QR code ಸ್ಕ್ಯಾನ್ ಮಾಡುವಾಗ ಎಚ್ಚರ ಎಚ್ಚರ... ಏನಿದು ಕ್ವಿಶಿಂಗ್ ಹಗರಣ!?
ಕ್ಯೂಆರ್ ಕೋಡ್ (QR code) ಅನ್ನು ಎಲ್ಲಾ ಕಡೆ ಬಳಕೆ ಮಾಡಲಾಗುತ್ತದೆ. ಅಂದರೆ ಸಣ್ಣ ಅಂಗಡಿಯಿಂದ ದೊಡ್ಡ ಮಾಲ್‌ಗಳ ವರೆಗೂ ಇದು ವ್ಯಾಪಿಸಿಕೊಂಡಿದೆ. ಈ ಮೂಲಕ ಬಳಕೆದಾರರು ಸುಲಭ ವ್ಯವಹಾರ ಮಾಡುತ್ತಿದ್ದಾರೆ. ಆದರೆ ಇದನ್ನೇ ದುರ್ಬಳಕೆ ಮಾಡಿಕೊಂಡು ಮೋಸ ಮಾಡುವ ಜಾಲ ದೊಡ್ಡ ಮಟ್ಟದಲ್ಲಿದೆ ಬೆಳೆದಿದೆ.
ಹೌದು, ಆನ್‌ಲೈನ್ ವಂಚನೆಗಳು (Online fraud) ನಿರಂತರವಾಗಿ ಭಿನ್ನ ರೀತಿಯಲ್ಲಿ ಜರುಗುತ್ತಲೇ ಇರುತ್ತವೆ. ಇದನ್ನು ಬುಡಸಮೇತ ಕಿತ್ತು ಹಾಕಲು ಸಾಧ್ಯವಾಗದ ಪರಿಸ್ಥಿತಿ ಸರ್ಕಾರ ಅಥವಾ ಸಂಸ್ಥೆಯದ್ದಾಗಿದ್ದರೆ. ಆದರೆ ಜನರು ಸ್ವತಃ ಎಚ್ಚೆತ್ತುಕೊಂಡರೆ ಖಂಡಿತಾ ಆನ್‌ಲೈನ್ ವಂಚನೆ ಪ್ರಕರಣಕ್ಕೆ ಬ್ರೇಕ್ ಹಾಕಬಹುದಾಗಿದೆ. ಹಾಗಿದ್ರೆ, ಈಗ ಮುನ್ನೆಲೆಗೆ ಬಂದಿರುವ ಕ್ವಿಶಿಂಗ್ (Quishing scam) ಹಗರಣ ಎಂದರೇನು?, ಇದರಿಂದ ಹೇಗೆಲ್ಲಾ ಮೋಸ ಮಾಡಲಾಗುತ್ತದೆ ಅನ್ನೋ ವಿಚಾರ ಇಲ್ಲಿದೆ ನೋಡಿ.

ಕ್ವಿಶಿಂಗ್ ಹಗರಣ: ಏಕೀಕೃತ ಪಾವತಿಗಳ ಇಂಟರ್‌ಫೇಸ್‌ನೊಂದಿಗೆ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಡಿಜಿಟಲ್ ಪಾವತಿಗಳು ತೀವ್ರಗತಿಯಲ್ಲಿ ಬೆಳೆದಿವೆ. ಅದರಂತೆ ಅಷ್ಟೇ ಪ್ರಮಾಣದಲ್ಲಿ ಮೋಸ ಮಾಡಲು ಸ್ಕ್ಯಾಮರ್‌ಗಳು ದಾರಿ ಕಂಡುಕೊಂಡಿದ್ದಾರೆ. ಇತ್ತೀಚಿನ ವಂಚನೆ ಪ್ರಕರಣಗಳಲ್ಲಿ ಹಣ, ವೈಯಕ್ತಿಕ ಮಾಹಿತಿಯನ್ನು ಕದಿಯಲು ಮತ್ತು ಗುರುತಿನ ಕಳ್ಳತನವನ್ನು ಮಾಡಲು ಸ್ಕ್ಯಾಮರ್‌ಗಳು ಕ್ಯೂಆರ್ ಕೋಡ್ ಬಳಕೆ ಮಾಡುತ್ತಿದ್ದು, ಇದಕ್ಕೆ ಕ್ವಿಶಿಂಗ್ ಹಗರಣ ಎಂದು ಕರೆಯಲಾಗಿದೆ.
