WatchOS 10: ಆಪಲ್ ಸ್ಮಾರ್ಟ್‌ವಾಚ್‌ಗಳಿಗಾಗಿ ವಾಚ್ ಓಎಸ್ 10 ಲಾಂಚ್, ಏನೆಲ್ಲಾ ಹೊಸ ಸೌಲಭ್ಯ ಲಭ್ಯ!?
ಆಪಲ್‌ನ ಐಫೋನ್, ಮ್ಯಾಕ್ ಹಾಗೂ ಇನ್ನಿತರೆ ಸ್ಮಾರ್ಟ್ ಡಿವೈಸ್‌ಗಳಂತೆ ಆಪಲ್ ವಾಚ್‌ಗಳು ಸಹ ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸುತ್ತಿವೆ. ಯಾಕೆಂದರೆ ಈ ವಾಚ್‌ಗಳು ಕೇವಲ ಸಮಯಕ್ಕಷ್ಟೇ ಮೀಸಲಾಗದೆ ಬಳಕೆದಾರರ ಜೀವ ಉಳಿಸುವ ಕೆಲಸವನ್ನೂ ಸಹ ಮಾಡುತ್ತವೆ. ಈ ನಡುವೆ ವಾಚ್‌ಗಳಿಗಾಗಿ ಆಪರೇಟಿಂಗ್ ಸಿಸ್ಟಮ್ ವಾಚ್ ಓಎಸ್ 10 (watchOS 10) ಅನ್ನು ಅನಾವರಣಗೊಳಿಸಲಾಗಿದೆ.
ಹೌದು, ಆಪಲ್ ತನ್ನ ವಾರ್ಷಿಕ ವರ್ಲ್ಡ್‌ವೈಡ್ ಡೆವಲಪರ್ ಸಮ್ಮೇಳನ (WWDC) ದಲ್ಲಿ ಧರಿಸಬಹುದಾದ ಆಪರೇಟಿಂಗ್ ಸಿಸ್ಟಮ್ ವಾಚ್ ಓಎಸ್ 10 ಅನ್ನು ಲಾಂಚ್ ಮಾಡಿದ್ದು, ಇದರಲ್ಲಿ ಮರುವಿನ್ಯಾಸಗೊಳಿಸಲಾದ ಆಪ್‌ಗಳು, ವಿಶೇಷ ವಿಜೆಟ್‌ಗಳನ್ನು ಪ್ರದರ್ಶಿಸಲು ಹೊಸ ಸ್ಮಾರ್ಟ್ ಸ್ಟಾಕ್ ಮತ್ತು ಹೊಸ ವಾಚ್ ಫೇಸ್‌ಗಳ ಆಯ್ಕೆ ನೀಡುತ್ತದೆ. ಇಷ್ಟು ಮಾತ್ರವಲ್ಲದೆ ಸಾಕಷ್ಟು ಹೊಸ ಸೌಲಭ್ಯ ಇದರಿಂದ ಲಭ್ಯವಾಗಲಿದೆ. ಹಾಗಿದ್ರೆ, ಬನ್ನಿ ಏನೆಲ್ಲಾ ಹೊಸ ಫೀಚರ್ಸ್ ಈ ಒಸ್‌ನಿಂದ ಲಭ್ಯ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ವಾಚ್ ಓಎಸ್ 10 : ಈ ಹೊಸ ಒಎಸ್‌ನಲ್ಲಿ ಮೆಟ್ರಿಕ್‌ಗಳು ಮತ್ತು ವರ್ಕ್‌ಔಟ್ ವೀಕ್ಷಣೆ ಆಯ್ಕೆ ಇರಲಿದೆ. ಜೊತೆಗೆ ಬ್ಲೂಟೂತ್ ಸಕ್ರಿಯಗೊಳಿಸಿದ ಸೈಕ್ಲಿಂಗ್ ಬಿಡಿಭಾಗಗಳಿಗೆ ಆಟೋಮ್ಯಾಟಿಕ್ ಆಗಿ ಸಿಂಕ್ ಆಗಲು ಅನುಮತಿಸಲಾಗುತ್ತದೆ. ಉದಾಹರಣೆಗೆ ಹೇಳುವುದಾದರೆ ವಿದ್ಯುತ್ ಮೀಟರ್‌ಗಳು, ವೇಗದ ಸೆನ್ಸರ್‌ಗಳು ಮತ್ತು ಕ್ಯಾಡೆನ್ಸ್ ಸೆನ್ಸರ್‌ಗಳು ಇದರಲ್ಲಿ ಕೆಲಸ ಮಾಡಲಿವೆ.
