Swiggy: ಸ್ವಿಗ್ಗಿ ಹೆಸರಲ್ಲಿ ವಂಚನೆ, ಬೆಂಗಳೂರಿನ ವ್ಯಕ್ತಿಗೆ 38,000 ರೂ.ಗಳ ಮೋಸ
ಆನ್‌ಲೈನ್ ಫುಡ್ ಆರ್ಡರ್ (Online Food Order) ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಈ ಮೂಲಕ ತಮ್ಮಿಷ್ಟದ ಆಹಾರವನ್ನು ಇಷ್ಟ ದ ಹೋಟೆಲ್‌ನಿಂದ ಕೆಲವೇ ಸಮಯದಲ್ಲಿ ತರಿಸಿಕೊಂಡು ತಿನ್ನುವುದು ಹಲವಾರು ಜನರಿಗೆ ರೂಢಿಯಾಗಿದೆ. ಆದರೆ, ಇದನ್ನೇ ದುರುಪಯೋಗ ಮಾಡಿಕೊಂಡಿರುವ ಕೆಲವರು ಈ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ.
ಹೌದು, ಬೆಂಗಳೂರಲ್ಲಿ ವ್ಯಕ್ತಿಯೋರ್ವರು 38,000ರೂ. ಗಳನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಸ್ವಿಗ್ಗಿಯ ಮೆಸೆಜ್. ಅರೇ ಏನಿದು ಸ್ವಿಗ್ಗಿ (Swiggy) ಈ ರೀತಿಯಲ್ಲಾ ಮೋಸ ಮಾಡುತ್ತಾ?, ಈ ವ್ಯಕ್ತಿ ಸ್ವೀಕರಿಸಿದ ಓಟಿಪಿ ಎಲ್ಲಿಂದ ಬಂದಿದ್ದು?, ಈ ರೀತಿಯ ವಂಚನೆಗಳಿಂದ ಪಾರಾಗುವುದು ಹೇಗೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಆನ್‌ಲೈನ್ ಹಗರಣ: ಬೆಂಗಳೂರು ಮೂಲದ ಸೇಲ್ಸ್ ಎಕ್ಸಿಕ್ಯೂಟಿವ್ ಚನ್ನಕೇಶವ ಕೆಎಸ್ ಎಂಬುವರು ಒಂದು ಮೆಸೆಜ್ ಸ್ವೀಕಾರ ಮಾಡಿದ್ದಾರೆ. ಈ ಮೆಸೆಜ್‌ನಲ್ಲಿ ಸ್ವಿಗ್ಗಿಯ ಹೆಸರನ್ನೂ ಸಹ ಉಲ್ಲೇಖ ಮಾಡಲಾಗಿದೆ. ಅಂದರೆ ಈ ಮೆಸೆಜ್‌ನಲ್ಲಿ ಸ್ವಿಗ್ಗಿಯಿಂದ 5,345 ರೂ. ಮೌಲ್ಯದ ಆರ್ಡರ್ ಬಗ್ಗೆ ತಿಳಿಸಲಾಗಿದೆ. ದುರಂತ ಎಂದರೆ ಈ ಬೆಲೆಯಲ್ಲಿ ಪರಿಶೀಲನೆ ಮಾಡಲೋಗಿ ಅವರು 38,000ರೂ. ಗಳನ್ನು ಕಳೆದುಕೊಂಡಿದ್ದಾರೆ.
ಅಂದರೆ ಚನ್ನಕೇಶವ ಅವರಿಗೆ ಸ್ವಿಗ್ಗಿ ಎಂದು ಹೇಳಿಕೊಂಡ ಒಂದು ಆಟೋಮ್ಯಾಟಿಕ್ ಕರೆ ಬಂದಿದೆ. ಇದರಲ್ಲಿ ತಮ್ಮ ಖಾತೆಯನ್ನು ಬಳಸಿಕೊಂಡು ಆರ್ಡರ್ ಮಾಡಲಾಗಿದೆ ಎಂದು ತಿಳಿಸಲಾಗುತ್ತದೆ. ಅಷ್ಟಾಗಿಯೂ ಸಹ ಇವರು ಯಾವುದೇ ಸಂದೇಹವನ್ನು ವ್ಯಕ್ತಪಡಿಸಿಲ್ಲ. ಬದಲಾಗಿ ಧ್ವನಿ ಪ್ರಾಂಪ್ಟ್ ಏನೆಲ್ಲಾ ಹೇಳುತ್ತದೋ ಅದನ್ನು ಅನುಸರಿಸುವ ಕೆಲಸ ಮಾಡಿದ್ದಾರೆ. ಈ ವೇಳೆ ಅಜಾಗರೂಕತೆಯಿಂದ ಮೊಬೈಲ್‌ಗೆ ಬಂದ ಓಟಿಪಿಯನ್ನು ಅವರು ಬಹಿರಂಗಪಡಿಸಿದ್ದಾರೆ.