ಕ್ವಿಶಿಂಗ್ ಎಂದರೇನು? : ಕ್ವಿಶಿಂಗ್ ಎನ್ನುವುದು ಇತ್ತೀಚಿನ ಹೊಸ ಹಗರಣವಾಗಿದ್ದು, ಬಳಕೆದಾರರನ್ನು ನಕಲಿ ವೆಬ್‌ಸೈಟ್‌ಗೆ ಮರುನಿರ್ದೇಶಿಸಲು ಅಥವಾ ಮಾಹಿತಿಯನ್ನು ಕದಿಯಲು ನಕಲಿ ಕ್ಯೂಆರ್ ಕೋಡ್‌ಗಳನ್ನು ಬಳಕೆ ಮಾಡಿಕೊಂಡು ಮೋಸ ಮಾಡುವ ಮಾರ್ಗವಾಗಿದೆ. ವರದಿಯೊಂದರ ಪ್ರಕಾರ ಯುಪಿಐ ವಂಚನೆಗಳಿಗೆ ಸಂಬಂಧಿಸಿದ ದೂರುಗಳು 2022 ರಲ್ಲಿ 15,000 ಪ್ರಕರಣಗಳಿಂದ 2023 ರಲ್ಲಿ 30,000 ಕ್ಕಿಂತ ಹೆಚ್ಚಿನ ಪ್ರಕರಣ ವರದಿಯಾಗಿವೆ.
ಇದರಲ್ಲಿ ಸುಮಾರು ಅರ್ಧದಷ್ಟು ಪ್ರಕರಣಗಳು ಈ ಕ್ಯೂಆರ್ ಕೋಡ್‌ಗಳನ್ನು ಒಳಗೊಂಡಿವೆ ಎಂದು ವರದಿಯಾಗಿದೆ. ಇನ್ನು ಈ ಕ್ಯೂಆರ್ ಸಂಬಂಧ ಕೋಡ್ಫೆಡರಲ್ ಟ್ರೇಡ್ ಕಮಿಷನ್ (ಎಫ್‌ಟಿಸಿ) ಹಾನಿಕಾರಕ ಲಿಂಕ್‌ಗಳ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಹಾಗಿದ್ರೆ ಬನ್ನಿ ಕ್ವಿಶಿಂಗ್ ಹೇಗೆ ಕೆಲಸ ಮಾಡುತ್ತದೆ? ಜನರನ್ನು ಹೇಗೆ ಮರಳು ಮಾಡಿ ಹಣ ವಂಚನೆ ಮಾಡಲಿದೆ ಅನ್ನೋದನ್ನು ತಿಳಿಯೋಣ.

-ಕ್ವಿಶಿಂಗ್‌ನಲ್ಲಿ, ಸ್ಕ್ಯಾಮರ್ ಸಾಮಾನ್ಯವಾಗಿ ಕ್ಯಾಮರಾವನ್ನು ಬಳಕೆ ಮಾಡಿಕೊಂಡು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಜನರನ್ನು ಕೇಳುತ್ತಾನೆ. ಅದು ಬಳಕೆದಾರರನ್ನು ಸ್ಕ್ಯಾಮರ್ ರಚಿಸಿದ ವೆಬ್‌ಸೈಟ್‌ಗೆ ಮರುನಿರ್ದೇಶಿಸುತ್ತದೆ. ಈ ವೆಬ್‌ಸೈಟ್ ಸಾಮಾನ್ಯವಾಗಿ ನಿಜವಾದ ವೆಬ್‌ಸೈಟ್‌ನ ಅನುಕರಣೆಯಾಗಿರಲಿದ್ದು, ಇದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಸಹ ಆಗಿರಬಹುದು ಅಥವಾ ಬ್ಯಾಂಕ್ ಹಾಗೂ ಪ್ರಮುಖ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯೊಂದಿಗೆ ವ್ಯವಹರಿಸುವ ಇತರ ಪ್ಲಾಟ್‌ಫಾರ್ಮ್ ಸಹ ಆಗಿರಬಹುದು.
