WhatsApp ನಲ್ಲಿ ಏನೆಲ್ಲಾ ಭದ್ರತಾ ಫೀಚರ್ಸ್ ಇವೆ ಗೊತ್ತಾ!?, ಇಲ್ಲಿದೆ ಲಿಸ್ಟ್!
ಪ್ರಮುಖ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್(WhatsApp) ಇದೀಗ ಬಳಕೆದಾರರು ಸಾಕು ಎನ್ನುವಷ್ಟು ಹೊಸ ಹೊಸ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಅದರಲ್ಲೂ ಭದ್ರತಾ ವಿಚಾರಕ್ಕೆ ಹೆಚ್ಚಿನ ಮಾನ್ಯತೆ ನೀಡುತ್ತಿದ್ದು, ಇದರಿಂದ ಬಳಕೆದಾರರು ಯಾವುದೇ ಅಳುಕಿಲ್ಲದೆ ವಾಟ್ಸಾಪ್‌ನಲ್ಲಿ ಇಷ್ಟ ಬಂದವರ ಜೊತೆಗೆ ಮುಕ್ತವಾಗಿ ಸಂವಹನ ನಡೆಸಬಹುದಾಗಿದೆ.
ಹೌದು, ವಾಟ್ಸಾಪ್ ಪ್ರಮುಖವಾಗಿ ಭದ್ರತಾ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಈ ಕಾರಣಕ್ಕಾಗಿಯೇ ಇಂದು ಎಲ್ಲರೂ ಈ ಆಪ್ ಅನ್ನು ಮುಕ್ತವಾಗಿ ಬಳಕೆ ಮಾಡುತ್ತಾರೆ. ಅದಾಗ್ಯೂ ವಾಟ್ಸಾಪ್ ಸುಮ್ಮನೆ ಇರುವುದಿಲ್ಲ. ವಾರದಲ್ಲಿ ಮೂರು-ನಾಲ್ಕು ಹೊಸ ಹಾಗೂ ವಿಭಿನ್ನ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಇದೆ. ಇವು ಬಳಕೆದಾರರು ಈ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನಷ್ಟು ಸಮಯ ಕಳೆಯುವಂತೆ ಮಾಡುತ್ತಿದೆ. ಹಾಗಿದ್ರೆ, ಬನ್ನಿ ವಾಟ್ಸಾಪ್‌ನಲ್ಲಿ ಏನೆಲ್ಲಾ ಭದ್ರತಾ ಫೀಚರ್ಸ್ ಇವೆ. ಇವು ಹೇಗೆ ಬಳಕೆದಾರರನ್ನು ಹೇಗೆ ರಕ್ಷಣೆ ಮಾಡುತ್ತವೆ ಎಂಬ ಮಾಹಿತಿಯನ್ನು ತಿಳಿಯೋಣ.

*ವಾಟ್ಸಾಪ್ ಕೆಲವು ದಿನಗಳ ಹಿಂದೆ ವೈಯಕ್ತಿಕ ಚಾಟ್‌ಗಳನ್ನು ಲಾಕ್ ಮಾಡುವ ಅನುಕೂಲ ನೀಡಿದೆ. ಜನರು ಚಾಟ್‌ನ ಪ್ರೊಫೈಲ್ ವಿಭಾಗಕ್ಕೆ ಹೋಗಿ ಅದನ್ನು ಸಕ್ರಿಯಗೊಳಿಸಲು ಚಾಟ್ ಲಾಕ್ ಫೀಚರ್ಸ್ ಅನ್ನು ಟ್ಯಾಪ್ ಮಾಡಬೇಕಿದೆ. ಪ್ರತಿ ಚಾಟ್‌ಗೂ ಲಾಕ್ ಮಾಡಬೇಕು ಎಂದರೆ ಇದೇ ಹಂತವನ್ನು ಅನುಸರಿಸಬೇಕಾಗುತ್ತದೆ. ಇನ್ನು ಲಾಕ್ ಮಾಡಿದ ಚಾಟ್‌ಗಳು ಫೋಲ್ಡರ್‌ಗೆ ಆಡ್ ಆಗುತ್ತವೆ. ಇದರಿಂದ ಅವು ಮುಖ್ಯ ಪೇಜ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ.
*ಇದರೊಂದಿಗೆ ನೀಲಿ ಮಾರ್ಕ್ ಮರೆಮಾಡಲು ಸಹ ನಿಮಗೆ ಅವಕಾಶ ನೀಡಲಾಗಿದೆ. ಅಂದರೆ ಕಳುಹಿಸುವವರಿಗೆ ನೀವು ಅವರ ಸಂದೇಶಗಳನ್ನು ಓದಿದ್ದೀರಾ ಎಂದು ತಿಳಿಯಲು ಸಾಧ್ಯವಾಗುವುದಿಲ್ಲ. ಈ ಫೀಚರ್ಸ್ ಅನ್ನು ಸಕ್ರಿಯಗೊಳಿಸಲು ನೀವು ವಾಟ್ಸಾಪ್ ಸೆಟ್ಟಿಂಗ್ ವಿಭಾಗಕ್ಕೆ ತಲುಪಿ. ಅಲ್ಲಿ ಗೌಪ್ಯತೆ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ರೀಡ್ ರಿಸಿಪ್ಟ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಆನ್ ಮಾಡಿ.
