ಅಮೆಜಾನ್‌ನಲ್ಲಿ ಖರೀದಿ ಮಾಡೋ ಮುನ್ನ ಎಚ್ಚರ: ಈ ರೀತಿಯೂ ವಂಚನೆ ನಡೆಯುತ್ತಿದೆ!
ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್‌ನಲ್ಲಿ ಸಾಕಷ್ಟು ಸ್ಮಾರ್ಟ್ ಡಿವೈಸ್ ಹಾಗೂ ಇನ್ನಿತರೆ ವಸ್ತುಗಳನ್ನು ಖರೀದಿ ಮಾಡಲಾಗುತ್ತದೆ. ಇದಕ್ಕೆ ಕಾರಣ ಈ ಇ-ಕಾಮರ್ಸ್ ಸೈಟ್‌ಗಳಲ್ಲಿ ಹೆಚ್ಚಿನ ಡಿಸ್ಕೌಂಟ್ ಲಭ್ಯ ಇರುವುದು. ಈ ನಡುವೆ ಬಹುಪಾಲು ಮಂದಿ ಖರೀದಿ ಮಾಡುವ ಮುನ್ನ ಯಾವುದೇ ಪ್ರೊಡಕ್ಟ್‌ನ ರೇಟಿಂಗ್ ಮತ್ತು ವಿಮರ್ಶೆಯನ್ನು ನೋಡುವುದು ವಾಡಿಕೆ.
ಹೌದು, ಹೆಚ್ಚಿನ ಜನರು ಆನ್‌ಲೈನ್ ಉತ್ಪನ್ನಗಳನ್ನು ಖರೀದಿಸಲು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಅನ್ನು ಬಳಕೆ ಮಾಡುತ್ತಾರೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿ ಮಾಡುವ ಮುನ್ನ ಜನರು ಉತ್ಪನ್ನದ ರೇಟಿಂಗ್ ಮತ್ತು ವಿಮರ್ಶೆಯನ್ನು ನೋಡುವುದು ಸಾಮಾನ್ಯವಾಗಿದೆ. ಇದರಲ್ಲಿ ಏನಾದರೂ ಕೆಟ್ಟ ರೇಟಿಂಗ್ ಇದ್ದರೆ ಅಥವಾ ಕೆಟ್ಟ ವಿಮರ್ಷೆ ಇದ್ದರೆ ಖರೀದಿ ಮಾಡಲು ಮುಂದಾಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುವ ಜಾಲ ಇದೀಗ ಕಂಡುಬಂದಿದೆ.

ಚಾಟ್‌ಜಿಪಿಟಿ ಮೂಲಕ ಮೋಸ: ಇಂದಿನ ದಿನಗಳಲ್ಲಿ ಚಾಟ್‌ಜಿಪಿಟಿ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದು, ಅದರಲ್ಲೂ ಹೋಮ್‌ವರ್ಕ್ ಬರೆಯುವ ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಸೈನ್‌ಮೆಂಟ್ ಮಾಡುವವರೆಗೆ ಇದನ್ನು ಬಳಕೆ ಮಾಡಲಾಗುತ್ತದೆ. ಅಷ್ಟೇ ಏಕೆ ಇದನ್ನು ಬಳಕೆ ಮಾಡಿಕೊಂಡು ಸುದ್ದಿ ಕೂಡ ಬರೆಯಲಾಗುತ್ತಿದೆ.
ಈ ಸೌಲಭ್ಯಗಳನ್ನೇ ಬಳಕೆ ಮಾಡಿಕೊಂಡು ಅನೇಕ ಹ್ಯಾಕರ್ ಗ್ಯಾಂಗ್‌ಗಳು ಆನ್‌ಲೈನ್ ವಂಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದೂ ಸಹ ಅಮೆಜಾನ್‌ನಲ್ಲಿ ನಕಲಿ ರೇಟಿಂಗ್ ಮತ್ತು ವಿಮರ್ಶೆ ಮಾಡುವ ಮೂಲಕ. ಹೀಗಾಗಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಅಂದರೆ ಅಗತ್ಯ ಪ್ರೊಡಕ್ಟ್ ಬಗ್ಗೆ ಪರವಾದ ವಿಮರ್ಶೆ ಬರೆಯಲಾಗಿದ್ದು, 5 ಸ್ಟಾರ್ ರೇಟಿಂಗ್ ಸಹ ನೀಡಲಾಗುತ್ತಿದೆ.
ಇದಕ್ಕೆ ನಿದರ್ಶನ ಎಂಬಂತೆ ವಿದ್ಯಾರ್ಥಿಗಳ ವೇಸ್ಟ್ ಟ್ರಿಮ್ಮರ್, ವರ್ಕ್ ಶೀಟ್ ಬುಕ್ ಸೇರಿದಂತೆ ಹಲವು ವಸ್ತುಗಳಿಗೆ 5 ಸ್ಟಾರ್ ರೇಟಿಂಗ್ ನೀಡಿದ್ದಲ್ಲದೆ ಕೇಂಬ್ರಿಡ್ಜ್ ವಿವಿಯಲ್ಲಿ ಓದಿರುವಂತೆ ಉತ್ತಮವಾದ ವಿಮರ್ಶೆಯನ್ನೂ ನೀಡಲಾಗಿದೆ. ದುರಂತ ಎಂದರೆ As an AI Model ಎನ್ನುವ ವಾಕ್ಯವನ್ನು ಮಾತ್ರ ಅಳಿಸಿಲ್ಲ. ಈ ಮೂಲಕ ಇದು ಯಾರೋ ಚಾಟ್‌ಜಿಪಿಟಿ ಬಳಕೆ ಮಾಡಿಕೊಂಡು ಮಾಡಿದ ಕುತಂತ್ರ ಎಂದು ತಿಳಿದುಬಂದಿದೆ.

