ಚಾರ್ಜಿಂಗ್ ಮೋಡ್‌ನಲ್ಲಿ ಫೋನ್ ಬಳಸುತ್ತಿದ್ದ ಬಾಲಕ ವಿದ್ಯುತ್ ಶಾಕ್‌ನಿಂದ ಸಾವು: ಯುವಕರೇ ಇರಲಿ ಎಚ್ಚರ!
ಈಗಂತೂ ಯುವ ಪೀಳಿಗೆ ಮೊಬೈಲ್ ಅನ್ನು ಬಿಟ್ಟು ಇರುವುದೇ ಇಲ್ಲ. ಅಷ್ಟರಮಟ್ಟಿಗೆ ಸ್ಮಾರ್ಟ್‌ಫೋನ್‌ಗೆ ಅಂಟಿಕೊಂಡುಬಿಟ್ಟಿದ್ದಾರೆ. ಅದರಲ್ಲೂ ಇದು ಬಿಡಿಸಲಾರದ ಬಂಧನದಂತೆ ಆಗುತ್ತಿದೆ. ಈ ಸಮಸ್ಯೆಯಿಂದಲೇ ಇಲ್ಲೋರ್ವ ಯುವಕ ತನ್ನ ಜೀವ ಕಳೆದುಕೊಂಡಿದ್ದಾನೆ. ಈ ವಿಷಯ ತಿಳಿದುಕೊಂಡರೆ ನೀವು ಖಂಡಿತಾ ಶಾಕ್ ಆಗೋದರಲ್ಲಿ ಅನುಮಾನವೇ ಇಲ್ಲ.
ಹೌದು, ಮೊಬೈಲ್ ಅನ್ನು ಚಾರ್ಜಿಂಗ್ ಹಾಕಿಕೊಂಡು ಬಳಕೆ ಮಾಡುತ್ತಿರುವ ವೇಳೆ ಯುವಕ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಇದು ಬೇರೆ ದೇಶದಲ್ಲಿ ನಡೆದ ಘಟನೆಯಲ್ಲ, ಬದಲಾಗಿ ನಮ್ಮ ದೇಶದಲ್ಲಿಯೇ ನಡೆದ ದುರಂತವಾಗಿದ್ದು, ಚಾರ್ಜಿಂಗ್ ಹಾಕಿಕೊಂಡು ಫೋನ್ ಬಳಕೆ ಮಾಡುವ ಅದೆಷ್ಟೋ ಯುವಕರಿಗೆ ಇದು ಎಚ್ಚರಿಕೆಯ ಕರೆ ಗಂಟೆಯಾಗಲಿದೆ. ಹಾಗಿದ್ರೆ, ಈ ಘಟನೆ ನಡೆದಿದ್ದು ಎಲ್ಲಿ?, ಯಾಕೆ ಫೋನ್ ಅನ್ನು ಚಾರ್ಜಿಂಗ್ ಹಾಕಿರುವಾಗ ಬಳಕೆ ಮಾಡಬಾರದು? ಎಂಬಿತ್ಯಾದಿ ಅವಶ್ಯಕ ಮಾಹಿತಿಯನ್ನು ತಿಳಿದುಕೊಳ್ಳಿ.

ಘಟನೆ ನಡೆದಿದ್ದು ಎಲ್ಲಿ?: ಈ ದುರಂತ ಘಟನೆ ಉತ್ತರ ಪ್ರದೇಶದ ಬುದೌನ್ ಜಿಲ್ಲೆಯ ಬಿಸೌಲಿ ಹತ್ಸಾದಲ್ಲಿ ಜರುಗಿದೆ. ಚಾರ್ಜಿಂಗ್ ಮೋಡ್‌ನಲ್ಲಿ ಟಾಪ್ ಬ್ರಾಂಡ್‌ನ ಸ್ಮಾರ್ಟ್‌ಫೋನ್ ಅನ್ನು ಬಳಕೆ ಮಾಡುತ್ತಿದ್ದ 16 ವರ್ಷದ ಬಾಲಕ ಸತ್ಯಂ ಶರ್ಮಾ ಮೊಬೈಲ್ ವಿದ್ಯುತ್ ಶಾಕ್‌ಗೆ ಒಳಗಾಗಿ ಸಾವಿಗೀಡಾಗಿದ್ದಾನೆ.
