2017 ರಿಂದ ಇಲ್ಲಿತನಕ ಕಣ್ಮರೆಯಾದ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳೆಷ್ಟು ಗೊತ್ತಾ!?
ಸ್ಮಾರ್ಟ್‌ಫೋನ್ ಮಾರುಕಟ್ಟೆ (Smartphone market) ಇಂದಿನ ದಿನಗಳಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿದೆ. ಈ ನಡುವೆ ವಿವಿಧ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಸುಧಾರಿತ ಫೀಚರ್ಸ್‌ನೊಂದಿಗೆ ಹೊಸ ಹೊಸ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಈ ಬೆಳವಣಿಗೆ ನಡುವೆ ಈ ಶಾಕಿಂಗ್ ವಿಚಾರ ಸ್ಮಾರ್ಟ್‌ಫೋನ್ ಪ್ರಿಯರನ್ನು ಬೆಚ್ಚಿ ಬೀಳಿಸದೇ ಇರದು. ಅದೇನೆಂದರೆ 2017 ರಿಂದ ಇಲ್ಲಿಯವರೆಗೆ ಸುಮಾರು 500 ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ಕಣ್ಮರೆಯಾಗಿವೆ.
ಹೌದು, ಸದ್ಯಕ್ಕೆ ಹಲವಾರು ಸ್ಮಾರ್ಟ್‌ಫೋನ್‌ಗಳು ಗಟ್ಟಿ ನೆಲೆ ಕಂಡುಕೊಂಡಿವೆ. ಅಂದರೆ ಆಪಲ್, ಒನ್‌ಪ್ಲಸ್, ಸ್ಯಾಮ್‌ಸಂಗ್ (Apple, OnePlus, Samsung) ಸೇರಿದಂತೆ ಅನೇಕ ಸಂಸ್ಥೆಗಳು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತಮ್ಮದೇ ಆದ ಪ್ರಭಾವ ಬೀರಿವೆ. ಅದಾಗ್ಯೂ, 2017 ರಿಂದ ಈವರೆಗೆ ಸುಮಾರು 500ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಮಿಂಚಿ ಮರೆಯಾಗಿವೆ. ಹಾಗಿದ್ರೆ, ಈ ದೇಶಿ ಬ್ರ್ಯಾಂಡ್‌ಗಳು ಮರೆಯಾಗುವುದಕ್ಕೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

500 ದೇಶಿ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ಸ್ಥಗಿತ: ಒಂದು ಕಾಲದಲ್ಲಿ ಜಗತ್ತಿನಾದ್ಯಂತ 700 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ಸಕ್ರಿಯಾಗಿದ್ದು, ವಿವಿಧ ಫೀಚರ್ಸ್ ಇರುವ ಫೋನ್‌ಗಳನ್ನು ಅನಾವರಣ ಮಾಡುತ್ತಿದ್ದವು. ಆ ಫೋನ್‌ಗಳ ವಿಭಾಗದಲ್ಲಿ ದೇಶಿಯ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದ್ದ ಮೈಕ್ರೊಮ್ಯಾಕ್ಸ್, ಸಿಂಫನಿ ಸ್ಮಾರ್ಟ್‌ಫೋನ್ ಜಗತ್ತನ್ನೇ ಆಳುತ್ತಿದ್ದವು. ಆದರೆ, ಇವು ಮಿಂಚಿ ಮರೆಯಾಗಿದ್ದು ಈಗ ಇತಿಹಾಸ.
ಕೌಂಟರ್‌ಪಾಯಿಂಟ್‌ನ ಪ್ರಕಾರ ಗ್ಲೋಬಲ್ ಹ್ಯಾಂಡ್‌ಸೆಟ್ ಮಾಡೆಲ್ ಸೇಲ್ಸ್ ಟ್ರ್ಯಾಕ್ 700 ರಿಂದ ಸುಮಾರು 250 ಕ್ಕೆ ಇಳಿದಿದೆ ಎಂದು ತಿಳಿದುಬಂದಿದೆ. ಈ ವೇಳೆ ಸ್ಥಳೀಯ ರಾಜರು ಅಂದರೆ ದೇಶಿ ಬ್ರ್ಯಾಂಡ್‌ಗಳು ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಅದರಲ್ಲೂ ಭಾರತ, ಬಾಂಗ್ಲಾದೇಶ ಮತ್ತು ಏಷ್ಯಾದ ಇತರ ಭಾಗಗಳ ಸ್ಥಳೀಯ ಬ್ರ್ಯಾಂಡ್‌ಗಳ ಮೇಲೆ ತೀವ್ರ ಹೊಡೆತ ಬಿದ್ದಿದೆ. ಅಷ್ಟೇ ಅಲ್ಲದೆ ಆಫ್ರಿಕಾ, ಲ್ಯಾಟಿನ್ ಅಮೇರಿಕಾದಲ್ಲೂ ಕಂಪೆನಿಗಳು ಈ ಸಮಸ್ಯೆ ಉಂಟಾಗಿದೆ.
