ಚಂದ್ರನ ಮೇಲೆ ಮತ್ತೊಂದು ಹೆಜ್ಜೆ ಗುರುತು ಮೂಡಿಸಿದ ರೋವರ್ ಪ್ರಗ್ಯಾನ್!
ಚಂದ್ರಯಾನ -3 ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಬೆನ್ನಲ್ಲೇ ಇಸ್ರೋ ಸಂಸ್ಥೆಯು ಸೂರ್ಯನ ಅಧ್ಯಯನಕ್ಕೆ ಆದಿತ್ಯ- ಎಲ್ 1 ಬಾಹ್ಯಾಕಾಶ ನೌಕೆಯ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಚಂದ್ರಯಾನ - 3 ರ ರೋವರ್ ಪ್ರಗ್ಯಾನ್ ಚಂದ್ರನ ಅಂಗಳದಲ್ಲಿ ಮಾಹಿತಿಯನ್ನು ಹೆಕ್ಕಿ ತೆಗೆಯುತ್ತ ಸಾಗಿದೆ. ಇದೀಗ ರೋವರ್ ಪ್ರಗ್ಯಾನ್ ಮತ್ತೊಂದು ಹೆಜ್ಜೆ ಗುರುತು ಮೂಡಿಸಿದೆ.
ಹೌದು, ಚಂದ್ರನ ಅಂಗಳದಲ್ಲಿ ಕುತೂಹಲದಿಂದ ಮಾಹಿತಿ ಕಲೆಹಾಕುತ್ತಿರುವ ರೋವರ್ ಪ್ರಗ್ಯಾನ್ ಚಂದ್ರನ ಮೇಲೆ 100 ಮೀಟರ್‌ಗಳಷ್ಟು ಪ್ರಯಾಣಿಸಿದೆ ಮತ್ತು ಮುಂದುವರಿಯುತ್ತಿದೆ ಎಂದು ಇಸ್ರೋ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. ಈ ಮೂಲಕ ಮೈಲಿಗಲ್ಲು ಸ್ಥಾಪಿಸಿದೆ.

ಇಸ್ರೋ ಸಂಸ್ಥೆಯು ರೋವರ್ ಪ್ರಗ್ಯಾನ್ 100 ಮೀಟರ್‌ಗಿಂತಲೂ ಹೆಚ್ಚು ದೂರ ಕ್ರಮಿಸಿದೆ ಮತ್ತು ಇನ್ನೂ ಪ್ರಬಲವಾಗಿದೆ ಎಂದು ಪ್ರಕಟಿಸಿದೆ. ರೋವರ್ ಮತ್ತು ಲ್ಯಾಂಡರ್ ಅನ್ನು 'ನಿದ್ರೆ' ಸ್ಥಿತಿಯಲ್ಲಿಡುವ ಪ್ರಕ್ರಿಯೆಯು ಒಂದು ಅಥವಾ ಎರಡು ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಹೇಳಿದರು. ಅವುಗಳು ಚಂದ್ರನ ಶೀತಲ ರಾತ್ರಿಯನ್ನು ತಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಚಂದ್ರನ ಅಂಗಳದಲ್ಲಿ ಮಹತ್ತರ ಅಂಶಗಳನ್ನು ಪತ್ತೆ ಮಾಡಿದ ಪ್ರಗ್ಯಾನ್ :
ಚಂದ್ರನ ಮೇಲೆ ಓಡಾಡುತ್ತಿರುವ ಪ್ರಗ್ಯಾನ್ ಮಹತ್ತರ ಮಾಹಿತಿಗಳನ್ನು ಒದಗಿಸುತ್ತಿದೆ. ಪ್ರಗ್ಯಾನ್ ರೋವರ್ ಚಂದ್ರನ ದಕ್ಷಿಣ ಧ್ರುವ ಭಾಗದಲ್ಲಿ ಸಲ್ಫರ್ ಪತ್ತೆ ಮಾಡಿದೆ. ಹಾಗೆಯೇ ಅಲ್ಲಿ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವನ್ನು ಇರುವ ಬಗ್ಗೆ ಮಾಹಿತಿ ನೀಡಿದೆ. ಇಸ್ರೋ ಚಂದ್ರನ ಮೇಲೆ ಹೈಡ್ರೋಜನ್ ಇದೆಯಾ ಎಂಬುದರ ಬಗ್ಗೆ ಕೆಂದ್ರೀಕರಿಸಿದೆ. ಚಂದ್ರನಲ್ಲಿ ಹೈಡ್ರೋಜನ್ ಪತ್ತೆ ಆದರೆ ಇದು ಭಾರತದ ಮತ್ತೊಂದು ಮೈಲುಗಲ್ಲಿನ ಆವಿಷ್ಕಾರ ಆಗಲಿದೆ.
