ಗೇಮಿಂಗ್ ಗೀಳು.. ಮಧ್ಯರಾತ್ರಿಯಲ್ಲಿ ವೈ-ಫೈಗಾಗಿ ಮನೆಯಿಂದಲೇ ಓಡಿಹೋಗುತ್ತಾರಂತೆ ಮಕ್ಕಳು!
ಸ್ಮಾರ್ಟ್‌ಫೋನ್‌ಗಳು ಇಂದು ಎಷ್ಟು ಒಳ್ಳೆಯ ಕೆಲಸಕ್ಕೆ ಬಳಕೆ ಆಗುತ್ತವೆಯೋ ಅಷ್ಟೇ ಕೆಟ್ಟ ಕೆಲಸಗಳಿಗೂ ಬಳಕೆ ಆಗುತ್ತಿವೆ. ಅದರಲ್ಲೂ ಬಹುಪಾಲು ಮಕ್ಕಳು ಈ ಸ್ಮಾರ್ಟ್‌ಫೋನ್‌ನ ಗೀಳನ್ನು ಹೆಚ್ಚು ಮಾಡಿಕೊಂಡಿದ್ದು, ಈ ಘಟನೆಗಳು ಪೋಷಕರಿಗೆ ದಿಗಿಲು ಹುಟ್ಟುವಂತೆ ಮಾಡಿದೆ. ಈ ಸಂಬಂಧ ತಜ್ಞರು ಅಚ್ಚರಿ ಮಾಹಿತಿ ಹೊರಹಾಕಿದ್ದಾರೆ.
ಹೌದು, ಸ್ಮಾರ್ಟ್‌ಫೋನ್ ಇಂದು ಕರೆ ಅಥವಾ ಮೆಸೆಜ್‌ಗೆ ಮಾತ್ರ ಸೀಮಿತವಾಗದೆ ಎಲ್ಲಾ ರೀತಿಯಲ್ಲೂ ಬಳಕೆ ಮಾಡಬಹುದು. ಅದರಲ್ಲೂ ಬಹುಪಾಲು ಯುವಜನತೆ ಗೇಮಿಂಗ್‌ಗಾಗಿ ಇದನ್ನು ಹೆಚ್ಚು ಬಳಸುತ್ತಾರೆ. ಈ ನಡುವೆ ಗೇಮಿಂಗ್ ಚಟವು ಮಕ್ಕಳಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿರುವುದು ಅಲ್ಲಗೆಳೆಯುವ ಮಾತೇನಲ್ಲ. ಅದರಂತೆ ಮಕ್ಕಳು ಫೋನ್‌ನಲ್ಲಿ ಆಟವಾಡಲು ವೈ-ಫೈಗಾಗಿ ಮಧ್ಯರಾತ್ರಿಯಲ್ಲಿ ತಮ್ಮ ಮನೆಯಿಂದಲೇ ಓಡಿಹೋಗಿದ್ದಾರಂತೆ. ಹಾಗಿದ್ರೆ, ಏನಿದು ಗೇಮಿಂಗ್ ಗೀಳು?ತಜ್ಞರು ಹೇಳೋದೇನು ಬನ್ನಿ ನೋಡೋಣ.

ಗೇಮಿಂಗ್ ಗೀಳು ಹೆಚ್ಚಾಗುತ್ತಿದೆ: ಸ್ಮಾರ್ಟ್‌ಫೋನ್ ಬಳಕೆ ಮಾಡುವ ಬಹುಪಾಲು ಯುವಕರು ಅದನ್ನು ಗೇಮಿಂಗ್‌ಗಾಗಿಯೇ ಹೆಚ್ಚಾಗಿ ಬಳಕೆ ಮಾಡುತ್ತಿದ್ದು, ಇದು ಈಗ ದೊಡ್ಡ ಗೀಳಾಗಿ ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಮಕ್ಕಳಲ್ಲಿ ಗೇಮಿಂಗ್ ಚಟವು ತುಂಬಾ ಹೆಚ್ಚಾಗಿದ್ದು, ಮಕ್ಕಳು ಮಧ್ಯರಾತ್ರಿಯಲ್ಲಿಯೂ ಸಹ ತಮ್ಮ ಮನೆಯಿಂದ ಓಡಿಹೋದ ಪ್ರಕರಣಗಳಿವೆ ಎಂದು ವಿವರಿಸಿದ್ದಾರೆ.
