ದೊಡ್ಡ ಸಾಧನೆಗೆ ಸಿದ್ಧವಾಗುತ್ತಿದೆ ಚೀನಾ... ಸಿಬ್ಬಂದಿ ಬಾಹ್ಯಾಕಾಶ ನೌಕೆ ಉಡಾವಣೆಗೆ ಸಜ್ಜು!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಕಡೆ ಇಡೀ ಜಗತ್ತೇ ಕುತೂಹಲದಿಂದ ಕಣ್ಣು ಬಿಟ್ಟುಕೊಂಡು ನೋಡುತ್ತಿದೆ. ಯಾಕೆಂದರೆ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನತ್ತ ಮುನ್ನುಗ್ಗುತ್ತಿದೆ. ಅದರಲ್ಲೂ ಮೂರನೇ ಕಕ್ಷೆಯನ್ನು ಸಮರ್ಪಕವಾಗಿ ದಾಟಿಸಿದ್ದ ಇಸ್ರೋ ಮತ್ತೊಂದು ಹಂತಕ್ಕೆ ಚಂದ್ರಯಾನ-3 ಏರಿಸಲು ಸಜ್ಜಾಗಿದೆ.
ಹೌದು, ಭಾರತದ ಇದೀಗ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದ್ದು, ಚಂದ್ರಯಾನ ವಿಷಯದಲ್ಲಿ ದೊಡ್ಡ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳೇ ಈ ಕಡೆ ಮುಖ ಮಾಡಿವೆ. ಅಂದರೆ ಜುಲೈ 14 ರಂದು ಮಧ್ಯಾಹ್ನ 2:35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಚಂದ್ರಯಾನ-3 ಉಡಾವಣೆ ಮಾಡಲಾಗಿದೆ. ಆದರೆ ಈ ನಡುವೆ ಚೀನಾ ಬಾಹ್ಯಾಕಾಶ ವಿಷಯದಲ್ಲಿ ದೊಡ್ಡದೊಂದು ಸಾಧನೆಗೆ ಸಜ್ಜಾಗಿದ್ದು, ಇತರೆ ರಾಷ್ಟ್ರಗಳಿಗೆ ಕುತೂಹಲ ಹೆಚ್ಚಾಗುವಂತೆ ಮಾಡಿದೆ.

