Aadhaar card: ಆಧಾರ್ ಕಾರ್ಡ್ ಬಳಕೆದಾರರೇ ಮಾರ್ಚ್ 14 ರವರೆಗೆ ಅಷ್ಟೇ ಉಚಿತ ಆಮೇಲೆ ಪಾವತಿ ಮಾಡಬೇಕು
ಆಧಾರ್ ಕಾರ್ಡ್ (Aadhaar Card) ಇಂದು ಎಲ್ಲಾ ರೀತಿಯಲ್ಲೂ ಬಳಕೆಗೆ ಬರುತ್ತಿದೆ. ಅಷ್ಟೇ ಅಲ್ಲದೆ ಪ್ರಮುಖ ಗುರುತಿನ ಚೀಟಿಯಾಗಿ ಇದನ್ನು ಪರಿಗಣಿಸಲಾಗುತ್ತಿದ್ದು, ಇದೀಗ ಆಧಾರ್ ಕಾರ್ಡ್ ಹೊಂದಿರುವ ಎಲ್ಲರಿಗೂ ಸರ್ಕಾರ ಮತ್ತೊಂದು ಸೂಚನೆಯೊಂದನ್ನು ನೀಡಿದೆ.
ಹೌದು, ಆಧಾರ್ ಕಾರ್ಡ್ ಪ್ರಮುಖ ಗುರುತಿನ ಚೀಟಿಯಾಗಿದ್ದು, ಈ ಕಾರ್ಡ್ ಬಳಕೆ ಮಾಡಿಕೊಂಡು ಯಾವುದೇ ರೀತಿಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ನಡುವೆ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು (free Update) ಅವಕಾಶ ನೀಡಲಾಗಿದ್ದು, ಇದಕ್ಕೆ ಗಡುವನ್ನೂ ನೀಡಲಾಗಿದೆ. ಈ ಗಡುವು ಮುಗಿದ ನಂತರ ಪಾವತಿ ಮಾಡಬೇಕಾಗುತ್ತದೆ. ಹಾಗಿದ್ರೆ, ಎಲ್ಲಿಯವರೆಗೆ ಉಚಿತ ಹಾಗೂ ಎಂದಿನಿಂದ ಪಾವತಿ ಮಾಡಬೇಕು ಹಾಗೂ ಇದನ್ನು ಅಪ್‌ಡೇಟ್ ಮಾಡುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಆಧಾರ್ ಕಾರ್ಡ್ ನವೀಕರಣ: ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್‌ಡೇಟ್ ಮಾಡುವ ಗಡುವು ಮುಗಿಯುವ ಸಮಯ ಬಂದಿದೆ. ಡಿಸೆಂಬರ್ 2023 ರಲ್ಲಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್‌ನ ಉಚಿತ ಅಪ್‌ಡೇಟ್‌ಗಾಗಿ ಗಡುವನ್ನು ವಿಸ್ತರಿಸಿ ಮಾರ್ಚ್ 14 ಅನ್ನು ನಿಗದಿಪಡಿಸಲಾಗಿತ್ತು. ಅದರಂತೆ ಮೈಆಧಾರ್ ಪೋರ್ಟಲ್‌ನಲ್ಲಿ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಿಕೊಳ್ಳಬಹುದಾಗಿದೆ. ಈ ವೇಳೆ ನೀವು ಅದನ್ನು ಆಫ್‌ಲೈನ್‌ನಲ್ಲಿ ನವೀಕರಣ ಮಾಡಿಸಲು ಬಯಸಿದರೆ 50 ರೂ.ಗಳ ಶುಲ್ಕ ಪಾವತಿ ಮಾಡಬೇಕು.
