iPhone: ಒದ್ದೆಯಾದ ಐಫೋನ್ ಅನ್ನು ಅಕ್ಕಿ ಚೀಲದೊಳಗೆ ಇಡಬೇಡಿ ಎಂದ ಆಪಲ್! ಕಾರಣ?
ಐಫೋನ್‌ಗಳು (iPhone) ಇಂದು ವಿವಿಧ ರೀತಿಯಲ್ಲಿ ಬಳಕೆದಾರರಿಗೆ ಇಷ್ಟ ಆಗುತ್ತಿವೆ. ಅದರಲ್ಲೂ ಹೊಸ ಹೊಸ ಫೋನ್‌ಗಳನ್ನು ಲಾಂಚ್ ಜೊತೆಗೆ ವಿಶೇಷ ಫೀಚರ್ಸ್ ಆಯ್ಕೆಯನ್ನು ಪ್ರತಿವರ್ಷ ಬಳಕೆದಾರರಿಗೆ ಆಪಲ್ ನೀಡುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಒದ್ದೆಯಾಗುವ ಐಫೋನ್ ಸಂಬಂಧ ಆಪಲ್ ಹೇಳಿಕೆಯೊಂದನ್ನು ನೀಡಿದೆ.
ಹೌದು, ಸಾಕಷ್ಟು ಜನರು ತಮ್ಮ ಫೋನ್ ತೇವವಾದರೆ ತಕ್ಷಣ ಮಾಡುವ ಕೆಲಸ ಏನೆಂದರೆ ಅದನ್ನು ಅಕ್ಕಿಯಲ್ಲಿ ಕೆಲ ಕಾಲ ಇಡುವುದು. ಆದರೆ, ಆಪಲ್ ಮಾತ್ರ ಈಗ ಅಕ್ಕಿಯಲ್ಲಿ ಐಫೋನ್ ಇಡಬೇಡಿ ಎಂದು ತಿಳಿಸಿದ್ದು, ಈ ಮೂಲಕ ವಿಶೇಷ ಮಾಹಿತಿಯೊಂದನ್ನು ನೀಡಿದೆ. ಹಾಗಿದ್ರೆ, ಯಾವ ಉದ್ದೇಶಕ್ಕೆ ಆಪಲ್ ಈ ಹೇಳಿಕೆ ನೀಡಿದೆ. ಅಕ್ಕಿಯ ಒಳಗೆ ಒದ್ದೆ ಫೋನ್ ಇಟ್ಟರೆ ಏನಾಗಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಒದ್ದೆಯಾದ ಐಫೋನ್ ಅನ್ನು ಅಕ್ಕಿಯ ಒಳಗೆ ಇಡಬೇಡಿ: ತನ್ನ ಬೆಂಬಲ ಸೈಟ್‌ನಲ್ಲಿ ಇತ್ತೀಚಿನ ನವೀಕರಣದಲ್ಲಿ, ಒದ್ದೆಯಾದ ಐಫೋನ್‌ಗಳನ್ನು ಒಣಗಿಸಲು ಅಕ್ಕಿಯನ್ನು ಬಳಸುವ ಸಾಮಾನ್ಯ ಅಭ್ಯಾಸದ ವಿರುದ್ಧ ಆಪಲ್ (Apple) ಎಚ್ಚರಿಕೆ ನೀಡಿದೆ. ಈವರೆಗೂ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಒದ್ದೆಯಾದರೆ ಇದೇ ಕೆಲಸ ಮಾಡಿಕೊಂಡು ಬರುತ್ತಿದ್ದರು. ಆದರೆ, ಡಿವೈಸ್‌ಗೆ ಆಗುವ ಸಂಭವನೀಯ ಹಾನಿಯನ್ನು ಉಲ್ಲೇಖಿಸಿ ಆಪಲ್ ಈ ವಿಧಾನವನ್ನು ನಿರಾಕರಿಸಿದೆ.
