ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
ಈಗಂತೂ ಎಲ್ಲಾ ಕಡೆ ChatGPT ಯದೇ ಸದ್ದು. ಕೆಲವು ದೇಶದ ಶಾಲೆ ಹಾಗೂ ಕಾಲೇಜಿನಲ್ಲಿ ಇದನ್ನು ಈಗಾಗಲೇ ಬ್ಯಾನ್ ಮಾಡಲಾಗಿದ್ದು, ಈ ಸಂಪ್ರದಾಯ ಈಗ ಬೆಂಗಳೂರಿಗೂ ಕಾಲಿಟ್ಟಿದೆ. ಈ ChatGPT ಯಿಂದ ಆಗುತ್ತಿರುವ ಅನುಕೂಲವೇ ಇದಕ್ಕೆಲ್ಲಾ ಕಾರಣ. ಹೀಗಾಗಿಯೇ ಬೆಂಗಳೂರಿನ ಕೆಲವು ಪ್ರಮುಖ ಸಂಸ್ಥೆಗಳು ಈ ChatGPT ಯನ್ನು ನಿಷೇದ ಮಾಡಿದೆ.

ಹೌದು, ಟೆಕ್ ವಲಯದಲ್ಲಿ ಈಗ ಹೆಚ್ಚು ಕೇಳಿಬರುತ್ತಿರುವ ಹೆಸರೆಂದರೆ ಅದು ChatGPT. ಇದರಿಂದಾಗಿ ವಿದ್ಯಾರ್ಥಿಗಳು ತಾವು ಮಾಡಬೇಕಾದ ಕೆಲಸವನ್ನು ಈ ChatGPT ಮೂಲಕ ಮಾಡಿಸಿಕೊಳ್ಳುತ್ತಿದ್ದಾರೆ. ಹಾಗಿದ್ರೆ, ಬೆಂಗಳೂರಿನ ಯಾವೆಲ್ಲಾ ಕಾಲೇಜುಗಳಲ್ಲಿ ಇದನ್ನು ನಿಷೇಧಿಸಲಾಗಿದೆ?. ಇದನ್ನು ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಮಾಡುವುದೇನು ಎಂಬಿತ್ಯಾದಿ ವಿವರವನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.
ಏನಿದು ChatGPT?
ChatGPT ಅಂದರೆ ಇದೊಂದು AI ಚಾಟ್‌ಬಾಟ್ ಆಗಿದ್ದು, ಇದನ್ನು ಓಪನ್AI (OpenAI) ಸಂಸ್ಥೆ ಪರಿಚಯಿಸಿದೆ. ಅಂತೆಯೇ ಮನುಷ್ಯನ ಅಲೋಚನೆಗೆ ಸರಿಸಮನಾಗಿ ChatGPT ಯೋಚನೆ ಮಾಡಲಿದ್ದು, ಇದಕ್ಕೆ ನೀವು ಏನೇ ಪ್ರಶ್ನೆ ಕೇಳಿದರೂ ಸಹ ಬಹುಪಾಲು ಸರಿಯಾದ ವಿವರ ಇರುವ ಉತ್ತರವನ್ನು ನೀಡುತ್ತದೆ.

ವಿದ್ಯಾರ್ಥಿಗಳಿಗೆ ಇದರಿಂದ ಆಗುವ ಲಾಭ ಏನು?
ಕಾಲೇಜು ಮಟ್ಟದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಅಸೈನ್‌ಮೆಂಟ್‌ಗಳನ್ನು ನೀಡುವುದು ಸಾಮಾನ್ಯ. ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಜೀವನಕ್ಕೆ ಅವಶ್ಯಕ. ಆದರೆ, ಕೆಲವು ವಿದ್ಯಾರ್ಥಿಗಳು ಈ ಅಸೈನ್‌ಮೆಂಟ್‌ಗಳನ್ನು ತಾವು ಚಿಂತಿಸಿ ಬರೆಯುವ ಬದಲಿಗೆ ಶಿಕ್ಷಕರು ನೀಡಿರುವ ಪ್ರಶ್ನೆಯನ್ನು ChatGPT ಗೆ ಕೇಳುವ ಮೂಲಕ ಅದರಿಂದ ಉತ್ತರ ಪಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ತಾವು ಬರೆಯುವುದಕ್ಕಿಂತ ಹೆಚ್ಚಿನದಾಗಿ ಈ ChatGPT ಮಾಹಿತಿ ನೀಡುವುದರಿಂದ ಅದನ್ನೇ ಶಿಕ್ಷಕರಿಗೆ ನೀಡುತ್ತಿದ್ದಾರೆ. ಪ್ರಮುಖ ವಿಷಯ ಎಂದರೆ ಕೇವಲ ChatGPT ಮಾತ್ರವಲ್ಲದೆ ಗಿಥಬ್ ಕಾಪಿಲಟ್ ಮತ್ತು ಬ್ಲಾಕ್‌ಬಾಕ್ಸ್‌ನಂತಹ ಎಐ ಪ್ಲಾಟ್‌ಫಾರ್ಮ್‌ಗಳು ಸಹ ಈ ಕೆಲಸ ಮಾಡುತ್ತಿವೆ.
