Uber: ಉಬರ್‌ನಲ್ಲಿ ಭಾರತೀಯರು ಏನನ್ನೆಲ್ಲಾ ಮರೆತು ಬರುತ್ತಾರೆ ಗೊತ್ತಾ!?
ಉಬರ್ (Uber) ಸೇವೆ ಭಾರತದ 125 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯ ಇದ್ದು, 2013 ರಲ್ಲಿ ಬೆಂಗಳೂರಿನಲ್ಲಿ ತನ್ನ ಸೇವೆಗಳನ್ನು ಆರಂಭಿಸಿದೆ. ಇದಾದ ನಂತರದಲ್ಲಿ ಇತರೆ ನಗರಗಳೀಗೆ ಇದರ ಸೇವೆ ವಿಸ್ಯರಣೆ ಆಗಿದೆ. ಈ ನಡುವೆ ಉಬರ್ ತನ್ನ ಗ್ರಾಹಕರಿಗೆ ವಿಶೇಷವಾದ ಮಾಹಿತಿಯನ್ನು ಬಹಿರಂಗಪಡಿಸಿದೆ.
ಹೌದು, ಸಾಮಾನ್ಯವಾಗಿ ನಾವು ಸಂಚಾರ ಮಾಡುವಾಗ ಯಾವುದೋ ನೆನಪಿನಲ್ಲಿ ಇನ್ನೇನನ್ನೋ ಮರೆತು ಬರುವುದು ಸಾಮಾನ್ಯವಾದ ಸಂಗತಿ. ಅದರಂತೆ ಹೆಚ್ಚಿನ ಜನಪ್ರಿಯತೆ ಪಡೆದಿರುವ ಉಬರ್‌ನಲ್ಲಿ ಸಾಕಷ್ಟು ಜನರು ಸಾಕಷ್ಟು ವಸ್ತುಗಳನ್ನು ಮರೆತುಬಿಟ್ಟು ಬರುತ್ತಾರೆ. ಈ ವಸ್ತುಗಳ ವಿಷಯಕ್ಕೆ ಸಂಬಂಧಿಸಿದಂತೆ ಉಬರ್ ವಿಶೇಷ ಮಾಹಿತಿ ನೀಡಿದೆ. ಅಂದರೆ ಜನರು ಯಾವ ವಸ್ತುಗಳನ್ನು ಹೆಚ್ಚು ಮರೆಯುತ್ತಾರೆ, ಯಾವ ನಗರದ ಜನರು ಈ ರೀತಿ ಮಾಡುತ್ತಾರೆ ಎಂಬಿತ್ಯಾದಿ ಮಾಹಿತಿಯನ್ನು ಹಂಚಿಕೊಂಡಿದೆ.

ಉಬರ್‌ನಲ್ಲಿ ಜನರು ಮರೆತು ಬರುವುದು ಏನು?: ಭಾರತಕ್ಕೆ ಸಂಬಂಧಿಸಿದಂತೆ ಉಬರ್ ತನ್ನ ಅಧಿಕೃತ ಲಾಸ್ಟ್ ಅಂಡ್ ಫೌಂಡ್ ಇಂಡೆಕ್ಸ್ ಅನ್ನು ಬಿಡುಗಡೆ ಮಾಡಿದೆ. ಪ್ರತಿ ವರ್ಷ ಉಬರ್ ಟ್ರೆಂಡ್‌ಗಳ ವರದಿಯನ್ನು ಪ್ರಕಟ ಮಾಡುತ್ತಲೇ ಬಂದಿದ್ದು, ಇದರಲ್ಲಿ ಯಾವ ನಗರಗಳ ಜನರು ಹೆಚ್ಚು ಮರೆತು ಹೋಗುತ್ತಾರೆ ಅನ್ನೋದನ್ನು ಬಹಿರಂಗಪಡಿಸಲಾಗಿದೆ. 2023 ರಲ್ಲಿ, ಉಬರ್‌ನ ಲಾಸ್ಟ್ ಅಂಡ್ ಫೌಂಡ್ ಇಂಡೆಕ್ಸ್ ಪ್ರಕಾರ, ಸತತ ಎರಡನೇ ವರ್ಷಕ್ಕೆ ದೆಹಲಿಯು ಭಾರತದಲ್ಲಿ ಅತ್ಯಂತ ಮರೆತುಹೋಗುವ ನಗರ ಎಂಬ ಕಿರೀಟವನ್ನು ಪಡೆದುಕೊಂಡಿತು.
ಇನ್ನು ಮುಂಬೈ ತನ್ನ ಮರೆವುಗಳಲ್ಲಿ ಸಾಕಷ್ಟು ಸ್ಥಿರವಾಗಿದೆ ಎಂದು ತೋರುತ್ತದೆ. ಹಾಗೆಯೇ ಇದು 2 ನೇ ಸ್ಥಾನವನ್ನು ಕಸಿದುಕೊಂಡಿದೆ. ಉಳಿದಂತೆ ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ಮೊದಲ ಐದು ನಗರಗಳ ಪಟ್ಟಿಯಿಂದ ಹೊರಗುಳಿದಿವೆ. ಇನ್ನು ಏನೆಲ್ಲಾ ಜನರು ಮರೆತು ಹೋಗುತ್ತಾರೆ ಅನ್ನೋ ವಿಷಯಕ್ಕೆ ಬಂದಾಗ, ಉಬರ್ ರೈಡ್‌ಗಳ ಸಮಯದಲ್ಲಿ ಫೋನ್‌ಗಳು ಪ್ರಮುಖ ಸ್ಥಾನ ಪಡೆಯುತ್ತವೆ.

