Budget 2023: ಸಾಂಪ್ರದಾಯಿಕ ಶೈಲಿಯ ಬಜೆಟ್ ಮಂಡನೆಗೆ ಫುಲ್ ಸ್ಟಾಪ್; ಟ್ಯಾಬ್ ಮೂಲಕ ಮಂಡನೆ
ಭಾರತದ ಇದೀಗ ಇತರೆ ರಾಷ್ಟ್ರಗಳಿಗಿಂತ ವೇಗವಾಗಿ ಡಿಜಿಟಲ್ ಕಡೆ ಮುಖ ಮಾಡುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಭಾರತದಲ್ಲಿ ಹಲವಾರು ಹೊಸ ಶೈಲಿಯ ತಂತ್ರಜ್ಞಾನಗಳು ಅಭಿವೃದ್ಧಿಯಾಗಿವೆ. ಹಾಗೆಯೇ ಫೋಲ್ಡಬಲ್ ಡಿವೈಸ್‌ಗಳ ಆರ್ಭಟ ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದು, ಇದರ ನಡುವೆ ಕೆಲವು ದಿನಗಳಿಂದ ಎಐ ಟೂಲ್ಸ್ ಸಹ ಸಾಕಷ್ಟು ಸದ್ದು ಮಾಡುತ್ತಿವೆ. ಈ ಎಲ್ಲಾ ಬೆಳವಣಿಗೆ ನಡುವೆ ಈಗ ಬಜೆಟ್ ಮಂಡನೆಯೂ ಸಹ ಭಾರತೀಯರ ಗಮನ ಸೆಳೆದಿದೆ.

ಹೌದು, ಬಜೆಟ್ ಮಂಡನೆ ದೇಶದ ಆರ್ಥಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಂತೆ. ಈ ಮೂಲಕ ದೇಶದ ಮುಂದಿನ ಪ್ರಗತಿ ಹೇಗೆ ಇರಲಿದೆ ಎನ್ನುವುದನ್ನು ಜನಸಾಮಾನ್ಯರು ಕಂಡುಕೊಳ್ಳಬಹುದು. ಅದರಂತೆ ಇತರೆ ವಲಯಗಳಿಗೆ ನೀಡಲಾಗುವ ಸಹಾಯದಂತೆ ತಂತ್ರಜ್ಞಾನ ವಲಯಕ್ಕೂ ಈ ಸಲ ಹೆಚ್ಚಿನ ಅನುಕೂಲಕರ ವಾತಾವರಣ ಲಭ್ಯವಾಗಲಿದೆ. ಆದರೆ, ಇದೆಲ್ಲಕ್ಕೂ ಮಿಗಿಲಾದ ವಿಷಯ ಎಂದರೆ ಬಜೆಟ್ ಓದುವ ಪ್ರಕ್ರಿಯೆ ಡಿಜಿಟಲ್ ಆಗಿರುವುದು.
ಸ್ವಾತಂತ್ರ್ಯ ನಂತರದ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಬಜೆಟ್ ಗೆ ಪ್ರಮುಖವಾದ ಸ್ಥಾನ ನೀಡಲಾಗುತ್ತದೆ. ಬಜೆಟ್ ಬಗ್ಗೆ ಉಲ್ಲೇಖಿಸಲಾದ ಮಾಹಿತಿಯನ್ನು ಒಂದು ಭದ್ರ ಪೆಟ್ಟಿಗೆಯಲ್ಲಿ ಇರಿಸಿ ಅದನ್ನು ಸದನದಲ್ಲಿ ಓದುವ ಪ್ರಕ್ರಿಯೆ ಸಾಮಾನ್ಯವಾಗಿತ್ತು. ಆದರೆ, ಈ ಸಂಪ್ರದಾಯವನ್ನು ನಿರ್ಮಲಾ ಶೀತಾರಾಮನ್ ಅವರು ಬದಲಾಯಿಸಿದ್ದು, ಡಿಜಿಟಲ್ ವ್ಯವಸ್ಥೆಗೆ ಮುಖ ಮಾಡಿದ್ದಾರೆ.
'ಬಹಿ-ಖಾತಾ' ಬದಲಿಗೆ ಡಿಜಿಟಲ್ ಡಿವೈಸ್
ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 5 ನೇ ಬಜೆಟ್ ಇದಾಗಿದೆ. ಆದರೆ, ಈ ಬಾರಿ ಸೂಟ್‌ಕೇಸ್ ಸಂಪ್ರದಾಯವಿಲ್ಲದೆ ಬಜೆಟ್ ಮಂಡನೆ ಮಾಡುತ್ತಿರುವುದು ವಿಶೇಷವಾಗಿದ್ದು, ಬದಲಾಗಿ ಇ ಬಜೆಟ್ ಮಂಡನೆಯಾಗುತ್ತಿದೆ. ಇದಕ್ಕಾಗಿ ಬಹಿ-ಖಾತಾ ಸಂಪ್ರದಾಯಕ್ಕೆ ಗುಡ್‌ಬೈ ಹೇಳಿದ್ದು, ಟ್ಯಾಬ್ ಮೂಲಕ ಸೀತಾರಾಮನ್ ಅವರು ಬಜೆಟ್ ಪ್ರತಿ ಮಂಡನೆ ಮಾಡಲು ಮುಂದಾಗಿದ್ದಾರೆ.

