Apple: ಐಫೋನ್ 16 ಗೆ ಭಾರತದ ಬ್ಯಾಟರಿಗಳು! ಆಪಲ್‌ನ ನಿರ್ಧಾರದಿಂದ ದೇಶಕ್ಕೆ ಮತ್ತೊಂದು ಕೀರ್ತಿ
ಆಪಲ್‌ಗೂ (Apple) ಭಾರತಕ್ಕೂ ಇತ್ತೀಚಿನ ದಿನಗಳಲ್ಲಿ ಬಂಧ ಹೆಚ್ಚಾಗುತ್ತಿದೆ. ಈ ಮೂಲಕ ಭಾರತದ ಶಕ್ತಿ ಸಾಮರ್ಥ್ಯ ಇಡೀ ಜಗತ್ತಿಗೆ ಗೊತ್ತಾಗುತ್ತಿದೆ. ಈ ನಡುವೆ ಆಪಲ್ ಭಾರತದಿಂದ ಐಫೋನ್ 16 ಬ್ಯಾಟರಿಗಳನ್ನು (iPhone 16 battery) ಪಡೆಯಲು ಬಯಸಿದೆ ಎಂದು ತಿಳಿದುಬಂದಿದೆ.
ಹೌದು, ಆಪಲ್ ಇದೀಗ ಭಾರತವನ್ನು ಎಲ್ಲಾ ರೀತಿಯಲ್ಲೂ ಹೆಚ್ಚು ಅವಲಂಬನೆ ಮಾಡಲು ಮುಂದಾಗಿದೆ. ಇದಕ್ಕೆ ಹಲವಾರು ಕಾರಣಗಳು ಇದ್ದು, ಈ ಮೂಲಕ ಭಾರತದ ವಿಶ್ವ ಮಟ್ಟದಲ್ಲಿ ತನ್ನ ಶಕ್ತಿ ಏನೆಂದು ತೋರಿಸುವಂತೆ ಆಗಿದೆ. ಅದರಂತೆ ಮುಂದಿನ ದಿನಗಳಲ್ಲಿ ಭಾರತದ ಶಕ್ತಿ ಐಫೋನ್‌ಗಳಲ್ಲೂ ಇರಲಿದೆ ಎಂದು ಹೇಳಲಾಗಿದೆ. ಹಾಗಿದ್ರೆ, ಐಫೋನ್ ಯಾಕೆ ಈ ನಿರ್ಧಾರ ಮಾಡಿದೆ ಮೇಡ್ ಇನ್ ಇಂಡಿಯಾ ಬ್ಯಾಟರಿಗಳು ಎಲ್ಲಿ ತಯಾರಾಗಲಿವೆ ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್‌ಗಳಿಗೆ ಭಾರತದ ಬ್ಯಾಟರಿಗಳು: ಆಪಲ್ ತನ್ನ ಮುಂದಿನ ಸರಣಿಯ ಫೋನ್‌ಗಳಾದ ಐಫೋನ್ 16 ಫೋನ್‌ಗಳಲ್ಲಿ (iPhone 16 phone) ಭಾರತದ ಬ್ಯಾಟರಿಗಳನ್ನು ಜೋಡಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಹಂತಹಂತವಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಭಾರತದ ಉತ್ಪಾದನಾ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಆಪಲ್ ಸಜ್ಜಾಗಿದೆ.
ಇನ್ನು ಮುಂಬರುವ ಐಫೋನ್ 16 ಸರಣಿಯ ಬ್ಯಾಟರಿಗಳನ್ನು ಭಾರತದಲ್ಲಿ ತಯಾರಿಸಬೇಕೆಂದು ಆಪಲ್ ಬಯಸಿದೆ ಎಂದು ವರದಿಯಾಗಿದೆ. ಇದರೊಂದಿಗೆ ಮೇಕ್ ಇನ್ ಇಂಡಿಯಾ ಉಪಕ್ರಮದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಆಪಲ್ ಆತುರದಲ್ಲಿದೆ ಎಂದು ತೋರುತ್ತಿದೆ. ಅದರಂತೆ ಭಾರತದಲ್ಲಿ ಹೊಸ ಕಾರ್ಖಾನೆಗಳ ನಿರ್ಮಾಣವನ್ನು ಪ್ರಾರಂಭಿಸಲು ಆಪಲ್ ಚೀನಾದಲ್ಲಿ ಇರುವ ದೇಸೆ ಮತ್ತು ತೈವಾನ್‌ನಲ್ಲಿ ಇರುವ ಸಿಂಪ್ಲೋ ಟೆಕ್ನಾಲಜಿಗೆ (Desay,Simplo) ಒತ್ತಾಯ ಮಾಡಿದೆ ಎಂದು ವರದಿಯಾಗಿದೆ.