ಅದರಲ್ಲೂ ಯಾವ ಫೋನ್‌ಗಳು ಎಂಬ ವಿಷಯವನ್ನು ಗಮನಿಸಿದ್ರೆ ಆಪಲ್ ಮೊದಲ ಸ್ಥಾನ ಪಡೆದಿದೆ. ಅಂದರೆ ಐಫೋನ್‌ಗಳು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಇದರೊಂದಿಗೆ ಪಟ್ಟಿಯಲ್ಲಿ ಸ್ಯಾಮ್‌ಸಂಗ್ ಮತ್ತು ರೆಡ್‌ಮಿ ಕಂಪೆನಿಯ ಫೋನ್‌ಗಳಿವೆ. ಉಳಿದಂತೆ ಲ್ಯಾಪ್‌ಟಾಪ್ ಬ್ಯಾಗ್‌ಗಳು, ಬಟ್ಟೆ, ಕೀಗಳು ಮತ್ತು ಹೆಡ್‌ಫೋನ್‌ಗಳನ್ನು ಸಾಮಾನ್ಯವಾಗಿ ಪ್ರಯಾಣಿಕರು ಮರೆತು ಹೋಗುತ್ತಾರಂತೆ.
ಇಷ್ಟೇ ಅಲ್ಲದೆ ವಾಚ್‌ಗಳು, ಆಭರಣಗಳು, ನೀರಿನ ಬಾಟಲಿಗಳು ಮತ್ತು ಸನ್‌ಗ್ಲಾಸ್‌ಗಳನ್ನು ಕ್ಯಾಬ್‌ಗಳಲ್ಲಿ ಜನರು ವಾಡಿಕೆಯಂತೆ ಮರೆತುಬಿಡುವ ಇತರ ವಸ್ತುಗಳಾಗಿವೆ ಎಂದು ಉಬರ್ ತನ್ನ ಹೇಳಿಕೆಯಲ್ಲಿ ಉಲ್ಲೇಖ ಮಾಡಿದೆ. ಇದರೊಂದಿಗೆ ಶುಕ್ರವಾರ ಸೇರಿದಂತೆ ವಾರಾಂತ್ಯದಲ್ಲಿ ಜನರು ಉಬರ್‌ನಲ್ಲಿ ಹೆಚ್ಚಿನ ವಸ್ತುಗಳನ್ನು ಮರೆತುಬಿಡುತ್ತಾರಂತೆ. ಇದಕ್ಕಾಗಿ ಅತ್ಯಂತ ಜನಪ್ರಿಯ ದಿನ ಎಂದು ಗುರುತಿಸಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದರೆ ಉಬರ್ ಪ್ರಕಾರ, ಸಂಜೆ 6 ರಿಂದ 8 ರವರೆಗೆ ಈ ಮರೆಯುವ ಪ್ರಕ್ರಿಯೆ ಜಾಸ್ತಿ ಆಗಿದೆಯಂತೆ. ಅಂದರೆ ಈ ಸಮಯದಲ್ಲಿ ಪ್ರಯಾಣ ಮಾಡುವವರೇ ಹೆಚ್ಚಾಗಿ ಕಾರಿನಲ್ಲಿ ಮರೆತು ತಮ್ಮ ವಸ್ತುಗಳನ್ನು ಬಿಟ್ಟು ಹೋಗುತ್ತಾರೆ ಎಂದು ಉಲ್ಲೇಖಿಸಿದೆ.

ಉಬರ್‌ನಲ್ಲಿ ಏನನ್ನಾದರೂ ಮರೆತು ಬಂದರೆ ಅದನ್ನು ಮರಳಿ ಪಡೆಯುವುದು ಹೇಗೆ?:
ಉಬರ್‌ನಲ್ಲಿ ಯಾವುದಾದೂ ವಸ್ತು ಅಥವಾ ಮೊಬೈಲ್ ಕಳೆದುಕೊಂಡರೆ ಚಿಂತೆ ಬೇಡ. ಇದಕ್ಕಾಗಿ ನೀವು ಉಬರ್ ಆಪ್‌ಗೆ ಹೋಗಿ ಮತ್ತು ಆಪ್‌ನ ಮೇಲಿನ ಎಡ ಮೂಲೆಯಲ್ಲಿರುವ ಮೆನು ಮೇಲೆ ಟ್ಯಾಪ್ ಮಾಡಿ. ಇದಾದ ನಂತರದಲ್ಲಿ 'ನಿಮ್ಮ ಪ್ರವಾಸಗಳು' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.
ಇದೆಲ್ಲಾ ಆದ ಮೇಲೆ ನೀವು ಕಳೆದುಕೊಂಡಿರುವ ವಸ್ತುಗಳನ್ನು ಹಾಗೂ ನೀವು ಮಾಡಿದ ಪ್ರವಾಸವನ್ನು ಆಯ್ಕೆಮಾಡಿ. ಬಳಿಕ ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'ನಾನು ವಸ್ತುವನ್ನು ಕಳೆದುಕೊಂಡೆ' ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರದಲ್ಲಿ ಅಲ್ಲೆ ಇರುವ ಕಳೆದುಹೋದ ಐಟಂ ಕುರಿತು ನನ್ನ ಚಾಲಕವನ್ನು ಸಂಪರ್ಕಿಸಿ ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿ. ಇದನ್ನು ಮಾಡಿದ ಮೇಲೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ನಿಮ್ಮ ಸಂಪರ್ಕ ಸಂಖ್ಯೆಯನ್ನು ನಮೂದಿಸಿ.


Click it and Unblock the Notifications








