CES 2024: ವರ್ಷದ ಅತಿದೊಡ್ಡ ಟೆಕ್ ಶೋ... ಏನೆಲ್ಲಾ ಬಿಡುಗಡೆ ಆಗಲಿವೆ?
ಇಡೀ ಜಗತ್ತೇ ಕಾತುರದಿಂದ ಕಾಯುತ್ತಿರುವ CES 2024 ಕ್ಕೆ ಕ್ಷಣಗಣನೆ ಆರಂಭ ಆಗಿದೆ. ಅಂದರೆ ಜನವರಿ 9 ರಂದು ಆರಂಭ ಆಗುವ ಈ ಕಾರ್ಯಕ್ರಮ ಜನವರಿ 12 ರವರೆಗೆ ನಡೆಯಲಿದೆ. ಲಾಸ್ ವೇಗಾಸ್‌ನಲ್ಲಿ ವಾರ್ಷಿಕ ಟೆಕ್ ವ್ಯಾಪಾರ ಪ್ರದರ್ಶನವು ಜರುಗಲಿದ್ದು, ಈ ವೇಳೆ ಟೆಕ್ ಲೋಕದ ಹೊಸ ಹೊಸ ಅನ್ವೇಷಣೆ ಅನಾವರಣ ಆಗಲಿದೆ.
ಹೌದು, ಪ್ರತಿವರ್ಷವೂ ಈ ಗ್ರಾಹಕ ಎಲೆಕ್ಟ್ರಾನಿಕ್ಸ್ ಪ್ರದರ್ಶನ ಭರ್ಜರಿಯಾಗಿ ನಡೆಯಲಿದ್ದು, ಈ ವರ್ಷ ಜನರಿಗೆ ದೊಡ್ಡ ಕುತೂಹಲವನ್ನು ಉಂಟು ಮಾಡಿದೆ. ಅದರಂತೆ ಭಿನ್ನ ಶೈಲಿ ಹಾಗೂ ವಿಶೇಷ ಫೀಚರ್ಸ್ ಆಯ್ಕೆ ಇರುವ ಟಿವಿಗಳು, ಸ್ಮಾರ್ಟ್ ಹೋಮ್ ಗ್ಯಾಜೆಟ್‌ಗಳು ಮತ್ತು ಇನ್ನೂ ಹೆಚ್ಚಿನದನ್ನು ವರ್ಷದ ಅತಿದೊಡ್ಡ ಟೆಕ್ ಶೋನಲ್ಲಿ ನಿರೀಕ್ಷಿಸಬಹುದಾಗಿದೆ. ಹಾಗಿದ್ರೆ ತಡಯಾಕೆ ಬನ್ನಿ ಯಾವೆಲ್ಲಾ ಹೊಸ ಹೊಸ ಗ್ಯಾಜೆಟ್‌ಗಳು ಈ ವೇಳೆ ಕಾಣಿಸಿಕೊಳ್ಳಬಹುದು ಅನ್ನೋದನ್ನು ನೋಡೋಣ.

CES 2024: OLED ಟಿವಿಗಳು, ಮಾನಿಟರ್‌ಗಳು ಸೇರಿದಂತೆ ಭಿನ್ನ ಫೀಚರ್ಸ್ ಆಯ್ಕೆಯ ಸ್ಮಾರ್ಟ್ ಡಿವೈಸ್‌ಗಳು ಅನಾವರಣ ಆಗಲಿದ್ದು, ಈಗಾಗಲೇ ಎಲ್‌ಜಿ ಹಾಗೂ ಸ್ಯಾಮ್‌ಸಂಗ್ ತಮ್ಮ ಹೊಸ ಡಿಸ್‌ಪ್ಲೇಗಳ ಬಗ್ಗೆ ಘೋಷಣೆ ಮಾಡಿದೆ. ಆದರೆ, ಈ ಸೋನಿ ಯಾವುದೇ ಹೊಸ ಟಿವಿಗಳನ್ನು ಅನಾವರಣ ಮಾಡುವುದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಇದರೊಂದಿಗೆ
ಎನ್ವಿಡಿಯಾ RTX 40 ಸರಣಿಯ ಸೂಪರ್ ಕಾರ್ಡ್‌ಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಜೊತೆಗೆ ಈ ವೇಳೆ AMD RX 7600 XT GPU ಅನ್ನು ಪ್ರಾರಂಭಿಸಬಹುದು.