ಇಸ್ರೋನ ಮಹತ್ವಾಕಾಂಕ್ಷೆ ಮಿಷನ್ ಆದಿತ್ಯ-L1 ಯಶಸ್ವಿಯಾಗಿ ಉಡಾವಣೆಯಾಗಿದೆ. ಸೂರ್ಯ ಶಿಕಾರಿಗೆ ಹೊರಟಿರುವ ಆದಿತ್ಯ-L1 ಇದೀಗ ಯಶಸ್ಸಿನ ಹಾದಿಯಲ್ಲಿದೆ. ಇಸ್ರೋ ವಿಜ್ಞಾನಿಗಳು ನಿಗಧಿ ಪಡಿಸಿರುವ ಕಕ್ಷೆಯಲ್ಲಿಯೇ ಆದಿತ್ಯ-L1 ರಾಕೆಟ್ ಸಾಗುತ್ತಿದೆ. ಇನ್ನು ಈ ಮಿಷನ್ ಸೂರ್ಯನ ಮೇಲ್ಮೈ ಹಾಗೂ ಸೌರ ಮಾರುತಗಳನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ.
ಸೂರ್ಯ ಶಿಕಾರಿ: ಆದಿತ್ಯ-L1 ಯಶಸ್ವಿ ಉಡಾವಣೆ :
ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷೆಯ ಯೋಜನೆ ಆದಿತ್ಯ-L1 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡಲು ಹೊರಟಿರುವ ನೌಕೆ ಆಗಿದ್ದಯ, ಇದು ಸೂರ್ಯನ ಕುರಿತಾಗಿ ಭಾರತದ ಮೊದಲ ರಾಕೆಟ್ ಆಗಿದೆ.
ಆದಿತ್ಯ-L1 ನೌಕೆ ಸೂರ್ಯನ ಕಿರಣ, ತಾಪಮಾನ, ಸೌರಜ್ವಾಲೆ, ಸೂರ್ಯನ ಸುತ್ತಲಿನ ವಾತಾವರಣದ ಬಗ್ಗೆ ಮಾಹಿತಿ ಕಲೆಹಾಕಲಿದೆ. ಇನ್ನು ಆದಿತ್ಯ L1 ಇಸ್ರೋ ನಿಗದಿಪಡಿಸಿರುವ ಲಾಂಗ್ರೇಜ್ ಪಾಯಿಂಟ್ ಕಡೆಗೆ ಸಾಗುತ್ತಿದೆ. ಸುಮಾರು 125 ದಿನಗಳ ನಂತರ ಆದಿತ್ಯ L1 ನೌಕೆ ಇಸ್ರೋ ನಿಗದಿಪಡಿಸಿದ ಲಾಂಗ್ರೇಜ್ ಪಾಯಿಂಟ್ L1 ತಲುಪಲಿದೆ.
ಲಾಗ್ರೇಂಜ್ ಪಾಯಿಂಟ್ (L1) ಎಂದರೇನು :
ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿರುವ ಆದಿತ್ಯ L1 ನೌಕೆಯ ಹೆಸರಿನಲ್ಲಿ L1 ಲಾಗ್ರೇಂಜ್ ಪಾಯಿಂಟ್ 1 (L1) ಅನ್ನು ಸೂಚಿಸುತ್ತದೆ. ಲಾಗ್ರೇಂಜ್ ಪಾಯಿಂಟ್ 1 ಎಂದರೇ ಬಾಹ್ಯಾಕಾಶದಲ್ಲಿ ಸಮತೋಲನ ಬಿಂದು ಆಗಿದೆ. ಈ ಲಾಗ್ರೇಂಜ್ L1 ಪಾಯಿಂಟ್ ನಲ್ಲಿ ಎರಡೂ ಆಕಾಶಕಾಯಗಳಿಂದ ಗುರುತ್ವಾಕರ್ಷಣೆಯ ಶಕ್ತಿ ಇರುವುದಿಲ್ಲ. ಹೀಗಾಗಿ ಈ ಪಾಯಿಂಟ್ ಸೂರ್ಯನ ಅಧ್ಯಯನಕ್ಕೆ ಹಾಗೂ ಆಕಾಶ ವಿದ್ಯಮಾನಗಳನ್ನು ವೀಕ್ಷಿಸಲು ಸ್ಥಿರ ವಾತಾವರಣ ಎನಿಸಿದೆ.


Click it and Unblock the Notifications