ಬಜೆಟ್ ಸ್ನೇಹಿ, ಆದರೆ ಬದುಕುಳಿಯಲಿಲ್ಲ: ಸ್ಥಳೀಯ ಬ್ರ್ಯಾಂಡ್ ಗಳು ಯಾವಾಗಲೂ ಬಜೆಟ್ ಸ್ನೇಹಿ ಡಿವೈಸ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತವೆ. ಆದರೆ ವಿವಿಧ ಕಾರಣಗಳಿಂದಾಗಿ ಇವು ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಸ್ಥಳವನ್ನು ಕಳೆದುಕೊಂಡಿವೆ. ಇದಕ್ಕೆ ಪ್ರಮುಖ ಕಾರಣ ಏನೆಂದರೆ ಆರ್ & ಡಿ ಕೊರತೆ ಅಂದರೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ದೊಡ್ಡ ಬ್ರ್ಯಾಂಡ್‌ಗಳೊಂದಿಗೆ ಮುಂದುವರಿಯಲು ಇವುಗಳಿಗೆ ಸಾಧ್ಯವಾಗಿಲ್ಲ.
ಇದರೊಂದಿಗೆ ಸೀಮಿತ ಮಾರ್ಕೆಟಿಂಗ್ ವ್ಯವಸ್ಥೆ ಸಹ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸೆಲೆಬ್ರಿಟಿಗಳನ್ನು ಪ್ರಚಾರಕ್ಕೆ ಬಳಕೆ ಮಾಡುವುದಾಗಲಿ ಅಥವಾ ದೊಡ್ಡ ಪ್ರಮಾಣದ ಈವೆಂಟ್‌ಗಳನ್ನು ಆಯೋಜನೆ ಮಾಡುವ ಯಾವ ಕೆಲಸವನ್ನೂ ಈ ಬ್ರ್ಯಾಂಡ್‌ಗಳು ಮಾಡಲಿಲ್ಲ. ಪರಿಣಾಮ ಜನರಿಗೆ ಈ ಕಂಪೆನಿಯ ಫೋನ್‌ಗಳ ಬಗ್ಗೆ ಮಾಹಿತಿ ತಲುಪಲಿಲ್ಲ. ಇದೆಲ್ಲದರ ಜೊತೆಗೆ ಮತ್ತೊಂದು ಪ್ರಮುಖ ಕಾರಣ ಏನೆಂದರೆ ಅಸಮರ್ಪಕ ಗುಣಮಟ್ಟ, ನಾವೀನ್ಯತೆ ಕೊರತೆ.
ಅದಾಗ್ಯೂ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ಈ ಎಲ್ಲಾ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಎದುರಿಸಿವೆ. ಈ ಕಾರಣಕ್ಕೆ ಇನ್ನೂ ಸಹ ಅವು ಅಸ್ತಿತ್ವದಲ್ಲಿವೆ. ಅಂದರೆ ದೊಡ್ಡ ಬ್ರ್ಯಾಂಡ್‌ಗಳು 4G , 5G ವ್ಯವಸ್ಥೆಗೆ ಸುಲಭವಾಗಿ ಹೊಂದಿಕೊಂಡಿವೆ. ಪೂರೈಕೆ-ಸರಪಳಿ ಅಡಚಣೆಗಳನ್ನು ನಿಭಾಯಿಸಲು ತಮ್ಮದೇ ಆದ ಪ್ಲ್ಯಾನ್ ರೂಪಿಸಿಕೊಂಡಿವೆ. ಇದರೊಂದಿಗೆ ನಾವೀನ್ಯತೆ ಮತ್ತು ಭವಿಷ್ಯದ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡಿವೆ.