- ನಂತರ, ವೆಬ್‌ಸೈಟ್ ಬಳಕೆದಾರರಿಗೆ ಅವರ ವೈಯಕ್ತಿಕ ಮಾಹಿತಿ ಅಥವಾ ಖಾತೆ ವಿವರಗಳನ್ನು ನಮೂದಿಸಲು ಕೇಳಲಾಗುತ್ತದೆ. ಬಳಕೆದಾರರು ಈ ಮಾಹಿತಿಯನ್ನು ನಮೂದಿಸಿದಾಗ, ಎಲ್ಲಾ ಮಾಹಿತಿಯನ್ನು ಸುಲಭವಾಗಿ ಸ್ಕ್ಯಾಮರ್ ಪಡೆಯುತ್ತಾನೆ. ಇದಾದ ನಂತರದಲ್ಲಿ ಸ್ಕ್ಯಾಮರ್ ಹಣವನ್ನು ಕದಿಯಲು ಅಥವಾ ಗುರುತಿನ ಕಳ್ಳತನವನ್ನು ಮಾಡಲು ಈ ಮಾಹಿತಿಯನ್ನು ಬಳಕೆ ಮಾಡಿಕೊಳ್ಳುತ್ತಾನೆ.
- ಈ ಕ್ಯೂಆರ್ ಕೋಡ್‌ಗಳು ದುರುದ್ದೇಶಪೂರಿತ ಫೈಲ್‌ಗಳನ್ನು ಸಹ ಒಳಗೊಂಡಿರಬಹುದು. ಬಳಕೆದಾರರು ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಅದು ಆಟೋಮ್ಯಾಟಿಕ್ ಆಗಿ ಫೋನ್‌ನಲ್ಲಿ ಡೌನ್‌ಲೋಡ್ ಆಗುತ್ತದೆ. ಇದು ಬಳಕೆದಾರರ ಸ್ಮಾರ್ಟ್‌ಫೋನ್‌ಗೆ ಸೋಂಕು ಉಂಟು ಮಾಡಲಿದ್ದು, ಅವರ ವೈಯಕ್ತಿಕ ಮಾಹಿತಿಯನ್ನು ಅವರಿಗೆ ತಿಳಿಯದಂತೆ ಕದಿಯುವ ಕೆಲಸ ಮಾಡಲಿದೆ.

ಕ್ವಿಶಿಂಗ್‌ನಿಂದ ರಕ್ಷಣೆ ಹೇಗೆ?
- ಸಾರ್ವಜನಿಕ ಪ್ರದೇಶದಲ್ಲಿ ಕಂಡುಬರುವ ಕ್ಯೂಆರ್ ಕೋಡ್‌ಗಳ ಬಗ್ಗೆ ಎಚ್ಚರಿಕೆ ಇರಲಿ. ಅವುಗಳನ್ನು ಎಂದಿಗೂ ಸ್ಕ್ಯಾನ್ ಮಾಡಬೇಡಿ. ಇದರೊಂದಿಗೆ ನೀವು ಅಪರಿಚಿತ ಜನರಿಂದ ಸಂದೇಶ ಅಥವಾ ಇಮೇಲ್‌ನಲ್ಲಿ ಸ್ವೀಕರಿಸಿದರೆ ಕ್ಯೂಆರ್ ಕೋಡ್‌ಗಳನ್ನು ಸಹ ಸ್ಕ್ಯಾನ್ ಮಾಡಬೇಡಿ. ಅಷ್ಟೇ ಅಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವುದನ್ನು ತಪ್ಪಿಸಿ.
