ನ್ಯಾಯಾಲಯದಲ್ಲೂ ಚಾಟ್‌ಜಿಪಿಟಿ ಬಳಕೆ: ಜಾಮೀನು ವಿಚಾರಕ್ಕೆ ನೀಡಿದ ಮಾಹಿತಿ ಏನು!?
ಚಾಟ್‌ಜಿಪಿಟಿ ಇಂದು ಎಲ್ಲೆಡೆ ಹಂತ ಹಂತವಾಗಿ ಬಳಕೆಗೆ ಬರುತ್ತಿದೆ. ಈ ಕಾರಣಕ್ಕೆ ಮತ್ತಷ್ಟು ವಿಶೇಷ ಸೌಲಭ್ಯ ಇರುವ ಆವೃತ್ತಿಗಳನ್ನೂ ಸಹ ಪರಿಚಯಿಸಲಾಗುತ್ತಿದ್ದು, ಈ ನಡುವೆ ಚಾಟ್‌ಜಿಪಿಟಿ ಮಾನವ ಶಕ್ತಿಯನ್ನು ಕಸಿದುಕೊಳ್ಳುತ್ತದೆಯಾ ಎಂಬ ಚರ್ಚೆಯೂ ನಡೆಯುತ್ತಿದೆ. ಇಂತಹ ಪರ ವಿರೋಧದ ಮಾತುಗಳ ನಡುವೆ ಕೋರ್ಟ್‌ನಲ್ಲೂ ಸಹ ಮಹತ್ವದ ವಿಚಾರಣೆಯೊಂದಕ್ಕೆ ಬಳಕೆಯಾಗಿದೆ.
ಹೌದು, ಚಾಟ್‌ಜಿಪಿಟಿಯಲ್ಲಿ ಶೈಕ್ಷಣಿಕ ಸಂಸ್ಥೆಗಳು, ಕಚೇರಿಗಳು ಹಾಗೂ ಇನ್ನಿತರೆ ಸಂಸ್ಥೆಗಳಲ್ಲಿ ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇದೀಗ ನ್ಯಾಯಾಲಯದಲ್ಲೂ ಇದನ್ನು ಬಳಕೆ ಮಾಡಲಾಗಿದೆ ಎಂದರೆ ನೀವು ಅಚ್ಚರಿ ಪಡಲೇಬೇಕು. ಅದೂ ಸಹ ಜಾಮೀನು ಅರ್ಜಿ ವಿಚಾರಣೆಯಲ್ಲಿ ಇದು ಉತ್ತಮ ಮಾಹಿತಿ ನೀಡಿದೆ. ಹಾಗಿದ್ರೆ, ಯಾವ ನ್ಯಾಯಾಲಯದಲ್ಲಿ ಇದನ್ನು ಬಳಕೆ ಮಾಡಲಾಗಿದೆ. ಪ್ರಕರಣ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಜಾಮೀನು ವಿಚಾರಣೆಯಲ್ಲಿ ಚಾಟ್‌ಜಿಪಿಟಿ ಬಳಕೆ: ಕೋರ್ಟ್ ವಿಚಾರಣೆಯಲ್ಲಿ ಬಹುಪಾಲು ಈ ಜಾಮೀನು ಅರ್ಜಿ ವಿಚಾರಣೆಗಳೇ ಹೆಚ್ಚಾಗಿ ಇರುತ್ತವೆ. ಈ ವೇಳೆ ಈ ಪ್ರಕರಣದ ಬಗ್ಗೆ ಅಂದರೆ ಜಾಮೀನು ನ್ಯಾಯಶಾಸ್ತ್ರದ ವಿಶಾಲ ಚಿತ್ರಣವನ್ನು ಪಡೆಯುವ ಉದ್ದೇಶಕ್ಕಾಗಿ ನ್ಯಾ. ಅನೂಪ್ ಚಿತ್ಕಾರ ಅವರು ಈ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿದ್ದಾರೆ.
