ಒಂದೇ ಆಧಾರ್‌ನಲ್ಲಿ 656 ಸಿಮ್, ಬೆಚ್ಚಿ ಬಿದ್ದ ಅಧಿಕಾರಿಗಳು... ನಿಮ್ಮ ಐಡಿಯಲ್ಲಿರುವ ಸಿಮ್‌ಗಳ ಸ್ಟೇಟಸ್ ಚೆಕ್ ಮಾಡಿ!
ಭಾರತದಲ್ಲಿ ನಡೆಯುವ ಅದೆಷ್ಟೋ ಸ್ಕ್ಯಾಮ್‌ಗಳು (Scams) ಕರೆಗಳ ಮೂಲಕವೇ ನಡೆಯುತ್ತದೆ. ಅಂದರೆ ನಕಲಿ ಕರೆ ಮಾಡಿ ಜನರಿಗೆ ಹಣ ವಂಚನೆ ಮಾಡಲಾಗುತ್ತದೆ. ಈ ನಡುವೆ ಒಂದೇ ಆಧಾರ್ ಬಳಕೆ ಮಾಡಿಕೊಂಡು ಬರೋಬ್ಬರಿ 656 ಸಿಮ್‌ಗಳನ್ನು ಖರೀದಿ ಮಾಡಲಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ವಿಷಯ ಕೇಳಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಹೌದು, ಸ್ಕ್ಯಾಮರ್‌ಗಳು ಜನರನ್ನು ಮೋಸ ಮಾಡಲು ವಿವಿಧ ರೀತಿಯ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಕರೆಗಳ ಮೂಲಕ ಈ ಮೋಸದ ಪ್ರಕರಣ ಹೆಚ್ಚಾಗುತ್ತಿದ್ದು, ಈ ಕಾರಣಕ್ಕಾಗಿಯೇ ಒಂದು ದಾಖಲಾತಿಗೆ ನಾಲ್ಕು ಸಿಮ್ (SIM) ನೀಡುವ ಸಂಬಂಧ ಎಲ್ಲಾ ತಯಾರಿ ಸಹ ನಡೆಯುತ್ತಿದೆ. ಹಾಗಿದ್ರೆ, ಏನಿದು ಘಟನೆ?,ಈವರೆಗೂ ಒಂದು ಕಾರ್ಡ್‌ಗೆ 9 ಸಿಮ್‌ಗಳನ್ನು ಮಾತ್ರ ಖರೀದಿ ಮಾಡಬಹುದು. ಆದರೆ, 656 ಸಿಮ್‌ಗಳು ಒಂದೇ ಆಧಾರ್‌ಗೆ (Aadhaar) ಹೇಗೆ ಲಿಂಕ್ ಆಗಿವೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಹೊಸ ಹಗರಣ: ಒಂದೇ ಆಧಾರ್ ಕಾರ್ಡ್ (Aadhaar card) ಅನ್ನು ಹಲವಾರು ಸಿಮ್ ಕಾರ್ಡ್‌ಗಳಿಗೆ ಲಿಂಕ್ ಮಾಡುವ ಹಗರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅದರಂತೆ ಓರ್ವ ವ್ಯಕ್ತಿ ಒಂದೇ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು 100-150 ಮೊಬೈಲ್ ಸಂಪರ್ಕಗಳನ್ನು ಹೊಂದಿದ್ದಾನೆ ಎಂದು ಸೈಬರ್ ಕ್ರೈಮ್ ವಿಭಾಗವು ಕಂಡುಕೊಂಡಿದೆ. ಮತ್ತು ಅವುಗಳನ್ನು ರದ್ದುಗೊಳಿಸುವಂತೆ ಆಯಾ ಮೊಬೈಲ್ ಸೇವಾ ಪೂರೈಕೆದಾರರಿಗೆ ಪತ್ರ ಸಹ ಬರೆಯಲಾಗಿದೆ.
