27 ವರ್ಷದ ತರಕಾರಿ ವ್ಯಾಪಾರಿ 6 ತಿಂಗಳಲ್ಲಿ ಗಳಿಸಿದ್ದು ಬರೋಬ್ಬರಿ 21 ಕೋಟಿ; ಅದೇಗೆ ಅಂತೀರಾ!?
ಸಂಪಾದನೆಗೆ ನೂರಾರು ಮಾರ್ಗಗಳು ಇರುತ್ತವೆ. ಕೆಲವರು ಕಷ್ಟ ಪಟ್ಟು ಸಂಪಾದನೆ ಮಾಡಿದ್ರೆ ಇನ್ನೂ ಕೆಲವರು ಅನ್ಯ ಮಾರ್ಗದಲ್ಲಿ ಸಂಪಾದನೆ ಮಾಡುತ್ತಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಇಲ್ಲೋರ್ವ ಯುವಕ ಕೇವಲ ಆರೇ ತಿಂಗಳಲ್ಲಿ ಬರೋಬ್ಬರಿ 21 ಕೋಟಿ ಗಳಿಸಿದ್ದಾನೆ.
ಹೌದು, ಇತ್ತೀಚಿನ ಜೀವನ ಶೈಲಿಗೂ ಉದ್ಯೋಗಿಗಳು ಪಡೆಯುತ್ತಿರುವ ಸಂಬಳಕ್ಕೂ ಅಜಗಜಾಂತರ ಅಂತರವಿದೆ. ಈ ಕಾರಣಕ್ಕೆ ಸಾಕಷ್ಟು ಜನರು ಪರ್ಯಾಯ ಉದ್ಯೋಗಗಳನ್ನೂ ಸಹ ಆಯ್ಕೆ ಮಾಡಿಕೊಂಡು ಜೀವನ ಮಾಡುತ್ತಾರೆ. ಇದನ್ನೇ ದುರುಪಯೋಗ ಮಾಡಿಕೊಳ್ಳುವ ಇನ್ನಷ್ಟು ಮಂದಿ ಕುಂತ ಜಾಗದಿಂದಲೇ ಕಷ್ಟ ಪಟ್ಟು ಸಂಪಾದನೆ ಮಾಡಿದ್ದ ಜನರ ಹಣವನ್ನು ಆನ್‌ಲೈನ್ ವಂಚನೆ ಮೂಲಕ (Online fraud) ಕ್ಷಣ ಮಾತ್ರದಲ್ಲಿ ಮಂಗಮಾಯ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ಇಲ್ಲೋರ್ವ 21 ಕೋಟಿ ಸಂಪಾದನೆ ಮಾಡಿದ್ದಾನೆ.

21 ಕೋಟಿ ಗಳಿಸಿದ ತರಕಾರಿ ವ್ಯಾಪಾರಿ: ರಿಷಭ್ ಶರ್ಮಾ ಎಂಬ ವ್ಯಕ್ತಿ ಈಗ ಎಲ್ಲಾಕಡೆ ಚರ್ಚೆಗೆ ಒಳಗಾಗಿದ್ದಾನೆ. ಈತ ಕೊರೊನಾಗೂ ಮೊದಲು ತರಕಾರಿ ಮಾರಿಕೊಂಡು ಜೀವನ ಮಾಡುತ್ತಿದ್ದ. ಆ ವೇಳೆ ಜೀವನ ನಡೆಸಲು ಬಹಳ ಸಂಕಷ್ಟಪಟ್ಟಿದ್ದನಂತೆ. ಇದಾದ ಬಳಿಕ ಮನೆಯಿಂದಲೇ ಕೆಲಸ ಮಾಡುವ ಕೆಟ್ಟ ಕಾಯಕಕ್ಕೆ ಸಜ್ಜಾಗಿದ್ದಾನೆ. ಆದರೆ ಇದೇ ಆತನ ಜೀವನನ್ನು ಎತ್ತರಕ್ಕೆ ಏರಿಸಿ ಥಟ್ ಅಂತ ಕೆಳಕೆ ತಳ್ಳಿಬಿಟ್ಟಿದೆ.