ಇನ್ನು ಎಮ್ಎಸ್‌ಐ ಹ್ಯಾಂಡ್ಹೆಲ್ಡ್ ಗೇಮಿಂಗ್ ಪಿಸಿಯನ್ನು ಅನ್ನು ಪ್ರದರ್ಶಿಸುತ್ತದೆ ಎನ್ನಲಾಗಿದ್ದು, ಇದರೊಂದಿಗೆ ಸ್ಯಾಮ್‌ಸಂಗ್ ಮತ್ತು ಎಲ್‌ಜಿ ಸ್ಮಾರ್ಟ್ ಹೋಂಗಾಗಿ ಎಐ ಚಾಲಿತ ಗ್ಯಾಜೆಟ್‌ಗಳನ್ನು ಪರಿಚಯಿಸಲಿದೆ. ಈ ಈವೆಂಟ್ ಆರಂಭಕ್ಕೂ ಮುನ್ನವೇ ಕೆಲವು ಕಂಪೆನಿಗಳು ತಮ್ಮ ಮುಂಬರುವ ಡಿವೈಸ್‌ಗಳ ಬಗ್ಗೆ ಘೋಷಣೆ ಮಾಡಿವೆ. ಈ ನಡುವೆ ಸ್ಯಾಮ್‌ಸಂಗ್
ಮೂರು ಹೊಸ ಒಡಿಸ್ಸಿ OLED ಗೇಮಿಂಗ್ ಮಾನಿಟರ್‌ಗಳನ್ನು ಲಾಂಚ್ ಮಾಡಲಿದೆ ಎಂದು ತಿಳಿದುಬಂದಿದೆ.

ಇನ್ನು ಎಲ್‌ಜಿ ಈಗಾಗಲೇ ವಿಶೇಷ ಡಿಸ್‌ಪ್ಲೇಗಳ ಬಗ್ಗೆ ಘೋಷಣೆ ಮಾಡಲಾಗಿದ್ದು, ಇವು ಸ್ಮಾರ್ಟ್‌ಟಿವಿಯಲ್ಲಿ ದೊಡ್ಡ ಬದಲಾವಣೆ ತರಲಿವೆ ಎನ್ನಲಾಗಿದೆ. ಕಳೆದ ವರ್ಷದ ಮಾಡೆಲ್‌ಗಳಿಗಿಂತ ನಾಲ್ಕು ಪಟ್ಟು ಕಾರ್ಯಕ್ಷಮತೆಯನ್ನು ಒದಗಿಸುವ ನವೀಕರಿಸಿದ ಎಐ ಪ್ರೊಸೆಸರ್‌ನೊಂದಿಗೆ ಇವು ಕಾಣಿಸಿಕೊಳ್ಳಲಿವೆ ಎನ್ನಲಾಗಿದ್ದು, ಉತ್ತಮವಾದ ಬ್ರೈಟ್‌ನೆಸ್ ಮತ್ತು ಕಾಂಟ್ರಾಸ್ಟ್‌ನೊಂದಿಗೆ ಹೆಚ್ಚು ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಇದರೊಂದಿಗೆ ಸ್ಯಾಮ್‌ಸಂಗ್ ಹೊಸ OLED ಮಾನಿಟರ್‌ಗಳನ್ನು ಘೋಷಿಸಿದೆ. ಈ ಮಾನಿಟರ್‌ಗಳು 49 ಇಂಚಿನ ಕರ್ವ್ಡ್ ಅಲ್ಟ್ರಾ ವೈಡ್ OLED G9 (G95SD) ಹಾಗೂ 32 ಇಂಚಿನ ಫ್ಲಾಟ್ OLED G8 (G80SD), ಮತ್ತು 27 ಇಂಚಿನ QHD OLED G6 (G60SD) ವೇರಿಯಂಟ್‌ನಲ್ಲಿ ಕಾಣಿಸಿಕೊಳ್ಳಲಿವೆ.