ಈ ಸಂಬಂಧ ತಮಿಳುನಾಡಿನ ಸೈಬರ್ ಕ್ರೈಂ (Cybercrime) ವಿಭಾಗವು ಕಳೆದ ನಾಲ್ಕು ತಿಂಗಳಲ್ಲಿ ತಮಿಳುನಾಡಿನಾದ್ಯಂತ 25,135 ಸಿಮ್ ಕಾರ್ಡ್‌ಗಳನ್ನು ಮೋಸದ ಚಟುವಟಿಕೆಗಳ ಶಂಕೆಯ ಮೇಲೆ ನಿರ್ಬಂಧಿಸಿದೆ. ಈ ನಡುವೆ ವಿಜಯವಾಡದಲ್ಲಿ ಮತ್ತೊಂದು ಪ್ರಕರಣ ಬರದಿಯಾಗಿದ್ದು, ಒಂದೇ ಗುರುತಿನೊಂದಿಗೆ 658 ಸಿಮ್ ಕಾರ್ಡ್‌ಗಳನ್ನು ಖರೀದಿ ಮಾಡಲಾಗಿದೆ. ಈ ಎಲ್ಲಾ ಸಿಮ್ ಕಾರ್ಡ್ ಪೋಲುಕೊಂಡ ನವೀನ್ ಎಂಬ ವ್ಯಕ್ತಿಯ ಹೆಸರಿನಲ್ಲಿವೆ.
ಇದನ್ನು ಹೇಗೆ ಪತ್ತೆ ಮಾಡಲಾಗುತ್ತದೆ?: ಹೆಚ್ಚಿನ ಸಿಮ್‌ಗಳನ್ನು ಪತ್ತೆ ಮಾಡುವ ಹಾಗೂ ಸಿಮ್‌ಗಳನ್ನು ಬಳಕೆ ಮಾಡಿಕೊಂಡು ಅನುಮಾನಾಸ್ಪದ ಚಟುವಟಿಕೆ ನಡೆಸುವವರ ವಿರುದ್ಧ ಸೈಬರ್ ಕ್ರೈಮ್ ಪೊಲೀಸರು ಸದಾ ಎಚ್ಚರವಾಗಿರುತ್ತಾರೆ. ಅದರಂತೆ ಇವರಿಗೆ ಈ ವಿಷಯದಲ್ಲಿ ಸಹಾಯ ಮಾಡಿರುವುದು ASTR (ಟೆಲಿಕಾಂ ಸಿಮ್ ಚಂದಾದಾರರ ಪರಿಶೀಲನೆಗಾಗಿ ಕೃತಕ ಬುದ್ಧಿಮತ್ತೆ ಮತ್ತು ಮುಖ ಗುರುತಿಸುವಿಕೆ ಚಾಲಿತ ಪರಿಹಾರ) ಸಾಫ್ಟ್‌ವೇರ್. ಇದು ಸಿಮ್ ಕಾರ್ಡ್ ವಂಚನೆಯನ್ನು ಪತ್ತೆ ಮಾಡುತ್ತದೆ ಮತ್ತು ಗುರುತಿನ ಪುರಾವೆಗಳೊಂದಿಗೆ ಸಂಖ್ಯೆಗಳನ್ನು ನಿರ್ಬಂಧಿಸುತ್ತದೆ.
ಈ ಸಾಫ್ಟ್‌ವೇರ್(software) ಎಲ್ಲಾ ಟೆಲಿಕಾಂ ಆಪರೇಟರ್‌ಗಳಿಂದ ಸಿಮ್ ಕಾರ್ಡ್ ಹೊಂದಿರುವವರ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಫಿಲ್ಟರ್ ಮಾಡುತ್ತದೆ. ಒಂದೇ ಫೋಟೋದಲ್ಲಿ ಹೆಚ್ಚಿನ ಸಂಖ್ಯೆಯ ಸಿಮ್ ಗಳನ್ನು ಯಾರ್ಯಾರು ಪಡೆದುಕೊಂಡಿದ್ದಾರೋ ಅವರೆಲ್ಲರ ಮಾಹಿತಿಯನ್ನು ಇದು ವರದಿ ಮಾಡುತ್ತದೆ. ಇದರಿಂದಾಗಿಯೇ ತಮಿಳುನಾಡು ಹಾಗೂ ವಿಜಯವಾಡದಲ್ಲಿ ಹೆಚ್ಚಿನ ಸಿಮ್‌ಗಳನ್ನು ಹೊಂದಿದ್ದ ವ್ಯಕ್ತಿಗಳು ಕಂಡುಬಂದಿದ್ದಾರೆ.