ನ್ಯಾಷನಲ್ ಸೆಂಟರ್ ಫಾರ್ ಗೇಮಿಂಗ್ ಡಿಸಾರ್ಡರ್ಸ್ ನ ತಜ್ಞ ಹೆನ್ರಿಯೆಟ್ಟಾ ಬೌಡೆನ್-ಜೋನ್ಸ್ ಅವರು ದಿ ಗಾರ್ಡಿಯನ್‌ಗೆ ಬರೆದ ಲೇಖನದಲ್ಲಿ, ತನ್ನ ಕ್ಲಿನಿಕ್ ನಿರೀಕ್ಷಿತ ಸಂಖ್ಯೆಯ ಸಂದರ್ಶಕರನ್ನು ಕಂಡಿದೆ ಮತ್ತು ಕ್ಲಿನಿಕ್ ಪ್ರಾರಂಭವಾದಾಗಿನಿಂದ ಹಲವಾರು ವಿಚಿತ್ರ ಪ್ರಕರಣಗಳು ಎದುರಾಗಿವೆ ಎಂದು ಉಲ್ಲೇಖಿಸಿದ್ದಾರೆ. ಇನ್ನು ಈ ಗೇಮಿಂಗ್ ಡಿಸಾರ್ಡರ್‌ಗಳ ರಾಷ್ಟ್ರೀಯ ಕೇಂದ್ರವು 2020 ರಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಇದು ಗೇಮಿಂಗ್ ಗೀಳಿನಿಂದ ಬಳಲುವ ಮಕ್ಕಳಿಗೆ ಚಿಕಿತ್ಸೆ ನೀಡುತ್ತದೆ.
'ಗೇಮಿಂಗ್‌ನಿಂದ ಮಕ್ಕಳ ಮೇಲೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕುಟುಂಬಗಳು ಹತಾಶೆಯಾಗಿವೆ. ವಿಡಿಯೋ ಗೇಮ್‌ಗಳಿಗೆ ವ್ಯಸನಿಯಾಗಿರುವ ಮಕ್ಕಳು ಸಾಮಾನ್ಯವಾಗಿ ಮನೆಯೊಳಗೆ ಹಿಂಸೆಯ ಅನುಭವ ಹಾಗೂ ಶಾಲೆಗೆ ಹೋಗಲು ನಿರಾಕರಣೆ ಮಾಡುತ್ತಾರೆ. ಅದರಲ್ಲೂ ಈ ಗೀಳಿಗೆ ಸಿಲುಕಿದವರಲ್ಲಿ 16 ಮತ್ತು 17 ವರ್ಷ ವಯಸ್ಸಿನ ಯುವಕರೇ ಹೆಚ್ಚಾಗಿದ್ದಾರೆ. ಈ ಮಕ್ಕಳ ಆನ್‌ಲೈನ್ ಜೀವನ ಹೆಚ್ಚಾಗುತ್ತಿದ್ದಂತೆ ಕುಟುಂಬ ಮತ್ತು ಸ್ನೇಹಿತರಿಂದ ದೂರವಾಗಲು ಮುಂದಾಗುತ್ತಾರೆ'.