ಈ ಘಟನೆ ಸಂಬಂಧ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕೇವಲ ಆರು ತಿಂಗಳಲ್ಲಿ ರಿಷಭ್ ಜನರನ್ನು ಮೋಸಗೊಳಿಸಿ ಬರೋಬ್ಬರಿ 21 ಕೋಟಿ ರೂ. ಗಳಿಸಿದ್ದಾನೆ. ಅದರಲ್ಲೂ ಇದಕ್ಕಾಗಿ ಹತ್ತು ರಾಜ್ಯದಲ್ಲಿ ಬರೋಬ್ಬರಿ 855 ಹಗರಣ ಮಾಡಲಾಗಿದೆ. ಆದರೆ, ಸಮಯ ಒಂದೇ ರೀತಿ ಇರುವುದಿಲ್ಲ ಅಲ್ಲವೇ. ಕೊನೆಗೂ ಈತ ಪೊಲೀಸರ ಅತಿಥಿ ಆಗಿದ್ದಾನೆ. ಅಂದರೆ ಅಕ್ಟೋಬರ್ 28 ರಂದು ಆರೋಪಿಯನ್ನು ಬಂಧಿಸಲಾಗಿದೆ.

ಘಟನೆಯ ಸಂಪೂರ್ಣ ವಿವರ: ಕೆಲವು ವರ್ಷಗಳ ಹಿಂದೆ ರಿಷಬ್ ಫರಿದಾಬಾದ್‌ನಲ್ಲಿ ತರಕಾರಿ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ. ಆದರೆ, ಕೊರೊನಾ ಬಂದಾಗ, ಆತ ತನ್ನ ಕುಟುಂಬವನ್ನು ಪೋಷಿಸಲು ಬಹಳ ಕಷ್ಟಪಟ್ಟನಂತೆ. ಆದರೆ, ಕೆಲಸಕ್ಕಾಗಿ ಎಷ್ಟೇ ಕಷ್ಟಪಟ್ಟರೂ ಎಲ್ಲೂ ಕೆಲಸ ಸಿಗದೆ ಹತಾಶನಾಗಿದ್ದಾನೆ. ಆದರೆ, ಆ ವೇಳೆ ಆತನ ಸ್ನೇಹಿತ ಮಾಡುತ್ತಿದ್ದ ಆನ್‌ಲೈನ್ ವಂಚನೆಯಲ್ಲಿ ಭಾಗಿಯಾಗಲು ಮುಂದಾಗಿದ್ದಾನೆ.
ಇದಾದ ನಂತರದಲ್ಲಿ ಅವನ ಸ್ನೇಹಿತ ಅವನಿಗೆ ಫೋನ್ ಸಂಖ್ಯೆಗಳ ಲಿಸ್ಟ್ ಅನ್ನು ಕೊಟ್ಟಿದ್ದಾನೆ. ಈ ವೇಳೆ ಜನರಿಗೆ ಕರೆ ಮಾಡಿ ನಕಲಿ ಉದ್ಯೋಗಾವಕಾಶಗಳ ಆಮಿಷಗಳನ್ನು ನೀಡಿದ್ದಾನೆ. ಈ ವೇಳೆ ನಕಲಿ ವೆಬ್‌ಸೈಟ್ ಅನ್ನೂ ಸಹ ಕ್ರಿಯೇಟ್ ಮಾಡಿಕೊಂಡು ಜನರನ್ನು ನಂಬುವಂತೆ ಈತ ಮಾಡಿದ್ದಾನೆ. ಅಂದರೆ ಹೋಟೆಲ್‌ಗೆ ವಿಮರ್ಶೆಗಳನ್ನು ಬರೆಯುವುದೇ ಈತ ನೀಡುತ್ತಿದ್ದ ಕೆಲಸವಾಗಿರುತ್ತಿತ್ತು.
