ಇನ್‌ಸ್ಟಾಗ್ರಾಮ್ ಮೂಲಕ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ; ಮಹಿಳೆ ಕಳೆದುಕೊಂಡ ಹಣವೆಷ್ಟು ಗೊತ್ತಾ!?
ಸಾಮಾಜಿಕ ಜಾಲತಾಣ ಎಷ್ಟು ಮಾಹಿತಿ ಹಾಗೂ ಮನರಂಜನೆ ನೀಡುತ್ತದೆಯೋ ಅಷ್ಟೇ ತಪ್ಪು ಹಾಗೂ ನಕಲಿ ಮಾಹಿತಿಯನ್ನೂ ಸಹ ಹರಡುವ ದೊಡ್ಡ ವೇದಿಯಾಗುತ್ತಿವೆ. ಅದರಲ್ಲೂ ಮೆಟಾ ಮಾಲೀಕತ್ವದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ನಲ್ಲಿ ಈ ಪ್ರಕರಣಗಳು ಹೆಚ್ಚು ಹೆಚ್ಚಾಗಿ ಜರುಗುತ್ತಿರುವುದು ವರದಿಯಾಗುತ್ತಿದೆ. ಇದರ ನಡುವೆ ಇನ್‌ಸ್ಟಾಗ್ರಾಮ್ ಮೂಲಕ ಮಹಿಳೆಯೋರ್ವರು ಮೋಸ ಹೋಗಿದ್ದಾರೆ.

ಹೌದು, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಆಪ್‌ಗಳು ಇಂದು ವ್ಯಾಪಾರ ಉದ್ದೇಶಕ್ಕೆ ಹೆಚ್ಚಿನದಾಗಿ ಬಳಕೆಯಾಗುತ್ತಿವೆ. ಇದರ ಭಾಗವಾಗಿಯೇ ಮಹಾರಾಷ್ಟ್ರದ ಮಹಿಳೆಯೊಬ್ಬರಿಗೆ ಇನ್‌ಸ್ಟಾಗ್ರಾಮ್ ಮೂಲಕ ಉದ್ಯೋಗಾವಕಾಶ ಸಿಕ್ಕಿತ್ತಂತೆ. ನಂತರ ಹಂತಹಂತವಾಗಿ ಈಕೆ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ಹಾಗಿದ್ರೆ, ಇವರು ಮೋಸ ಹೋಗಿದ್ದು, ಹೇಗೆ?, ನಕಲಿ ಉದ್ಯೋಗದಾತರು ಮಾಡಿದ ಕಿತಾಪತಿ ಏನು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ವಂಚನೆಗೊಳಗಾದವರು ಯಾರು?
ಈ ಸೈಬರ್ ವಂಚನೆ ಪ್ರಕರಣದಲ್ಲಿ ಮಹಾರಾಷ್ಟ್ರದ ಥಾಣೆಯ 26 ವರ್ಷದ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್ ಮೂಲಕ ಉದ್ಯೋಗ ಸಂಬಂಧ ಒಂದು ಜಾಹೀರಾತನ್ನು ವೀಕ್ಷಿಸಿದ್ದಾರೆ. ಅದರಲ್ಲಿ ಒಂದು ಲಿಂಕ್ ಅನ್ನು ನೀಡಿದ್ದ ಸೈಬರ್ ಅಪರಾಧಿಗಳು ನೋಂದಣಿಗಾಗಿ ಆ ಲಿಂಕ್ ಅನ್ನು ಕ್ಲಿಕ್ ಮಾಡಬೇಕು ಎಂದು ತಿಳಿಸಿದ್ದರು. ಅದರಂತೆ ಮಹಿಳೆ ಆ ಲಿಂಕ್ ಕ್ಲಿಕ್ ಮಾಡಿದಾದ ಬೇರೆ ಯಾವುದೋ ಒಂದು ಸೈಟ್‌ಗೆ ಭೇಟಿಯಾಗುವಂತೆ ಮಾಡಿದೆ.

ಶುಲ್ಕ ಪಾವತಿ
ವೆಬ್‌ಸೈಟ್ ತೆರೆದಾಗ ಅಲ್ಲಿ ಶುಲ್ಕ ಪಾವತಿ ಮಾಡಲು ಕೇಳಲಾಗಿದೆ. ಹೇಗಾದರೂ ಮಾಡಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಮುಂದಾಗಿದ್ದ ಮಹಿಳೆ ವೆಬ್‌ಸೈಟ್‌ನಲ್ಲಿ ತೋರಿಸಿರುವ ಸೂಚನೆಗಳ ಪ್ರಕಾರ ವಿವರಗಳನ್ನು ಭರ್ತಿ ಮಾಡಿ 6 ದಿನಗಳಲ್ಲಿ ಒಟ್ಟು 5,38,173 ರೂ. ಗಳನ್ನು ಪಾವತಿ ಮಾಡಿದ್ದಾರೆ.

