ಆಧಾರ್ ಸಿಸ್ಟಮ್‌ನಲ್ಲಿ ಭಾರೀ ಲೋಪದೋಷ?; ಒಂದೇ ಫೋಟೋ ಹಲವು ಆಧಾರ್ ಕಾರ್ಡ್!
ಕೆಲವು ದಿನಗಳ ಹಿಂದಷ್ಟೇ ಆಧಾರ್ ಬಳಕೆದಾರರಿಗೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಗುಡ್ ನ್ಯೂಸ್ ನೀಡಿತ್ತು. ಅದರಂತೆ ಮೂರು ತಿಂಗಳ ಕಾಲಾವಕಾಶದ ಒಳಗೆ ಉಚಿತವಾಗಿ ಆಧಾರ್ ನವೀಕರಣ ಮಾಡಿಕೊಳ್ಳಲು ಅವಕಾಶ ನೀಡಿದೆ. ಆದರೆ, ಇದರ ನಡುವೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ.
ಹೌದು, ಆಧಾರ್ ವ್ಯವಸ್ಥೆಯಲ್ಲಿನ ಕೆಲವು ಲೋಪದೋಷಗಳನ್ನು ಪತ್ತೆ ಮಾಡಲಾಗಿದ್ದು, ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅದರಂತೆ ದೆಹಲಿ ಪೊಲೀಸರು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ವ್ಯವಸ್ಥೆಯಲ್ಲಿ ಕೆಲವು ಗಂಭೀರ ಲೋಪದೋಷಗಳನ್ನು ಫ್ಲ್ಯಾಗ್ ಮಾಡಿದ್ದಾರೆ. ಹಾಗಿದ್ರೆ, ಆಧಾರ್‌ನಲ್ಲಿ ಕಂಡುಬಂದ ಲೋಪದೋಷ ಏನು?, ಇದರಿಂದ ಆಗುವ ಅನಾನುಕೂಲಗಳೇನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಓದಿರಿ.

ಆಧಾರ್‌ನಲ್ಲಿ ಲೋಪ: ಆಧಾರ್‌ನಲ್ಲಿ ಯಾವುದೇ ವ್ಯಕ್ತಿಗೆ ಐಡಿಯನ್ನು ರಚಿಸುವಾಗ ಆಧಾರ್ ವ್ಯವಸ್ಥೆಯು ಫೇಸ್ ಬಯೋಮೆಟ್ರಿಕ್ಸ್ ಹೊಂದಾಣಿಕೆಯನ್ನು ನಡೆಸುತ್ತಿಲ್ಲ ಎಂದು ತಿಳಿದು ಬಂದಿದೆಯಂತೆ. ಇದನ್ನು ದೆಹಲಿ ಪೊಲೀಸರು ಕಂಡುಕೊಂಡಿದ್ದಾರೆ ಎಂದು ಟೈಮ್ಸ್ ಆಪ್ ಇಂಡಿಯಾ ವರದಿ ಮಾಡಿದೆ. ಅದರಂತೆ ಪೊಲೀಸರು ಯುಐಡಿಎಐಗೆ ಪತ್ರ ಬರೆದು ಎಚ್ಚೆತ್ತುಕೊಳ್ಳುವಂತೆ ಸೂಚಿಸಿದ್ದಾರೆ.
ದೆಹಲಿ ಪೊಲೀಸರು ಯುಐಡಿಎಐಗೆ ಬರೆದಿರುವ ಪತ್ರದಲ್ಲಿ, ಎಲ್ಲಾ ಆಧಾರ್ ಕಾರ್ಡ್‌ಗಳಲ್ಲಿನ ಫೋಟೋಗಳು ಒಂದೇ ವ್ಯಕ್ತಿಯದ್ದಾಗಿದ್ದರೂ ಸಹ ಆಧಾರ್ ಕಾರ್ಡ್ ಅನ್ನು ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಕ್ರಿಯೇಟ್ ಮಾಡಲಾಗಿದೆ. ಆಧಾರ್ ಡೇಟಾಬೇಸ್‌ನಿಂದ ಅವರ ಹೆಸರುಗಳನ್ನು ಪರಿಶೀಲಿಸಿದ ನಂತರ 12 ಬ್ಯಾಂಕ್ ಖಾತೆಗಳನ್ನು ಆಲ್‌ಲೈನ್ ಮೂಲಕ ತೆರೆಯಲಾಗಿದೆ ಎಂದು ನಾವು ಗಮನಿಸಿದ್ದೇವೆ. ಈ ಮೂಲಕ ಒಬ್ಬ ವ್ಯಕ್ತಿಯಿಂದ ಬಹು ಆಧಾರ್ ಕಾರ್ಡ್‌ಗಳನ್ನು ರಚಿಸಲು ಸಾಧ್ಯ ಎಂದು ತಿಳಿದುಬಂದಿದೆ.