2003 ರಲ್ಲಿ ಚೀನಾ ಮಾನವಸಹಿತ ಬಾಹ್ಯಾಕಾಶ ಹಾರಾಟವನ್ನು ಆರಂಭ ಮಾಡಿದ್ದು, ಮಾಜಿ ಫೈಟರ್ ಪೈಲಟ್ ಯಾಂಗ್ ಲಿವಿಯನ್ನು ಶೆನ್‌ಝೌ-5 ಎಂಬ ಹೆಸರಿನ ಸಣ್ಣ ಕಂಚಿನ ಬಣ್ಣದ ಕ್ಯಾಪ್ಸುಲ್‌ನಲ್ಲಿ ಕಕ್ಷೆಗೆ ಕಳುಹಿಸಿತ್ತು. ಈ ಕಾರ್ಯಾಚರಣೆಯೊಂದಿಗೆ ಲಿವೀ ಬಾಹ್ಯಾಕಾಶಕ್ಕೆ ಹೋಗಿ ಸಾಹಸ ಮಾಡಿದ ಚೀನಾದ ಮೊದಲ ವ್ಯಕ್ತಿಯಾಗಿ ಹೆಸರು ಪಡೆದಿದ್ದಾರೆ. ಅದರಂತೆ ಚೀನಾ ಈಗ ಮುಂದಿನ ಪೀಳಿಗೆಯ ಸಿಬ್ಬಂದಿ ಬಾಹ್ಯಾಕಾಶ ನೌಕೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ರಾಯಿಟರ್ಸ್ ವರದಿ ಮಾಡಿದೆ. ಬಾಹ್ಯಾಕಾಶ ನೌಕೆ( next-generation crewed spacecraft )ಏಳು ಗಗನಯಾತ್ರಿಗಳನ್ನು ಸಾಗಿಸುವ ಸಾಮರ್ಥ್ಯ ಪಡೆಯಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಚೀನಾದ ಹಿರಿಯ ಗಗನಯಾತ್ರಿ ಲಿವೀ ಅವರು ಮುಂಬರುವ ಬಾಹ್ಯಾಕಾಶ ನೌಕೆಯು 2027 ಮತ್ತು 2028 ರ ನಡುವೆ ಹಾರಬಲ್ಲದು ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಬಾಹ್ಯಾಕಾಶ ವಿಷಯದಲ್ಲಿ ಚೀನಾ ದೊಡ್ಡ ಸಾಹಸಕ್ಕೆ ಕೈ ಹಾಕಿದೆ.
ಹಾಗೆಯೇ ಚೀನಾದ ವಿಶ್ವವಿದ್ಯಾನಿಲಯದಲ್ಲಿ 2020 ರಲ್ಲಿ ಮೊದಲ ಬಾರಿಗೆ ಪರೀಕ್ಷಿಸಲ್ಪಟ್ಟ ಮುಂದಿನ ಪೀಳಿಗೆಯ ಸಿಬ್ಬಂದಿ ಬಾಹ್ಯಾಕಾಶ ನೌಕೆಯ ಬಗ್ಗೆ ಲಿವೀ ಇತ್ತೀಚೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 'ಭವಿಷ್ಯದಲ್ಲಿ ನಮ್ಮ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಮತ್ತು ಆಳವಾದ ಬಾಹ್ಯಾಕಾಶ ಪರಿಶೋಧನೆಗಾಗಿ ಹಾಗೂ ಚಂದ್ರನ ಕಾರ್ಯಾಚರಣೆಗಳಲ್ಲಿ ಹೊಸ ಪೀಳಿಗೆಯ ಬಾಹ್ಯಾಕಾಶ ನೌಕೆಯನ್ನು ಬಳಸಲಾಗುವುದು' ಎಂದು ತಿಳಿಸಿದ್ದಾರೆ.
ಬಾಹ್ಯಾಕಾಶ ಕಾರ್ಯಾಚರಣೆಯತ್ತ ಚೀನಾ ಚಿತ್ತ: ಇನ್ನು ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆ 2022 ರ ಕೊನೆಯಲ್ಲಿ ಕಾರ್ಯಾರಂಭ ಮಾಡಿದ್ದು, ಅದರಂತೆ 2030 ರ ವೇಳೆಗೆ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಕಳುಹಿಸುವ ಕಾರ್ಯಾಚರಣೆಯ ಮೇಲೆ ಕೇಂದ್ರೀಕರಿಸಲಾಗಿದೆ. ಅದರಲ್ಲೂ ಕೆಲವು ಸಮಯದ ಹಿಂದೆ ಎಂಜಿನಿಯರ್‌ಗಳು ಈ ಯೋಜನೆಯ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಇದು ಗಗನಯಾತ್ರಿಗಳು ಮತ್ತು ಇತರ ಉಪಕರಣಗಳನ್ನು ಸಾಗಿಸುವ ಕ್ಯಾರಿಯರ್ ರಾಕೆಟ್‌ಗಳ ಪ್ರಕಾರವನ್ನು ಒಳಗೊಂಡಿದೆ ಎಂದು ಬಹಿರಂಗಪಡಿಸಿದ್ದಾರೆ.
ಹಾಗೆಯೇ ಈ ಮುಂದಿನ ತಲೆಮಾರಿನ ಸಿಬ್ಬಂದಿ ಬಾಹ್ಯಾಕಾಶ ನೌಕೆಯು ಎರಡು ಭಾಗಗಳನ್ನು ಹೊಂದಿದ್ದು, ಅದರಲ್ಲಿ ಪ್ರೊಪಲ್ಷನ್ ಮತ್ತು ರಿಟರ್ನ್ ಮಾಡ್ಯೂಲ್‌ಗಳು ಪ್ರಮುಖವಾಗಿವೆ. ಇದು ಏಳು ಜನರವರೆಗೆ ಸಾಗಿಸುವ ಸಾಮರ್ಥ್ಯವನ್ನು ಅನುಮತಿಸುತ್ತದೆ ಎಂದು ಇದರ ವಿನ್ಯಾಸಕರು ಹೇಳಿದ್ದಾರೆ. ಜೊತೆಗೆ ಈ ಬಾಹ್ಯಾಕಾಶ ನೌಕೆಯ ರಿಟರ್ನ್ ಮಾಡ್ಯೂಲ್‌ನ ಹೆಚ್ಚಿನ ಶಾಖದ ಪ್ರತಿರೋಧವು ಬಾಹ್ಯಾಕಾಶ ನೌಕೆಯನ್ನು ಮರುಬಳಕೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ವಿವರಿಸಿದ್ದಾರೆ.

ಇನ್ನು ಈಗಾಗಲೇ ಬಳಕೆಯಲ್ಲಿರುವ ಶೆಂಝೌ ಬಾಹ್ಯಾಕಾಶ ನೌಕೆ ಮೂರು ಗಗನಯಾತ್ರಿಗಳನ್ನು ಮಾತ್ರ ಕಡಿಮೆ-ಭೂಮಿಯ ಕಕ್ಷೆಗೆ ಸಾಗಿಸಬಲ್ಲದು. ಜೊತೆಗೆ ಇದು ಜೀವ ಬೆಂಬಲ ಮತ್ತು ಪ್ರೊಪಲ್ಷನ್ ಮಾಡ್ಯೂಲ್, ಅಲ್ಪಾವಧಿಯ ಮಾನವ ವಸತಿಗಾಗಿ ಕಕ್ಷೆಯಲ್ಲಿನ ಮಾಡ್ಯೂಲ್ ಮತ್ತು ಭೂಮಿಗೆ ಮರಳಲು ಮರು-ಪ್ರವೇಶದ ಕ್ಯಾಪ್ಸುಲ್ ಅನ್ನು ಹೊಂದಿರುತ್ತದೆ. ಆದರೆ ಈ ಮುಂದಿನ ನೌಕೆ ಸುಧಾರಿತ ಸೌಲಭ್ಯಗಳನ್ನು ಹೊಂದಿದ್ದು, ಜಗತ್ತಿನಲ್ಲಿ ಅಗ್ರಸ್ಥಾನ ಪಡೆಯಲು ಸಿದ್ಧತೆ ನಡೆಸುತ್ತಿದೆ.


Click it and Unblock the Notifications