ಎಐ ಆಧಾರಿತ ಪಿಸಿಗಳು: ಇಂಟೆಲ್ ಮೆಟಿಯರ್ ಲೇಕ್ ಕುಟುಂಬದಲ್ಲಿ ಹೊಸ ಚಿಪ್‌ಗಳನ್ನು ಘೋಷಣೆ ಮಾಡಿದೆ. ಈ ಚಿಪ್ ಲ್ಯಾಪ್‌ಟಾಪ್‌ಗಳಲ್ಲಿ ಕಂಡುಬರಲಿದೆ ಎನ್ನಲಾಗಿದ್ದು, ಲ್ಯಾಪ್‌ಟಾಪ್ ತಯಾರಕರು ತಮ್ಮ ಹೊಸ ವಿನ್ಯಾಸಗಳು ಮತ್ತು ಪ್ರಾಯೋಗಿಕ ಕಲ್ಪನೆಗಳನ್ನು ಈ ಸಮಾರಂಭದಲ್ಲಿ ತೋರಿಸಲಿದ್ದಾರೆ. ಅದರಲ್ಲೂ ಡೆಲ್, ಎಲ್‌ಜಿ ಮತ್ತು ರೇಜರ್ ಈಗಾಗಲೇ ಇಂಟೆಲ್ ಚಾಲಿತ ಲ್ಯಾಪ್‌ಟಾಪ್‌ಗಳ ತಾಜಾ ಸ್ಲೇಟ್‌ಗಳನ್ನು ಘೋಷಣೆ ಮಾಡಿವೆ.
ಜಿಪಿಯು ಮತ್ತು ಗೇಮಿಂಗ್ ಹ್ಯಾಂಡ್ಹೆಲ್ಡ್: ಎನ್ವಿಡಿಯಾ ತನ್ನ ಮೊದಲ RTX 40-ಸರಣಿಯ ಸೂಪರ್ ಕಾರ್ಡ್‌ಗಳನ್ನು CES 2024 ನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಇದು RTX 20 ಸರಣಿಯ ನಂತರದ ಮೊದಲ ಸೂಪರ್ ವೇರಿಯಂಟ್ ಆಗಿರಲಿದೆ. ಹೆಚ್ಚುವರಿಯಾಗಿ, ಎಮ್‌ಎಮ್‌ಡಿ ತನ್ನ RX 7600 XT ಜಿಪಿಯುಗಳನ್ನು ಈ ತಿಂಗಳ ಕೊನೆಯಲ್ಲಿ ಪ್ರಾರಂಭಿಸಬಹುದು ಎನ್ನಲಾಗಿದೆ. ಇದರೊಂದಿಗೆ ಎಮ್‌ಎಸ್‌ಐನಿಂದ ಒಂದು ಹ್ಯಾಂಡ್‌ಹೆಲ್ಡ್ ಗೇಮಿಂಗ್ ಪಿಸಿ ಅನ್ನು ಶೋ ಫ್ಲೋರ್‌ನಲ್ಲಿ ತೋರಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಎಐ ಆಧಾರಿತ ಡಿವೈಸ್‌ಗಳು: ಎಐ ಫಾರ್ ಆಲ್: ಕನೆಕ್ಟಿವಿಟಿ ಇನ್ ದಿ ಏಜ್ ಆಫ್ ಎಐ ಎಂಬ ಶೀರ್ಷಿಕೆಯಡಿ ಸ್ಯಾಮ್‌ಸಂಗ್ ಕೆಲವು ಹೊಸ ಎಐ ಚಾಲಿತ ಗ್ಯಾಜೆಟ್‌ಗಳನ್ನು ಈಗಾಗಲೇ ಉಲ್ಲೇಖ ಮಾಡಿದೆ. ಈ ವಿಭಾಗದಲ್ಲಿ ಸ್ಮಾರ್ಟ್ ಕುಕ್‌ಟಾಪ್‌ಗಳು, ವ್ಯಾಕ್ಯೂಮ್‌ಗಳು ಮತ್ತು ಎಐ ತಂತ್ರಜ್ಞಾನವನ್ನು ಸಂಯೋಜಿಸಿರುವ ಫ್ರಿಜ್‌ಗಳನ್ನು ಘೋಷಿಸಿದೆ.

