BSNL ನಿಂದ ಸಿನಿಮಾ ಪ್ಲಸ್ ಒಟಿಟಿ ಚಂದಾದಾರಿಕೆ; 49ರೂ.ಗಳಿಂದ ಪ್ರಾರಂಭ!
ಬಿಎಸ್‌ಎನ್‌ಎಲ್ (BSNL) ಅಗ್ಗದ ದರದಲ್ಲಿ ಅತ್ಯುತ್ತಮ ಸೌಲಭ್ಯಗಳನ್ನು ನೀಡುವ ಪ್ರಮುಖ ಟೆಲಿಕಾಂ ಕಂಪೆನಿಯಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಮುನ್ನೆಯಲ್ಲಿರುವ ಏರ್‌ಟೆಲ್ ಹಾಗೂ ಜಿಯೋಗೆ ತನ್ನದೇ ಆದ ರೀತಿಯಲ್ಲಿ ಸೆಡ್ಡು ಹೊಡೆಯುತ್ತಿದೆ.
ಹೌದು, ಬಿಎಸ್‌ಎನ್‌ಎಲ್ ಟೆಲಿಕಾಂ ವಲಯದಲ್ಲಿ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಈ ನಡುವೆ ಒಟಿಟಿ ಪ್ರಯೋಜನಗಳನ್ನೂ ಸಹ ನೀಡಲು ಮುಂದಾಗಿದ್ದು, ಈ ಮೂರು ವಿಶೇಷ ಪ್ಲ್ಯಾನ್‌ಗಳು ಗ್ರಾಹಕರಿಗೆ ಸಾಕಷ್ಟು ಸೌಲಭ್ಯ ಕಲ್ಪಿಸಿಕೊಡಲಿವೆ. ಹಾಗಿದ್ರೆ, ಯಾವುವು ಈ ಮೂರು ಪ್ಲ್ಯಾನ್‌ಗಳು?, ಇವುಗಳಿಗೆ ಬಿಎಸ್‌ಎನ್‌ಎಲ್ ಏನೆಂದು ಕರೆದಿದೆ?, ಯಾವೆಲ್ಲಾ ಆಪ್‌ಗಳ ಸೇವೆಯನ್ನು ಈ ಮೂಲಕ ಪಡೆದುಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.

ಸಿನಿಮಾ ಪ್ಲಸ್ ಪ್ಲ್ಯಾನ್: ಬಿಎಸ್‌ಎನ್‌ಎಲ್ ಮೂರು ಸಿನಿಮಾ ಪ್ಲಸ್ ಪ್ಲ್ಯಾನ್ (Cinema Plus Plan) ಅನ್ನು ಹೊಂದಿದೆ. ಅವುಗಳೆಂದರೆ 49ರೂ., 199 ರೂ. ಮತ್ತು 249 ರೂ.ಗಳ ಪ್ಲ್ಯಾನ್. ಈ ಲಿಸ್ಟ್‌ನಲ್ಲಿ ಇರುವ ಅಗ್ಗದ ಪ್ಲ್ಯಾನ್ ಎಂದರೆ 49ರೂ.ಗಳ ಸ್ಟಾರ್ಟರ್ ಪ್ಯಾಕ್. ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ಲಯನ್ಸ್‌ಗೇಟ್, ಶೆಮರೂಮಿ, ಹಂಗಾಮ ಹಾಗೂ ಎಪಿಕಾನ್‌ಗೆ (Lionsgate, ShemarooMe, Hungama, EpicON) ಎಂಟ್ರಿ ಪಡೆದುಕೊಳ್ಳಬಹುದಾಗಿದೆ.