ಇದರೊಂದಿಗೆ ನಕಲಿ ಟೆಲಿಗ್ರಾಮ್ ಗ್ರೂಪ್ ಅನ್ನು ಕೂಡ ಮಾಡಿಕೊಂಡು ಇಲ್ಲಿಯೂ ಹಲವಾರು ತಂತ್ರಗಳನ್ನು ಬಳಕೆ ಮಾಡಿ ಜನರು ಸುಲಭವಾಗಿ ಈತನ ಬಲೆಗೆ ಬೀಳುವಂತೆ ಮಾಡಿದ್ದ. ಹೋಟೆಲ್‌ಗೆ ಸಕಾರಾತ್ಮಕ ವಿಮರ್ಶೆಗಳನ್ನು ಬರೆಯಲು ಮತ್ತು ನಕಲಿ ಗೆಸ್ಟ್‌ಗಳ ಪ್ರಶ್ನೆಗಳಿಗೆ ಉತ್ತರಿಸಲು ಜನರನ್ನು ಈತ ಕೇಳಿದ್ದ. ಇದನ್ನು ನಂಬಿದ್ದ ಜನರು ಈತ ಹೇಳಿದಂತೆ ಮಾಡುತ್ತಿದ್ದರು. ಆರಂಭದಲ್ಲಿ ಯಾರೆಲ್ಲಾ ಕೆಲಸಕ್ಕೆ ಸೇರುತ್ತಾರೋ ಅವರಿಗೆ 10,000 ರೂ.ವರೆಗೂ ಹಣ ನೀಡಿ ವಿಶ್ವಾಸ ಗಳಿಸುತ್ತಿದ್ದ.

ಆದರೆ ಕಾಲನಂತರದಲ್ಲಿ ದೊಡ್ಡ ಆದಾಯದ ಭರವಸೆ ನೀಡುವ ಮೂಲಕ ಹೆಚ್ಚು ಹೂಡಿಕೆ ಮಾಡಲು ಜನರಿಗೆ ಮನವರಿಕೆ ಮಾಡಿ ಬ್ಯಾಂಕ್ ವಿವರ ಪಡೆದೋ ಅಥವಾ ಅವರ ಡಿವೈಸ್ ಅನ್ನು ರಿಮೋಟ್ ಕಂಟ್ರೋಲ್ ಮಾಡುವ ಮೂಲಕವೋ ಜನರಿಗೆ ಮೋಸ ಮಾಡಿ ಕಣ್ಣು ಮಿಟುಕಿಸುವುದರ ಒಳಗಾಗಿ ಹಣವನ್ನು ಲಪಟಾಯಿಸುತ್ತಿದ್ದ. ಇದು ನಿರಂತರವಾಗಿ ಹೆಚ್ಚಾಗುತ್ತಿದ್ದರಿಂದ ಜನರು ಪೊಲೀಸರ ಮೇಲೆ ತೀವ್ರ ಆಕ್ರೋಶ ಹೊರಹಾಕುತ್ತಿದ್ದರು. ಪರಿಣಾಮ ಈಗ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಈ ಹಗರಣವು ಇತರ ದೇಶಗಳ ಅಪರಾಧಗಳೊಂದಿಗೂ ಸಹ ಸಂಪರ್ಕ ಹೊಂದಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಈ ಗ್ರೂಪ್‌ಗಳು ಇತರ ದೇಶಗಳಿಗೆ ರಹಸ್ಯವಾಗಿ ಹಣ ಕಳುಹಿಸುವ ಕೆಲಸ ಮಾಡುತ್ತಿದ್ದವು ಹಾಗೂ ಕದ್ದ ಹಣವನ್ನು ಆರಂಭದಲ್ಲಿ ಬ್ಯಾಂಕ್ ಖಾತೆಗಳನ್ನು ಇರಿಸಲಿ ಹಾಗೂ ಹೊಸ ಬ್ಯಾಂಕ್ ಖಾತೆ ತೆರೆಯಲು ಭಾರತದಲ್ಲಿ ಜನರನ್ನು ನೇಮಿಸಿಕೊಳ್ಳುತ್ತಿದ್ದವು ಎಂದು ತಿಳಿಸಿದ್ದಾರೆ. ಈ ಮೂಲಕ ಬರೋಬ್ಬರಿ 21 ಕೋಟಿಗೂ ಅಧಿಕ ಹಣ ಲಪಟಾಯಿಸಿದ್ದ ವ್ಯಕ್ತಿ ಈಗ ಕಂಬಿ ಎಣಿಸುವಂತೆ ಆಗಿದೆ.


Click it and Unblock the Notifications








