fake websites: ಈ ಫ್ಲಿಪ್‌ಕಾರ್ಟ್, ಅಮೆಜಾನ್ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರ! ದೀಪಾವಳಿಯಲ್ಲಿ ನಡೆಯಲಿದೆ ಮಹಾ ಮೋಸ!
ಭಾರತದಲ್ಲಿ ಯಾವುದೇ ಹಬ್ಬಗಳು ಜರುಗಿದರೂ ಸಹ ಅದಕ್ಕೆ ತಕ್ಕಂತೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಭರ್ಜರಿ ಆಫರ್ ಘೋಷಣೆ ಮಾಡುತ್ತವೆ. ಈ ನಡುವೆ ದೀಪಾವಳಿ ಸಂಭ್ರಮ ಭಾರತದಲ್ಲಿ ಜೋರಾಗಿದೆ. ಪರಿಣಾಮ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ (Flipkart and Amazon) ಸೇರಿದಂತೆ ಅನೇಕ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಭರ್ಜರಿ ಆಫರ್ ಘೋಷಣೆ ಮಾಡಿವೆ.
ಹೌದು, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಖರೀದಿ ಹೆಚ್ಚಾಗುತ್ತಿದೆ. ಅದರಲ್ಲೂ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್ ಮೂಲಕ ಜನರು ಹೆಚ್ಚು ಹೆಚ್ಚಾಗಿ ಖರೀದಿ ಮಾಡಲು ಮುಂದಾಗುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಸ್ಕ್ಯಾಮರ್‌ಗಳು ನಕಲಿ ವೆಬ್‌ಸೈಟ್ (websites) ಮೂಲಕ ಜನರನ್ನು ಮೋಸದ ಬಲೆಗೆ ಬೀಳಿಸಲು ಸಜ್ಜಾಗಿದ್ದಾರೆ. ಸಂಶೋಧನಾ ತಂಡವು ದೀಪಾವಳಿ ಋತುವಿನಲ್ಲಿ ಫಿಶಿಂಗ್ ಪ್ರಚಾರಗಳ ಬಗ್ಗೆ ಎಚ್ಚರಿಕೆ ನೀಡಿದೆ. ಹಾಗಿದ್ರೆ, ಸ್ಕ್ಯಾಮರ್‌ಗಳು ಯಾವ ರೀತಿ ವಂಚನೆ ಮಾಡಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಾಗುತ್ತಿದ್ದಂತೆ ಆನ್‌ಲೈನ್‌ನಲ್ಲಿ ಮೋಸದ ಬಲೆ ಸಹ ವಿಸ್ತರಣೆ ಆಗುತ್ತಿದೆ. ಕ್ಲೌಡ್‌ಸೆಕ್ ಸೈಬರ್ ಸಂಶೋಧಕರು ಆನ್‌ಲೈನ್ ವಂಚನೆಗಳ ಉಲ್ಬಣವನ್ನು ಪತ್ತೆ ಮಾಡಿದ್ದಾರೆ. ಅದರಲ್ಲೂ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ಜನಪ್ರಿಯ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ನಕಲಿ ಸ್ಕೀಮ್‌ಗಳು ದೀಪಾವಳಿ ಖರೀದಿದಾರರನ್ನು ತೀವ್ರವಾಗಿ ಗುರಿಯಾಗಿಸಿಕೊಂಡಿವೆ ಎಂದು ತಿಳಿದುಬಂದಿದೆ. ಈ ಸ್ಕ್ಯಾಮರ್ಸ್ ಕ್ರಿಪ್ಟೋ ಮರುನಿರ್ದೇಶನಗಳು ಮತ್ತು ಬೆಟ್ಟಿಂಗ್ ಯೋಜನೆಗಳಂತಹ ತಂತ್ರಗಳನ್ನು ಬಳಕೆ ಮಾಡಿಕೊಂಡು ದೊಡ್ಡ ಬ್ರ್ಯಾಂಡ್‌ಗಳ ಹೆಸರನ್ನು ಹಾಳುಮಾಡಲು ಮುಂದಾಗಿದ್ದಾರಂತೆ.
