Starlink: ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆ ನೀಡಲು ಮುಂದಾದ ಮಸ್ಕ್, ಅಂಬಾನಿ ವಿರೋಧಿಸಿದ್ಯಾಕೆ?
ಪ್ರಧಾನಿ ಮೋದಿ ಅಮೆರಿಕ ಪ್ರವಾಸದಲ್ಲಿದ್ದು, ಅವರು ವಿವಿಧ ಕಂಪನಿಗಳ ಸಿಇಒಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಜೊತೆಗೆ ಭಾರತದಲ್ಲಿ ಹೂಡಿಕೆಗಳನ್ನು ಆಹ್ವಾನಿಸುತ್ತಿದ್ದಾರೆ. ಈ ನಡುವೆ ಟೆಸ್ಲಾ ಸಿಇಒ ಮತ್ತು ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಸಹ ಮೋದಿ ಅವರನ್ನು ಭೇಟಿ ಮಾಡಿದ್ದು, ಭಾರತದಲ್ಲಿ ಹೊಸ ತಂತ್ರಜ್ಞಾನಕ್ಕೆ ಬುನಾದಿ ಹಾಕಲು ಮುಂದಾಗಿದ್ದಾರೆ.
ಹೌದು, ಮಸ್ಕ್ ಅವರು ಸ್ಪೇಸ್ ಎಕ್ಸ್ (SpaceX) ಅಭಿವೃದ್ಧಿಪಡಿಸಿದ ಉಪಗ್ರಹ ಇಂಟರ್ನೆಟ್ ಸೇವೆಯಾದ ಸ್ಟಾರ್‌ಲಿಂಕ್ (Starlink) ಅನ್ನು ಭಾರತಕ್ಕೆ ತರುವ ಬಗ್ಗೆ ಚರ್ಚಿಸಿದ್ದಾರೆಂದು ತಿಳಿದುಬಂದಿದೆ. ಈ ವಿಷಯ ವರದಿ ಆಗುತ್ತಿದ್ದಂತೆ ಭಾರತದಲ್ಲಿ ಕೆಲವರು ವಿರೋದ ಹೊರಹಾಕಿದ್ದಾರೆ. ಅದರಲ್ಲೂ ಜಿಯೋ ಮಾಲೀಕ ಮುಖೇಶ್ ಅಂಬಾನಿ ಟೀಕೆ ಮಾಡಿದ್ದಾರೆ. ಹಾಗಿದ್ರೆ ಏನಿದು ಸ್ಟಾರ್‌ಲಿಂಕ್?, ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಇಂಟ್ರೆಸ್ಟಿಂಗ್ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನ ಓದಿರಿ.

ಸ್ಟಾರ್‌ಲಿಂಕ್ ಎಂದರೇನು?: ಸ್ಟಾರ್‌ಲಿಂಕ್ ಎಂಬುದು ಉಪಗ್ರಹದ ಮೂಲಕ ಭೂಮಿಯ ಮೇಲಿನ ಜನರಿಗೆ ಇಂಟರ್ನೆಟ್ ಅನ್ನು ಒದಗಿಸುವ ಸೇವೆಯಾಗಿದೆ. ಸ್ಟಾರ್‌ಲಿಂಕ್ ಪ್ರಪಂಚದಾದ್ಯಂತ ಗ್ರಾಹಕರಿಗೆ ಹೆಚ್ಚಿನ ವೇಗದ ಹಾಗೂ ಕಡಿಮೆ-ಸುಪ್ತ ಇಂಟರ್ನೆಟ್ ನೀಡುವ ಗುರಿ ಹೊಂದಿದ್ದು, ಈಗ ಲಭ್ಯ ಆಗುತ್ತಿರುವ ವೇಗದ ಇಂಟರ್ನೆಟ್‌ಗಿಂತ ಹೆಚ್ಚಿನ ಮಟ್ಟದ ವೇಗವನ್ನು ಇದು ಎಲ್ಲಾ ಕಡೆ ಒಂದೇ ತೆರನಾಗಿ ಹೊಂದಿರಲಿದೆ.
