ ಪರಿಚಯಿಸುವುದಾಗಿ ಆಪಲ್ ಘೋಷಿಸಿದೆ. ಈ ಬಗ್ಗೆ ಕ್ಯುಪರ್ಟಿನೊ ಕಂಪೆನಿಯು ಮಾಹಿತಿ ನೀಡಿದ್ದು, ಇದು ಕಂಪೆನಿಯ ಆಪಲ್ ಮ್ಯೂಸಿಕ್ ಆಪ್‌ನಲ್ಲೇ ನಿರ್ಮಿಸಲಾದ ಹೊಸ ಕರೋಕೆ ಅನುಭವವಾಗಿದೆ. ಬಳಕೆದಾರರು ಆಪಲ್ ಮ್ಯೂಸಿಕ್ ನ ನೈಜ ಸಮಯದ ಸಾಹಿತ್ಯದೊಂದಿಗೆ ಹಾಡಲು ಸಾಧ್ಯವಾಗುತ್ತದೆ. ಹಾಗೆಯೇ ಲಿರಿಕ್-ಫ್ರೀ ಸಿಂಗ್-ಅಲಾಂಗ್ ಜೊತೆಗೆ ಅವರ ಧ್ವನಿಯು ಹೆಚ್ಚು ಶ್ರವ್ಯವಾಗುವಂತೆ ಕಂಟ್ರೋಲ್ ಮಾಡಬಹುದಾದ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗಿದೆ ಎಂದು ಹೇಳಿದೆ.

50 ಕ್ಕೂ ಹೆಚ್ಚು ಮೀಸಲಾದ ಕಂಪ್ಯಾನಿಯನ್ ಪ್ಲೇಲಿಸ್ಟ್
ಈ ಕರೋಕೆ ಮೋಡ್‌ನಲ್ಲಿ ಬಳಕೆದಾರರಿಗೆ 50 ಕ್ಕೂ ಹೆಚ್ಚು ಮೀಸಲಾದ ಕಂಪ್ಯಾನಿಯನ್ ಪ್ಲೇಲಿಸ್ಟ್ ಆಯ್ಕೆ ಇದ್ದು, ಇವು ಕರೋಕೆ ರೆಡಿ ಹಾಡುಗಳನ್ನು ಹೊಂದಿರಲಿವೆ. ಜೊತೆಗೆ ಆನಿಮೇಟೆಡ್ ಲಿರಿಕ್ಸ್ ವರ್ಣರಂಜಿತವಾಗಿ ಕಾಣಲಿದ್ದು, ಗಾಯನದ ಅನುಭವವನ್ನು ಇನ್ನಷ್ಟು ಹೆಚ್ಚಿಗೆ ಮಾಡಲಿದೆ.

ಇತರರ ಜೊತೆಗೂ ಹಾಡಬಹುದು
ಈ ಹೊಸ ಫೀಚರ್ಸ್ ಮೂಲಕ ನೀವು ಒಬ್ಬರೇ ಹಾಡುವುದಲ್ಲದೇ ಇತರರ ಜೊತೆಗೂ ಹಾಡಬಹುದಾಗಿದೆ. ಇದಕ್ಕಾಗಿ ಮತ್ತಷ್ಟು ಫೀಚರ್ಸ್ ಪರಿಚಯಿಸಿರುವ ಆಪಲ್, ಹಿನ್ನೆಲೆ ಧ್ವನಿಗಳನ್ನು ಪ್ರಮುಖ ಗಾಯನದಿಂದ ಪ್ರತ್ಯೇಕವಾಗಿ ಅನಿಮೇಟೆಡ್ ಮಾಡಲು ಅನುಮತಿಸುತ್ತದೆ. ಈ ಮೂಲಕ ಸಹಚರರೊಂದಿಗೆ ಹಾಡಲು ಅನುಕೂಲವಾದ ಆಯ್ಕೆಯನ್ನು ನೀವು ಪಡೆಯಬಹುದು. ಇದಿಷ್ಟೇ ಅಲ್ಲದೆ ಯಾರ ಜೊತೆಗೆ ಹಾಡಲು ಇಷ್ಟ ಪಡುವಿರೋ ಅವರನ್ನು ಈ ಪ್ಲಾಟ್‌ಫಾರ್ಮ್‌ನಲ್ಲಿ ಆಹ್ವಾನ ಮಾಡಬಹುದು.

ಆಪಲ್ ಸಂಸ್ಥೆ ಹೇಳಿದ್ದೇನು?
ಆಪಲ್ ಮ್ಯೂಸಿಕ್‌ನ ಸಾಹಿತ್ಯದ ಅನುಭವವು ನಮ್ಮ ಸೇವೆಯಲ್ಲಿನ ಅತ್ಯಂತ ಜನಪ್ರಿಯ ಫೀಚರ್ಸ್‌ಗಳಲ್ಲಿ ಒಂದಾಗಿದೆ ಎಂದು ಆಪಲ್ ಮ್ಯೂಸಿಕ್ ಮತ್ತು ಬೀಟ್ಸ್‌ನ ಉಪಾಧ್ಯಕ್ಷ ಆಲಿವರ್ ಶುಸರ್ ತಿಳಿಸಿದ್ದಾರೆ. ಹಾಗೆಯೇ ಪ್ರಪಂಚದಾದ್ಯಂತ ನಮ್ಮ ಬಳಕೆದಾರರು ತಮ್ಮ ನೆಚ್ಚಿನ ಹಾಡುಗಳನ್ನು ಹಾಡಲು ಇಷ್ಟಪಡುತ್ತಾರೆ ಎಂದು ನಮಗೆ ತಿಳಿದಿದೆ. ಈ ಕಾರಣಕ್ಕೆ ಅದೇ ಹಾಡುಗಳನ್ನ ಹಾಡುವ ಮೂಲಕ ಸಂಗೀತ ಲೋಕದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವಿಕೆಯನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ಈ ಕೊಡುಗೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ನಾವು ಬಯಸುತ್ತೇವೆ. ಈ ಕೆಲಸ ನಿಜವಾಗಿಯೂ ತುಂಬಾ ಖುಷಿಯಾಗಿದೆ, ನಮ್ಮ ಗ್ರಾಹಕರು ಈ ಫೀಚರ್ಸ್ ಅನ್ನು ಇಷ್ಟಪಡುತ್ತಾರೆ ಎಂದಿದ್ದಾರೆ.

ಯಾವಾಗ ಲಭ್ಯ?
ಈ ಫೀಚರ್ಸ್ ಈ ತಿಂಗಳ ನಂತರ ಬಳಕೆದಾರರಿಗೆ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ. ಇದನ್ನು ಎಲ್ಲಾ ಐಫೋನ್, ಐಪ್ಯಾಡ್‌ನ ಎಲ್ಲಾ ವೇರಿಯಂಟ್‌ಗಳಲ್ಲೂ ಬಳಕೆ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ, ಆಪಲ್ ಟಿವಿಯಲ್ಲೂ ಈ ಫೀಚರ್ಸ್ ಬೇಕು ಎಂದಾದರೆ ಬಳಕೆದಾರರು ಆಪಲ್ TV 4K ಅನ್ನು ಖರೀದಿ ಮಾಡಬಹುದು ಎಂದು ಆಪಲ್ ತಿಳಿಸಿದೆ.


Click it and Unblock the Notifications