ಯಾವ ನ್ಯಾಯಾಲಯದಲ್ಲಿ ಬಳಕೆ ಮಾಡಲಾಗಿದೆ: ಇದನ್ನು ಭಾರತದಲ್ಲಿ ಮೊದಲ ಬಾರಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬಳಕೆ ಮಾಡಿಕೊಂಡಿದ್ದು, ಈ ಮೂಲಕ ಸುದೀರ್ಘವಾದ ನ್ಯಾಯ ಸಂಬಂಧಿ ವಿಷಯವನ್ನು ಗ್ರಹಿಸಲು ಅನುವು ಮಾಡಿಕೊಟ್ಟಿದೆ. ಅದರಂತೆ ನ್ಯಾಯಾಧೀಶರು, ದಾಳಿಕೋರರರು ಕ್ರೌರ್ಯದಿಂದ ಹಲ್ಲೆ ನಡೆಸಿದ್ದು ಇವರಿಗೆ ಜಾಮೀನು ಕುರಿತಾದ ಕಾನೂನು ಏನನ್ನು ಹೇಳುತ್ತದೆ ಎಂದು ಚಾಟ್‌ಜಿಪಿಟಿ ಕೇಳಿದ್ದು, ಅದು ಈ ರೀತಿ ಉತ್ತರಿಸಿದೆ.
ಈ ಪ್ರಕರಣ ನಿರ್ದಿಷ್ಟ ಸಂದರ್ಭಗಳು ಮತ್ತು ಪ್ರಕರಣದ ವಿಚಾರಣೆ ನಡೆಯುತ್ತಿರುವ ನ್ಯಾಯವ್ಯಾಪ್ತಿಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಅವಲಂಬಿಸಿದ್ದು, ಸಾಮಾನ್ಯವಾಗಿ, ಜಾಮೀನು ಕೋರಿರುವ ಆಕ್ರಮಣಕಾರರ ಮೇಲೆ ಕ್ರೌರ್ಯವನ್ನು ಒಳಗೊಂಡಿರುವ ಹಿಂಸಾತ್ಮಕ ಅಪರಾಧದ ಆರೋಪವಿದ್ದರೆ, ಉದಾಹರಣೆಗೆ ಕೊಲೆ, ಆಕ್ರಮಣ, ಅಥವಾ ಚಿತ್ರಹಿಂಸೆ ನಡೆಸಿದ್ದಾರೆ ಎಂದರೆ ಅಪಾಯವೆಂದು ಪರಿಗಣಿಸಬಹುದು.

ಈ ರೀತಿಯ ಸಂದರ್ಭದಲ್ಲಿ ನ್ಯಾಯಾಧೀಶರು ಜಾಮೀನು ನೀಡಲು ಕಡಿಮೆ ಒಲವನ್ನು ಹೊಂದಿರಬಹುದು ಹಾಗೆಯೇ ಪ್ರತಿವಾದಿಯು ನ್ಯಾಯಾಲಯಕ್ಕೆ ಹಾಜರಾಗುವಂತೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನು ಉಂಟುಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹೆಚ್ಚಿನ ಜಾಮೀನು ಮೊತ್ತವನ್ನು ವಿಧಿಸಬಹುದು. ಹಾಗೆಯೇ ಹಲ್ಲೆಯ ತೀವ್ರತೆ, ಆರೋಪಿಯ ಕ್ರಿಮಿನಲ್ ಹಿಸ್ಟ್ರಿ ಮತ್ತು ಅವರ ವಿರುದ್ಧದ ಸಾಕ್ಷ್ಯಗಳ ಬಲದಂತಹ ಅಂಶಗಳನ್ನು ಆಧಾರವಾಗಿರಿಸಿಕೊಂಡು ಜಾಮೀನು ನೀಡಬೇಕೆ ಎಂದು ನ್ಯಾಯಾಧೀಶರು ನಿರ್ಧಾರ ಮಾಡಬಹುದು.
