Railway station;ಕಳ್ಳರು ರೈಲು ನಿಲ್ದಾಣಕ್ಕೆ ಬಂದ್ರೆ ಸಾಕು ಇದು ಸುಲಭವಾಗಿ ಪತ್ತೆ ಮಾಡಿಬಿಡುತ್ತದೆ,ಏನಿದುಹೊಸ ಭದ್ರತಾ ವ್ಯವಸ್ಥೆ?
ಕಳ್ಳತನ ಹೆಚ್ಚಾಗಿ ನಡೆಯುವ ಜಾಗ ಎಂದರೆ ರೈಲು ನಿಲ್ದಾಣ (Railway station) ಅಥವಾ ರೈಲಿನಲ್ಲಿ ಸಂಚಾರ ಮಾಡುವ ಸಂದರ್ಭ. ಈ ಕಾರಣಕ್ಕೆ ಜೇಬುಗಳ್ಳರಿದ್ದಾರೆ ಎಚ್ಚರಿಕೆ, ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಎಂಬ ಸ್ಟಿಕ್ಕರ್‌ಗಳನ್ನು ಅಲ್ಲಲ್ಲಿ ಕಾಣಬಹುದು. ಆದರೆ, ಇನ್ಮುಂದೆ ಕಳ್ಳರು ರೈಲ್ವೇ ನಿಲ್ದಾಣಕ್ಕೆ ಬಂದ್ರೆ ಸಾಕು ಅಧಿಕಾರಿಗಳಿಗೆ ಸುಲಭವಾಗಿ ತಿಳಿದುಬಿಡುತ್ತದೆ.
ಹೌದು, ರೈಲು ಪ್ರಯಾಣವನ್ನು ಸರಳಿಗೊಳಿಸಲು ಹಾಗೂ ಜನರು ಯಾವುದೇ ಸಮಸ್ಯೆ ಇಲ್ಲದೆ ಸಂಚಾರ ಮಾಡುವ ಹಾಗೆ ಅನುಕೂಲ ಮಾಡಿಕೊಡಲು ಮುಂದಾಗಿರುವ ರೈಲ್ವೇ ಇಲಾಖೆ ಹೊಸ ಸೌಲಭ್ಯಕ್ಕೆ ಮುಂದಾಗಿದೆ. ಅಂದರೆ ವಿಶೇಷ ಫೀಚರ್ಸ್ ಇರುವ ಕ್ಯಾಮೆರಾಗಳನ್ನು ಬಳಕೆ ಮಾಡಲಿದೆ. ಈ ಮೂಲಕ ಕಳ್ಳರನ್ನು ಸುಲಭವಾಗಿ ಪತ್ತೆ ಮಾಡಲು ಅಥವಾ ಇತರೆ ಯಾವುದೇ ದುರಂತಗಳು ನಡೆಯದಂತೆ ಮಾಡಲು ಈ ಕ್ಯಾಮೆರಾಗಳು ಸಹಾಯ ಮಾಡಲಿವೆ. ಹಾಗಿದ್ರೆ ಯಾವುದು ಈ ಕ್ಯಾಮೆರಾ? ಈ ಕ್ಯಾಮೆರಾದಿಂದ ಕಳ್ಳರನ್ನು ಪತ್ತೆ ಮಾಡುವುದು ಹೇಗೆ ?ಎಂಬ ಮಾಹಿತಿ ಇಲ್ಲಿದೆ ನೋಡಿ.