ಕಳೆದ ವಾರ ಕ್ಲೌಡ್‌ಸೆಕ್ (CloudSEK) ತಂಡವು ಫೇಸ್‌ಬುಕ್ ಜಾಹೀರಾತುಗಳ ಲೈಬ್ರರಿಯಿಂದ 828 ಮೋಸದ ಡೊಮೇನ್‌ಗಳನ್ನು ಪತ್ತೆ ಮಾಡಿತ್ತು. ಈ ಡೊಮೇನ್‌ಗಳು ಫಿಶಿಂಗ್‌ಗೆ ಸಂಬಂಧಿಸಿದ್ದವಾಗಿದ್ದು, ಜನರ ಖಾಸಗಿ ಮಾಹಿತಿಯನ್ನು ಈ ಮೂಲಕ ಕಲೆ ಹಾಕುವ ಕೆಲಸ ಮಾಡಿವೆ. ಅದರಂತೆ ಈಗ ಕ್ಲೌಡ್‌ಸೆಕ್‌ನಲ್ಲಿ ಸೈಬರ್ ಇಂಟಲಿಜೆನ್ಸ್‌ನ ಮುಖ್ಯಸ್ಥರಾಗಿರುವ ರಿಷಿಕಾ ದೇಸಾಯಿ ಅವರು ಈ ವರ್ಷ ನಕಲಿ ಶಾಪಿಂಗ್ ವೆಬ್‌ಸೈಟ್‌ಗಳ ಉಲ್ಬಣದ ಬಗ್ಗೆ ಎಚ್ಚರಿಕೆ ನೀಡಿದ್ದರೆ.
ಇನ್ನು ದೀಪಾವಳಿ ಸಂದರ್ಭ ಎಲ್ಲರೂ ಕೇವಲ ಆಫರ್ ಎಷ್ಟಿದೆ ಎಂಬುದನ್ನಷ್ಟೇ ನೋಡುತ್ತಾರೆ. ಬದಲಾಗಿ ಸೈಟ್ ಬಗ್ಗೆ ಗಮನಹರಿಸುವುದಿಲ್ಲ. ಈ ಕಾರಣಕ್ಕೆ ಮುಂಚೆಯೇ ಈ ಬಗ್ಗೆ ಮಾಹಿತಿ ತಿಳಿದಿದ್ದರೆ ಮುಂದಿನ ದಿನಗಳಲ್ಲಿ ಮೋಸ ಹೋಗುವುದು ತಪ್ಪುತ್ತದೆ ಎಂಬುದು ಸಂಶೋಧಕರ ವಾದವಾಗಿದೆ. ಅಂದರೆ ಯಾವೆಲ್ಲಾ ತಂತ್ರಗಗಳನ್ನು ಬಳಕೆ ಮಾಡಿಕೊಂಡು ಮೋಸ ಮಾಡುತ್ತಾರೆ ಅನ್ನೋದನ್ನು ಮೊದಲೇ ಗುರುತಿಸುವುದರಿಂದ ದೀಪಾವಳಿ ಋತುವಿನಲ್ಲಿ ವಂಚನೆಗೊಳಗಾಗುವುದನ್ನು ತಪ್ಪಿಸಬಹುದು ಎಂಬುದು ಇವರ ಉದ್ದೇಶವಾಗಿದೆ.