ಇನ್ನು ಈ ವೇಳೆ ನಿಮಗೂ ಸಹ ಒಂದು ಪ್ರಶ್ನೆ ಮೂಡಿರಬಹುದು ಅದೇನೆಂದರೆ ನಾವು ಬಳಕೆ ಮಾಡುವ ಆಧಾರ್ ಐಡಿಯಲ್ಲಿ ಎಷ್ಟು ಸಿಮ್‌ಗಳಿಗೆ ಎಂದು. ಸಂತಸದ ವಿಷತ ಏನೆಂದರೆ ನೀವು ಸುಲಭವಾಗಿ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳು ಸಕ್ರಿಯವಾಗಿವೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ನೀವು ನಿಮ್ಮ ಫೋನ್ ಸಂಖ್ಯೆಯನ್ನು ಎಂಟ್ರಿ ಮಾಡಿದ್ರೆ ಸಾಕು ಎಲ್ಲಾ ಮಾಹಿತಿ ಲಭ್ಯ ಆಗುತ್ತದೆ.

ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAF-COP) ಪೋರ್ಟಲ್ ಟೆಲಿಕಾಂ ಚಂದಾದಾರರು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಎಲ್ಲಾ ಫೋನ್ ಸಂಖ್ಯೆಗಳನ್ನು ನೋಡಲು ಅನುಮತಿಸಲಿದ್ದು, ಈ ಮೂಲಕ ನಿಮ್ಮದಲ್ಲದ ಸಿಮ್ ನಂಬರ್ ಏನಾದರೂ ಅಲ್ಲಿ ಕಾಣಿಸಿಕೊಂಡರೆ ಅದನ್ನು ತಕ್ಷಣವೇ ಬ್ಲಾಕ್ ಮಾಡಬಹುದಾದ ಆಯ್ಕೆಯನ್ನೂ ಸಹ ನೀಡಲಾಗಿದೆ. ಹಾಗಿದ್ರೆ, ಬನ್ನಿ ಸರಳ ಹಂತದ ಮೂಲಕ ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಫೋನ್‌ಸಂಖ್ಯೆಗಳು ಎಷ್ಟು ಎಂದು ತಿಳಿಯೋಣ.
ಹಂತ 1 : ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಬಳಕೆ ಮಾಡಿಕೊಂಡು ಅಧಿಕೃತ ವೆಬ್‌ಸೈಟ್‌ಗೆ ಎಂಟ್ರಿಯಾಗಬೇಕಿದೆ. ಇದಕ್ಕಾಗಿ ನೀವು https://tafcop.dgtelecom.gov.in/ ಲಿಂಕ್ ಅನ್ನು ಬಳಕೆ ಮಾಡಿಕೊಳ್ಳಬಹುದು. ನಂತರ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಓಟಿಪಿ ಯನ್ನು ವಿನಂತಿಸಿ.
ಹಂತ 2 : ಇದಾದ ನಂತರ ನಿಮ್ಮ ಸಂಖ್ಯೆಗೆ ಕಳುಹಿಸಿದ ಓಟಿಪಿಯನ್ನು ನೀಡಲಾದ ಜಾಗದಲ್ಲಿ ಭರ್ತಿ ಮಾಡಿ ಸಬ್‌ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಆಧಾರ್ ಕಾರ್ಡ್‌ಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗಳನ್ನು ತೋರಿಸಲಾಗುತ್ತದೆ. ಈ ವಿಭಾಗದಲ್ಲಿ ನೀವು ಬಳಕೆ ಮಾಡಿರದ ನಂಬರ್ ಏನಾದರೂ ಕಾಣಿಸಿಕೊಂಡರೆ ಅದನ್ನು ವರದಿ ಮಾಡಬಹುದು.


Click it and Unblock the Notifications








