ಸ್ವಿಚ್ ಬೋರ್ಡ್‌ಗೆ ಏನಾದರೂ ಪ್ಲಗ್ ಇನ್ ಮಾಡಿದಾಗ ಶಾಕ್ ಹೊಡೆಯುತ್ತಾ? ಇಲ್ಲಿದೆ ಪರಿಹಾರ!
ವಿದ್ಯುತ್ (Electricity) ಇಂದು ಎಲ್ಲರ ಅಗತ್ಯ ಪೂರೈಕೆಗಳಿಗೆ ಅನಿವಾರ್ಯವಾಗಿದೆ. ವಿದ್ಯುತ್ ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಾಗ್ಯೂ ವಿದ್ಯುತ್ ಶಾಕ್‌ಗೆ (Electric shock) ಒಳಗಾಗಿ ಅದೆಷ್ಟೋ ಜನರು ಸಾವಿಗೀಡಾಗುವ ವಿಷಯಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಅದರಲ್ಲೂ ಈ ಮಳೆಗಾಲದಲ್ಲಿ ಈ ಸಮಸ್ಯೆ ತುಸು ಹೆಚ್ಚಾಗಿಯೇ ಇರುತ್ತದೆ.
ಹೌದು, ಮನೆಯಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್, ಸ್ಮಾರ್ಟ್‌ಟಿವಿ ಸೇರಿದಂತೆ ಅನೇಕ ಡಿವೈಸ್‌ಗಳಿಗೆ ವಿದ್ಯುತ್ ಅನಿವಾರ್ಯ ಆಗಿದೆ. ಇದರಿಂದಾಗಿ ಮನೆಯ ಅಲ್ಲಲ್ಲಿ ಸ್ವಿಚ್ ಬೋರ್ಡ್‌ಗಳನ್ನು ನೀವು ಗಮನಿಸಿರಬಹುದು. ಅವು ಈವರೆಗೂ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದು, ಈಗ ಅಂದರೆ ಮಳೆಗಾಲದಲ್ಲಿ ಏನಾದರೂ ಪ್ಲಗ್ ಮಾಡಲು ಮುಂದಾದಾಗ ವಿಚಿತ್ರವಾದ ಶಬ್ಧ ಬಂದರೆ ಅಥವಾ ಚಿಕ್ಕದಾಗಿ ಶಾಕ್ ಹೊಡೆದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಹಾಗಿದ್ರೆ, ಯಾವ ಕಾರಣಕ್ಕೆ ಈ ಸಮಸ್ಯೆಗಳು ಉಂಟಾಗುತ್ತವೆ?, ಇದಕ್ಕೆ ಪರಿಹಾರ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಪ್ಲಗ್ ಇನ್ ಮಾಡಿದ್ರೆ ಶಾಕ್: ಎಲೆಕ್ಟ್ರಿಕ್ ಬೋರ್ಡ್‌ನಲ್ಲಿ(Electric board) ಅಳವಡಿಸಲಾಗಿರುವ ಸಾಕೆಟ್‌ಗಳು, ಸ್ವಿಚ್‌ಗಳು ಮತ್ತು ಪ್ಲಗ್‌ಗಳು ವಿದ್ಯುತ್ ವಾಹಕವಲ್ಲದವು. ಆದರೆ, ಮಳೆಗಾಲದಲ್ಲಿ ಸಾಕೆಟ್‌ಗಳು, ಸ್ವಿಚ್‌ಗಳು ಮತ್ತು ಪ್ಲಗ್‌ಗಳನ್ನು ಬಳಸುವಾಗ ನಿಮಗೆ ಶಾಕ್ ಆದ ಅನುಭವ ಆದರೆ ನೀವು ಜಾಗರೂಕರಾಗಿರಬೇಕು, ಏಕೆಂದರೆ ಈ ವಿದ್ಯುತ್ ಆಘಾತವು ಖಂಡಿತಾ ಮಾರಕವಾಗಬಹುದು. ಅದರಲ್ಲೂ ಇದಕ್ಕೆ ಹಲವಾರು ಕಾರಣಗಳಿದ್ದು, ಅವುಗಳ ವಿವರ ಹಾಗೂ ಪರಿಹಾರ ಏನು ಎಂಬುದನ್ನು ತಿಳಿಯೋಣ ಬನ್ನಿ.