ಬಲವಾದ ಮಾರ್ಕೆಟಿಂಗ್ ಸಹ ಇದ್ದು, ಈ ಮೂಲಕ ಸೆಲೆಬ್ರಿಟಿ ಟೈ-ಅಪ್‌ಗಳು ಮತ್ತು ಅಂತರರಾಷ್ಟ್ರೀಯ ಪ್ರಚಾರಗಳು ಈ ಕಂಪೆನಿಗಳಿಂದ ಆಗಿವೆ. ಈ ಮೂಲಕ ಜನರನ್ನು ಸುಲಭವಾಗಿ ತಮ್ಮತ್ತ ಸೆಳೆದುಕೊಂಡಿವೆ. ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಡಿವೈಸ್‌ಗಳನ್ನು ಇವು ನಿರ್ಮಾಣ ಮಾಡುತ್ತವೆ. ಜೊತೆಗೆ ಉತ್ತಮ ಫೀಚರ್ಸ್, ವಿನ್ಯಾಸ ಈ ಡಿವೈಸ್‌ಗಳಲ್ಲಿ ಇದ್ದು, ಇವು ಜನರನ್ನು ಅತ್ಯಂತ ಸುಲಭವಾಗಿ ತಲುಪಿವೆ.
ದೇಶೀಯ ಬ್ರ್ಯಾಂಡ್‌ಗಳ ಪತನಕ್ಕೆ ಕಾರಣ ಏನು?: ಇನ್ನು ಬಜೆಟ್ ಬೆಲೆಯಲ್ಲಿ ಲಭ್ಯ ಆಗುತ್ತಿದ್ದರೂ ಸಹ ದೇಶೀಯ ಫೋನ್‌ಗಳಿಗೆ ಮೌಲ್ಯ ಕಡಿಮೆ ಆಗಲು ಚೀನಾದ ಆಕ್ರಮಣ ಸಹ ಪ್ರಮುಖವಾದ ವಿಷಯವಾಗಿದೆ. ಚೀನಾದ ಬ್ರ್ಯಾಂಡ್‌ಗಳಾದ ಶಿಯೋಮಿ, ಒಪ್ಪೋ ಮತ್ತು ವಿವೋ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿವೆ. ಈ ಫೋನ್‌ಗಳು ಬಜೆಟ್ ಸ್ನೇಹಿ ಬೆಲೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಉತ್ತಮ ಫೀಚರ್ಸ್ ಆಯ್ಕೆ ಇರುವುದರಿಂದ ಜನರು ಹೆಚ್ಚಾಗಿ ಈ ಫೋನ್‌ಗಳ ಕಡೆ ಕಣ್ಣಾಯಿಸುವುದು ಸಾಮಾನ್ಯವಾದ ವಿಷಯವಾಗಿದೆ.
ಸಾಂಕ್ರಾಮಿಕ ಮತ್ತು ಆರ್ಥಿಕ ಸಮಸ್ಯೆ: ಸ್ಥಳೀಯ ಬ್ರ್ಯಾಂಡ್‌ಗಳು ಅವನತಿಯತ್ತ ಸಾಗಲು ಮತ್ತೊಂದು ಕಾರಣ ಏನೆಂದರೆ ಕೊರೊನಾ ಸಾಂಕ್ರಾಮಿಕ ಮತ್ತು ಆರ್ಥಿಕ ಸಮಸ್ಯೆ. ಹೌದು ದೊಡ್ಡ ದೊಡ್ಡ ಕಂಪೆನಿಗಳು ಈ ಎಲ್ಲಾ ತೊಂದರೆಗೆ ಎದೆಯೊಡ್ಡಿ ಮುಂದೆ ಸಾಗಿದವು. ಆದರೆ, ಸ್ಥಳೀಯ ಕಂಪೆನಿಗಳು ಈ ಸಮಸ್ಯೆಗಳನ್ನು ಎದುರಿಸಲು ವಿಫಲವಾಗಿದ್ದು, ಈ ಮೂಲ ಭಾರೀ ಸಂಕಷ್ಟಕ್ಕೆ ಒಳಗಾಗುವಂತೆ ಆಯಿತು. ಜೊತೆಗೆ ದೊಡ್ಡ ಕಂಪೆನಿಗಳು ಸಹ ಈ ವೇಳೆ ಸಣ್ಣ ಕಂಪೆನಿಗಳು ತೀವ್ರ ರೀತಿಯ ಪೈಪೋಟಿ ನೀಡಿದವು.
