Apple Secret! ಆಪಲ್ ಡಿವೈಸ್‌ಗಳ ಫೋಟೋದಲ್ಲಿ ಯಾಕೆ ಯಾವಾಗಲು ಸಮಯ '9:41 AM' ಇರುತ್ತದೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಆಪಲ್ ಐಫೋನ್‌ಗಳು (apple iPhones) ಇಂದಿನ ದಿನಗಳಲ್ಲಿ ಬಹು ಬೇಡಿಕೆಯ ಜನಪ್ರಿಯ ಫೋನ್‌ಗಳಾಗಿವೆ. ಅಷ್ಟೇ ಅಲ್ಲೆ ಆಪಲ್ ಅನಾವರಣ ಮಾಡುವ ಯಾವುದೇ ಡಿವೈಸ್ ಸಹ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನೇ ಉಂಟು ಮಾಡುತ್ತವೆ. ಆದರೆ, ಹೊಸದಾಗಿ ಕಾಣಿಸಿಕೊಳ್ಳುವ ಐಫೋನ್, ಐಪ್ಯಾಡ್ ಫೋಟೋಗಳಲ್ಲಿನ (iPhone, iPad photo) ಡಿಸ್‌ಪ್ಲೇ ಮೇಲೆ 9:41 AM ಇರೋದನ್ನು ನೀವು ಗಮನಿಸಿರಬಹುದು.
ಹೌದು, ಆಪಲ್ ಹೊಸದಾಗಿ ಲಾಂಚ್ ಮಾಡುವ ಸಾಕಷ್ಟು ಡಿವೈಸ್‌ಗಳ ಚಿತ್ರಗಳಲ್ಲಿನ ಡಿಸ್‌ಪ್ಲೇ ಮೇಲೆ 9:41 AM ಇರುತ್ತದೆ. ನೀವು ಅಂದುಕೊಂಡಿರಬಹುದು. ಇದು ಕೇವಲ ಸಮಯ ಎಂದು. ಆದರೆ ಆಪಲ್‌ಗೆ ಇದು ಭಾವನಾತ್ಮಕ ವಿಷಯ. ಈ ವಿಷಯದ ಬಗ್ಗೆ ಕೆಲವರಿಗೆ ತಿಳಿದಿರಬಹುದು ಅಥವಾ ಇನ್ನೂ ಕೆಲವರಿಗೆ ತಿಳಿಯದೇ ಇರಬಹುದು. ಹಾಗಿದ್ರೆ, ಯಾವ ಕಾರಣಕ್ಕೆ ಆಪಲ್ ಇದೇ ಸಮಯ ಇರುವ ಫೋಟೋಗಳನ್ನ ಶೇರ್ ಮಾಡುತ್ತದೆ ಅನ್ನೋ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

9:41 AM ನಲ್ಲಿ ಅಡಗಿದೆ ಅಚ್ಚರಿ ಮಾಹಿತಿ: ಮೊದಲೇ ತಿಳಿಸಿದಂತೆ 9:41 AM ಗೂ ಆಪಲ್‌ಗೂ ಅವಿನಾಭಾವ ನಂಟು. ಈ ಕಾರಣಕ್ಕೆ ಆಪಲ್ ಕಂಪನಿಯ ಹೆಚ್ಚಿನ ಉತ್ಪನ್ನಗಳ ಸಾಲಿನಲ್ಲಿ ಈ ಸಮಯ ಸ್ಪಷ್ಟವಾಗಿ ಕಂಡುಬರುತ್ತದೆ. ನಿಮಗೆ ಡೌಟ್ ಇದ್ದರೆ ಈಗಲೇ ಗೂಗಲ್‌ನಲ್ಲಿ ಅಥವಾ ಆಪಲ್‌ನ ಅಧಿಕೃತ ಸೈಟ್ ಓಪನ್ ಮಾಡಿ ನೋಡಿ. ಅಲ್ಲಿ ಈ ಸಮಯ ಕಾಣಿಸುವ ಡಿವೈಸ್‌ಗಳ ಫೋಟೋಗಳು ನಿಮ್ಮ ಕಣ್ಣ ಮುಂದೆ ಬರುತ್ತವೆ.