ಇದು ಹೇಗೆ ತಿಳಿದುಬಂತು? : ಪೊಲೀಸರು ಸಾಮಾನ್ಯವಾಗಿ ತನಿಖಾ ಹಂತದಲ್ಲಿ ವಿವಿಧ ರೀತಿಯ ತಂತ್ರಜ್ಞಾನವನ್ನು ಬಳಕೆ ಮಾಡುತ್ತಾರೆ. ಅದರಂತೆ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಅಪರಾಧಿಗಳನ್ನು ವಿಚಾರಣೆ ನಡೆಸುವಾಗ ಪೊಲೀಸರು ಆಧಾರ್ ವ್ಯವಸ್ಥೆಯಲ್ಲಿ ಹಲವಾರು ಲೋಪದೋಷಗಳನ್ನು ಕಂಡುಕೊಂಡಿದ್ದಾರೆ. ಯಾವುದೇ ವ್ಯಕ್ತಿಗೆ ಆಧಾರ್ ಗುರುತನ್ನು ರಚಿಸುವಾಗ ಆಧಾರ್ ವ್ಯವಸ್ಥೆಯು ಮುಖದ ಬಯೋಮೆಟ್ರಿಕ್‌ಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಇನ್ನು ವಂಚಕರು ಅಧಿಕೃತ ಏಜೆಂಟ್‌ಗಳ ರುಜುವಾತುಗಳನ್ನು ಬಳಕೆ ಮಾಡುವುದಲ್ಲದೆ ಅವರ ಸಿಲಿಕಾನ್ ಫಿಂಗರ್‌ಪ್ರಿಂಟ್‌ಗಳು ಮತ್ತು ಐರಿಶ್ ಸ್ಕ್ಯಾನ್‌ಗಳನ್ನು ಬಳಕೆ ಮಾಡಿದ್ದಾರೆ. ಹಾಗೆಯೇ ಕಾನ್ಫಿಗರ್ ಮಾಡಿದ ಲ್ಯಾಪ್‌ಟಾಪ್‌ಗಳ ಪ್ರಿಂಟ್‌ಔಟ್‌ಗಳನ್ನು ಒದಗಿಸಿದ್ದಾರೆ ಎಂದು ದೆಹಲಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಈ ಮೂಲಕ ವಂಚಕರು ಹೇಗೆಲ್ಲಾ ಆಧಾರ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪತ್ತೆ ಮಾಡಲಾಗಿದೆ.

ಆಧಾರ್ ಪ್ರಾಧಿಕಾರದ ನಿಯಮದ ಪ್ರಕಾರ ಅಧಿಕೃತ ಏಜೆಂಟ್‌ಗಳು ಅಧಿಕೃತ ಸರ್ಕಾರಿ ಕಚೇರಿಗಳಿಂದ ಮಾತ್ರ ಕೆಲಸ ಮಾಡಬೇಕು ಹಾಗೆಯೇ ಅವರ ಜಿಪಿಎಸ್ ವ್ಯವಸ್ಥೆಯು ಸಕ್ರಿಯವಾಗಿರಬೇಕು. ಆದಾಗ್ಯೂ, ಈ ಭದ್ರತೆಯನ್ನು ಬೈಪಾಸ್ ಮಾಡುವ ಉದ್ದೇಶದಿಂದಾಗಿ ವಂಚಕರು ಕಾನ್ಫಿಗರ್ ಮಾಡಿದ ಲ್ಯಾಪ್‌ಟಾಪ್ ಅನ್ನು ಪ್ರತಿ 2-3 ದಿನಗಳಿಗೊಮ್ಮೆ ಗೊತ್ತುಪಡಿಸಿದ ಸರ್ಕಾರಿ ಸಂಸ್ಥೆ/ಕಚೇರಿಗಳಿಗೆ ತೆಗೆದುಕೊಂಡು ಹೋಗುತ್ತಿರುತ್ತಾರೆ. ಹೀಗಾಗಿ GPS ಯಂತ್ರವು ಸರ್ಕಾರಿ ಕಚೇರಿಯ ಸ್ಥಳವನ್ನು ತೋರಿಸುವುದರಿಂದ ಅವರು ಈ ಭದ್ರತಾ ಪರಿಶೀಲನೆಯನ್ನು ಬೈಪಾಸ್ ಮಾಡುತ್ತಿದ್ದಾರಂತೆ.
