ಕೇಂದ್ರ ಬಜೆಟ್ 2023: ತಂತ್ರಜ್ಞಾನ ವಲಯಕ್ಕೆ ನೀಡಿರುವ ಕೊಡುಗೆಗಳ ಪೂರ್ಣ ಮಾಹಿತಿ ಇಲ್ಲಿದೆ
ಇದು ಅಮೃತ್ ಕಾಲದ ಮೊದಲ ಬಜೆಟ್ ಎನ್ನುವ ಮಾತುಗಳೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ ಕೊನೆಯ ಪೂರ್ಣ ಬಜೆಟ್‌ನ ಮಂಡನೆಯನ್ನು ಪ್ರಾರಂಭಿಸಿದರು. ಕೇಂದ್ರ ಬಜೆಟ್ 2023 ಮೂಲಕ ಎಲ್ಲ ವರ್ಗದ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದು, ದೇಶದ ಪ್ರಮುಖ ವಲಯಗಳಿಗೆ ಅತ್ಯುತ್ತಮ ಕೊಡುಗೆ ಘೋಷಿಸಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ ವಲಯ, ಪ್ರವಾಸೋದ್ಯಮ ವಲಯ, ಕೃಷಿ ವಲಯ, ಉದ್ಯೋಗ, ಬ್ಯಾಂಕಿಂಗ್ ವಲಯ ಸೇರಿದಂತೆ ತಂತ್ರಜ್ಞಾನ (Technology) ವಲಯಕ್ಕೂ ಮಹತ್ತರ ಕೊಡುಗೆಗಳನ್ನು ಘೋಷಣೆ ಮಾಡಿದ್ದು, ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿರುವುದು ಕಾಣಿಸುತ್ತದೆ. ಹಾಗಾದರೆ ಕೇಂದ್ರ ಬಜೆಟ್ 2023 ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಂತ್ರಜ್ಞಾನ ವಲಯಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
AI ಸೆಂಟರ್ ಸ್ಥಾಪನೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ಸೇವೆಗಳಿಗೆ ಹಾಗೂ ಕೆಲಸಗಳಿಗೆ ಡಿಜಿಟಲ್ ಟಚ್ ನೀಡಿದ್ದಾರೆ. ಆರೋಗ್ಯ ಕ್ಷೇತ್ರ, ಶಿಕ್ಷಣ ವಲಯ ಹಾಗೂ ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ನೀಡಿದ್ದು, ಈ ಕ್ಷೇತ್ರಗಳಿಗೆ AI ಸೆಂಟರ್ ಸ್ಥಾಪಿಸುವ ಬಗ್ಗೆ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ಕೆವೈಸಿ ಸರಳೀಕರಣ
ಯಾವುದೇ ಸರ್ಕಾರಿ ಹಾಗೂ ಪ್ರಮುಖ ಸೇವೆಗಳಿಗೆ ಕೆವೈಸಿ ಅಗತ್ಯ ಇದೆ. ಈ ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮನ್ ಕೆವೈಸಿ ಬಜೆಟ್‌ನಲ್ಲಿ ಕೆವೈಸಿ ದೃಢೀಕರಣ ಪ್ರಕ್ರಿಯೆಯನ್ನು ಸರಳೀಕರಣ ಮಾಡುವುದಾಗಿ ಘೋಷಿಸಿದ್ದಾರೆ.

