ಕರ್ನಾಟಕದಲ್ಲಿ 'ಡ್ರೀಮ್ 11' ಅಧ್ಯಾಯ ಮುಕ್ತಾಯ; ನೀವು ತಿಳಿಯಬೇಕಾದ ಅಂಶಗಳು!
ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸಿದ್ದ ಫ್ಯಾಂಟಸಿ ಕ್ರಿಕೆಟ್ ಆಪ್ 'ಡ್ರೀಮ್ 11' ಆಪ್ ಕರ್ನಾಟಕದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ಸಂಸ್ಥೆ ಅಧಿಕೃತವಾಗಿ ಘೋಷನೆ ಮಾಡಿದೆ. ಮುಂಬೈ ಮೂಲದ ಡ್ರೀಮ್ 11 ಸಂಸ್ಥೆ ಕರ್ನಾಟಕದಲ್ಲಿ ಹೊಸದಾಗಿ ಜಾರಿ ಮಾಡಲಾಗಿರುವ ಆನ್‌ಲೈನ್ ಜೂಜು ನಿಷೇಧ ಕಾಯ್ದೆ ಉಲ್ಲಂಘಿಸುತ್ತಿದೆ ಎನ್ನುವ ದೂರು ದಾಖಲಾಗಿತ್ತು. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಡ್ರೀಮ್ 11 ಅಧ್ಯಾಯ ಮುಕ್ತಾಯ.

ಹೌದು, ಕರ್ನಾಟಕದಲ್ಲಿ ಡ್ರೀಮ್ 11 ಅಪ್ಲಿಕೇಶನ್ ಬ್ಯಾನ್ ಆಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ವಾಸಿಸುವ ಅಥವಾ ಕರ್ನಾಟಕದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರುವ ಬಳಕೆದಾರರು ಡ್ರೀಮ್ 11 ನಲ್ಲಿ ಕ್ಯಾಶ್ ಕಂಟೆಸ್ಟ್‌ಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂಬ ಮೆಸೆಜ್ ಅನ್ನು ನೀಡಲಾಗುತ್ತಿದೆ. ಅದಾಗ್ಯೂ, ಟೀಮ್ ಕಟ್ಟಬಹುದಾಗಿದ್ದು, ಆದರೆ ಕ್ಯಾಶ್ ಕಂಟೆಸ್ಟ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಅಥವಾ ಸೇರಲು ಅವಕಾಶ ನಿರ್ಭಂಧಿಸಲಾಗಿದೆ.
ಕರ್ನಾಟಕ ರಾಜ್ಯದ ಮೂಲಕ ರಿಜಿಸ್ಟರ್ ಆಗಿರುವವರಿಗೆ ಕ್ಯಾಶ್ ಕಟ್ಟಿ ಆಡುತ್ತಿದ್ದ ಕಂಟೆಸ್ಟ್ ಗೇಮ್‌ಗಳನ್ನು ಆಡಲು ಎರಡೂ ಕಂಪೆನಿಗಳು ಅನುಮತಿಸುವುದಿಲ್ಲ. ಅದಾಗ್ಯೂ ಒಂದು ವೇಳೆ ಬಳಕೆದಾರರು ಕಂಟೆಸ್ಟ್ ಆಡಿ ಹಣವನ್ನು ಗೆದ್ದರೆ, ಜಾರಿಯಲ್ಲಿರುವ ಹೊಸ ನಿಯಮಗಳ ಪ್ರಕಾರ ಬಳಕೆದಾರರು ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇನ್ನು ಬಳಕೆದಾರರ ಡ್ರೀಮ್ 11 ಆಪ್ ಅಕೌಂಟ್‌ನಲ್ಲಿರುವ ಬ್ಯಾಲೆನ್ಸ್ ಅನ್ನು ನಿಶ್ಚಿಂತೆಯಾಗಿ ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ.