ಒದ್ದೆಯಾದ ಐಫೋನ್ ಅನ್ನು ಅಕ್ಕಿಯಲ್ಲಿ ಇಡುವುದರಿಂದ ಅದಕ್ಕೆ ಹಾನಿಯಾಗಬಹುದು. ಏಕೆಂದರೆ ಅಕ್ಕಿಯ ಸಣ್ಣ ಕಣಗಳು ಫೋನ್‌ನ ಒಳಗೆ ಪ್ರವೇಶಿಸಬಹುದು ಮತ್ತು ಆಂತರಿಕ ಘಟಕಗಳನ್ನು ಹಾನಿಗೊಳಿಸಬಹುದು ಎಂದು ತಿಳಿಸಲಾಗಿದೆ. ಈ ನಡುವೆ ಆಪಲ್ ಹೊಸ ಲಿಕ್ವಿಡ್ ಡಿಟೆಕ್ಷನ್ ಫೀಚರ್ಸ್ (Liquid detection features) ಅನ್ನು ಪರಿಚಯಿಸುತ್ತಿರುವ ಕಾರಣಕ್ಕೆ ಈಗ ಈ ಎಚ್ಚರಿಕೆ ನೀಡಲಾಗುತ್ತಿದೆ. ಈ ಫೀಚರ್ಸ್ ಬಳಕೆದಾರರಿಗೆ ಅವರ ಐಫೋನ್ ತೇವಾಂಶಕ್ಕೆ ಒಡ್ಡಿಕೊಂಡಾಗ ಎಚ್ಚರಿಕೆ ನೀಡುತ್ತದೆ. ಈ ಮೂಲಕ ಡಿವೈಸ್ ಒಣಗುವವರೆಗೆ ಚಾರ್ಜ್ ಮಾಡುವುದನ್ನು ತಡೆಯಲು ಅವರಿಗೆ ಸಲಹೆ ನೀಡುತ್ತದೆ.

ನಿಮ್ಮ ಐಫೋನ್ ಒದ್ದೆಯಾಗಿದ್ರೆ ಏನು ಮಾಡಬೇಕು?: ಅಕ್ಕಿಯಲ್ಲಿ ಇಡುವ ಮಾರ್ಗವನ್ನು ಹೊರತುಪಡಿಸಿ ಇತರೆ ಮಾರ್ಗಗಳೂ ಸಹ ಇವೆ. ಅದರಲ್ಲಿ ಮೊದಲನೆಯದಾಗಿ, ನಿಮ್ಮ ಐಫೋನ್ ಮತ್ತು ಕೇಬಲ್ ಸಂಪೂರ್ಣವಾಗಿ ಒಣಗುವವರೆಗೆ ಕೇಬಲ್ ಅನ್ನು ಡಿವೈಸ್‌ಗೆ ಪ್ಲಗ್ ಮಾಡಬೇಡಿ. ಗಾಳಿ ಇರುವ ಕಡೆ ಅಥವಾ ಒಣ ಪ್ರದೇಶದಲ್ಲಿ ನಿಮ್ಮ ಐಫೋನ್ ಅನ್ನು ಕೆಲ ಕಾಲ ಇಡಿ.
ಒದ್ದೆಯಾಗಿ ಕನಿಷ್ಠ 30 ನಿಮಿಷಗಳ ನಂತರ, ಲೈಟ್ನಿಂಗ್ ಅಥವಾ ಯುಎಸ್‌ಬಿ-ಸಿ ಕೇಬಲ್ ಮೂಲಕ ಚಾರ್ಜ್ ಮಾಡಲು ಪ್ರಯತ್ನಿಸಿ ಅಥವಾ ಟೂಲ್ಸ್ ಅನ್ನು ಕನೆಕ್ಟ್ ಮಾಡಲು ಪ್ರಯತ್ನಿಸಿ. ಈ ವೇಳೆ ಕನೆಕ್ಟರ್‌ನಲ್ಲಿ ಅಥವಾ ನಿಮ್ಮ ಕೇಬಲ್‌ನ ಪಿನ್‌ಗಳ ಅಡಿಯಲ್ಲಿ ಇನ್ನೂ ನೀರು ಕಂಡುಬಂದರೆ ಒಂದು ದಿನದವರೆಗೆ ಗಾಳಿ ಇರುವ ಕಡೆ ಅಥವಾ ಒಣ ಪ್ರದೇಶದಲ್ಲಿ ನಿಮ್ಮ ಐಫೋನ್ ಅನ್ನು ಇಡಿ.
