BSNL ಗ್ರಾಹಕರಿಗೆ ಬಿಗ್ ಶಾಕ್; 4 ರೀಚಾರ್ಜ್ ಪ್ಲ್ಯಾನ್ ಸ್ಥಗಿತ, ಹೊಸ ಪ್ಲ್ಯಾನ್ ಯಾವುವು!?
ಟೆಲಿಕಾಂ ಕ್ಷೇತ್ರದಲ್ಲಿ ಆಗುತ್ತಿರುವ ತೀವ್ರಗತಿಯ ಬದಲಾವಣೆಗಳು ಕೆಲವು ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದರೆ, ಇನ್ನೂ ಕೆಲವು ಗ್ರಾಹಕರಿಗೆ ಬೇಸರ ಉಂಟಾಗುವಂತೆ ಮಾಡಲಾಗುತ್ತಿದೆ. ಯಾಕೆಂದರೆ ಬಿಎಸ್‌ಎನ್‌ಎಲ್ ಇತ್ತೀಚೆಗಷ್ಟೇ ಲಾಂಚ್ ಮಾಡಿದ್ದ ಪ್ರಮುಖ ಪ್ಲ್ಯಾನ್‌ಗಳನ್ನು ಸ್ಥಗಿತಗೊಳಿಸಿ, ಹೊಸ ಪ್ಲ್ಯಾನ್ ಘೋಷಿಸಿದೆ.
ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಅಗ್ಗದ ದರದಲ್ಲಿ ಅತ್ಯುತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಾ ಬರುತ್ತಿದೆ. ಅದರಲ್ಲೂ 5G ಸೇವೆ ನೀಡುತ್ತಿರುವ ಏರ್‌ಟೆಲ್ ಹಾಗೂ ಜಿಯೋಗೆ ಪ್ರತಿಸ್ಪರ್ಧಿಯಾಗಿದ್ದು, ವಿವಿಧ ಆಕರ್ಷಕ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಾ ಬರುತ್ತಿದೆ. ಇದೀಗ ಇದರ ಸಾಲಿಗೆ ಹೊಸ ಎರಡು ರೀಚಾರ್ಜ್ ಪ್ಲ್ಯಾನ್‌ಗಳು ಸೇರಿಕೊಳ್ಳಲಿವೆ. ಆದರೆ, ಇದರ ಬದಲಾಗಿ ನಾಲ್ಕು ರೀಚಾರ್ಜ್ ಪ್ಲ್ಯಾನ್ ಸ್ಥಗಿತವಾಗಿವೆ. ಹಾಗಿದ್ರೆ, ಯಾವ ಉದ್ದೇಶಕ್ಕೆ ಬಿಎಸ್‌ಎನ್‌ಎಲ್ ಈ ನಿರ್ಧಾರ ಮಾಡಿದೆ ಎಂಬುದನ್ನು ಇಲ್ಲಿ ಗಮನಿಸಿ.

ನಾಲ್ಕು ರೀಚಾರ್ಜ್ ಪ್ಲ್ಯಾನ್ ಸ್ಥಗಿತ
ಬಿಎಸ್‌ಎನ್‌ಎಲ್ ಭಾರತದಲ್ಲಿ 71 ರೂ, 104 ರೂ, 135 ರೂ, ಹಾಗೂ 395 ರೂ. ಗಳ ನಾಲ್ಕು ಹೊಸ ರೀಚಾರ್ಜ್ ಪ್ಯಾಕ್‌ಗಳನ್ನು ಸ್ಥಗಿತಗೊಳಿಸಿದ್ದು, ಇದರ ಬದಲಾಗಿ 269 ರೂ, ಹಾಗೂ 769 ರೂ, ಗಳ ರೀಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಇನ್ನು ಏರ್‌ಟೆಲ್ ಸಹ ಇದೀಗ ತನ್ನ ಕನಿಷ್ಠ ರೀಚಾರ್ಜ್ ದರವನ್ನು ಹೆಚ್ಚಿಗೆ ಮಾಡಿದೆ, ಜೊತೆಗೆ ಕೆಲವು ರೀಚಾರ್ಜ್ ಪ್ಲ್ಯಾನ್‌ಗಳನ್ನು ಸ್ಥಗಿತಗೊಳಿಸಿ ಹೊಸ ಪ್ಲ್ಯಾನ್ ಘೋಷಿಸಿದೆ.
ಈ ಪ್ಲ್ಯಾನ್ ಸ್ಥಗಿತಗೊಳಿಸಲು ಕಾರಣ ಏನು?