ಅರ್ಥಿಂಗ್ ವೈರ್ ಪರಿಶೀಲಿಸಿ: ನಿಮ್ಮ ಮನೆಯಲ್ಲಿ ಅರ್ಥಿಂಗ್ ವೈರ್ (Earthing wire) ಇದ್ದರೆ ಅದನ್ನು ಸಾಮಾನ್ಯವಾಗಿ ಕನಿಷ್ಠ 5 ವರ್ಷಗಳಿಗೆ ಒಮ್ಮೆ ಕಡ್ಡಾಯವಾಗಿ ಪರಿಶೀಲಿಸಬೇಕು. ಅದರಲ್ಲೂ ಈ ಸಮಯದಲ್ಲಿ ದೇಶದಾದ್ಯಂತ ಮಳೆಯಾಗುತ್ತಿದ್ದು, ಮನೆಗಳಲ್ಲಿ ತೇವಾಂಶ ಇರುತ್ತದೆ. ಇದರಿಂದಾಗಿ ಜನರು ಸಾಕೆಟ್‌ಗಳು ಮತ್ತು ಪ್ಲಗ್‌ಗಳನ್ನು ಬಳಕೆ ಮಾಡುವಾಗ ವಿದ್ಯುತ್ ಆಘಾತಕ್ಕೆ ಒಳಗಾಗುವ ಸಂಭವ ಹೆಚ್ಚಾಗಿ ಇರುತ್ತದೆ.
ನೀರಿನ ಒಳಹರಿವು: ಇದರೊಂದಿಗೆ ಮಳೆನೀರು ಸರಿಯಾಗಿ ಮುಚ್ಚದ ಅಥವಾ ಹಾನಿಗೊಳಗಾದ ಸ್ವಿಚ್‌ಬೋರ್ಡ್‌ಗಳಲ್ಲಿ(Switchboard) ಹರಿದರೂ ಈ ಸಮಸ್ಯೆ ಉಂಟಾಗುತ್ತದೆ. ಅಂದರೆ ನೇರ ವಿದ್ಯುತ್ ಘಟಕಗಳು ಅಥವಾ ತಂತಿಗಳೊಂದಿಗೆ ನೀರು ಸಂಪರ್ಕಕ್ಕೆ ಬಂದಾಗ, ಅದು ವಿದ್ಯುತ್‌ಗೆ ವಾಹಕ ಮಾರ್ಗವನ್ನು ನಿರ್ಮಾಣ ಮಾಡುತ್ತದೆ. ಆಗ ನೀವೇನಾದರೂ ಸ್ವಿಚ್ ಬೋರ್ಡ್ ಅಥವಾ ಇತರೆ ವಿದ್ಯುತ್ ವಾಹಕಗಳನ್ನು ಮುಟ್ಟಿದಾಗ ಶಾಕ್ ಹೊಡೆಯುತ್ತದೆ.
ತೇವ ಮತ್ತು ಆರ್ದ್ರತೆ: ಮಳೆ ನಿಂತಾಗಲೂ ಅಥವಾ ಮನೆಯ ಮೇಲೆ ನೀರಿನ ಟ್ಯಾಂಕ್ ಸೋರುತ್ತಿದ್ದರು ಸಹ ಕೆಲವು ಕಡೆ ವಿದ್ಯುತ್ ಸಮಸ್ಯೆಗಳು ಉಂಟಾಗುತ್ತವೆ. ಅಂದರೆ ನೇರ ನೀರಿನ ಒಳಹರಿವು ಇಲ್ಲದಿದ್ದರೂ ನೀರಿನ ಹೆಚ್ಚಿನ ಆರ್ದ್ರತೆಯು ಸ್ವಿಚ್‌ಬೋರ್ಡ್‌ಗಳು ಮತ್ತು ಅವುಗಳ ಸುತ್ತಮುತ್ತ ತೇವಾಂಶವನ್ನು ಉಂಟು ಮಾಡಬಹುದು. ಈ ತೇವಾಂಶವು ವಿದ್ಯುತ್ ಪ್ರತಿರೋಧವನ್ನು ಕಡಿಮೆ ಮಾಡಲಿದ್ದು, ಇದು ಎಲ್ಲಾ ಕಡೆ ವಿದ್ಯುತ್ ಹರಿಯುವಂತೆ ಮಾಡುತ್ತದೆ.