ಈ ಸಂಬಂಧ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮಾಹಿತಿ ನೀಡಿದ್ದು, ಜನರ ಸಕಾರಾತ್ಮಕ ಪ್ರತಿಕ್ರಿಯೆಯ ಆಧಾರದ ಮೇಲೆ, ಸೌಲಭ್ಯವನ್ನು ಇನ್ನೂ 3 ತಿಂಗಳವರೆಗೆ ಅಂದರೆ 15.12.2023 ರಿಂದ 14.03.2024 ರವರೆಗೆ ವಿಸ್ತರಿಸಲಾಗಿದೆ. ಅದರ ಪ್ರಕಾರ, ಡಾಕ್ಯುಮೆಂಟ್ ಅಪ್‌ಡೇಟ್‌ನ ಸೌಲಭ್ಯವು ಮೈ ಆಧಾರ್ ಪೋರ್ಟಲ್ ಮೂಲಕ ಉಚಿತವಾಗಿ ಮುಂದುವರಿಯುತ್ತದೆ ಎಂದು ತಿಳಿಸಿದೆ.

ಯಾವೆಲ್ಲಾ ವಿವರಗಳನ್ನು ನವೀಕರಿಸಬೇಕು?: ಮಾರ್ಚ್ 14 ರವರೆಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ವೆಬ್‌ಸೈಟ್‌ನಿಂದ ನಿಮ್ಮ ಹೆಸರು, ವಿಳಾಸ, ಫೋಟೋ ಮತ್ತು ಇತರ ಬದಲಾವಣೆಗಳನ್ನು ಉಚಿತವಾಗಿ ನವೀಕರಣ ಮಾಡಬಹುದಾಗಿದೆ. ಮೊದಲೇ ತಿಳಿಸಿದಂತೆ ಈ ತಿದ್ದುಪಡಿ ಮಾಡಲು ನೀವು ಸಾಮಾನ್ಯ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡಿದರೆ, 50ರೂ.ಗಳನ್ನು ಪಾವತಿ ಮಾಡಬೇಕಾಗುತ್ತದೆ.
ಹಾಗಿದ್ರೆ ಆನ್‌ಲೈನ್‌ನಲ್ಲಿ ಈ ಮಾಹಿತಿಯನ್ನು ಅಪ್‌ಡೇಟ್ ಮಾಡುವುದು ಹೇಗೆ?:
ಹಂತ 1: ಮೊದಲು ನಿಮ್ಮ ಆಧಾರ್ ಸಂಖ್ಯೆಯನ್ನು ಬಳಕೆ ಮಾಡಿಕೊಂಡು https://myaadhaar.uidai.gov.in/ ಗೆ ಲಾಗ್ ಇನ್ ಮಾಡಿ. ನಂತರದಲ್ಲಿ ವಿಳಾಸವನ್ನು ನವೀಕರಿಸಲು ಮುಂದುವರಿಯಿರಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಹಂತ 2 : ಇದೆಲ್ಲಾ ಆದ ಮೇಲೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಓಟಿಪಿ (OTP) ಅನ್ನು ಎಂಟ್ರಿ ಮಾಡಿ ಹಾಗೆಯೇ ಡಾಕ್ಯುಮೆಂಟ್ ಅಪ್‌ಡೇಟ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಇದನ್ನು ಮಾಡಿದ ನಂತರ ನಿವಾಸಿಯ ಅಸ್ತಿತ್ವದಲ್ಲಿರುವ ವಿವರಗಳನ್ನು ಪ್ರದರ್ಶಿಸಲಾಗುತ್ತದೆ. ಈ ವಿವರಗಳನ್ನು ಪರಿಶೀಲಿಸಿ ಮತ್ತು ಮುಂದಿನ ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 3: ಮೇಲೆ ತಿಳಿಸಿದ ಹಂತಗಳನ್ನು ಅನುಸರಿಸುವ ಮೂಲಕ ಡ್ರಾಪ್‌ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ಆಯ್ಕೆಮಾಡಿ. ನಂತರ ಅದನ್ನು ಅಪ್‌ಲೋಡ್ ಮಾಡಿ. ಇದೆಲ್ಲಾ ಆದ ಮೇಲೆ ಸಬ್‌ಮಿಟ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಈ ವೇಳೆ ನಿಮಗೆ 14 ಅಂಕಿಯ ಅಪ್‌ಡೇಟ್ ವಿನಂತಿ ಸಂಖ್ಯೆ ಸಿಗುತ್ತದೆ.


Click it and Unblock the Notifications