ಇನ್ನು ಬಿಎಸ್‌ಎನ್‌ಎಲ್ ಫೈಬರ್ ಬ್ರಾಡ್‌ಬ್ಯಾಂಡ್ (BSNL Fiber Broadband) ಸೇವೆಯ ಮೇಲೆ ಆಡ್-ಆನ್ ಆಗಿ ಖರೀದಿಸಬಹುದಾದ ಬಹು ಒಟಿಟಿ ಚಂದಾದಾರಿಕೆ ಪ್ಲ್ಯಾನ್‌ಗಳನ್ನು ಬಳಕೆದಾರರಿಗೆ ನೀಡುತ್ತಿರುವ ಕಂಪೆನಿ, ಗ್ರಾಹಕರು ತಿಂಗಳಿಗೆ 249 ರೂಪಾಯಿಗಳನ್ನು ಪಾವತಿಸುವ ಮೂಲಕ ತಮ್ಮ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ಒಟಿಟಿ ಪ್ಯಾಕ್ ಅನ್ನು ಆಡ್-ಆನ್ ಆಗಿ ಪಡೆಯಬಹುದು ಎಂದು ಉಲ್ಲೇಖಿಸಿದೆ.

ನೀವು 199ರೂ.ಗಳ ಪ್ಲ್ಯಾನ್ ಆಯ್ಕೆ ಮಾಡಿಕೊಂಡರೆ ಇದರಲ್ಲಿ ಜೀ5, ನೋವಿ ಲೈವ್, ಯಪ್‌ಟಿವಿ ಹಾಗೂ ಡಿಸ್ನಿ + ಹಾಟ್‌ಸ್ಟಾರ್ (ZEE5, SonyLIV, YuppTV, Disney+ Hotstar) ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಅದಾಗ್ಯೂ ಇನ್ನೂ ಹೆಚ್ಚಿನ ಸೇವೆ ಬೇಕು ಎಂದರೆ ನೀವು 249 ರೂ.ಗಳ ಪ್ಲ್ಯಾನ್‌ಕಡೆ ಗಮನಹರಿಸಬಹುದು. ಈ ಪ್ಲ್ಯಾನ್‌ನಲ್ಲಿ ಜೀ 5 ಪ್ರೀಮಿಯಂ, ಸೋನಿ ಲೈವ್ ಪ್ರೀಮಿಯಂ, ಯಪ್‌ಟಿವಿ, ಶೆಮರೂ, ಹಂಗಾಮ, ಲಯನ್‌ಗೇಟ್ ಹಾಗೂ ಡಿಸ್ನಿ + ಹಾಟ್‌ಸ್ಟಾರ್ (ZEE5 Premium, SonyLIV Premium, YuppTV, Shemaroo, Hungama, Lionsgate, Disney+ Hotstar) ಸೌಲಭ್ಯ ಪಡೆಯಬಹುದಾಗಿದೆ.
ಈ ಪ್ಲ್ಯಾನ್‌ಗಳಿಗೆ ಯಾರೆಲ್ಲಾ ಅರ್ಹರು?: ಈ ಸೇವೆ ಪಡೆದುಕೊಳ್ಳಬೇಕು ಎಂದರೆ ನೀವು ಬಿಎಸ್‌ಎನ್‌ಎಲ್ ಫೈಬರ್ ಸಂಪರ್ಕವನ್ನು (BSNL fiber connection) ಪಡೆದುಕೊಂಡಿರಬೇಕು. ಈ ಮೂಲಕ ಮೇಲೆ ತಿಳಿಸಲಾದ ಎಲ್ಲಾ ಒಟಿಟಿ ಪ್ಲ್ಯಾನ್‌ಗಳ ಚಂದಾದಾರಿಕೆಗಳನ್ನು ನಿಮ್ಮ ಫೈಬರ್ ಸಂಪರ್ಕದ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಮಾತ್ರ ಸಕ್ರಿಯಗೊಳಿಸಲಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ.