ನಿರಪರಾಧಿ ಎಂಬ ಪೂರ್ವಕಲ್ಪನೆಯು ನ್ಯಾಯ ವ್ಯವಸ್ಥೆಯ ಮೂಲಭೂತ ತತ್ವವಾಗಿದೆ ಎಂಬುದನ್ನು ಈ ವೇಳೆ ಗಮನಿಸುವುದು ಮುಖ್ಯ ಹಾಗೆಯೇ ಈ ವೇಳೆ ಬಲವಾದ ಕಾರಣಗಳಿಲ್ಲದ ಹೊರತು ಎಲ್ಲಾ ಆರೋಪಿಗಳು ಜಾಮೀನಿಗೆ ಅರ್ಹರಾಗಿರುತ್ತಾರೆ ಎನ್ನಬಹುದು. ಜೊತೆಗೆ ಆಕ್ರಮಣಕಾರರು ಕ್ರೌರ್ಯದಿಂದ ಹಲ್ಲೆ ನಡೆಸಿದ ಪ್ರಕರಣಗಳಲ್ಲಿಯೂ ಕೂಡ ಅವರು ಸಮುದಾಯಕ್ಕೆ ಅಪಾಯವನ್ನು ಉಂಟುಮಾಡುವುದಿಲ್ಲ ಅಥವಾ ಕಾನೂನಿನ ಮುಷ್ಠಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವುದಿಲ್ಲ ಎಂದು ಕಂಡುಬಂದರೆ ನ್ಯಾಯಾಧೀಶರು ಜಾಮೀನು ನೀಡಲು ನಿರ್ಧಾರಕ್ಕೆ ಬರಬಹುದು ಎಂದು ಉತ್ತರವನ್ನು ನೀಡಿದೆ.

ಈ ಉತ್ತರವನ್ನು ಪಡೆದ ನಂತರ ಆದೇಶ ನೀಡಲಾಗಿದ್ದು, ಅದರಂತೆ ನ್ಯಾಯಾಲಯವು ತನ್ನ ಆದೇಶದಲ್ಲಿ ಚಾಟ್‌ಜಿಪಿಟಿಯ ಉಲ್ಲೇಖವನ್ನು ಮಾಡಿದೆ. ಇದು ಪ್ರಕರಣದ ಅರ್ಹತೆಯ ವಿಚಾರಕ್ಕೆ ಸಂಬಂಧಿಸಿ ಅಭಿವ್ಯಕ್ತಿಯಲ್ಲ. ಹಾಗೆಯೇ ಕ್ರೌರ್ಯವನ್ನು ಒಳಗೊಂಡಿರುವ ದಾಳಿಗೆ ಸಂಬಂಧಿಸಿದ ಜಾಮೀನು ನ್ಯಾಯಶಾಸ್ತ್ರದ ವಿಶಾಲ ಚಿತ್ರಣ ಪಡೆಯಲಷ್ಟೇ ಇದನ್ನು ಬಳಕೆ ಮಾಡಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಈ ಪ್ರಕರಣದ ವಿಚಾರಕ್ಕೆ ಬರುವುದಾದರೆ ಜಾಮೀನು ಅರ್ಜಿದಾರರು ಕೆಲವು ಸಹಚರರೊಂದಿಗೆ ಕ್ರೂರವಾಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು ಅವರು ನೋವಿನಿಂದ ಸಾವಿಗೀಡಾಗಿದ್ದರು. ಈ ಪ್ರಕರಣದ ಆರೋಪಿ ಮೇಲೆ ಈ ಕ್ರಿಮಿನಲ್ ರೆಕಾರ್ಡ್ ಸಹ ಇದ್ದು, ಆರೋಪಿಗೆ ಜಾಮೀನು ನಿರಾಕರಿಸಲಾಗಿದೆ. ಇನ್ನು ಅರ್ಜಿದಾರರ ಪರ ವಕೀಲ ಜೆಕೆ ಗೋಯೆಲ್ ವಾದ ಮಂಡಿಸಿದರೆ, ದೂರುದಾರರ ಪರ ವಕೀಲರಾದ ಹಿಮಾಂಶು ಗರ್ಗ್ ಮತ್ತು ಸಂದೀಪ್ ಕುಮಾರ್ ವಾದ ಮಂಡಿಸಿದ್ದಾರೆ.


Click it and Unblock the Notifications