ಆಪಲ್ ಹೊರತುಪಡಿಸಿ ಇತರೆ ಸ್ಮಾರ್ಟ್‌ಫೋನ್ ಬಳಕೆದಾರರು ಈ ಕ್ರಮ ಅನುಸರಿಸಬಹುದಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಫೋನ್ ಒದ್ದೆಯಾಗಿದ್ರೆ ಮೊದಲು ಅದನ್ನು ಆಫ್ ಮಾಡಿ ಇದರೊಂದಿಗೆ ಫೋನ್‌ಗೆ ಹಾಕಿರುವ ಕೇಸ್ ತೆಗೆದುಹಾಕಿ. ಸಾಧ್ಯವಾದರೆ ಸಿಮ್ ಕಾರ್ಡ್ ಅಥವಾ ಎಸ್‌ಡಿಕಾರ್ಡ್ ಅನ್ನೂ ಸಹ ಫೋನ್‌ನಿಂದ ಬೇರ್ಪಡಿಸಿ.
ಇದರ ಜೊತೆಗೆ ನಿಮ್ಮ ಫೋನ್ ಅನ್ನು ಒಣಗಿಸಲು ಮೃದುವಾದ, ಒಣ ಟವೆಲ್ ಬಳಕೆ ಮಾಡಿ. ಸೂಕ್ಷ್ಮವಾದ ಭಾಗಗಳಿಂದ ನೀರನ್ನು ತೆಗೆದುಹಾಕಲು ನೀವು ನಿರ್ವಾತವನ್ನು ಸಹ ಬಳಸಬಹುದು. ಸ್ಪೀಕರ್ ಗ್ರಿಲ್, ಯುಎಸ್‌ಬಿ ಪೋರ್ಟ್‌ಗಳು ಮತ್ತು ಹೆಡ್‌ಫೋನ್ ಜ್ಯಾಕ್ ಸುತ್ತಲೂ ಹೆಚ್ಚುವರಿ ನೀರನ್ನು ಸ್ಕ್ರಬ್ ಮಾಡಿ. ನಿಮ್ಮ ಫೋನ್ ಒದ್ದೆಯಾಗಿರುವಾಗ ಯಾವುದೇ ಬಟನ್‌ಗಳನ್ನು ಒತ್ತುವುದನ್ನು ನೀವು ತಪ್ಪಿಸಬೇಕು.

ಐಫೋನ್ ಒದ್ದೆಯಾದಾಗ ಇದನ್ನು ಮಾಡಬೇಡಿ: ಬಾಹ್ಯ ಶಾಖದ ಮೂಲ ಅಥವಾ ಸಂಕುಚಿತ ಗಾಳಿಯನ್ನು ಬಳಕೆ ಮಾಡಿಕೊಂಡು ಐಫೋನ್‌ಗಳನ್ನು ಒಣಗಿಸಬಾರದು ಎಂದು ಆಪಲ್ ಹೇಳುತ್ತದೆ. ಕನೆಕ್ಟರ್‌ಗೆ ಹತ್ತಿ ಸ್ವ್ಯಾಬ್ ಅಥವಾ ಪೇಪರ್ ಟವೆಲ್‌ನಂತಹ ವಸ್ತುವನ್ನು ಸೇರಿಸುವುದು ಸಹ ಸೂಕ್ತವಲ್ಲ. ಇದರ ಜೊತೆಗೆ ಅಕ್ಕಿಯ ಚೀಲದಲ್ಲಿ ನಿಮ್ಮ ಐಫೋನ್ ಅನ್ನು ಸಹ ಹಾಕಬೇಡ.


Click it and Unblock the Notifications