ಗ್ರಾಹಕರು ಈ ವಸ್ತುಗಳನ್ನು ಖರೀದಿ ಮಾಡುವಾಗ ಎಂದಿನಂತೆ ವಿಮರ್ಶೆಗಳನ್ನು ಓದಲು ಮುಂದಾಗಿದ್ದಾರೆ. ಆ ವೇಳೆ ಈ ಅತ್ಯುತ್ತಮವಾದ ವಿಮರ್ಶೆಯನ್ನು ಅನುಮಾನಿಸಲಾಗಿ ಹಲವು ಗ್ರಾಹಕರು ಪೋಸ್ಟ್ ಮಾಡಿದವರನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ಸಹ ನಡೆಸಿದ್ದಾರೆ. ಇದಾದ ನಂತರ ಆ ವಿಮರ್ಶೆಯನ್ನು ಸ್ಕ್ರೀನ್‌ಶಾಟ್ ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಜನರಿಗೆ ಎಚ್ಚೆತ್ತುಕೊಳ್ಳುವಂತೆ ಸಲಹೆ ನೀಡಲಾಗಿದೆ.
ನೀವು ಏನು ಮಾಡಬೇಕು?: ಈ ರೀತಿಯ ಪ್ರಕರಣಗಳು ಚಾಟ್‌ಜಿಪಿಟಿ ಪರಿಚಯಿಸಿದ ನಂತರ ಹೆಚ್ಚು ಬೆಳಕಿಗೆ ಬರುತ್ತಿವೆ. ಅದರಲ್ಲೂ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಅಗತ್ಯ ಪ್ರೊಡಕ್ಟ್‌ಗಳಿಗೆ ಸಂಬಂಧಿಸಿದವರು ಉತ್ತಮ ರೇಟಿಂಗ್ ನೀಡುತ್ತಿದ್ದಾರೆ. ಇದನ್ನು ನಂಬಿ ಕಣ್ಣುಮುಚ್ಚಿಕೊಂಡು ಖರೀದಿ ಮಾಡಬೇಡಿ. ಈ ರೀತಿ ಮಾಡುವುದರಿಂದ ನಿಮ್ಮ ಹಣ ವ್ಯರ್ಥವಾಗುತ್ತದೆ. ಈ ಮೂಲಕ ಹಲವಾರು ರೀತಿಯಲ್ಲಿ ಪರಿಶೀಲಿಸಿ ನಂತರ ಖರೀದಿ ಮಾಡಿದರೆ ಒಳಿತು.

ಈ ಹಿಂದೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ನಕಲಿ ಬಳಕೆದಾರರ ವಿಮರ್ಶೆಗಳ ವಿರುದ್ಧ ಸಮರ ಸಾರಲಾಗಿದ್ದು, ಜುಲೈ 2022 ರಲ್ಲಿ ಅಮೆಜಾನ್‌ನಲ್ಲಿ ನಕಲಿ ವಿಮರ್ಶೆಗಳನ್ನು ಮಾಡಲು ಮಾಡುತ್ತಿದ್ದ 10,000 ಕ್ಕೂ ಹೆಚ್ಚು ಫೇಸ್‌ಬುಕ್ ಗುಂಪುಗಳ ನಿರ್ವಾಹಕರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲಾಗಿದೆ. ಹಾಗೆಯೇ ಮಾರ್ಚ್ 2023 ರಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಆರು ಆರೋಪಿಗಳ ವಿರುದ್ಧ ಮೊಕದ್ದಮೆ ಹೂಡಿದೆ. ಹಾಗೆಯೇ ನಕಲಿ ವಿಮರ್ಶೆಗಳನ್ನು ಬರೆಯಲು ಸಹಾಯ ಮಾಡುವ ವೆಬ್‌ಸೈಟ್‌ಗಳನ್ನು ಸಹ ಗುರುತಿಸಿದೆ.


Click it and Unblock the Notifications