*ಇನ್ನು ಮತ್ತೊಂದು ಗೌಪ್ಯತೆ ಫೀಚರ್ಸ್ ಎಂದರೆ ನಿಮ್ಮ ಫೋನ್ ಸಂಖ್ಯೆಯನ್ನು ಹೊಂದಿರುವ ಯಾರಾದರೂ ಸಹ ನಿಮಗೆ ವಾಟ್ಸಾಪ್ ನಲ್ಲಿ ಕರೆ ಮಾಡಬಹುದು. ಆದರೆ, ನೀವು ಗೊತ್ತಿರದ ಫೋನ್ ಸಂಖ್ಯೆಯನ್ನು ನಿರ್ಬಂಧಿಸಬಹುದು ಅಥವಾ ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ಅಪರಿಚಿತ ಕರೆಗಳನ್ನು ಮೌನಗೊಳಿಸಬಹುದು. ಈ ಮೂಲಕ ನಿಮ್ಮ ಫೋನ್ ಬಳಕೆಯಲ್ಲಿ ಹೆಚ್ಚಿನ ಗೌಪ್ಯತೆ ಕಾಪಾಡಿಕೊಳ್ಳಬಹುದು.
*ಬಳಕೆದಾರರು ಈಗ ಈ ಆಪ್‌ನಲ್ಲಿ ಫಿಂಗರ್‌ಪ್ರಿಂಟ್ ಲಾಕ್ ಅನ್ನು ಕೂಡ ಬಳಕೆ ಮಾಡಿಕೊಳ್ಳಬಹುದಾಗಿದೆ. ಬೇರೆಯವರು ತಮ್ಮ ಸ್ಮಾರ್ಟ್‌ಫೋನ್ ತೆಗೆದುಕೊಂಡರೂ ಚಾಟ್‌ಗಳು ಖಾಸಗಿಯಾಗಿ ಉಳಿಯಬೇಕೆಂದು ಬಯಸುವ ಜನರು ಈ ಸೌಲಭ್ಯ ಬಳಕೆ ಮಾಡಬಹುದು. ಇದಕ್ಕಾಗಿ, ಸೆಟ್ಟಿಂಗ್ ವಿಭಾಗಕ್ಕೆ ಹೋಗಿ ಅಲ್ಲಿ ಗೌಪ್ಯತೆ ಕಾಣಿಸಿಕೊಳ್ಳುತ್ತದೆ. ನಂತರ ಕೆಳಗೆ ಸ್ಕ್ರಾಲ್ ಮಾಡಿದರೆ ಫಿಂಗರ್‌ಪ್ರಿಂಟ್ ಲಾಕ್ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಸಕ್ರಿಯಗೊಳಿಸಿ.
*ಉಳಿದಂತೆ ನೀವು ನಿರ್ದಿಷ್ಟ ಸಂಪರ್ಕಗಳಿಂದ ನಿಮ್ಮ ಸ್ಟೇಟಸ್, ಪ್ರೊಫೈಲ್ ಚಿತ್ರ ಮತ್ತು ಕೊನೆಯ ವೀಕ್ಷಣೆಯನ್ನು ಮರೆಮಾಡಬಹುದು. ಈ ಫೀಚರ್ಸ್ ಪ್ರೊಫೈಲ್ ಚಿತ್ರಕ್ಕಾಗಿ ನಿರ್ದಿಷ್ಟವಾಗಿ ಉಪಯುಕ್ತವಾಗಿದೆ. ಗೌಪ್ಯತೆ ಕಾಪಾಡಿಕೊಳ್ಳುವ ಬಳಕೆದಾರರು ತಮ್ಮ ಫೋಟೋಗಳನ್ನು ಸಂಪರ್ಕವಿಲ್ಲದವರಿಗೆ ತೋರಿಸಲು ಬಯಸುವುದಿಲ್ಲ. ಇದರಿಂದಾಗಿ ಇದು ಅತ್ಯಂತ ಉಪಯುಕ್ತ. ಅದರಲ್ಲೂ ಯಾರೇ ಆದರೂ ಕೆಲವೊಮ್ಮೆ ವಾಟ್ಸಾಪ್‌ನಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಸಂಪರ್ಕಿಸಬೇಕಾಗುತ್ತದೆ.