ಇನ್ನು ಮರುವಿನ್ಯಾಸಗೊಳಿಸಲಾದ ಇಂಟರ್ಫೇಸ್ ಮತ್ತು ಆಪ್‌ಗಳೊಂದಿಗೆ ಈ ಹೊಸ ಓಎಸ್ ಕಂಟೆಂಟ್ ಅನ್ನು ತ್ವರಿತವಾಗಿ ನ್ಯಾವಿಗೇಟ್ ಮಾಡಲು ಹಾಗೂ ಪ್ರವೇಶಿಸಲು ಹೊಸ ಮಾರ್ಗಗಳನ್ನು ನೀಡುತ್ತದೆ. ಇದರಲ್ಲಿ ಹವಾಮಾನ, ಸ್ಟಾಕ್‌ಗಳು, ಹೋಮ್, ನಕ್ಷೆಗಳು, ಮೆಸೆಜ್‌ಗಳು, ವರ್ಲ್ಡ್ ಗಡಿಯಾರ ಸೇರಿದಂತೆ ಇನ್ನೂ ಹಲವು ಫೀಚರ್ಸ್‌ಗಳು ಹೆಚ್ಚಿನ ಸೌಲಭ್ಯ ಪಡೆದುಕೊಂಡಿವೆ. ಇದರೊಂದಿಗೆ ದೈನಂದಿನ ಚಲನೆಯನ್ನು ಮೇಲ್ವಿಚಾರಣೆ ಮಾಡಲು ಆಪ್ ಮತ್ತು ಐಫೋನ್‌ನಲ್ಲಿನ ಫಿಟ್‌ನೆಸ್ ಆಪ್ ಅನ್ನೂ ಸಹ ಅಪ್‌ಡೇಟ್ ಮಾಡಲಾಗಿದೆ.
ಈ ವಾಚ್ಓಎಸ್ 10 ವಿಜೆಟ್‌ಗಳನ್ನು ಸೇರಿಸಲಿದ್ದು, ಇವು ಯಾವುದೇ ಕಾರಣಕ್ಕೂ ಹೋಮ್ ಸ್ಕ್ರೀನ್ ಅನ್ನು ಅಸ್ತವ್ಯಸ್ತಗೊಳಿಸುವುದಿಲ್ಲ. ಯಾಕೆಂದರೆ ಅವು ಸ್ಮಾರ್ಟ್ ಸ್ಟಾಕ್ ಮೂಲಕ ಲಭ್ಯವಿರುತ್ತವೆ. ಜೊತೆಗೆ ಡಿಜಿಟಲ್ ಕ್ರೌನ್ ಬಟನ್ ಅನ್ನು ತಿರುಗಿಸುವ ಮೂಲಕ ವಿಜೆಟ್ ಸ್ಟಾಕ್ ಅನ್ನು ಓಪನ್ ಮಾಡಬಹುದು. ಹಾಗೂ ಕಂಟ್ರೋಲ್ ಸೆಂಟರ್ ಪ್ರವೇಶಿಸಲು ಸೈಡ್ ಬಟನ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಡಿಜಿಟಲ್ ಕ್ರೌನ್ ಅನ್ನು ಡಬಲ್-ಕ್ಲಿಕ್ ಮಾಡುವ ಮೂಲಕ ಬಳಕೆ ಮಾಡಿದ ಯಾವುದೇ ಆಪ್‌ಗೆ ಹಿಂತಿರುಗಬಹುದಾಗಿದೆ.

ಇದರೊಂದಿಗೆ ಈ ಓಎಸ್‌ನಲ್ಲಿ ಆಪಲ್ ಎರಡು ಹೊಸ ವಾಚ್ ಫೇಸ್‌ಗಳನ್ನು ಸೇರಿಸುತ್ತಿದ್ದು, ಅದಕ್ಕೆ ಪ್ಯಾಲೆಟ್ ಮತ್ತು ಸ್ನೂಪಿ ಎಂದು ಕರೆಯಲಾಗಿದೆ. ಇನ್ನುಳಿದಂತೆ ಫಿಟ್‌ನೆಸ್ ಉತ್ಸಾಹಿಗಳಿಗಾಗಿ ಹೊಸ ಸೈಕ್ಲಿಂಗ್ ಫೀಚರ್ಸ್‌ಗಳು ಲಭ್ಯ ಇದ್ದು, ಈ ಸೈಕ್ಲಿಂಗ್ ವ್ಯಾಯಾಮವನ್ನು ಐಫೋನ್ ನಲ್ಲಿ ಲೈವ್ ಚಟುವಟಿಕೆಯಾಗಿ ತೋರಿಸಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಆಪಲ್ ಐಫೋನ್‌ನ ಪ್ರದರ್ಶನ ಗಾತ್ರಕ್ಕಾಗಿ ವರ್ಕ್‌ಔಟ್ ವೀಕ್ಷಣೆಗಳನ್ನು ಸಹ ಆಪ್ಟಿಮೈಸ್ ಮಾಡಲಾಗಿದೆ.