ಪ್ಯಾನ್ ಕಾರ್ಡ್ ಪ್ರಮುಖ ಗುರುತಿನ ಚೀಟಿ
ಸರ್ಕಾರದ ಎಲ್ಲ ಸೇವೆ ಹಾಗೂ ಪ್ರಮುಖ ಸೌಲಭ್ಯಗಳನ್ನು ಪಡೆದುಕೊಳ್ಳಲು ಜನರು ಪ್ಯಾನ್ ಕಾರ್ಡ್ ಒಂದು ಪ್ರಮುಖ ಗುರುತಿನ ಚೀಟಿ ಆಗಿ ಬಳಕೆ ಮಾಡಬಹುದು ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ
ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಯುವ ಜನರಿಗೆ ಹೆಚ್ಚಿನ ನೆರವು ನೀಡುವುದು ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಯುವ ಜನರಿಗೆ ರೋಬೋಟ್, ಡ್ರೋನ್, ಕೋಡಿಂಗ್ ಕುರಿತಾದ ಕೌಶಲ್ಯಗಳಿಗೆ ಉತ್ತೇಜನ ನೀಡುವುದು.
ಮೊಬೈಲ್ ಸುಂಕ ಇಳಿಕೆ
ಗ್ಯಾಡ್ಜೆಟ್‌ಗಳ ಆಮದು ಸುಂಕದ ದರವನ್ನು 21 ರಿಂದ 12 ಕ್ಕೆ ಇಳಿಕೆ ಘೋಷಿಸಿದ್ದು, ಜನರು ಗಮನ ಸೆಳೆದಿದ್ದಾರೆ. ಮೊಬೈಲ್, ಸ್ಮಾರ್ಟ್ ಟಿವಿ, ಕ್ಯಾಮೆರಾ ಲೆನ್ಸ್, ಲಿಥೀಯಮ್ ಬ್ಯಾಟರಿ, ಟಿವಿ ಪ್ಯಾನೆಲ್, ಮೊಬೈಲ್ ಬಿಡಿಭಾಗಗಳು ಸೇರಿದಂತೆ ಇತರೆ ಉತ್ಪನ್ನಗಳ ಸುಂಕ ಕಡಿತ ಮಾಡಿದ್ದಾರೆ.

ಪ್ರವಾಸೋದ್ಯಮ ವಲಯಕ್ಕೆ ಡಿಜಿಟಲ್ ಟಚ್
ಪ್ರವಾಸೋದ್ಯಮ ವಲಯಕ್ಕೆ ಭಾರೀ ಉತ್ತೇಜನ ನೀಡುವ ಉದ್ದೇಶದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 'ದೇಖೋ ಅಪ್ನಾ ದೇಶ' ಯೋಜನೆಯನ್ನು ಘೋಷಿಸಿದ್ದಾರೆ. ಹಾಗೆಯೇ ಪ್ರವಾಸೋದ್ಯಮ ವಲಯಕ್ಕೆ ಡಿಜಿಟಲ್ ಟಚ್ ನೀಡುವ ಮಾತುಗಳನ್ನಾಡಿದ್ದು, ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಪ್ಲಿಕೇಶನ್ ಅಭಿವೃದ್ದಿ ಪಡಿಸಲಾಗುವುದು ಎಂದಿದ್ದಾರೆ.
ಡಿಜಿಟಲ್ ಪೇಮೆಂಟ್‌ಗೆ ಉತ್ತೇಜನ
ಡಿಜಿಟಲ್ ಪಾವತಿಗಳಿಗೆ ಭಾರೀ ಉತ್ತೇಜನ ನೀಡುವುದಾಗಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಯುಪಿಐ ಪೇಮೆಂಟ್ ದೇಶದಲ್ಲಿ ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳಲಿದೆ. ಹಾಗೆಯೇ ಬ್ಯಾಂಕ್ ಖಾತೆಗಳ ಬಡ್ಡಿ ದರಗಳಲ್ಲಿ ಹೆಚ್ಚಳ ಘೋಷಿಸಿದ್ದಾರೆ.
5G ಅಭಿವೃದ್ಧಿಗೆ 100 ಲ್ಯಾಬ್
ಇಂಜನಿಯರಿಂಗ ಕಾಲೇಜುಗಳಲ್ಲಿ 5G ಅಭಿವೃದ್ಧಿಗಾಗಿ 100 ಲ್ಯಾಬ್ ಸ್ಥಾಪನೆ ಮಾಡುವುದು ಎಂದು ವಿತ್ತ ಸಚಿವರು ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.
ಇ-ಕೋರ್ಟ್
ಡಿಜಿಟಲ್ ರೂಪಕ್ಕೆ ಹೆಚ್ಚಿನ ಮಹತ್ವ ನೀಡುವ ಹಿನ್ನಲೆ, ಕೇಂದ್ರ ಬಜೆಟ್ 2023 ನಲ್ಲಿ ಇ-ಕೋರ್ಟ್‌ಗಾಗಿ ಸುಮಾರು 7 ಸಾವಿರ ಕೋಟಿ ವ್ಯಯಿಸುವುದಾಗಿ ತಿಳಿಸಿದ್ದಾರೆ.


Click it and Unblock the Notifications