ಏನೆಲ್ಲಾ ತಂತ್ರ ಬಳಕೆ ಮಾಡಿ ಮೋಸ ಮಾಡಲಾಗುತ್ತದೆ?: ಎಲ್ಲರೂ ದೀಪಾವಳಿಯ ಶಾಪಿಂಗ್‌ಗೆ ಮುಂದಾಗಿದ್ದಾರೆ. ಇದನ್ನೇ ದಾಳವಾಗಿ ಉರುಳಿಸಿರುವ ಸ್ಕ್ಯಾಮರ್‌ಗಳು ದೊಡ್ಡ ದೊಡ್ಡ ಇ- ಕಾಮರ್ಸ್ ಸೈಟ್‌ಗಳಲ್ಲಿ ನಕಲಿ ಸೈಟ್‌ಗಳನ್ನು ಓಪನ್ ಮಾಡಿ ವಂಚನೆ ಮಾಡಲು ಮುಂದಾಗಿದ್ದಾರೆ. ಜೊತೆಗೆ ನಕಲಿ ಸೈಟ್‌ಗಳು ಅಸಲಿಯಾಗಿ ಕಾಣುವಂತೆ ಮಾಡಲು ಟೈಪೋಸ್ಕ್ವಾಟಿಂಗ್‌ನಂತಹ ಟ್ರಿಕಿ ತಂತ್ರಗಳನ್ನು ಸಹ ಈ ವೇಳೆ ಬಳಕೆ ಮಾಡುತ್ತಾರಂತೆ. ಉದಾಹರಣೆಗೆ 'shop.com' ಅನ್ನು 'shoop.xyz' ಆಗಿ ಪರಿವರ್ತಿಸಿದ್ದಾರೆ.
ಇದರೊಂದಿಗೆ ಬೆಟ್ಟಿಂಗ್ ಆಟವೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 'ದೀಪಾವಳಿ' ಮತ್ತು 'ಪೂಜಾ' ಎಂಬ ಕೀವರ್ಡ್ ಹುಡುಕಿದ್ರೆ ಹಾಂಗ್ ಕಾಂಗ್‌ನಲ್ಲಿ ಹೋಸ್ಟ್ ಮಾಡುತ್ತಿರುವ ಮತ್ತು ಚೀನೀ ಬೆಟ್ಟಿಂಗ್ ಪುಟಗಳಿಗೆ ಮರುನಿರ್ದೇಶಿಸುತ್ತಿರುವುದು ಕಂಡುಬಂದಿದೆ. ಯಾಕೆಂದರೆ ದೀಪಾವಳಿ ಸಂದರ್ಭದಲ್ಲಿ ಅಲ್ಲಲ್ಲಿ ಜೂಜು ಆಡುವುದು ಸಂಪ್ರದಾಯವಾಗಿದೆ. ಅದರಂತೆ ಈ ಸ್ಕ್ಯಾಮರ್‌ಗಳು ನಕಲಿ ಜೂಜಿನ ಸೈಟ್‌ಗಳೊಂದಿಗೆ ಬಳಕೆದಾರರನ್ನು ಸೆಳೆಯಲು ಮುಂದಾಗಿದ್ದಾರೆ.

ಕ್ರಿಪ್ಟೋಕರೆನ್ಸಿ ಹಗರಣಗಳು ಸಹ ಈ ವೇಳೆ ನಡೆಯಲಿದೆ ಎಂದು ಕ್ಲೌಡ್‌ಸೆಕ್ ಮಾಹಿತಿ ನೀಡಿದೆ. ದೀಪಾವಳಿ ಫ್ರೀ ಗಿಫ್ಟ್ ಭರವಸೆಗಳೊಂದಿಗೆ ಸ್ಕೆಚಿ ಕ್ರಿಪ್ಟೋ ವೆಬ್‌ಸೈಟ್‌ಗಳಲ್ಲಿ ನೋಂದಾಯಿಸಲು ಬಳಕೆದಾರರನ್ನು ಆಹ್ವಾನಿಸಲಾಗುತ್ತದೆ. ಸಂಶಯಾಸ್ಪದ ಕ್ರಿಪ್ಟೋ ಪ್ಲಾಟ್‌ಫಾರ್ಮ್‌ಗಳಿಗೆ ಸೈನ್ ಅಪ್ ಮಾಡಿಸಿಕೊಳ್ಳುವ ಉದ್ದೇಶದಿಂದ ಉಚಿತ ಜೀವ ವಿಮೆ ಮತ್ತು ವಿಶೇಷ ನಾಣ್ಯಗಳಂತಹ ಕೊಡುಗೆಗಳ ಆಸೆಯನ್ನು ಜನರಿಗೆ ತೋರಿಸಲಾಗುತ್ತದಂತೆ.


Click it and Unblock the Notifications