ಘಟನೆ ಸಂಭವಿಸಿದ್ದು ಹೇಗೆ? : ಸ್ಮಾರ್ಟ್‌ಫೋನ್ ಚಾರ್ಜಿಂಗ್ ಆಗುತ್ತಿರುವಾಗಲೇ ಆ ಫೋನ್‌ಗೆ ಕರೆ ಬಂದಿದೆ. ತಕ್ಷಣವೇ ಆ ಕರೆಯನ್ನು ತನ್ನ ಸ್ಮಾರ್ಟ್‌ವಾಚ್ ಮೂಲಕ ಸ್ವೀಕರಿಸಿದ್ದಾನೆ. ಇದಾಗಿದ್ದೇ ತಡ ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಫೋಷಕರು ಆತನನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲಾಗಲೇ ಆತ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂಬಂಧ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಬಾಲಕ ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ. ಈ ಸಂಬಂಧ ಆತನ ಪೋಷಕರು ನಮಗೆ ಇನ್ನೂ ದೂರನ್ನು ನೀಡಿಲ್ಲ. ಅವರು ದೂರು ದಾಖಲಿಸಿದರೆ ನಾವು ಮುಂದಿನ ಕ್ರಮ ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ದುರಂತ ಎಂದರೆ ಈ ರೀತಿಯ ಅದೆಷ್ಟೋ ಘಟನೆಗಳು ನಮ್ಮ ನಡುವೆ ನಡೆಯುತ್ತಿದ್ದು, ಕೆಲವು ಬೆಳಕಿಗೆ ಬರುವುದೇ ಇಲ್ಲ. ಹೀಗಾಗಿ ನೀವು ಈ ರೀತಿಯ ಎಚ್ಚರಿಕೆಯನ್ನು ವಹಿಸಿಕೊಳ್ಳಿ.

ಸಾಮಾನ್ಯವಾಗಿ ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುವುದರಿಂದ ಯಾವುದೇ ಅಪಾಯ ಸಂಭವಿಸುವುದಿಲ್ಲ. ಆದರೆ ಎಲ್ಲಾ ಸಮಯ ಒಂದೇ ಆಗಿರುವುದಿಲ್ಲ. ಅದರಲ್ಲೂ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿಗೆ ಸೂಕ್ತವಾದ ರಕ್ಷಣೆಯನ್ನು ಒದಗಿಸಲಾಗಿದೆ. ಈ ಮೂಲಕ ಫೋನ್ ಹೆಚ್ಚು ಬಿಸಿಯಾಗುವುದನ್ನು ತಡೆಯಲಾಗುತ್ತದೆ. ಅದಾಗ್ಯೂ ಕೆಲವು ಅನಾಹುತ ಸಂಭವಿಸುತ್ತಿರುವುದು ದುರಂತ.
ಡಿವೈಸ್ ಚಾರ್ಜ್ ಆಗುತ್ತಿರುವಾಗ ಸ್ಮಾರ್ಟ್‌ಫೋನ್‌ನಿಂದ ಯಾರಾದರೂ ವಿದ್ಯುದಾಘಾತಕ್ಕೊಳಗಾಗುವ ಸಾಧ್ಯತೆ ತುಂಬಾ ಕಡಿಮೆ ಎಂದು ತಜ್ಞರು ಹೇಳುತ್ತಾರೆ. ಯಾಕೆಂದರೆ ಯುಎಸ್‌ಬಿ ಕಾರ್ಡ್‌ನಿಂದ ಚಾರ್ಜ್ ಮಾಡಲಾದ ಫೋನ್‌ಗಳು ಸುಮಾರು 5 ವೋಲ್ಟ್‌ಗಳ ಪೂರೈಕೆ ವೋಲ್ಟೇಜ್ ಅನ್ನು ಮಾತ್ರ ಹೊಂದಿರುತ್ತವೆ. ಅಂದರೆ, ಇದು ವ್ಯಕ್ತಿಯನ್ನು ತೀವ್ರವಾಗಿ ಹಾನಿ ಮಾಡಲು ಸಾಧ್ಯವಿಲ್ಲ ಎಂದು ನಂಬುತ್ತಾರೆ.