- ಇದರೊಂದಿಗೆ ಲಿಂಕ್ ಅನ್ನು ಒಳಗೊಂಡಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವಾಗ, ಅದರ ಮೇಲೆ ಕ್ಲಿಕ್ ಮಾಡುವ ಮೊದಲು URL ಅನ್ನು ಪರೀಕ್ಷಿಸಿ. ಕ್ಯೂಆರ್ ಕೋಡ್ ಸಂಕ್ಷಿಪ್ತ URL ಅನ್ನು ಒಳಗೊಂಡಿದ್ದರೆ, ನೀವು ಮೂಲವನ್ನು ನಂಬದ ಹೊರತು ಅದರ ಮೇಲೆ ಕ್ಲಿಕ್ ಮಾಡುವ ಕೆಲಸ ಮಾಡಬೇಡಿ. ಕ್ಯೂಆರ್ ಕೋಡ್ ಯಾವ ರೀತಿಯ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ ಎನ್ನೋದನ್ನು ಸಹ ಆ ವೇಳೆ ಪರಿಶೀಲಿಸಿಕೊಳ್ಳಿ. ಹಾಗಿದ್ರೆ, ಇದೇ ರೀತಿಯ ಕೆಲವು ಹಗರಣಗಳು ಆಗಾಗ್ಗೆ ಸದ್ದು ಮಾಡುತ್ತಿದ್ದು, ಅವುಗಳ ಬಗ್ಗೆಯೂ ಸ್ವಲ್ಪ ಮಾಹಿತಿ ತಿಳಿದುಬರೋಣ ಬನ್ನಿ.
ಫಿಶಿಂಗ್: ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಪಡೆಯಲು ನಕಲಿ ವೆಬ್‌ಸೈಟ್‌ಗಳನ್ನು ಈ ವೇಳೆ ಬಳಕೆ ಮಾಡಿಕೊಳ್ಳಲಾಗುತ್ತದೆ.
ವಿಶಿಂಗ್: ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಪಡೆಯಲು ಮೋಸದ ಫೋನ್ ಸಂಖ್ಯೆಗಳ ಬಳಕೆಯನ್ನು ಈ ವೇಳೆ ಬಳಕೆ ಮಾಡಿಕೊಳ್ಳಲಾಗುತ್ತದೆ.
ಫಾರ್ಮಿಂಗ್: ಇದು ನಿಜವಾದ ವೆಬ್‌ಸೈಟ್‌ನಿಂದ ನಕಲಿ ವೆಬ್‌ಸೈಟ್‌ಗೆ ಬಳಕೆದಾರರನ್ನು ಮರುನಿರ್ದೇಶನ ಮಾಡುವ ಹಗರಣವಾಗಿದೆ.
ಸ್ಮಿಶಿಂಗ್: ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಪಡೆಯಲು ಟೆಕ್ಸ್ಟ್ ಮೆಸೆಜ್ ಬಳಕೆಯನ್ನು ಒಳಗೊಂಡಿರುತ್ತದೆ.
ಸ್ಕಿಮ್ಮಿಂಗ್: ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನ ನಕಲು ಮಾಡುವುದನ್ನು ಸ್ಕಿಮ್ಮಿಂಗ್ ಹಗರಣ ಎಂದು ಕರೆಯಲಾಗುತ್ತದೆ. ಇದು ಸ್ಕ್ಯಾಮರ್‌ಗೆ ಹಣವನ್ನು ಕದಿಯಲು ಅನುವು ಮಾಡಿಕೊಡುತ್ತದೆ.


Click it and Unblock the Notifications