ಈ ಹಿಂದೆ ಬಜೆಟ್ ಪ್ರತಿ ತುಂಬಿದ್ದ ಸೂಟ್‌ಕೇಸ್ ಬಹಳ ವಿಭಿನ್ನವಾಗಿರುತ್ತಿದ್ದವು
ಯೂನಿಯನ್ ಬಜೆಟ್ ಮಂಡನೆ ಮಾಡುವಾದ ಪ್ರತಿ ಸಾರಿಯೂ ವಿಧವಿಧವಾದ ಹೊಸ ವಿಷಯಗಳು ಸದ್ದು ಮಾಡುತ್ತಿದ್ದವು. ಅದರಲ್ಲೂ ಬ್ರೀಫ್‌ಕೇಸ್ ಅಥವಾ ಗಟ್ಟಿಯಾದ ಚರ್ಮದ ಚೀಲಗಳು ಬಜೆಟ್‌ಗಿಂತ ಹೆಚ್ಚು ಆಕರ್ಷಕವಾಗಿ ಇರುತ್ತಿದ್ದವು. ಇದಕ್ಕೆ 2019 ರಲ್ಲಿ ವಿದಾಯ ಹೇಳಿದ್ದ ಸಚಿವರು ಬಹಿ-ಖಾತಾ ಮೂಲಕ ಬಜೆಟ್ ಮಂಡಿಸಲಾಗಿತ್ತು. ಆ ವೇಳೆ ಬಹಿ-ಖಾತಾ ವಿಷಯ ಭಾರೀ ಸದ್ದು ಮಾಡಿತ್ತು. ಇದಾದ ನಂತರ ಪ್ರತಿ ಬಾರಿಯೂ ಹೊಸ ಬೆಳವಣಿಗೆ ಸಂಭವಿಸುತ್ತಾ ಬರುತ್ತಿವೆ.
ಏನಿದು ಬಹಿ-ಖಾತಾ?
ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಇತಿಹಾಸದಲ್ಲಿ ಬಹಿ-ಖಾತಾ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಯಾಕೆಂದರೆ ದಶಕಗಳಿಂದ, ಯಾವುದೇ ಖಾತೆಗಳನ್ನು ನಿರ್ವಹಿಸುವ ಮತ್ತು ಬಿಲ್‌ಗಳ ದಾಖಲೆಯನ್ನು ಶೇಖರಿಸುವ ಭಾರತೀಯ ವಿಧಾನವನ್ನು ಬಹಿ-ಖಾತಾ ದಲ್ಲಿ ಮಾಡಲಾಗುತ್ತಿತ್ತು. ಅದರಲ್ಲೂ ವ್ಯಾಪಾರಿಗಳು, ನಾವಿಕರು ಮತ್ತು ಸಣ್ಣ ಅಂಗಡಿಯವರು ತಮ್ಮ ಡೇಟಾವನ್ನು ಸಂರಕ್ಷಿಸುವ ಈ ವಿಧಾನವನ್ನು ಇಂದಿಗೂ ಬಹುಪಾಲು ಕಡೆ ಉಳಿಸಿಕೊಂಡಿದ್ದಾರೆ.

ಕೊರೊನಾ ನಂತರ ಬದಲಾದ ಬಜೆಟ್ ಮಂಡನೆ ಶೈಲಿ
2021 ರಲ್ಲಿ ಕೊರೊನಾದಿಂದ ಪ್ರತಿಯೊಬ್ಬರ ಸುರಕ್ಷತೆ ಕಾಪಾಡಿಕೊಳ್ಳುವ ಜವಬ್ದಾರಿ ಸರ್ಕಾರವು ಮೇಲಿತ್ತು. ಇದರ ಸೂಚಕವಾಗಿಯೇ ರಾಷ್ಟ್ರೀಯ ಲಾಂಛನವನ್ನು ಹೊಂದಿರುವ ಕೆಂಪು ಬಣ್ಣದ ಕವರ್‌ನಲ್ಲಿ ಸುತ್ತಿದ ಡಿಜಿಟಲ್ ಟ್ಯಾಬ್ಲೆಟ್ ಅನ್ನು ಹಿಡಿದುಕೊಂಡು ಹಣಕಾಸು ಸಚಿವರು ಮೊದಲ ಕಾಗದರಹಿತ ಬಜೆಟ್‌ನೊಂದಿಗೆ ಕಾಣಿಸಿಕೊಂಡರು.
ಅದೇ ವರ್ಷ, ಸಚಿವರು ಸಂಸತ್ತಿನ ಸದಸ್ಯರು ಮತ್ತು ಸಾರ್ವಜನಿಕರಿಂದ ಬಜೆಟ್ ದಾಖಲೆಗಳ ತೊಂದರೆ-ಮುಕ್ತ ಪ್ರವೇಶಕ್ಕಾಗಿ 'ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್' ಅನ್ನು ಪ್ರಾರಂಭಿಸಿದರು. ಮುಂದಿನ ವರ್ಷ ಅದೇ ಪ್ರವೃತ್ತಿಯನ್ನು ಅನುಸರಿಸಿ, ಕೇಂದ್ರ ಬಜೆಟ್ 2022 ಸಹ ಕಾಗದರಹಿತ ಬಜೆಟ್ ಆಗಿತ್ತು.
ಇನ್ನು ಇಂದಿನ ಬಜೆಟ್ ಘೋಷಣೆ ಮುಗಿದ ನಂತರ ಬಜೆಟ್ ದಾಖಲೆಗಳು ಆಂಡ್ರಾಯ್ಡ್ ಮತ್ತು ಆಪಲ್ ಓಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿಯೇ ಓದಬಹುದಾಗಿದೆ. ಇದಕ್ಕಾಗಿ ಯೂನಿಯನ್ ಬಜೆಟ್ ಮೊಬೈಲ್ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು.


Click it and Unblock the Notifications