ಇನ್ನು ವಾಕ್ ಮಾಡುವವರಿಗೆ ಹೊಸ ಫೀಚರ್ಸ್ ಲಭ್ಯವಾಗಲಿದ್ದು, ಇದು ಕೊನೆಯ ಸೆಲ್ಯುಲಾರ್ ಕನೆಕ್ಷನ್ ವೇ ಪಾಯಿಂಟ್ ಅನ್ನು ನೋಡಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ ಲಭ್ಯವಿರುವ ವಾಹಕದ ನೆಟ್‌ವರ್ಕ್‌ಗೆ ಡಿವೈಸ್ ಕೊನೆಯ ಸಂಪರ್ಕವನ್ನು ಹೊಂದಿದ್ದ ಮಾರ್ಗವನ್ನು ಅಂದಾಜು ಮಾಡಲು ಕೊನೆಯ ತುರ್ತು ಕರೆ ವೇ ಪಾಯಿಂಟ್ ಅನ್ನು ನೀಡುತ್ತದೆ. ಇದರೊಂದಿಗೆ ಆಪಲ್ ನಕ್ಷೆಗಳು, ಬೆಟ್ಟದ ಶೈಲಿ, ಎತ್ತರದ ವಿವರಗಳು ಮತ್ತು ಯುಎಸ್ ನಲ್ಲಿ ಆಸಕ್ತಿಯ ಸ್ಥಳಗಳೊಂದಿಗೆ ಹೊಸ ಸ್ಥಳಾಕೃತಿಯ ನಕ್ಷೆಯನ್ನು ಸಹ ವೀಕ್ಷಣೆ ಮಾಡಬಹುದು.
ಇನ್ನುಳಿದಂತೆ ಆಪಲ್ ಬಳಕೆದಾರರ ಮಾನಸಿಕ ಸ್ವಾಸ್ಥ್ಯದ ಬಗ್ಗೆಯೂ ಹೆಚ್ಚಿನ ಗಮನ ಹರಿಸಲಾಗಿದೆ. ಅಂದರೆ ಮೈಂಡ್‌ಫುಲ್‌ನೆಸ್ ಆಪ್‌ನೊಂದಿಗೆ ವಾಚ್ ಬಳಕೆದಾರರು ತಮ್ಮ ಕ್ಷಣಿಕ ಭಾವನೆಗಳು ಮತ್ತು ದೈನಂದಿನ ಮನಸ್ಥಿತಿಗಳನ್ನು ಲಾಗ್ ಮಾಡಬಹುದು. ಬಳಕೆದಾರರು ತಮ್ಮ ಭಾವನೆಗಳ ಆಧಾರದ ಮೇಲೆ ಡಿಜಿಟಲ್ ಕ್ರೌನ್ ಮೂಲಕ ಸ್ಕ್ರಾಲ್ ಮಾಡಬಹುದಾದ ಆಯ್ಕೆಯನ್ನು ಪಡೆದುಕೊಳ್ಳಬಹುದಾಗಿದೆ.

ಇದರ ಜೊತೆಗೆ ಆಂಬಿಯೆಂಟ್ ಲೈಟ್ ಸೆನ್ಸರ್ ಸಹಾಯದಿಂದ ಆಪಲ್ ವಾಚ್ ನಲ್ಲಿ ಹಗಲು ಹೊತ್ತಿನಲ್ಲಿ ಕಳೆದ ಸಮಯವನ್ನು ಸಹ ತಿಳಿದುಕೊಳ್ಳಬಹುದು. ಈ ವಿವರವು ಐಫೋನ್ ಅಥವಾ ಐಪ್ಯಾಡ್ ನಲ್ಲಿನ ಹೆಲ್ತ್ ಆಪ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮಕ್ಕಳು ತಮ್ಮ ಆಪಲ್ ವಾಚ್ ಅನ್ನು ತಮ್ಮ ಪೋಷಕರ ಐಫೋನ್‌ಗೆ ಹೊಂದಿಸಲು ಫ್ಯಾಮಿಲಿ ಸೆಟಪ್ ಆಯ್ಕೆಯನ್ನು ನೀಡಲಾಗುತ್ತದೆ.


Click it and Unblock the Notifications