ಇನ್ನು ಈ ChatGPT, ಇಮೇಲ್‌ಗಳು ಮತ್ತು ಪ್ರಬಂಧಗಳು, ಕವನಗಳನ್ನು ಬರೆಯಲು, ಪ್ರಶ್ನೆಗಳಿಗೆ ಉತ್ತರಿಸಲು ಅಥವಾ ಪ್ರಾಂಪ್ಟ್‌ನ ಆಧಾರದ ಮೇಲೆ ಕೋಡ್‌ನ ಸಾಲುಗಳನ್ನು ರಚಿಸಲು ಸಹಾಯ ಮಾಡುತ್ತದೆ. ಹಾಗೆಯೇ ಗಿಥಬ್ ಕಾಪಿಲಟ್ ನೈಸರ್ಗಿಕ ಭಾಷಾ ಪ್ರಾಂಪ್ಟ್‌ಗಳನ್ನು ಡಜನ್‌ಗಟ್ಟಲೆ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಕೋಡಿಂಗ್ ಸಲಹೆಗಳಾಗಿ ಪರಿವರ್ತಿಸುತ್ತದೆ. ಈ ಸುಲಭ ಕೆಲಸಗಳು ವಿದ್ಯಾರ್ಥಿಗಳಿಗೆ ಸುಲಭ ಮಾರ್ಗ ಕಲ್ಪಿಸಿಕೊಡುವ ಮೂಲಕ ಅವರನ್ನು ಶ್ರಮಪಡದಂತೆ ಮಾಡುತ್ತಿವೆ.
ಯಾವೆಲ್ಲಾ ಕಾಲೇಜುಗಳಲ್ಲಿ ಬ್ಯಾನ್
ಬೆಂಗಳೂರಿನ ಆರ್‌ವಿ ವಿಶ್ವವಿದ್ಯಾನಿಲಯ, ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ-ಬೆಂಗಳೂರು ಮತ್ತು ದಯಾನಂದ ಸಾಗರ್ ವಿಶ್ವವಿದ್ಯಾನಿಲಯಗಳಲ್ಲಿ ಈ ChatGPT ವಿರುದ್ಧ ಸಮರ ಸಾರಲಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಕಳ್ಳ ಮಾರ್ಗಕ್ಕೆ ಬ್ರೇಕ್ ಹಾಕಲು ಸಂಸ್ಥೆಗಳು ಮುಂದಾಗಿವೆ.
ಆರ್‌ವಿ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಶಾಲೆಯ ಡೀನ್ ಸಂಜಯ್ ಚಿಟ್ನಿಸ್ ಈ ಸಂಬಂಧ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸಲಹೆಯನ್ನು ನೀಡಿದ್ದಾರೆ. ಕೃತಕ ಬುದ್ಧಿಮತ್ತೆ (AI) ಏಜೆಂಟ್‌ಗಳಾದ ChatGPT, ಗಿಥಬ್ ಕಾಪಿಲಟ್ ಮತ್ತು ಬ್ಲಾಕ್‌ಬಾಕ್ಸ್ ಗಳನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು ಎಂದು ತಿಳಿಸಿದ್ದಾರೆ. ಈ ChatGPT ಬಳಕೆ ಮಾಡುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ವಿದ್ಯಾರ್ಥಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಅರಿತುಕೊಳ್ಳುವುದು ಒಳ್ಳೆಯದೇ ಆದರೆ, ಅದನ್ನು ಬುದ್ಧಿವಂತಿಕೆಯಿಂದ ಬಳಕೆ ಮಾಡಬೇಕಿದೆ. ಹಾಗೆಯೇ ನಾವು ChatGPT ಅನ್ನು ಬಳಸುವ ಅಗತ್ಯವಿರುವ ಕಾರ್ಯಯೋಜನೆಗಳನ್ನು ನೀಡಲು ಸಹ ಪ್ರಾರಂಭಿಸಿದ್ದೇವೆ ಎಂದು ಇದೇ ವೇಳೆ ಚಿಟ್ನಿಸ್ ಪ್ರತಿಕ್ರಿಯಿಸಿದ್ದಾರೆ.