ಇದರೊಂದಿಗೆ ಎಲ್‌ಜಿ ಎಐ ಚಾಲಿತ ಹೋಮ್ ರೋಬೋಟ್ ಅನ್ನು ಸ್ಮಾರ್ಟ್ ಹೋಮ್ ಎಐ ಏಜೆಂಟ್ (Smart home AI agent) ಎಂಬ ಹೆಸರಿನೊಂದಿಗೆ ಪರಿಚಯಿಸಲಿದೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ಈ ವೇಳೆ ಹೊಸ ಸ್ಮಾರ್ಟ್ ಹೋಮ್ ಗ್ಯಾಜೆಟ್‌ಗಳನ್ನು ನಿರೀಕ್ಷಿಸಬಹುದು. ಇದು ಬಲ್ಬ್‌ಗಳು, ಡೋರ್‌ಬೆಲ್‌ಗಳು, ಲಾಕ್‌ಗಳು ಮತ್ತು ಕೆಲವು ಗೃಹೋಪಯೋಗಿ ಉಪಕರಣಗಳಂತಹ ಸರಳ ಸ್ಮಾರ್ಟ್ ಹೋಮ್ ಗ್ಯಾಜೆಟ್‌ಗಳನ್ನು ಹೊಂದಿರಲಿದೆ.
ಹೊಸ ಕಾರು ತಂತ್ರಜ್ಞಾನ: ಈ ಕಾರ್ಯಕ್ರಮದಲ್ಲಿ ಕಾರು ತಯಾರಕರು ತಮ್ಮ ಇತ್ತೀಚಿನ ತಂತ್ರಜ್ಞಾನಗಳನ್ನು ಪರಿಚಯಿಸಲಿದ್ದಾರೆ. ಇದರಲ್ಲಿ ಫೋರ್ಡ್, ಜನರಲ್ ಮೋಟಾರ್ಸ್‌ನಂತಹ ಹಲವಾರು ಪ್ರಮುಖ ಕಾರು ತಯಾರಕರು ಭಾಗಿಯಾಗಲಿದ್ದು, ಕಾರ್‌ನಲ್ಲಿ ಬಳಕೆ ಮಾಡಬಹುದಾದ ಹೊಸ ಹೊದ ತಂತ್ರಜ್ಞಾನದ ಬಗ್ಗೆ ತಿಳಿಸಲಿದ್ದಾರೆ. ಇದರೊಂದಿಗೆ ಹೋಂಡಾ, ಬಿಎಂಡಬ್ಲ್ಯೂ, ಹ್ಯುಂಡೈ, ಕಿಯಾ, ಮರ್ಸಿಡಿಸ್ ಮತ್ತು ವೋಕ್ಸ್‌ವ್ಯಾಗನ್ ತಲ್ಲೀನಗೊಳಿಸುವ ತಂತ್ರಜ್ಞಾನವನ್ನು ಪ್ರದರ್ಶನ ಮಾಡಲಿವೆ.
ಇದರೊಂದಿಗೆ ಕ್ವಾಲ್ಕಾಮ್ ಈಗಾಗಲೇ ತನ್ನ ಮುಂದಿನ ಜನ್ ಪ್ರಾದೇಶಿಕ ಕಂಪ್ಯೂಟಿಂಗ್ ಚಿಪ್‌ಸೆಟ್, XR2+ ಜನ್ 2 ವಿಆರ್ ಚಿಪ್ ಅನ್ನು ಘೋಷಣೆ ಮಾಡಿದೆ. ಆದರೆ, ಯಾವ ಡಿವೈಸ್ ಹೆಡ್‌ಸೆಟ್‌ಗಳು ಈ ಚಿಪ್‌ಸೆಟ್ ಅನ್ನು ಬಳಕೆ ಮಾಡುತ್ತವೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಇದರೊಂದಿಗೆ ಸ್ಯಾಮ್‌ಸಂಗ್‌ನಿಂದ ವಿಷನ್ ಪ್ರೊ ಘೋಷಣೆ ಆಗುವ ಸಾಧ್ಯತೆ ಇದೆ. ಇದಕ್ಕಾಗಿ ಕ್ವಾಲ್ಕಾಮ್ ಮತ್ತು ಗೂಗಲ್‌ನೊಂದಿಗೆ ಪಾಲುದಾರಿಕೆ ಹೊಂದಿದೆ.


Click it and Unblock the Notifications