*ಹಾಗೆಯೇ ಅಪರಿಚಿತ ಗ್ರೂಪ್‌ಗಳ ಮೂಲಕ ಬರುವ ಮೆಸೆಜ್‌ಗಳನ್ನು ನೀವು ನಿರ್ಬಂಧ ಮಾಡಬಹುದು. ಅದರಲ್ಲೂ ಯಾರದೇ ಫೋನ್‌ನ ನಂಬರ್ ಅನ್ನು ಯಾವುದೇ ಗ್ರೂಪ್‌ಗೆ ಸೇರಿಸಲು ವಾಟ್ಸಾಪ್ ಅನುಮತಿ ನೀಡಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಸಿಕ್ಕ ಸಿಕ್ಕ ಗ್ರೂಪ್‌ಗಳಿಗೆ ನಿಮ್ಮ ನಂಬರ್ ಅನ್ನು ಸೇರಿಸುತ್ತಿದ್ದರೆ. ಆದರೆ ನಿಮ್ಮ ನಂಬರ್ ಅನ್ನು ಯಾರು ಆಡ್ ಮಾಡಬೇಕು ಎಂಬುದನ್ನು ನೀವೇ ನಿರ್ಧಾರ ಮಾಡಬಹುದು.
*ಇದಿಷ್ಟು ಮಾತ್ರವಲ್ಲದೆ ಯಾರನ್ನೇ ಆದರೂ ಅಥವಾ ಕಾಟ ಕೊಡುವ ಬಳಕೆದಾರರನ್ನು ನಿರ್ಬಂಧಿಸಲು ವಾಟ್ಸಾಪ್ ಅನುಮತಿಸುತ್ತದೆ. ಈ ಫೀಚರ್ಸ್ ಮಾತ್ರ ಸಾಕಷ್ಟು ಬಳಕೆ ಆಗುತ್ತಿದ್ದು, ಇದರಿಂದ ಜನರು ಸಾಕಷ್ಟು ಸಮಸ್ಯೆಗಳಿಂದ ಮುಕ್ತರಾಗುತ್ತಿದ್ದಾರೆ. ಇಲ್ಲವಾದರೆ ವಾಟ್ಸಾಪ್ ಬಳಕೆ ಮಾಡುವುದೇ ಕಷ್ಟಕರವಾದ ಕೆಲಸ ಆಗುತ್ತಿತ್ತು. ಇದರೊಂದಿಗೆ ಆನ್‌ಲೈನ್ ನಲ್ಲಿ ಸಕ್ರಿಯವಾಗಿರುವುದನ್ನೂ ಸಹ ಮರೆಮಾಡಬಹುದಾಗಿದೆ.
*ಮೆಸೆಜ್‌ಗಳು ಕಣ್ಮರೆಯಾಗುವುದು ಐಚ್ಛಿಕ ಫೀಚರ್ಸ್ ಆಗಿದ್ದು, ಹೆಚ್ಚಿನ ಗೌಪ್ಯತೆಗಾಗಿ ನೀವು ಇದನ್ನು ಆನ್ ಮಾಡಬಹುದು. ಕಣ್ಮರೆಯಾಗುತ್ತಿರುವ ಮೆಸೆಜ್ ಆಯ್ಕೆ ಸಕ್ರಿಯಗೊಳಿಸಿದಾಗ, ಅವು ಯಾವ ಸಮಯಕ್ಕೆ ಡಿಲೀಟ್ ಆಗಬೇಕು ಎಂದು ನಿಮಗೆ ಸಮಯಗಳನ್ನು ನೀಡುತ್ತದೆ. ಅದರಲ್ಲಿ 24 ಗಂಟೆಗಳು, 7 ದಿನಗಳು ಅಥವಾ 90 ದಿನಗಳ ನಂತರ ನೀವು ಅವುಗಳನ್ನು ಕಣ್ಮರೆಯಾಗುವಂತೆ ಹೊಂದಿಸಬಹುದು.
*ಇದೆಲ್ಲಕ್ಕಿಂತ ಮಿಗಿಲಾಗಿ ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಗೆ ಹೆಚ್ಚಿನ ಭದ್ರತೆಯನ್ನು ನೀಡಲು ಎರಡು-ಹಂತದ ಪರಿಶೀಲನೆ ಫೀಚರ್ಸ್ ಅನ್ನು ಬಳಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ವಾಟ್ಸಾಪ್ ಅಕೌಂಟ್ ವಿಭಾಗಕ್ಕೆ ಹೋಗಿ. ಅಲ್ಲಿ ಎರಡು-ಹಂತದ ಪರಿಶೀಲನೆ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮ್ಮ ಆಯ್ಕೆಯ ಆರು-ಅಂಕಿಯ ಪಿನ್ ಅನ್ನು ಎಂಟ್ರಿ ಮಾಡಿ ಮತ್ತು ದೃಢೀಕರಿಸಿ. ನೀವು ಪ್ರವೇಶಿಸಬಹುದಾದ ಇಮೇಲ್ ವಿಳಾಸವನ್ನು ಅಲ್ಲಿ ಒದಗಿಸಿ.


Click it and Unblock the Notifications