ಮುಂಬರುವ ಆರ್ಡರ್‌ಗಳನ್ನು ಪೂರೈಸಲು ದೇಶದಲ್ಲಿ ಉತ್ಪಾದನಾ ಸಾಮರ್ಥ್ಯಗಳನ್ನು ವಿಸ್ತರಿಸುವುದು ಈ ಯೋಜನೆಯ ಗುರಿಯಾಗಿದೆ ಎಂದು ತಿಳಿದುಬಂದಿದೆ. ಇನ್ನು ಐಫೋನ್ ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿರುವ ಅಸೆಂಬ್ಲರ್‌ಗಳಿಗೆ ವಿದ್ಯುತ್ ಕೋಶಗಳನ್ನು (electric cells) ಕಳುಹಿಸುವ ಮುನ್ನ ವಿದ್ಯುತ್ ಕೋಶಗಳನ್ನು ಪ್ಯಾಕೇಜಿಂಗ್ ಮಾಡುವ ಕೆಲಸವನ್ನು ದೇಸೇ ಮತ್ತು ಸಿಂಪ್ಲೋ ಮಾಡುತ್ತವೆ.
ಇದರ ನಡುವೆ ಈ ವಾರದ ಆರಂಭದಲ್ಲಿ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಜಪಾನಿನ ಕಂಪನಿಯಾದ ಟಿಡಿಕೆ ಹರಿಯಾಣದ ಮನೇಸರ್‌ನಲ್ಲಿ 180 ಎಕರೆಯಲ್ಲಿ ಕಾರ್ಖಾನೆ ಸ್ಥಾಪಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಕಾರ್ಖಾನೆಯ ಹಿಂದಿನ ಉದ್ದೇಶವೇ ಐಫೋನ್‌ಗಳಿಗಾಗಿ ವಿನ್ಯಾಸಗೊಳಿಸಲಾದ ಬ್ಯಾಟರಿಗಳನ್ನು ತಯಾರಿಸುವುದು ಎಂದು ಈ ಮೂಲಕ ತಿಳಿದುಬಂದಿದೆ.
ಚೀನಾ ಅವಲಂಬನೆ ಕಡಿಮೆ: ಕೆಲವು ವರ್ಷಗಳಿಂದ ಆಪಲ್ ಚೀನಾ ತಯಾರಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಾ ಬರುತ್ತಿದೆ. ಇದರ ಬದಲಾಗಿ ಭಾರತ ಮತ್ತು ವಿಯೆಟ್ನಾಂನಂತಹ ಮಾರುಕಟ್ಟೆಗಳತ್ತ ಮುಖ ಮಾಡುತ್ತಿದೆ. ಈ ಹಿಂದೆ ಕಂಪನಿಯ ಪ್ರಾಥಮಿಕ ಉತ್ಪಾದನಾ ತಾಣಗಳು ಚೀನಾದಲ್ಲಿ ಮಾತ್ರ ನೆಲೆಗೊಂಡಿದ್ದವು. ಉತ್ಪಾದನೆಯ 44 ರಿಂದ 47 ಪ್ರತಿಶತ ಕಾರ್ಯ ಇಲ್ಲಿಂದಲೇ ಆಗುತ್ತಿತ್ತು. ಆದರೆ, 2021 ರಲ್ಲಿ ಅದು 36 ಪ್ರತಿಶತಕ್ಕೆ ಕುಸಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಪ್ರಕ್ರಿಯೆ ನಿರಂತರವಾಗಿ ಇರಲಿದೆ ಎಂದು ಹೇಳಲಾಗಿದೆ.