ಸ್ಮಾರ್ಟ್‌ಫೋನ್ ಕಂಪೆನಿಗಳಿಗೆ ಇರುವ ಮುಂದಿನ ಸವಾಲುಗೇಳೇನು?: ಈಗ ಮಾರುಕಟ್ಟೆಯಲ್ಲಿ ನಾನೇ ರಾಜ ಎಂದು ಮೆರೆಯುತ್ತಿರುವ ಕಂಪೆನಿಗಳು ಮುಂದೊಂದು ದಿನ ಹಳ್ಳ ಹಿಡಿಯಬಹುದು. ಈಗ ಟಾಪ್‌ನಲ್ಲಿ ಇರುವ ಫೋನ್‌ಗಳು ಸದಾ ಕಾಲ ಟಾಪ್‌ನಲ್ಲೇ ಇರುತ್ತವೆ ಎಂದು ಹೇಳಲು ಅಸಾಧ್ಯ. ಕಾಲಚಕ್ರ ತಿರುಗಿದಂತೆ ಬೇರೆ ಬೇರೆ ಕಂಪೆನಿಗಳು ಮಾರುಕಟ್ಟೆಯಲ್ಲಿ ಅಳುವುದರಲ್ಲಿ ಯಾವುದೇ ಆನುಮಾನವಿಲ್ಲ.
ಇದನ್ನು ಸಾಧ್ಯವಾಗಿಸಿಕೊಳ್ಳಬೇಕು ಎಂದರೆ ಕಂಪೆನಿಗಳು ಸುಧಾರಿತ ಫೀಚರ್‌ಗಳನ್ನು ಪರಿಚಯಿಸಬೇಕಿದೆ. ಜೊತೆಗೆ ಹೊಸ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕಿದೆ. ಇದೆಲ್ಲದರ ಜೊತೆಗೆ ಜಾಗತಿಕ ಮತ್ತು ಚೈನೀಸ್ ಬ್ರ್ಯಾಂಡ್‌ಗಳ ಪ್ರಾಬಲ್ಯವನ್ನು ಎದುರಿಸಬೇಕಾಗುತ್ತದೆ ಹಾಗೂ ಬ್ರ್ಯಾಂಡ್ ಬದುಕುಳಿಯುವಲ್ಲಿ ಆರ್&ಡಿಮತ್ತು ಮಾರ್ಕೆಟಿಂಗ್‌ನ ಪ್ರಾಮುಖ್ಯತೆ ಹೆಚ್ಚಾಗಿದ್ದು, ಈ ಬಗ್ಗೆ ಕಂಪೆನಿಗಳು ಎಚ್ಚೆತ್ತುಕೊಳ್ಳಬೇಕಿದೆ. ಈ ರೀತಿ ಮಾಡಿದ್ರೆ, ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಇನ್ನೂ ಕೆಲವು ವರ್ಷಗಳ ವರೆಗೆ ತಮ್ಮದೇ ಆದ ಆಳ್ವಿಕೆ ನಡೆಸಲು ಸಾಧ್ಯವಾಗುತ್ತದೆ.

ಕಣ್ಮರೆಯಾದ ಕೆಲವು ಬ್ರ್ಯಾಂಡ್‌ಗಳು: ಎಲ್‌ಜಿ, ಸೋನಿ, ಹೆಚ್‌ಟಿಸಿ, ಬ್ಲ್ಯಾಕ್‌ಬೆರಿ, ಲೇಎಕೋ, ಮೈಕ್ರೋಸಾಫ್ಟ್, ಅಸುಸ್ ಪ್ಯಾಡ್‌ಫೋನ್, ಎಸೆನ್ಶಿಯಲ್ ಫೋನ್, ಫೈರ್‌ಫೋನ್, ಗ್ರೀನ್‌ಫೋನ್, ಸೀಮನ್ಶ್, ಬೆನ್‌ಕ್ಯೂ, ಎರಿಕ್‌ಸನ್, ಸೆಗ್ಮಾ, ಜಿಯೋನಿ, ಕ್ಸೋಲೋ, ಸ್ಪೈಸ್, ಬೈಯು, ಮೈಜು, ಫಿಲಿಪ್ಸ್, ಇನ್‌ಪೋಕಸ್, ಐಬಾಲ್, ವಿಡಿಯೋಕಾನ್, ಐವೋಮಿ ಕಂಪೆನಿ ಸೇರಿದಂತೆ ಅನೇಕ ಫೋನ್ ಬ್ರ್ಯಾಂಡ್‌ಗಳು ಕಣ್ಮರೆಯಾಗಿವೆ.


Click it and Unblock the Notifications