ಇನ್ನು ನಿಮ್ಮ ಬ್ರಾಡ್‌ಬ್ಯಾಂಡ್ ಬಿಲ್‌ಗೆ ಮಾತ್ರ ಮೊತ್ತವನ್ನು ಸೇರಿಸುವುದರಿಂದ ಇದಕ್ಕಾಗಿ ನೀವು ಪ್ರತ್ಯೇಕ ಬಿಲ್ ಪಾವತಿಸುವ ಅಗತ್ಯವಿಲ್ಲ ಎನ್ನುವುದನ್ನೂ ಸಹ ಬಿಎಸ್‌ಎನ್‌ಎಲ್ ತಿಳಿಸಿದೆ. ಮೇಲಿನ ಚಂದಾದಾರಿಕೆಗಳೊಂದಿಗೆ, ನೀವು ಬಹು ಡಿವೈಸ್‌ಗಳಲ್ಲಿ ಒಟಿಟಿ ಕಂಟೆಂಟ್ ಅನ್ನು ಸ್ಟ್ರೀಮ್ ಮಾಡಲು ಅನುಕೂಲ ಮಾಡಿಕೊಟ್ಟಿದ್ದು, ಇದು ನಿಮಗೆ ತಡೆರಹಿತ ವೀಕ್ಷಣೆಯ ಅನುಭವವನ್ನು ನೀಡುತ್ತದೆ.
ಬಿಎಸ್‌ಎನ್‌ಎಲ್‌ನಿಂದ ಎಚ್ಚರಿಕೆ: ಈ ನಡುವೆ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಎಚ್ಚರಿಕೆ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಕಂಪನಿಯ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ದೇಶದ ಮೂಲೆ ಮೂಲೆಯಿಂದಲೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಂದರೆ ಕಸ್ಟಮರ್ ಕೇರ್‌ನಿಂದ (Customer Care) ಯಾವುದೇ ವೈಯಕ್ತಿಕ ಮಾಹಿತಿಯನ್ನು ಪಡೆಯಲಾಗುವುದಿಲ್ಲ ಎಂದು ಬಿಎಸ್‌ಎನ್‌ಎಲ್ ಮಾಹಿತಿ ನೀಡಿದೆ. ಈ ರೀತಿ ಹೇಳಿಕೊಂಡು ಯಾರಾದರೂ ಕರೆ ಮಾಡಿದ್ರೆ ಅವರಿಂದ ಜಾಗರೂಕರಾಗಿ ಎಂದು ಎಚ್ಚರಿಕೆ ನೀಡಲಾಗಿದೆ.
ಬಿಎಸ್‌ಎನ್‌ಎಲ್‌ನ ಕಸ್ಟಮರ್ ಕೇರ್ ಏಜೆಂಟ್‌ಗಳಂತೆ ನಟಿಸುವ ಮೋಸಗಾರರು, ತಮ್ಮ ಸಿಮ್ ಸ್ವಿಚ್ ಆಫ್ ಆಗಲಿದೆ ಎಂದು ಗ್ರಾಹಕರಿಗೆ ಹೇಳುತ್ತಿದ್ದಾರೆ. ಇದಕ್ಕಾಗಿ ನೀವು ಕೆವೈಸಿ ಮಾಡಿಸಿಕೊಳ್ಳಬೇಕಿದೆ. ಇದರಲ್ಲಿ ಆಧಾರ್ ಕಾರ್ಡ್‌ನಿಂದ ಪ್ಯಾನ್ ಕಾರ್ಡ್‌ವರೆಗಿನ ಎಲ್ಲಾ ವಿವರ ನೀಡಿ ಎಂದು ಹೇಳುತ್ತಿದ್ದು, ಈ ವೇಳೆ ನೀವೇನಾದರೂ ಈ ಮಾಹಿತಿಯನ್ನು ಅವರಿಗೆ ನೀಡಿದ್ರೆ ಮೋಸ ಹೋಗೋದು ಗ್ಯಾರಂಟಿಯಾಗಿದೆ.


Click it and Unblock the Notifications