364 ರೈಲ್ವೆ ನಿಲ್ದಾಣಗಳಲ್ಲಿ ಫೇಸ್ ರೆಕಗ್ನಿಷನ್ ಕ್ಯಾಮೆರಾ: ಈ ವಿಶೇಷ ಕ್ಯಾಮೆರಾಗಳನ್ನು ಈಗಾಗಲೇ ಸಾಕಷ್ಟು ಜನ ಸಂದಣಿ ಜಾಗಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಅದರಂತೆ ಈಗ ರೈಲ್ವೇ ನಿಲ್ದಾಣಗಳಲ್ಲಿ ಇವು ಕಾರ್ಯನಿರ್ವಹಿಲಿದ್ದು, ಯಾವ ವ್ಯಕ್ತಿಯ ಮಾಹಿತಿ ಡೇಟಾಬೇಸ್‌ನಲ್ಲಿ ಇರುತ್ತದೋ ಆ ವ್ಯಕ್ತಿ ರೈಲ್ವೇ ನಿಲ್ದಾಣದಲ್ಲಿ ಏನಾದರೂ ಕಾಣಿಸಿಕೊಂಡರೆ ತಕ್ಷಣವೇ ಅವನನ್ನು ಪತ್ತೆ ಮಾಡುತ್ತವೆ. ಇದರೊಂದಿಗೆ ಆತ ಏನಾದರೂ ಗಂಭೀರ ಅಪರಾಧಗಳಲ್ಲಿ ಬಾಗಿಯಾಗಿದ್ದರೆ ಸಂಬಂಧಿಸಿದ ಠಾಣೆಗೆ ಮಾಹಿತಿ ರವಾನಿಸುವ ಕೆಲಸ ಮಾಡುತ್ತವೆ.
ಇನ್ನು ಸೆಂಟ್ರಲ್ ರೈಲ್ವೇಯ 364 ರೈಲು ನಿಲ್ದಾಣಗಳಲ್ಲಿ ಫೇಸ್ ರೆಕಗ್ನಿಷನ್ ಸೌಲಭ್ಯ (Face recognition) ಹೊಂದಿರುವ 3,652 ಕ್ಯಾಮೆರಾಗಳು ಸೇರಿದಂತೆ 6,122 ಕ್ಲೋಸ್ಡ್ ಸರ್ಕ್ಯೂಟ್ ಟಿವಿ (CCTV) ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಕೇಂದ್ರ ರೈಲ್ವೇ ಮಾಹಿತಿ ನೀಡಿದೆ. ಈ ಸಂಬಂಧ ರೈಲ್ವೆ ಮಂಡಳಿಯು ರೈಲ್‌ಟೆಲ್‌ನೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ ಎಂದು ತಿಳಿದುಬಂದಿದೆ.
ಹಾಗೆಯೇ ಮುಂಬೈ ಸಬರ್ಬನ್ ನೆಟ್‌ವರ್ಕ್‌ನ ಎಲ್ಲಾ ನಿಲ್ದಾಣಗಳನ್ನು ಒಳಗೊಂಡಂತೆ ಸೆಂಟ್ರಲ್ ರೈಲ್ವೇ ನಿಲ್ದಾಣಗಳು ಶೀಘ್ರದಲ್ಲೇ ಫೇಸ್ ರೆಕಗ್ನಿಷನ್ ಕ್ಯಾಮೆರಾಗಳನ್ನು (Face recognition camera) ಹೊಂದಲಿವೆ ಎನ್ನಲಾಗಿದೆ. ಈ ಮೂಲಕ ವಾಂಟೆಡ್ ಅಪರಾಧಿಗಳನ್ನು ಬಂಧಿಸಲು ಮತ್ತು ಜನನಿಬಿಡ ಪ್ರದೇಶಗಳನ್ನು ಸುಲಭವಾಗಿ ನಿರ್ವಹಿಸಲು ಸಹಾಯ ಆಗುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ದಾದರ್, ಕುರ್ಲಾ, ಥಾಣೆ, ಲೋಕಮಾನ್ಯ ತಿಲಕ್ ಟರ್ಮಿನಸ್ ಮತ್ತು ಕಲ್ಯಾಣ್‌ನಂತಹ ಕೆಲವು ನಿಲ್ದಾಣಗಳು ಈಗಾಗಲೇ ಇಂಟಿಗ್ರೇಟೆಡ್ ಸೆಕ್ಯುರಿಟಿ ಸಿಸ್ಟಮ್‌ಗಳನ್ನು (ISS) ಹೊಂದಿರುವುದರಿಂದ ಈ ಕ್ಯಾಮೆರಾಗಳನ್ನು ಇಲ್ಲಿ ಅಳವಡಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಈ ಮೂಲಕ ಹಳೆಯ ಕ್ಯಾಮೆರಾಗಳಿಂದಲೇ ಈ ಪ್ರಯೋಜನ ಪಡೆಯಲು ಸಂಸ್ಥೆ ಮುಂದಾಗಿದೆ.
ಹಾಗೆಯೇ ಈ ಫೇಸ್ ರೆಕಗ್ನಿಷನ್ ಸಿಸ್ಟಂಗಳು, ವಿಡಿಯೋ ಅನಾಲಿಟಿಕ್ಸ್, ವಿಡಿಯೋ ಮ್ಯಾನೇಜ್‌ಮೆಂಟ್ ಸಿಸ್ಟಮ್ ಹೊಂದಿರುವ ಕ್ಯಾಮೆರಾಗಳಾಗಿದ್ದು, ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುತ್ತದೆ, ಅಪರಾಧವನ್ನು ನಿಯಂತ್ರಿಸುತ್ತದೆ, ಕಾನೂನು ದುರುಪಯೋಗ ಮಾಡುವವರನ್ನು ತಡೆಯುತ್ತದೆ ಮತ್ತು ರೈಲ್ವೆ ನಿಯಮಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡುತ್ತದೆ. ಅಷ್ಟೇ ಅಲ್ಲದೆ ಈ ಕ್ಯಾಮೆರಾಗಳು ಸಮಗ್ರ ಕಣ್ಗಾವಲು ಕಡೆಗೆ ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ ಎಂದು ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.

ಈ ಕ್ಯಾಮೆರಾಗಳು ರೆಟಿನಾ ಅಥವಾ ಹಣೆಯಂತಹ ಮುಖದ ವಿವಿಧ ಭಾಗಗಳ ಆಧಾರದಲ್ಲಿಯೇ ವ್ಯಕ್ತಿಗಳನ್ನು ಗುರುತಿಸುವ ಕೆಲಸ ಮಾಡುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೊತೆಗೆ ಪ್ರತಿ ಹೆಚ್‌ಡಿ ಕ್ಯಾಮೆರಾವು ಸರಿಸುಮಾರು 750 GB ಡೇಟಾವನ್ನು ಬಳಕೆ ಮಾಡಲಿದೆ. 4K ಕ್ಯಾಮೆರಾಗಳು ತಿಂಗಳಿಗೆ 3TB ಡೇಟಾವನ್ನು ಬಳಕೆ ಮಾಡುತ್ತವೆ. ಪ್ರಮುಖ ವಿಡಿಯೋಗಳನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಲೂ ಸಹ ಇವು ಅನುಮತಿಸುತ್ತವೆ. ಉಳಿದಂತೆ ಇವು 30 ದಿನಗಳ ವರೆಗೆ ಸ್ಟೋರೇಜ್ ಮಾಡಲಿವೆ.


Click it and Unblock the Notifications