ಡ್ರೀಮ್ 11 ಕಂಪನಿ ತನ್ನ ನಿಯಮ ಮತ್ತು ಷರತ್ತುಗಳನ್ನು ಕೂಡ ನವೀಕರಣ ಮಾಡಿದೆ. ಪ್ರಸ್ತುತ ಆಂಧ್ರಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತೆಲಂಗಾಣ ರಾಜ್ಯಗಳು ಇದನ್ನು ಬಳಸುತ್ತಿವೆ. ಡ್ರೀಮ್ 11 ನಲ್ಲಿ ಹಣ ಪಾವತಿಯನ್ನು ಮಾಡಿ ಕಂಟೆಸ್ಟ್ ಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ. ಸದ್ಯ ಡ್ರೀಮ್ 11 ಬ್ಯಾನ್ ಆದ ರಾಜ್ಯಗಳ ಲಿಸ್ಟ್‌ಗೆ ಕರ್ನಾಟಕ ಸಹ ಸೇರ್ಪಡೆ ಯಾಗಿದೆ.
ಹಣ ವಿತ್ ಡ್ರಾ ಮಾಡಬಹುದು
ಕರ್ನಾಟಕದಲ್ಲಿ ಡ್ರೀಮ್ 11 ಫ್ಯಾಂಟಸಿ ಕ್ರಿಕೆಟ್ ಆಪ್ ಸ್ಥಗಿತ ಆಗಿದೆ. ಡ್ರೀಮ್ 11 ಆಪ್ ಅಕೌಂಟ್‌ನಲ್ಲಿರುವ ಬಳಕೆದಾರರ ಹಣ ಸುರಕ್ಷಿತ ಎಂದು ಡ್ರೀಮ್ 11 ಸಂಸ್ಥೆಯು ತಿಳಿಸಿದೆ. ಹಾಗೆಯೇ ಹಣವನ್ನು ವಿತ್ ಡ್ರಾ ಮಾಡಬಯಸುವವರು, ತಮ್ಮ ಖಾತೆಯನ್ನು ದೃಢೀಕರಿಸುವ ಮೂಲಕ ಅ.23 ರ ಒಳಗೆ ವಿತ್‌ಡ್ರಾ ಮಾಡಿಕೊಳ್ಳಲು ಕೋರಿಕೆ ಸಲ್ಲಿಸಬಹುದು ಎಂದು ತಿಳಿಸಿದೆ.
ಆನ್‌ಲೈನ್ ಜೂಜಾಟದಲ್ಲಿ ಸಾಕಷ್ಟು ಜನ ಮೋಸ ಹೋಗುತ್ತಿರೋದು ಸುದ್ದಿಯಾಗುತ್ತಲೇ ಇದೆ. ಅಷ್ಟೇ ಅಲ್ಲ ಆನ್‌ಲೈನ್ ಜೂಜಾಟ ಒಂದು ರೀತಿಯ ವ್ಯಸನವಾಗಿ ಬದಲಾಗುತ್ತಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ಆನ್‌ಲೈನ್ ಗ್ಯಾಬ್ಲಿಂಗ್ ಬ್ಯಾನ್ ಮಾಡಲು ನಿರ್ಧಾರ ಮಾಡಿತ್ತು. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಆನ್‌ಲೈನ್ ಜೂಜಾಟವನ್ನು ನಿಷೇಧಿಸುವ ವಿಧೇಯಕವನ್ನು ವಿಧಾನ ಮಂಡಲದ ಎರಡೂ ಸಭೆಗಳಲ್ಲಿ ಅಂಗೀಕರಿಸಿತ್ತು. ಇದು ಅ. 5 ರಂದು ಜಾರಿಗೆ ಬಂದಿತ್ತು.

ಇನ್ನು ಆನ್‌ಲೈನ್ ಗ್ಯಾಬ್ಲಿಂಗ್ ಬ್ಯಾನ್ ಮಸೂದೆಯಲ್ಲಿ ಎಲ್ಲಾ ರೀತಿಯ ವೇಜಿಂಗ್ ಅಥವಾ ಬೆಟ್ಟಿಂಗ್‌ಗಳನ್ನು ಒಳಗೊಂಡಿರುವ ಆಟಗಳು ಸೇರಿವೆ. ಟೋಕನ್‌ಗಳ ರೂಪದಲ್ಲಿ ಅಥವಾ ಇಲೆಕ್ಟ್ರಾನಿಕ್ ವಿಧಾನಗಳು ಮತ್ತು ವರ್ಚುವಲ್ ಕರೆನ್ಸಿ ರೂಪದ ಎಲ್ಲಾ ಗೇಮ್‌ಗಳು ಕೂಡ ಬ್ಯಾನ್ ಆಗಲಿವೆ. ಆನ್‌ಲೈನ್ ಜೂಜಾಟ ಬ್ಯಾನ್ ನಿರ್ಧಾರ ಮಾಡಿರುವ ರಾಜ್ಯಗಳಲ್ಲಿ ಕರ್ನಾಟಕವೇ ಮೊದಲೇನಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ತಮಿಳುನಾಡು ಸರ್ಕಾರ ಆನ್‌ಲೈನ್ ಜೂಜಾಟವನ್ನು ನಿಷೇಧಿಸುವ ಸುಗ್ರೀವಾಜ್ಞೆಯನ್ನು ಪ್ರಕಟಿಸಿತ್ತು. ಅಲ್ಲದೆ ಈ ವರ್ಷದ ಆರಂಭದಲ್ಲಿಯೇ ಕೇರಳ ರಾಜ್ಯ ಕೂಡ ಆನ್‌ಲೈನ್ ರಮ್ಮಿ ಆಟಗಳ ಮೇಲೆ ಬ್ಯಾನ್ ಆದೇಶ ಹೇರಿದೆ.
ಆನ್‌ಲೈನ್ ಜೂಜಿಗೆ ಶಿಕ್ಷೆ :
ಆನ್‌ಲೈನ್ ಜೂಜಾಟದಲ್ಲಿ ತೊಡಗುವ ಪ್ರಕರಣವನ್ನು ಜಾಮೀನು ರಹಿತ ಅಪರಾಧವನ್ನಾಗಿ ಪರಿಗಣಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. ಜೂಜಾಟದಲ್ಲಿ ತೊಡಗಿರುವವರು ಅಪರಾಧ ಸಾಬೀತಾದರೆ ಈ ಹಿಂದೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರು. ದಂಡವಿತ್ತು. ಈಗ ಅದನ್ನು ಮೂರು ವರ್ಷಕ್ಕೆ ಶಿಕ್ಷೆ ಹೆಚ್ಚಿಸಲಾಗಿದೆ ಹಾಗೂ ಕನಿಷ್ಠ 25 ಸಾವಿರ ರು.ಗಳಿಂದ ಗರಿಷ್ಠ 1 ಲಕ್ಷ ರು. ದಂಡಕ್ಕೆ ಅವಕಾಶ ನೀಡಿ ತಿದ್ದುಪಡಿಯಲ್ಲಿ ಸೇರಿಸಲಾಗಿದೆ.


Click it and Unblock the Notifications