ಆಧಾರ್‌ನಲ್ಲಿ ಮತ್ತೊಂದು ಸಮಸ್ಯೆ: ಆಧಾರ್ ವ್ಯವಸ್ಥೆಯಲ್ಲಿನ ಮತ್ತೊಂದು ಸಮಸ್ಯೆ ಎಂದರೆ ಸಿಲಿಕಾನ್ ಫಿಂಗರ್‌ಪ್ರಿಂಟ್ ಮತ್ತು ಭೌತಿಕ ಫಿಂಗರ್‌ಪ್ರಿಂಟ್ ನಡುವೆ ಇರುವ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಅಧಿಕೃತ ಏಜೆಂಟ್‌ಗಳು ನೀಡಿದ ಸಿಲಿಕಾನ್ ಫಿಂಗರ್‌ಪ್ರಿಂಟ್‌ಗಳನ್ನು ಬಳಸಿಕೊಂಡು ಆಧಾರ್ ವ್ಯವಸ್ಥೆಗೆ ಲಾಗ್ ಇನ್ ಮಾಡಲು ಸಾಧ್ಯವಾಗಿದ್ದರಿಂದ ವಂಚಕರು ಇದರ ಲಾಭ ಪಡೆದುಕೊಡಿದ್ದಾರೆ ಎಂದು ಕಂಡುಕೊಳ್ಳಲಾಗಿದೆ.
ಐರಿಶ್ ಸ್ಕ್ಯಾನ್ ಅನ್ನು ಹೇಗೆ ಬಳಕೆ ಮಾಡಲಾಗಿದೆ? : ಐರಿಶ್ ಸ್ಕ್ಯಾನ್ ಎನ್ನುವುದು ಬಯೋಮೆಟ್ರಿಕ್ ಫೀಚರ್ಸ್ ಆಗಿದ್ದು, ವ್ಯಕ್ತಿಯು ಜೀವಂತವಾಗಿದ್ದಾನೆಯೇ ಮತ್ತು ಸಿಸ್ಟಮ್‌ಗೆ ಲಾಗ್ ಇನ್ ಮಾಡಲು ಯಂತ್ರದ ಮುಂದೆ ಕುಳಿತಿದ್ದಾನೆಯೇ ಎಂಬುದನ್ನು ಪತ್ತೆಹಚ್ಚಲು ಇದನ್ನು ಬಳಕೆ ಮಾಡಲಾಗುತ್ತದೆ. ಆದರೆ, ವಂಚಕರು ಲಾಗ್ ಇನ್ ಮಾಡಲು ಐರಿಶ್ ಸ್ಕ್ಯಾನ್‌ನ ಕಲರ್ ಪ್ರಿಂಟರ್ ಅನ್ನು ಬಳಕೆ ಮಾಡಿಕೊಂಡಿದ್ದರಿಂದಾಗಿ ಆಧಾರ್ ಸಿಸ್ಟಮ್ ಅದನ್ನು ಪತ್ತೆ ಮಾಡಿಲ್ಲ.
ಬೆರಳಚ್ಚಿನಲ್ಲಿ ವಂಚನೆ ಹೇಗೆ?: ಆಧಾರ್ ವ್ಯವಸ್ಥೆಯು ವ್ಯಕ್ತಿಯ 10 ಬೆರಳಚ್ಚುಗಳನ್ನು ಒಂದೇ ಗುರುತಾಗಿ ಪರಿಗಣಿಸುತ್ತದೆ. ಅಂದರೆ ಈ 10 ವಿಭಿನ್ನ ಗುರುತುಗಳನ್ನು ವಿಶಿಷ್ಟವಾಗಿ ಪರಿಗಣಿಸುವುದಿಲ್ಲ. ವಂಚಕರು ಈ ಲೋಪದೋಷಗಳ ಬಗ್ಗೆ ತಿಳಿದುಕೊಂಡೇ ಫಿಂಗರ್‌ಪ್ರಿಂಟ್‌ಗಳನ್ನು ಬದಲಿಸುವ ಮೂಲಕ ಅಥವಾ ಒಬ್ಬ ವ್ಯಕ್ತಿಯ ಫಿಂಗರ್‌ಪ್ರಿಂಟ್ ಅನ್ನು ಮತ್ತೊಬ್ಬರೊಂದಿಗೆ ಬೆರೆಸುವ ಮೂಲಕ ಅನೇಕ ನಕಲಿ ಐಡಿಗಳನ್ನು ರಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.


Click it and Unblock the Notifications