ಹಣ ಪಾವತಿ ಮಾಡಿದ ನಂತರ ಕೈ ಕೊಟ್ಟ ಉದ್ಯೋಗದಾತರು
ಎಲ್ಲಾ ಸೂಚನೆಗಳನ್ನು ಅನುಸರಿಸುವುದರ ಜೊತೆಗೆ ಅಲ್ಲಿ ಹಣ ಪಾವತಿ ಮಾಡಿದ ಮೇಲೆ ಕೆಲಸಕ್ಕಾಗಿ ಮಹಿಳೆ ಉದ್ಯೋಗದಾತರನ್ನು ಸಂಪರ್ಕಿಸಲು ಮುಂದಾಗಿದ್ದಾರೆ. ಆದರೆ, ಆ ನಂಬರ್ ನಿಸ್ಕ್ರಿಯಗೊಂಡಿದೆ. ಇದಾದ ನಂತರ ಆಕೆ ವಂಚನೆಗೆ ಒಳಗಾಗಿದ್ದೇನೆ ಎಂದು ತಿಳಿದುಕೊಂಡು ತಕ್ಷಣವೇ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರಿನನ್ವಯ ತನಿಖೆ ಆರಂಭಿಸಲಾಗಿದೆ. .

ಎಚ್ಚರಿಕೆ ಅತ್ಯಗತ್ಯ
ಮೋಸ ಹೋಗುವವರು ಇರುವ ವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಹಾಗೆಯೇ ಇಂತಹ ಪ್ಲಾಟ್‌ಫಾರ್ಮ್‌ನಲ್ಲಿ ಇದನ್ನು ಒಂದು ಉದ್ಯೋಗದಂತೆ ಮಾಡಿಕೊಂಡಿರುವ ಅದೆಷ್ಟೋ ಖಾತೆಗಳು ಅಸ್ತಿತ್ವದಲ್ಲಿವೆ. ಹೀಗಾಗಿ ಉದ್ಯೋಗ ಸಂಬಂಧ ಏನಾದರೂ ಮಾಹಿತಿ ಬೇಕು ಎಂದರೆ ಲಿಂಕ್ಡ್‌ಇನ್ ಮತ್ತು ಗ್ಲಾಸ್‌ಡೋರ್‌ನಂತಹ ಆಪ್‌ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ನಕಲಿ ಜಾಹೀರಾತನ್ನು ಪತ್ತೆ ಮಾಡುವುದು ಹೇಗೆ?
ಯಾವುದೇ ಉದ್ಯೋಗ ಸಂಬಂಧ ಜಾಹೀರಾತು ನೀಡಿದರೆ ಅದರಲ್ಲಿ ಸವಿವರವಾದ ಮಾಹಿತಿಯನ್ನು ಆ ಪೋಸ್ಟ್‌ಗೆ ಸಂಬಂಧಿಸಿದಂತೆ ನೀಡಲಾಗಿರುತ್ತದೆ. ಕೆಲವೊಮ್ಮೆ ಸ್ಕ್ಯಾಮರ್‌ಗಳು ಕ್ಲಿಕ್‌ಬೈಟ್ ಉದ್ಯೋಗ ಶೀರ್ಷಿಕೆಗಳು ಮತ್ತು ಸಂಬಳದ ಮೂಲಕ ಜನರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಆದರೆ, ಪೋಸ್ಟ್ ಮಾಡಿದ ಉದ್ಯೋಗ ಶೀರ್ಷಿಕೆಗೆ ಸಂಬಂಧಿಸದ ಉದ್ಯೋಗ ವಿವರಣೆ ಇದೆಯೇ ಎಂಬುದನ್ನು ಪರಿಶೀಲಿಸುವುದನ್ನು ಮರೆಯಬೇಡಿ.

ಹಾಗೆಯೇ ಕಂಪೆನಿಯ ಹೆಸರನ್ನು ಆನ್‌ಲೈನ್‌ನಲ್ಲಿ ಹುಡುಕುವುದು ಕಡ್ಡಾಯವಾದ ಕೆಲಸವಾಗಿದೆ. ಒಂದು ವೇಳೆ ಉದ್ಯೋಗ ಸಂಬಂಧ ಅದರ ವಿವರವನ್ನು ದೀರ್ಘವಾಗಿ ನೀಡಿದ್ದರೂ ಸಹ ಅದನ್ನು ಸುಲಭವಾಗಿ ನಂಬಬೇಡಿ. ಇದಕ್ಕಾಗಿ ಕಂಪೆನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿಂದ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಯಾಕೆಂದರೆ ಈ ದಿನಗಳಲ್ಲಿ ಸ್ಕ್ಯಾಮರ್‌ಗಳು ಎಲ್ಲವನ್ನೂ ನಿಜವಾಗಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದ ಯಾವಾಗಲೂ ನೀವು ಎಚ್ಚರಿಕೆಯಿಂದ ಇರುವ ಮೂಲಕ ಈ ಸೈಬರ್ ಅಪರಾಧಿಗಳಿಂದ ದೂರ ಇರಬಹುದಾಗಿದೆ.


Click it and Unblock the Notifications