ಸಾಮಾನ್ಯವಾಗಿ ಯಾವುದೇ ಟೆಲಿಕಾಂ ಸಂಸ್ಥೆಗಳು ಹೊಸ ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದ ನಂತರ ಅದರ ಮೂಲಕ ಲಾಭ ಗಳಿಕೆ ಮಾಡಲು ಮುಂದಾಗುತ್ತವೆ. ಆದರೆ, ಬಿಎಸ್‌ಎನ್‌ಎಲ್ ಪರಿಚಯಿಸಿದ ಈ ನಾಲ್ಕೂ ಯೋಜನೆಗಳು ಸಂಸ್ಥೆಗೆ ಅಷ್ಟೇನು ಲಾಭ ನೀಡಿಲ್ಲ. ಜೊತೆಗೆ ಅಷ್ಟು ಜನಪ್ರಿಯತೆ ಸಹ ಪಡೆಯಲಿಲ್ಲ. ಈ ಪ್ರಮುಖ ಕಾರಣದಿಂದಾಗಿ ಬಿಎಸ್‌ಎನ್‌ಎಲ್ ಈ ಪ್ಲ್ಯಾನ್‌ಗಳನ್ನು ತನ್ನ ಲಿಸ್ಟ್‌ನಿಂದ ತೆಗೆದುಹಾಕಿದೆ ಎನ್ನಲಾಗಿದೆ.

4G ಗೂ ಈ ರೀಚಾರ್ಜ್ ಪ್ಲ್ಯಾನ್‌ಗೂ ಇರುವ ಸಂಬಂಧ ಏನು?
ದೇಶದಲ್ಲಿ ಈ ವರ್ಷ 4G ಸೇವೆ ನೀಡಲು ಮುಂದಾಗಿರುವ ಬಿಎಸ್‌ಎನ್‌ಎಲ್ ಈ ಮೂಲಕ ತನ್ನ ರೀಚಾರ್ಜ್ ದರವನ್ನು ಹೆಚ್ಚಿಗೆ ಮಾಡಲು ಎದುರು ನೋಡುತ್ತಿದೆ ಎನ್ನಲಾಗಿದೆ. ಜೊತೆಗೆ ಮುಂದಿನ ವರ್ಷವೇ 5G ಸೇವೆ ಯನ್ನೂ ಸಹ ನೀಡಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದು, ಹೀಗಾಗಿ ಹೊಸ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸಲು ಕಾರ್ಯತಂತ್ರ ರೂಪಿಸುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದರಂತೆ ಸ್ಥಗಿತಗೊಂಡ ರೀಚಾರ್ಜ್ ಪ್ಲ್ಯಾನ್‌ಗಳ ಬಗ್ಗೆ ಕಣ್ಣಾಡಿಸೋಣ.
71 ರೂ. ಗಳ ರೀಚಾರ್ಜ್ ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ 71 ರೂ. ಗಳ ರೀಚಾರ್ಜ್ ಪ್ಲ್ಯಾನ್ ಮೂಲಕ ಬಳಕೆದಾರರು ಒಂದು ನಿಮಿಷಕ್ಕೆ 30 ಪೈಸೆಯಂತೆ ಕರೆ ಸೌಲಭ್ಯ ಪಡೆದುಕೊಳ್ಳಬಹುದಾಗಿತ್ತು. ಜೊತೆಗೆ ಮೆಸೆಜ್‌ಗೂ ಕೂಡ ಹಣ ಪಾವತಿ ಮಾಡಬೇಕಾಗಿದ್ದು, ಯಾವುದೇ ಇತರೆ ಉಚಿತ ಪ್ರಯೋಜನಗಳು ಈ ಪ್ಲ್ಯಾನ್‌ನಿಂದ ಲಭ್ಯವಿರಲಿಲ್ಲ.
104 ರೂ. ಗಳ ರೀಚಾರ್ಜ್ ಪ್ಲ್ಯಾನ್
ಸ್ಥಗಿತಗೊಂಡ ಮತ್ತೊಂದು ಪ್ಲ್ಯಾನ್‌ನಲ್ಲಿ 104 ರೂ. ಗಳ ರೀಚಾರ್ಜ್ ಪ್ಲ್ಯಾನ್ ಸಹ ಇದೆ. ಈ ಪ್ಲ್ಯಾನ್‌ನಲ್ಲಿ ಗ್ರಾಹಕರು 18 ದಿನಗಳ ಮಾನ್ಯತೆಯೊಂದಿಗೆ ವಿಶೇಷ ರಿಯಾಯಿತಿ ಕೂಪನ್‌ಗಳು ಅದರಲ್ಲೂ 99 ರೂ.ಗಳ ಮೌಲ್ಯದ ಪ್ರಯೋಜನ ಇದರಿಂದ ಲಭ್ಯವಾಗುತ್ತಿತ್ತು. ಈ ಪ್ಲ್ಯಾನ್ ಸಹ ಗ್ರಾಹಕ ವಲಯದಲ್ಲಿ ಅಷ್ಟೇನು ಯಶಸ್ಸು ಕಾಣಲಿಲ್ಲ.