ಈ ವೇಳೆ ಅವರು ಒಟ್ಟಾರೆ ನಾಲ್ಕು ಓಟಿಪಿಗಳನ್ನು ಸ್ವೀಕಾರ ಮಾಡಿದ್ದಾರೆ. ನಂತರದಲ್ಲಿ ಎಚ್ಚೆತ್ತುಕೊಂಡು ಸ್ವಿಗ್ಗಿ ಖಾತೆ ಲಾಗ್ ಔಟ್ ಮಾಡಲು ಮುಂದಾಗಿದ್ದಾರೆ. ಅದಾಗಲೇ ಅವರ ಲೇಜಿಪೇ(LazyPay) ಸಾಲದ ಆಪ್ ನಿಂದ 38,720 ರೂ. ಕಡಿತವಾಗಿದೆ. ವಂಚನೆಯ ತೀವ್ರತೆಯನ್ನು ಅರಿತ ಚನ್ನಕೇಶವ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ಪೊಲೀಸರು ಸ್ವಿಗ್ಗಿ ಖಾತೆಗೆ ಲಾಗಿನ್ ಆಗಿ ಎಂದು ತಿಳಿಸಿದ್ದಾರೆ. ದುರಂತ ಏನೆಂದರೆ ಸ್ಕ್ಯಾಮರ್‌ಗಳು ಎಲ್ಲಾ ಲಾಗಿನ್ ಮಾಹಿತಿಯನ್ನು ಅಳಿಸಿಹಾಕಿದ್ದಾರಂತೆ. ಈ ಮೂಲಕ ಪೊಲೀಸರಿಗೆ ಯಾವುದೇ ಮಾಹಿತಿ ಸಿಗದಂತೆ ಮಾಡಿದ್ದಾರೆ.
ಈ ಘಟನೆ ಸಂಬಂಧ ಸ್ವಿಗ್ಗಿಯನ್ನು ಸಂಪರ್ಕ ಮಾಡಿದ್ದು, ಅವರು ಎಲ್ಲಾ ರೀತಿಯ ಮಾಹಿತಿಯನ್ನು ಪಡೆದುಕೊಂಡು ಹೆಚ್ಚಿನ ತನಿಖೆಗಾಗಿ ಇನ್ನಷ್ಟು ಸಮಯದ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರಂತೆ. ಈ ನಡುವೆ ಚನ್ನಕೇಶವ ಅವರ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಮೂಲಕ ಲೇಜಿಪೇ ಮುಂಜಾಗ್ರತಾ ಕ್ರಮಗಳನ್ನು ಸಹ ತೆಗೆದುಕೊಂಡಿದೆ. ಏನೇ ಆದರೂ ಒಂದು ಕ್ಷಣ ಓಟಿಟಿ ನೀಡಿ ಯಾಮಾರಿದ್ದಕ್ಕೆ ಈ ವ್ಯಕ್ತಿ ಇಷ್ಟು ಹಣ ಕಳೆದುಕೊಂಡಿರುವುದು ಇತರರಿಗೆ ಭಯ ಹುಟ್ಟುವಂತೆ ಮಾಡಿದೆ.
ಈ ಘಟನೆಯು ಡಿಜಿಟಲ್ ಕ್ಷೇತ್ರದಲ್ಲಿ ಜನರು ಎದುರಿಸುತ್ತಿರುವ ದುರ್ಬಲತೆಗಳನ್ನು ಸೂಚಿಸುತ್ತದೆ. ಆನ್‌ಲೈನ್ ವಹಿವಾಟುಗಳೊಂದಿಗೆ ವ್ಯವಹರಿಸುವಾಗ ಮತ್ತು ಅನಿರೀಕ್ಷಿತ ಸಂವಹನಗಳಲ್ಲಿ ಭಾಗಿಯಾದಾಗ ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕ್ ಹಾಗೂ ಇನ್ನಿತರೆ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಅದರಲ್ಲೂ ಓಟಿಪಿಯನ್ನಂತೂ ಯಾರ ಜೊತೆಗೂ ಶೇರ್ ಮಾಡಿಕೊಳ್ಳಬೇಡಿ. ಈ ನಡುವೆ ಈ ರೀತಿಯ ಮೋಸದ ಚಟುವಟಿಕೆಗೆ ಕಾರಣರಾದವರನ್ನು ಬಂಧಿಸುವ ಕೆಲಸವೂ ಸಹ ನಡೆಯುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಇರಲಿ.

ಬೆಂಗಳೂರು ಈ ರೀತಿಯ ಘಟನೆಗಳಿಗೆ ತವರೂರಾಗಿದೆ. ಯಾವುದೇ ಹೊಸ ರೀತಿಯ ವಂಚನೆಗಳು ಇಲ್ಲಿಂದಲೇ ವರದಿಯಾಗುತ್ತದೆ. ಪರಿಣಾಮ ಯಾವುದೇ ಅನಾಮಿಕ ಕರೆಗಳು ಅಥವಾ ಮೆಸೆಜ್‌ಗಳನ್ನು ಸ್ವೀಕರಿಸಿದಾಗ ಅದನ್ನು ಅನುಮಾನದಿಂದಲೇ ನೋಡಿ. ಅದರಲ್ಲೂ ಅವರು ಏನಾದರೂ ನಿಮ್ಮ ಬ್ಯಾಂಕ್ ಹಾಗೂ ಇನ್ನಿತರೆ ವೈಯುಕ್ತಿಕ ಮಾಹಿತಿ ಕೇಳುತ್ತಾರೆ ಎಂದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಯಾಕೆಂದರೆ ಯಾವುದೇ ಬ್ಯಾಂಕ್ ಆಥವಾ ಅಧಿಕೃತ ಸಂಸ್ಥೆಗಳು ಕರೆ ಮಾಡುವ ಮೂಲಕ ಓಟಿಪಿ ಹಾಗೂ ಬ್ಯಾಂಕ್ ವಿವರ ಕೇಳುವುದಿಲ್ಲ.


Click it and Unblock the Notifications