ಚೀನಾದ ಮೇಲೆ ಆಪಲ್‌ಗೆ ಕೋಪ ಇದೆಯೇ?: ಎಲ್ಲಾ ಟೆಕ್ ದೈತ್ಯರು ಚೀನಾ ಕಡೆ ನೋಡಿದರೆ ಈ ಆಪಲ್ ಮಾತ್ರ ಭಾರತದ ಕಡೆ ಯಾಕೆ ಕಣ್ಣಾಕಿದೆ ಎಂದು ನೀವು ಪ್ರಶ್ನೆ ಹಾಕಬಹುದು. ಇದಕ್ಕೆ ಉತ್ತರ ಏನೆಂದರೆ ದೇಶೀಯ ಚೀನೀ ನೀತಿಗಳು ಮತ್ತು ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಂಬಂಧದಲ್ಲಿನ ಉದ್ವಿಗ್ನತೆಯೇ ಇದಕ್ಕೆ ಕಾರಣವಾಗಿದೆ. ಕೊರೊನಾ ಸಂದರ್ಭದಲ್ಲಿ ಚೀನಾದ ದೇಶೀಯ ನೀತಿಗಳು ಐಫೋನ್ ಉತ್ಪಾದನೆಯ ಮೇಲೆ ಭಾರಿ ಪರಿಣಾಮ ಬೀರಿತ್ತು. ಅದಕ್ಕೂ ಮುನ್ನ, ಡೊನಾಲ್ಡ್ ಟ್ರಂಪ್ ಹೊಸ ಅಡೆತಡೆಗಳನ್ನು ನಿರ್ಮಾಣ ಮಾಡಿ ಚೀನಾ ವಿರುದ್ಧ ವ್ಯಾಪಾರ ಯುದ್ಧವನ್ನು ಘೋಷಿಸಿದ್ದರು. ಇದು ಚೀನಾದಲ್ಲಿನ ಆಪಲ್ ತಯಾರಕರ ಮೇಲೆ ದೊಡ್ಡ ಹೊಡೆತ ನೀಡಿತ್ತು.
ಈ ನಡುವೆ ಆಪಲ್ ಭಾರತದಲ್ಲಿ ಐಫೋನ್ 15 ಅನ್ನು ತೈವಾನೀಸ್ ಒಪ್ಪಂದ ತಯಾರಕರಾದ ಫಾಕ್ಸ್‌ಕಾನ್, ಪೆಗಾಟ್ರಾನ್ ಮತ್ತು ವಿಸ್ಟ್ರಾನ್‌ನೊಂದಿಗೆ ಸಹಭಾಗಿತ್ವದ ಮೂಲಕ ಉತ್ಪಾದಿಸುವ ಕೆಲಸ ಮಾಡುತ್ತಿದೆ. ಕಂಪನಿಯು 2017 ರಿಂದ ಭಾರತದಲ್ಲಿ ತಯಾರು ಮಾರುವ ಕಾರ್ಯದಲ್ಲಿ ಬ್ಯುಸಿ ಆಗಿದ್ದು, ಇದೀಗ ಭಾರತದಲ್ಲಿ ಐಫೋನ್ 13, ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 15, ಐಫೋನ್ 15 ಪ್ಲಸ್ ಮತ್ತು ಐಫೋನ್ SE ಅನ್ನು ತಯಾರಿಸಲು ಸಜ್ಜಾಗಿದೆ.
ಇನ್ನು ಅತಿದೊಡ್ಡ ಆಪಲ್ ಡಿವೈಸ್ ತಯಾರಕರಲ್ಲಿ ಒಂದಾದ ವಿಸ್ಟ್ರಾನ್ ಇತ್ತೀಚೆಗೆ ಭಾರತದಲ್ಲಿ ತನ್ನ ವ್ಯಾಪಾರ ಕಾರ್ಯಾಚರಣೆಗಳನ್ನು ಟಾಟಾ ಗ್ರೂಪ್‌ಗೆ ವರ್ಗಾಯಿಸುವ ಬಗ್ಗೆ ಮಾಹಿತಿ ನೀಡಿದೆ. ಆದರೆ, ಫಾಕ್ಸ್‌ಕಾನ್ ಮಾತ್ರ ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು $ 1.5 ಬಿಲಿಯನ್ ಮೊತ್ತವನ್ನು ಹೂಡಿಕೆ ಮಾಡಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಮೂಲಕ ಭಾರತ ವಿಶ್ವಮಟ್ಟದಲ್ಲಿ ಎಲ್ಲಾ ವಿಭಾಗದಲ್ಲಿ ಮುಂಚೂಣಿ ಸ್ಥಾನ ಪಡೆಯುವಂತೆ ಆಗಲಿದೆ.


Click it and Unblock the Notifications