GFCI ಬಳಕೆ ಮಾಡಿ: ಗ್ರೌಂಡ್ ಫಾಲ್ಟ್ ಸರ್ಕ್ಯೂಟ್ ಇಂಟರಪ್ಟರ್‌ಗಳನ್ನು (GFCI) ಬಳಕೆ ಮಾಡಿದರೆ ವಿದ್ಯುತ್ ಸಮಸ್ಯೆಗಳಿಂದ ಸುಲಭವಾಗಿ ಪಾರಾಗಬಹುದು. ಈ ಸುರಕ್ಷತಾ ಡಿವೈಸ್ ವಿದ್ಯುತ್ ಪ್ರವಾಹಗಳಲ್ಲಿನ ಅಸಮತೋಲನವನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆ. ಪರಿಣಾಮ ಮನೆಯಲ್ಲಿ ಏನಾದರೂ ವಿದ್ಯುತ್ ಸಮಸ್ಯೆ ಉಂಟಾದರೆ ತ್ವರಿತವಾಗಿ ವಿದ್ಯುತ್ ಅನ್ನು ಸ್ಥಗಿತಗೊಳಿತ್ತದೆ.
ಕಳಪೆ ನಿರೋಧನ : ವಿದ್ಯುತ್ ತಂತಿಗಳು ಅಥವಾ ಸ್ವಿಚ್‌ಬೋರ್ಡ್‌ನೊಳಗಿನ ಘಟಕಗಳ ಮೇಲಿನ ನಿರೋಧನವು ಹಾನಿಗೊಳಗಾಗಿದ್ದರೆ ಅಥವಾ ಅಸಮರ್ಪಕವಾಗಿದ್ದರೂ ಸಹ ವಿದ್ಯುತ್ ಆಘಾತಗಳ ಅಪಾಯ ಹೆಚ್ಚಾಗಿಯೇ ಇರುತ್ತದೆ. ಇದರಿಂದ ನೀವು ವಿದ್ಯುತ್ ಉಪಕರಣ ಖರೀದಿ ಮಾಡುವಾಗ ಒಂದಲ್ಲ ಹತ್ತು ಬಾರಿ ಯೋಚನೆ ಮಾಡಿ ಖರೀದಿ ಮಾಡಿ. ಇಷ್ಟೆಲ್ಲಾ ಮಾಡಿದರೂ ಶಾಕ್ ಹೊಡೆಯುತ್ತದೆ ಎಂದರೆ ಇದರಲ್ಲಿ ಪರಿಣಿತರಾಗಿರುವವರನ್ನು ಕರೆತಂದು ಪರಿಶೀಲನೆ ಮಾಡಿಸಿ.
ಇದರೊಂದಿಗೆ ಮಳೆಗಾಲದಲ್ಲಿ ಬೀದಿಯಲ್ಲಿ ನಡೆದು ಹೋಗುವಾಗ ಅಥವಾ ಮನೆಯಿಂದ ಹೊರಗಿದ್ದಾಗ ಬೀದಿ ಬದಿ ಇರುವ ಲೈಟ್ ಕಂಬಗಳು ಹಾಗೂ ಟ್ರಾನ್ಸ್ಫಾರ್ಮರ್ ಬಾಕ್ಸ್ ಬಳಿ ಯಾವುದೇ ಕಾರಣಕ್ಕೂ ನಿಲ್ಲಿಬೇಡಿ ಹಾಗೂ ಮುಟ್ಟಬೇಡಿ. ಅಷ್ಟು ಮಾತ್ರವಲ್ಲದೆ ವಿದ್ಯುತ್ ತಂತಿ ತಾಗಿರುವ ಮರಗಳ ಬಳಿ ಸುಳಿಯಲೇ ಬೇಡಿ, ಜೊತೆಗೆ ವಿದ್ಯುತ್ ಕಂಬದ ಬಳಿ ವಾಹನಗಳನ್ನು ಪಾರ್ಕಿಂಗ್ ಮಾಡಬೇಡಿ.


Click it and Unblock the Notifications