'ಅಷ್ಟು ಮಾತ್ರವಲ್ಲದೆ ಒಳಾಂಗಣದಲ್ಲಿ ಆಟಗಳನ್ನು ಆಡಲು ಪ್ರಾರಂಭಿಸುತ್ತಾರೆ. ಇದರೊಂದಿಗೆ ಶಾಲಾ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ದೂರವಿಡುವುದು ಹೆಚ್ಚಾಗುತ್ತದೆ. ಇದರೊಂದಿಗೆ ಪೋಷಕರೊಂದಿಗೆ ಕೂತು ಊಟವನ್ನು ಸಹ ತಿನ್ನುವುದಿಲ್ಲ ಅಥವಾ ಅವರು ಒಟ್ಟಿಗೆ ಆನಂದಿಸುವ ಚಟುವಟಿಕೆಗಳನ್ನು ಮಾಡುವುದಿಲ್ಲ. ಈ ರೀತಿಯ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ 'ಎಂದು ಜೋನ್ಸ್ ಬರೆದಿದ್ದಾರೆ.
ಮಕ್ಕಳು ಮನೆಯಿಂದಲೇ ಓಡಿಹೋಗುತ್ತಾರೆ: 'ಈ ರೀತಿಯ ಪ್ರಕರಣಗಳಲ್ಲಿ ಮಕ್ಕಳು ವಿಚಿತ್ರವಾಗಿ ವರ್ತಿಸುತ್ತಾರೆ. ಅದರಲ್ಲೂ ಪೋಷಕರು ಗೇಮಿಂಗ್ ಡಿವೈಸ್‌ಗಳನ್ನು ವಶಕ್ಕೆ ಪಡೆದಾಗ ಮಕ್ಕಳು ಪೋಷಕರ ವಿರುದ್ಧ ವಾದಕ್ಕೆ ಇಳಿಯುತ್ತಾರೆ. ಇನ್ನೂ ಕೆಲವು ಮಕ್ಕಳು ಮನೆಯಿಂದಲೇ ಓಡಿಹೋಗುವಂತಹ ವಿಚಿತ್ರ ಕ್ರಮಗಳನ್ನು ಅನುಸರಿಸುತ್ತಾರೆ. ಅಷ್ಟು ಮಾತ್ರವಲ್ಲದೆ ಪೋಷಕರು ಮನೆಯಲ್ಲಿ ಇಂಟರ್ನೆಟ್ ಸಂಪರ್ಕವನ್ನು ಸ್ವಿಚ್ ಆಫ್ ಮಾಡಿದಾಗ ಗೇಮಿಂಗ್ ಆಡುವ ಉದ್ದೇಶದಿಂದ ಮಕ್ಕಳು ಮಧ್ಯರಾತ್ರಿಯಲ್ಲಿಯೂ ಮನೆಯಿಂದ ಓಡಿಹೋಗುವ ಅದೆಷ್ಟೋ ಘಟನೆಗಳಿವೆ' ಎಂದಿದ್ದಾರೆ.

ಅದರಂತೆ 'ಗೇಮಿಂಗ್ ಚಟವು ಗಂಭೀರ ಕಾಳಜಿಯಾಗಿದ್ದು, ತೀವ್ರ ಎಚ್ಚರಿಕೆಯಿಂದ ಚಿಕಿತ್ಸೆ ನೀಡಬೇಕಿದೆ. ಭಾರತದಲ್ಲಿಯೂ ಸಹ ಮಕ್ಕಳ ನಡುವೆ ಗೇಮಿಂಗ್ ಗೀಳು ಪ್ರಕರಣ ಸಾಕಷ್ಟು ಹೆಚ್ಚಾಗುತ್ತುದೆ. ಇದು ಮಗುವಿಗೆ ಮತ್ತು ಅವರ ಕುಟುಂಬಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ' ಎಂದು ವಿವರಿಸಿದ್ದಾರೆ. ಈ ತಜ್ಞರು ಅಭಿಪ್ರಾಯ ಖಂಡಿತಾ ಪ್ರತಿಯೊಬ್ಬ ಪೋಷಕರನ್ನು ಆತಂಕಕ್ಕೆ ಈಡುಮಾಡದೆ ಇರದು. ಪರಿಣಾಮ ಮಕ್ಕಳು ಮೊಬೈಲ್ ಹಠಕ್ಕೆ ಬೀಳದ ಹಾಗೆ ಈಗಿನಿಂದಲೇ ನೋಡಿಕೊಳ್ಳಿ.


Click it and Unblock the Notifications