ಉತ್ತಮ ಫೋನ್‌ಗಳಲ್ಲಿಯೇ ಈ ದುರಂತ: ಫೋನ್ ಅನ್ನು ಚಾರ್ಜಿಂಗ್ ಹಾಕಿರುವಾಗ ವಿದ್ಯುತ್ ಶಾಕ್ ಹೊಡೆದು ಈ ರೀತಿಯ ಘಟನೆಗಳು ನಡೆದಿರುವುದು ಸಾಮಾನ್ಯ ಬಜೆಟ್ ಫೋನ್‌ಗಳಲ್ಲ, ಬದಲಾಗಿ ಅತ್ಯಂತ ಬೇಡಿಕೆ ಇರುವ ಹಾಗೂ ಹೆಚ್ಚು ಬೆಲೆ ಹೊಂದಿರುವ ಫೋನ್‌ಗಳಿಂದಲೇ ಈ ರೀತಿಯ ಘಟನೆ ಸಂಭವಿಸಿವೆ. ಈ ಸಂಬಂಧ ಹಲವಾರು ಘಟನೆಗಳು ವರದಿಯಾಗಿವೆ.

ಕಳಪೆ ಗುಣಮಟ್ಟದ ಚಾರ್ಜರ್ ಬಳಕೆ ಬೇಡ: ಕಳಪೆ ಗುಣಮಟ್ಟದ ಅಥವಾ ಹೊಂದಾಣಿಕೆಯಾಗದ ಚಾರ್ಜರ್‌ನೊಂದಿಗೆ ಫೋನ್ ಅನ್ನು ಚಾರ್ಜಿಂಗ್ ಮಾಡಲು ಮುಂದಾದಾಗ ಅಪಾಯಗಳು ಹೆಚ್ಚಾಗುತ್ತವೆ ಎನ್ನಲಾಗಿದೆ. ಕೆಲವು ನಾಕ್‌ಆಫ್ ಚಾರ್ಜರ್‌ಗಳು ಸರಿಯಾದ ಸಮಸ್ಯೆಗಳನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿರುವುದಿಲ್ಲ, ಇವು ಬೆಂಕಿ ಅಥವಾ ವಿದ್ಯುತ್ ಆಘಾತಕ್ಕೆ ಬಳಕೆದಾರನ್ನು ಒಡ್ಡುತ್ತದೆ.
ಮನೆಯಲ್ಲಿನ ದೋಷಯುಕ್ತ ವೈರಿಂಗ್ ಗಮನಿಸಿ:ಅದೆಲ್ಲಕ್ಕೂ ಮಿಗಿಲಾಗಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಅನ್ನು ಒಳಗೊಂಡಿರುವ ವಿದ್ಯುತ್ ಆಘಾತಗಳು ಸಾಮಾನ್ಯವಾಗಿ ಡಿವೈಸ್‌ಗಳೊಂದಿಗೆ ಯಾವುದೇ ಸಂಬಂಧವನ್ನು ಸಹ ಹೊಂದಿರುವುದಿಲ್ಲವಾದರೂ ಓವರ್‌ಲೋಡ್ ಆಗಿರುವ ಪವರ್ ಔಟ್‌ಲೆಟ್‌ಗಳು, ಫ್ರೇಯ್ಡ್ ಎಕ್ಸ್‌ಟೆನ್ಶನ್ ಕಾರ್ಡ್‌ಗಳು ಅಥವಾ ಮನೆಯಲ್ಲಿನ ದೋಷಯುಕ್ತ ವೈರಿಂಗ್‌ನಿಂದ ಈ ರೀತಿ ಸಮಸ್ಯೆ ನಿರ್ಮಾಣ ಆಗಬಹುದು.


Click it and Unblock the Notifications