135 ರೂ. ಗಳ ರೀಚಾರ್ಜ್ ಪ್ಲ್ಯಾನ್
135 ರೂ. ಗಳ ರೀಚಾರ್ಜ್ ಪ್ಲ್ಯಾನ್ ನಲ್ಲಿ ಬಳಕೆದಾರರು ಆನ್-ನೆಟ್/ಆಫ್-ನೆಟ್ ಸೇರಿದಂತೆ 1,440 ನಿಮಿಷಗಳ ಕರೆ ಸೌಲಭ್ಯವನ್ನು ನೀಡುತ್ತಿತ್ತು. ಆದರೆ, ಇದರಲ್ಲಿ ಗ್ರಾಹಕರು ಯಾವುದೇ ಡೇಟಾವನ್ನು ಪಡೆಯಲು ಸಾಧ್ಯವಿರಲಿಲ್ಲ. ಜೊತೆಗೆ ಇದು 24 ದಿನಗಳ ಮಾನ್ಯತೆಯನ್ನು ಹೊಂದಿತ್ತು. ಹೀಗಾಗಿ ಬಳಕೆದಾರರು ಈ ರೀಚಾರ್ಜ್ ಪ್ಲ್ಯಾನ್ ಕಡೆ ಮುಖ ಮಾಡುತ್ತಿರಲಿಲ್ಲ.
395 ರೂ. ಗಳ ರೀಚಾರ್ಜ್ ಪ್ಲ್ಯಾನ್
395 ರೂ. ಗಳ ರೀಚಾರ್ಜ್ ಪ್ಲ್ಯಾನ್ ಮೂಲಕ ಬಹುಪಾಲು ಬಳಕೆದಾರರು ಹಲವು ಸೌಲಭ್ಯ ಪಡೆದುಕೊಳ್ಳುತ್ತಿದ್ದರು. ಈ ಪ್ಲ್ಯಾನ್‌ನಲ್ಲಿ 3,000 ನಿಮಿಷಗಳ ಆನ್-ನೆಟ್ ಕರೆ ಮತ್ತು 1,800 ನಿಮಿಷಗಳ ಆಫ್-ನೆಟ್ ಸೌಲಭ್ಯ ಇದರಿಂದ ಲಭ್ಯವಾಗುತ್ತಿದ್ದು, ಈ ಮೂಲಕ ನಿಮಿಷಕ್ಕೆ 20 ಪೈಸೆ ಪಾವತಿ ಮಾಡಿದಂತೆ ಆಗುತ್ತಿತ್ತು. ಇದರೊಂದಿಗೆ ದಿನಕ್ಕೆ 2GB ಡೇಟಾವನ್ನು 71 ದಿನಗಳ ಮಾನ್ಯತೆಯೊಂದಿಗೆ ನೀಡಲಾಗುತ್ತಿದ್ದದ್ದು ವಿಶೇಷ.

269 ರೂ. ಗಳ ಹೊಸ ರೀಚಾರ್ಜ್ ಪ್ಲ್ಯಾನ್
269 ರೂ. ಗಳ ಹೊಸ ರೀಚಾರ್ಜ್ ಪ್ಲ್ಯಾನ್ ನಲ್ಲಿ ಬಳಕೆದಾರರು ಫೆಸ್ಟಿವಲ್ ಧಮಾಕಾ ಕೊಡುಗೆಯನ್ನು ಪಡೆದುಕೊಳ್ಳಬಹುದಾಗಿದೆ. ಅದರಂತೆ ಪ್ರತಿದಿನ 2GB ಡೇಟಾ, 100 ಮೆಸೆಜ್‌ಗಳು, ಬಿಎಸ್‌ಎನ್‌ಎಲ್ ಟ್ಯೂನ್‌ಗಳು, ಝಿಂಗ್ ಆಪ್‌ಗೆ ಪ್ರವೇಶ ಹಾಗೂ ರೋಸ್ ನೌ ಚಂದಾದಾರಿಕೆ ಸೇರಿದಂತೆ ಇನ್ನಿತರೆ ಸೌಲಭ್ಯ ಈ ಸಿಗಲಿದೆ.
769 ರೂ. ಗಳ ರೀಚಾರ್ಜ್ ಪ್ಲ್ಯಾನ್
769 ರೂ. ಗಳ ಪ್ಲ್ಯಾನ್‌ನಲ್ಲಿ ಅನಿಯಮಿತ ಕರೆ, 2GB ಡೇಟಾ, 100 ಎಸ್‌ಎಮ್‌ಎಸ್ ಸೇವೆ, ಬಿಎಸ್‌ಎನ್‌ಎಲ್ ಟ್ಯೂನ್ ಸೌಲಭ್ಯ, ಲೋಕಧುನ್ ಆಪ್‌ಗೆ ಪ್ರವೇಶ, ಜಿಂಗ್ ಅಪ್ಲಿಕೇಶನ್ ಬಳಕೆಗೆ ಅವಕಾಶ ಹಾಗೂ ಎರೋಸ್ ನೌ ಮೂಲಕ ಮನರಂಜನೆ ಪಡೆದುಕೊಳ್ಳಬಹುದಾಗಿದೆ. ಈ ಪ್ಲ್ಯಾನ್‌ನ ಮಾನ್ಯತೆ 90 ದಿನಗಳ ವರೆಗೆ ಇರಲಿದೆ.


Click it and Unblock the Notifications








