Rat killing trap: ಇಲಿ ಕೊಲ್ಲುವ ಟ್ರ್ಯಾಪ್ ಮಾರಾಟದ ಮೇಲೆ ನಿರ್ಬಂಧ! ಅಮೆಜಾನ್,ಫ್ಲಿಪ್‌ಕಾರ್ಟ್‌ನಿಂದ ಮಹತ್ವದ ನಿರ್ಧಾರ
ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಸಣ್ಣ ಸೂಜಿಯಿಂದ ಹಿಡಿದು ದೊಡ್ಡ ದೊಡ್ಡ ವಾಹನಗಳ ವರೆಗೂ ಎಲ್ಲವನ್ನೂ ಸೇಲ್ ಮಾಡುತ್ತವೆ. ಅದರಲ್ಲೂ ಆಫರ್ ಬೆಲೆಯಲ್ಲಿ ಸೇಲ್ ಮಾಡುತ್ತವೆ ಅನ್ನೋದು ಗಮನಿಸಬೇಕಾದ ವಿಷಯ. ಆದರೆ ಇನ್ಮುಂದೆ ಅಮೆಜಾನ್, ಫ್ಲಿಪ್‌ಕಾರ್ಟ್, ಮೀಶೋ ದಲ್ಲಿ (Amazon, Flipkart, Meesho) ಇಲಿ ಕೊಲ್ಲುವ ಟ್ರ್ಯಾಪ್ ಲಭ್ಯ ಇರುವುದಿಲ್ಲ.
ಹೌದು, ಪ್ರಾಣಿ ಹಿಂಸೆ ಮಹಾಪಾಪ ಎಂದು ಹೇಳುತ್ತಿದ್ದೆವಾದರೂ ಟ್ರ್ಯಾಪ್ (rat killing trap) ಬಳಕೆ ಮಾಡಿಕೊಂಡು ಇಲಿಗೆ ಚಿತ್ರಹಿಂಸೆಕೊಟ್ಟು ಕೊಲ್ಲಲಾಗುತ್ತಿತ್ತು. ಇಲಿಗಳು ಈ ಅಂಟು ಇರುವ ಟ್ರ್ಯಾಪ್ ಮೇಲೆ ಬಿದ್ದು ವಿಲವಿಲ ಒದ್ದಾಡಿ ಕೊನೆಗೆ ಪ್ರಾಣ ಕಳೆದುಕೊಳ್ಳುತ್ತಿದ್ದವು. ಪರಿಣಾಮ ಈಗ ಈ ಟ್ರ್ಯಾಪ್‌ಗೆ ನಿರ್ಬಂಧ ವಿಧಿಸಲಾಗಿದೆ. ಹಾಗಿದ್ರೆ, ಈ ನಿರ್ಧಾರವನ್ನು ಈಗ ಯಾಕೆ ತೆಗೆದುಕೊಳ್ಳಲಾಗಿದೆ. ಇದಕ್ಕೆ ನಿರ್ದೇಶನ ನೀಡಿದವರು ಯಾರು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಇಲಿ ಕೊಲ್ಲುವ ಟ್ರ್ಯಾಪ್‌ಗೆ ನಿರ್ಬಂಧ: ಪೆಟಾ ಇಂಡಿಯಾದ (People for the Ethical Treatment of Animals) ಅಥವಾ ಪ್ರಾಣಿ ಹಕ್ಕುಗಳ ಸಂಘಟನೆಯ ಮನವಿಯ ಮೇರೆಗೆ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಮೀಶೋ ತಮ್ಮ ವೆಬ್‌ಸೈಟ್‌ಗಳಿಂದ ಇಲ್ಲಿ ಕೊಲ್ಲುವ ಟ್ರ್ಯಾಪ್ ಅನ್ನು ತೆಗೆದುಹಾಕಿವೆ. ಈ ಕ್ರಮವು ಅಮಾನವೀಯ ಕೆಲಸದ ವಿರುದ್ಧ ವ್ಯಾಪಕವಾದ ರಾಷ್ಟ್ರವ್ಯಾಪಿ ಮನವರಿಕೆ ಮಾಡಿಕೊಡುವ ಕ್ರಮವಾಗಿದೆ ಎಂದು ಹೇಳಲಾಗಿದೆ. ಈ ಸಂಬಂಧ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈವರೆಗೆ ಈ ಅಂಟನ್ನು ಹೊಂದಿದ್ದ ಟ್ರ್ಯಾಪ್ ಅನ್ನು ಇಲಿಗಳು ಮತ್ತು ಇತರ ಕೀಟಗಳನ್ನು ಸೆರೆಹಿಡಿಯಲು ಬಳಕೆ ಮಾಡಲಾಗುತ್ತಿದ್ದು, ಇಲಿಗಳು ಈ ಟ್ರ್ಯಾಪ್‌ಗೆ ಬಿದ್ದು ಸಾಯುತ್ತಿದ್ದುದ್ದೇನೋ ನಿಜ. ಆದರೆ, ಅವುಗಳಲ್ಲಿ ಸಿಕ್ಕಿಬಿದ್ದ ಇಲಿಗಳೀಗೆ ಕ್ರೂರ ಸಾವು ಬರುತ್ತಿತ್ತು ಅನ್ನೋದನ್ನು ಅಲ್ಲಗೆಳೆಯುವ ಹಾಗಿಲ್ಲ. ಈ ಟ್ರ್ಯಾಪ್‌ನಲ್ಲಿ ಸಿಕ್ಕಿಬಿದ್ದ ಯಾವುದೇ ಜೀವಿಗಳೂ ಸಹ ಹಲವಾರು ಗಂಟೆಗಳು ನೋವನ್ನು ಅನುಭವಿಸುತ್ತವೆ, ಇದು ಕೆಲವೊಮ್ಮೆ ದಿನಗಳೂ ಆಗಿರಬಹುದು ಎಂದು ಪೆಟಾ ಕಾರ್ಯಕರ್ತರು ವಾದಿಸುತ್ತಾರೆ.