ಯಾವ ಕಾರಣಕ್ಕೆ ಈ ಸಮಯಕ್ಕೆ ಪ್ರಾಮುಖ್ಯತೆ?: ಸ್ಟೀವ್ ಜಾಬ್ಸ್ ಜನವರಿ 9, 2007 ರಲ್ಲಿ ಮ್ಯಾಕ್‌ವರ್ಲ್ಡ್ ಕಾನ್ಫರೆನ್ಸ್ ಮತ್ತು ಎಕ್ಸ್‌ಪೋದಲ್ಲಿ ಐಫೋನ್ ಮತ್ತು ಐಪ್ಯಾಡ್ ಅನ್ನು ಲಾಂಚ್ ಮಾಡಿದರು. ಸ್ಟೀವ್ ಜಾಬ್ಸ್ ತಮ್ಮ ಪ್ರೊಡಕ್ಟ್ ಅನ್ನು ಲಾಂಚ್ ಮಾಡುವಾಗ ಆ ಕ್ಷಣದ ನಿಖರವಾದ ಸಮಯವನ್ನು ತೋರಿಸಲು ಬಯಸಿದ್ದರು. ಇನ್ನು ಆ ಕಾರ್ಯಕ್ರಮವು ಬೆಳಿಗ್ಗೆ 9:00 ಕ್ಕೆ ಸರಿಯಾಗಿ ಪ್ರಾರಂಭವಾಗಿತ್ತು.

ಅತಿಥಿಗಳನ್ನು ಸ್ವಾಗತಿಸಿದ ನಂತರ ವೇದಿಕೆಯ ಪರದೆಯ ಮೇಲೆ ಐಫೋನ್ ಅನ್ನು ಪ್ರಸ್ತುತಪಡಿಸಲಾಯಿತು. ನಿಖರವಾಗಿ 9:40 ಕ್ಕೆ ಪರದೆಯ ಮೇಲೆ ಐಫೋನ್‌ನ ಫೋಟೋವನ್ನು ಪ್ರದರ್ಶಿಸಲಾಗುತ್ತದೆ ಎಂದು ಮೊದಲೇ ಪ್ಲ್ಯಾನ್ ರೂಪಿಸಿಕೊಳ್ಳಲಾಗಿತ್ತು. ಆದರೆ, ಒಂದೆರಡು ನಿಮಿಷ ತಡವಾಗಬಹುದು ಎಂದು 41 ಮತ್ತು 42 ನಿಮಿಷಗಳ ನಡುವಿನ ಸಮಯವನ್ನು ಹೊಂದಾಣಿಕೆ ಮಾಡಲಾಗಿತ್ತಂತೆ. ಅಂದರೆ, ಈವೆಂಟ್‌ನಲ್ಲಿ ಹಾಜರಿದ್ದ ಪ್ರತಿಯೊಬ್ಬರ ವಾಚ್ ಮತ್ತು ಫೋನ್‌ನ ಡಿಸ್‌ಪ್ಲೇನಲ್ಲಿ ಪ್ರದರ್ಶಿಸಲಾದ ಸಮಯ ಹಾಗೂ ಇಲ್ಲಿ ತೋರಿಸಿದ ಸಮಯ ಒಂದೇ ಆಗಿರುವಂತೆ ಮಾಡುವುದು ಅತಿಥಿಗಳನ್ನು ಆಕರ್ಷಿಸುವ ತಂತ್ರವಾಗಿ ಕೆಲಸ ಮಾಡಿತ್ತು.