ಇದರೊಂದಿಗೆ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಬೆಂಗಳೂರು (IIIT-B) ChatGPT ಅನ್ನು ಬಳಕೆ ಮಾಡುತ್ತಿರುವ ಬಗ್ಗೆ ರಚನಾತ್ಮಕ ಚೌಕಟ್ಟನ್ನು ನಿರ್ಮಿಸಲು ಸಮಿತಿಯನ್ನು ರಚನೆ ಮಾಡಿದೆ. ಈ ಸಂಬಂಧ ಸಂಸ್ಥೆಯ ನಿರ್ದೇಶಕರಾದ ದೇಬಬ್ರತ ದಾಸ್ ಪ್ರತಿಕ್ರಿಯಿಸಿ, ChatGPT ಯನ್ನು ತುಂಬಾ ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತಿದೆ. ಇದು ದಿನನಿತ್ಯದ ದಾಖಲೆ, ಸರಳ ಪ್ರೋಗ್ರಾಮಿಂಗ್ ಇತ್ಯಾದಿಗಳನ್ನು ಬರೆಯುವಲ್ಲಿ ಸಹಾಯಕ. ಆದರೆ, ನಮ್ಮ ಕೆಲವು ಕಾರ್ಯಯೋಜನೆಯು ಆಳವಾದ ತಂತ್ರಜ್ಞಾನವಾಗಿರುವ ಪರಿಣಾಮ ಯಾವುದೇ ಕಾರಣಕ್ಕೂ ಅಲ್ಲಿ ChatGPT ಸಹಾಯಕವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಆದರೂ ಸಹ ನಾವು ಕೃತಿಚೌರ್ಯದ ಬಗ್ಗೆ ಚಿಂತಿಸಿದ್ದು, ತಾಂತ್ರಿಕವಲ್ಲದ ವಿಷಯಗಳಲ್ಲಿ ಇದು ಅನ್ವಯವಾಗುತ್ತದೆ. ಅದರಂತೆ ChatGPT ಗಾಗಿ ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ಸಮಿತಿ ಪಟ್ಟಿಯೊಂದನ್ನು ರಚಿಸುತ್ತಿದೆ. ಈ ಸಮಿತಿ ಶಿಕ್ಷಕರಿಗೆ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಲು ಮತ್ತು ಮೌಲ್ಯಮಾಪನ ಮಾಡುವಲ್ಲಿ ಮಾರ್ಗದರ್ಶನ ನೀಡಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ದಯಾನಂದ ಸಾಗರ್ ವಿಶ್ವವಿದ್ಯಾಲಯದ ಉಪಕುಲಪತಿ ಕೆ.ಎನ್. ಬಾಲಸುಬ್ರಹ್ಮಣ್ಯ ಮೂರ್ತಿ ಈ ಪ್ರತಿಕ್ರಿಯಿಸಿ, ChatGPT ಒಡ್ಡುವ ಸವಾಲನ್ನು ತಪ್ಪಿಸಲು ಎಲ್ಲ ರೀತಿಯ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ. ಇದರೊಂದಿಗೆ ಕ್ರೈಸ್ಟ್ ವಿಶ್ವವಿದ್ಯಾಲಯದ ಉಪಕುಲಪತಿ ಅಬ್ರಹಾಂ ವಿ, ಚಾಟ್‌ಜಿಪಿಟಿ ಕಾರ್ಯಯೋಜನೆಗಳನ್ನು ಇನ್ನು ಮುಂದೆ ಮೌಲ್ಯಮಾಪನಗಳಿಗೆ ಪರಿಗಣಿಸಬಾರದು ಎಂದು ಎಚ್ಚರಿಸಿದ್ದಾರೆ.
ಜೈನ್ ವಿಶ್ವವಿದ್ಯಾನಿಲಯದ ಉಪಕುಲಪತಿ ರಾಜ್ ಸಿಂಗ್ ಅವರು ಪ್ರತಿಕ್ರಿಯಿತಿ, ಈಗಾಗಲೇ ನಿರ್ದೇಶಕರೊಂದಿಗೆ ಸಭೆ ನಡೆಸಲಾಗಿದೆ. ಚಾಟ್‌ಜಿಪಿಟಿ ಬಳಕೆಯ ಬಗ್ಗೆ ಮುಂಬರುವ ವಾರದಲ್ಲಿ ಸುತ್ತೋಲೆ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.


Click it and Unblock the Notifications