ಇನ್ನು ಭಾರತದಾದ್ಯಂತ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಈ ಟ್ರ್ಯಾಪ್‌ನ ತಯಾರಿಕೆ ಮತ್ತು ಬಳಕೆಯನ್ನು ನಿಷೇಧಿಸಿವೆ. ಅದರಂತೆ ಈಗ ಅಮೆಜಾನ್, ಮೀಶೋ, ಫ್ಲಿಪ್‌ಕಾರ್ಟ್, ಸ್ನಾಪ್‌ಡೀಲ್ ಮತ್ತು ಜಿಯೋ ಮಾರ್ಟ್‌ಗಳು ತೆಗೆದುಕೊಂಡ ನಿಲುವನ್ನು ಪೆಟಾ ಇಂಡಿಯಾ ಶ್ಲಾಘಿಸಿದೆ. ಆದರೂ ಸಹ ರಿಟೇಲರ್ ಸ್ಟೋರ್‌ಗಳಲ್ಲಿ ಇದು ಲಭ್ಯ ಇದ್ದು, ಇವರೂ ಸಹ ಈ ನಿಯಮವನ್ನು ಪಾಲನೆ ಮಾಡಬೇಕು ಅನ್ನೋದು ಪೆಟಾದ ಆಶಯವಾಗಿದೆ.
ಗಮನಿಸಬೇಕಾದ ವಿಷಯ ಏನೆಂದರೆ ಅಮೆಜಾನ್ ಮತ್ತು ಹಲವಾರು ಇತರ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಅಳಿವಿನಂಚಿನಲ್ಲಿರುವ ಅಥವಾ ಬೆದರಿಕೆಯಂಚಿನಲ್ಲಿರುವ ಪ್ರಭೇದದ ಯಾವುದೇ ವಸ್ತುಗಳ ಮಾರಾಟವನ್ನೂ ತಿರಸ್ಕರಿಸಿವೆ. ಈ ಕ್ರಮಗಳು ಪ್ರಾಣಿ ಕಲ್ಯಾಣ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲು ಉದ್ಯಮದಲ್ಲಿ ಬೆಳೆಯುತ್ತಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗಿದೆ.

ಸೆಪ್ಟೆಂಬರ್ 2023 ರಲ್ಲಿ ದೆಹಲಿ ಸರ್ಕಾರವು ಈ ಅಂಟು ಟ್ರ್ಯಾಪ್‌ಗಳ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ನಿಷೇಧ ಮಾಡಿತ್ತು. ಇದಾದ ನಂತರದಲ್ಲಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶದಂತಹ ಹಲವಾರು ರಾಜ್ಯಗಳು ಸಹ ನಿರ್ಬಂಧ ವಿಧಿಸಿವೆ. ಅಲ್ಲದೆ ಇಲಿಗಳು ಮಾತ್ರವಲ್ಲದೆ ಈ ಟ್ರ್ಯಾಪ್‌ನಲ್ಲಿ ಕೆಲವೊಮ್ಮೆ ಹಾವು, ಅಳಿಲುಗಳು ಮತ್ತು ಕಪ್ಪೆಗಳಂತಹ ಪ್ರಾಣಿಗಳು ಸಹ ಸಿಲುಕಿಕೊಂಡಿರುವುದನ್ನು ನೀವು ಕಂಡಿರಬಹುದು.
ದೆಹಲಿ ಸರ್ಕಾರದ ನಿಷೇಧವನ್ನು ಪೆಟಾ ಇಂಡಿಯಾ ದೆಹಲಿಯ ಸ್ವಾಗತಿಸಿದೆ. ಈ ಕ್ರಮವು ಪ್ರಾಣಿ ಹಿಂಸೆಯನ್ನು ತಡೆಗಟ್ಟುವ ಪ್ರಯತ್ನಗಳೊಂದಿಗೆ ಹೊಂದಿಕೆಯಾಗುತ್ತದೆಯಾದರೂ ಭಾರತದಲ್ಲಿ ಮಾನವ-ವನ್ಯಜೀವಿ ಸಂಘರ್ಷಗಳ ಬಗ್ಗೆ ಇನ್ನೂ ಸಾಕಷ್ಟು ಪ್ರಶ್ನೆಗಳು ಉಳಿದಿವೆ. ಇದರಿಂದ ಜನರೇ ಸ್ವತಃ ಎಚ್ಚೆತ್ತುಕೊಂಡು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳನ್ನು ರಕ್ಷಣೆ ಮಾಡುವ ಕೆಲಸದಲ್ಲಿ ಭಾಗಿಯಾಗಬೇಕಿದೆ.


Click it and Unblock the Notifications