ಪರದೆಯ ಮೇಲೆ ಐಫೋನ್‌ನ ಫೋಟೋವನ್ನು ಪ್ರದರ್ಶಿಸಿದಾಗ, ಗಡಿಯಾರದಲ್ಲಿ 9:41 ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಸ್ಮಾರ್ಟ್‌ವಾಚ್ ಹೊರತುಪಡಿಸಿ ಆಪಲ್ ಕಂಪನಿಯ ಎಲ್ಲಾ ಉತ್ಪನ್ನಗಳಲ್ಲಿ 9:41 ಸಮಯವನ್ನು ತೋರಿಸಲಾಗುತ್ತದೆ. ಈ ಮೂಲಕ ತಿಳಿದುಬರುವುದು ಏನೆಂದರೆ ಈ ಸಮಯವು ಮೊದಲ ಡಿವೈಸ್ ಲಾಂಚ್ ಆದ ಅಮೃತಗಳಿಗೆಯಾಗಿದೆ ಎಂದು. ಕೆಲವು ಆರಂಭಿಕ ಐಫೋನ್ ಫೋಟೋಗಳಲ್ಲಿ 9:42 AM ಸಮಯವನ್ನು ತೋರಿಸಲಾಗುತ್ತಿತ್ತು. ಆದರೆ ಇತ್ತೀಚಿಗೆ ಲಾಂಚ್ ಆಗುವ ಎಲ್ಲಾ ಆಪಲ್ ಡಿವೈಸ್‌ಗಳಲ್ಲಿ 9:41 AM ಸಮಯವನ್ನೇ ಬಳಸಲಾಗುತ್ತಿದೆ.
ಈ ನಡುವೆ ಆಪಲ್ ತನ್ನ ಹೊಸ ಐಫೋನ್ ಸರಣಿ 15 ಅನ್ನು ಬಿಡುಗಡೆ ಮಾಡಿದೆ. ಈ ಐಫೋನ್ ಸರಣಿಯು ನಾಲ್ಕು ಮಾದರಿಗಳನ್ನು ಒಳಗೊಂಡಿದೆ. ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ, ಐಫೋನ್ ಪ್ರೊ ಪ್ಲಸ್. ಬಳಕೆದಾರರು ಈ ಫೋನ್ ಅನ್ನು ಸೆಪ್ಟೆಂಬರ್ 22 ರಿಂದ ಖರೀದಿ ಮಾಡುತ್ತಿದ್ದಾರೆ. ಈ ಫೋನ್‌ಗಳನ್ನು ಈ ಕ್ಷಣಕ್ಕೂ ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದು, ವಿಶೇಷ ಫೀಚರ್ಸ್‌ಗೆ ಮಾರುಹೋಗಿದ್ದಾರೆ. ಈ ಫೋನ್‌ಗಳ ಫೋಟೋದಲ್ಲೂ ಈ ಸಮಯ ಇದ್ದುದ್ದನ್ನು ನೀವು ಗಮನಿಸಿರಬಹುದು.

ಈ ಹೊಸ ಫೋನ್‌ಗಳ ಪ್ರಮುಖ ವಿಶೇಷತೆ ಏನೆಂದರೆ ಯುಎಸ್‌ಬಿ ಟೈಪ್-ಸಿ ಚಾರ್ಜರ್ ಆಯ್ಕೆ, ಪೆರಿಸ್ಕೋಪ್ ಕ್ಯಾಮೆರಾ, ಟೈಟಾನಿಯಂ ಫ್ರೇಮ್, ಆಕ್ಷನ್ ಬಟನ್, ಡೈನಾಮಿಕ್ ಐಲ್ಯಾಂಡ್ ಸೇರಿದಂತೆ, 48 ಮೆಗಾಪಿಕ್ಸೆಲ್ ಕ್ಯಾಮೆರಾ, A16 ಬಯೋನಿಕ್ ಚಿಪ್‌ನೊಂದಿಗೆ ಕಾಣಿಸಿಕೊಂಡಿವೆ. ಇಷ್ಟಲ್ಲದೆ ಇನ್ನೂ ಸಾಕಷ್ಟು ಹೊಸ ಹೊಸ ಸೌಲಭ್ಯಗಳನ್ನು ಈ ಫೋನ್‌ಗಳಲ್ಲಿ ಕಾಣಬಹುದಾಗಿದೆ.


Click it and Unblock the Notifications