ಇನ್ನು ಕಕ್ಷೆಯಲ್ಲಿ ಭೂಸ್ಥಿರ ಉಪಗ್ರಹಗಳನ್ನು ಅವಲಂಬಿಸಿರುವ ಸಾಂಪ್ರದಾಯಿಕ ಉಪಗ್ರಹ ಇಂಟರ್ನೆಟ್ ಸೇವೆಗಿಂತ ಭಿನ್ನವಾಗಿ ಕೆಲಸ ಮಾಡುತ್ತದೆ. ಸ್ಟಾರ್‌ಲಿಂಕ್ ಸಮೂಹವು ಸುಮಾರು 550 ಕಿಮೀ ಕಡಿಮೆ ಎತ್ತರದಲ್ಲಿ ಭೂಮಿಯ ಸುತ್ತ ಸುತ್ತುತ್ತಿರುವ ಸಾವಿರಾರು ಉಪಗ್ರಹಗಳನ್ನು ಹೊಂದಿದ್ದು, ಈ ಮೂಲಕ ಈ ಹಂತದ ಕಕ್ಷೆಯು ಸುಪ್ತತೆಯನ್ನು ಬಹಳವಾಗಿ ಕಡಿಮೆ ಮಾಡಲಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಅಡೆತಡೆಯಿಲ್ಲದ ಇಂಟರ್ನೆಟ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇದು ವಿಡಿಯೋ ಸ್ಟ್ರೀಮಿಂಗ್, ಆನ್‌ಲೈನ್ ಗೇಮಿಂಗ್ ಮತ್ತು ವಿಡಿಯೋ ಕರೆಗೆ ಸಾಕಷ್ಟು ಅನುಕೂಲ.
ಸ್ಟಾರ್‌ಲಿಂಕ್ ಹೇಗೆ ಕೆಲಸ ಮಾಡಲಿದೆ?: ಈ ಸ್ಟಾರ್‌ಲಿಂಕ್ ಉಪಗ್ರಹ, ವೈಫೈ ರೂಟರ್, ಕೇಬಲ್‌ಗಳು, ಬೇಸ್‌ನಂತಹ ಅಗತ್ಯ ಡಿವೈಸ್ ಅನ್ನು ಹೊಂದಿದ್ದು, ಇದನ್ನು ಸುಲಭವಾದ ಸೆಟಪ್ ಮಾಡಬಹುದು. ಒಮ್ಮೆ ಇದನ್ನು ಇನ್‌ಸ್ಟಾಲ್ ಮಾಡಿದ ನಂತರ ಆಕಾಶವು ಸ್ಪಷ್ಟವಾಗಿರುವವರೆಗೆ ಯಾವುದೇ ಅಡಚಣೆಯಿಲ್ಲದ ಇಂಟರ್ನೆಟ್ ಪ್ರವೇಶವನ್ನು ನೀಡುತ್ತದೆ. ಇದರೊಂದಿಗೆ ಚಳಿ, ಶಾಖ, ಮಳೆ ಮತ್ತು ಗಾಳಿಯನ್ನು ತಡೆದುಕೊಳ್ಳಲು ಜೊತೆಗೆ ರಾಕೆಟ್ ಎಂಜಿನ್ ಕಾರ್ಯಾಚರಣೆಗಳಿಂದ ಸುರಕ್ಷಿತವಾಗಿರುವ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಲಾಗಿದೆ.
ಸ್ಟಾರ್‌ಲಿಂಕ್ ಪ್ರಮುಖವಾಗಿ ಸುಧಾರಿತ ಇಂಟರ್ನೆಟ್ ಸೇವೆಯನ್ನು ನೀಡುವುದರ ಮೇಲೆ ಕೇಂದ್ರೀಕರಿಸಿದೆ. ಅದಾಗ್ಯೂ ಇದು ಉಪಗ್ರಹದ ಹೊಳಪು ಮತ್ತು ಡೆಬ್ರಿಸ್ ಮಿಟಿಗೇಷನ್ ಮಾನದಂಡಗಳನ್ನು ಕಡಿಮೆ ಮಾಡಲು ಆದ್ಯತೆ ನೀಡಲಿದೆ. ಅದರಲ್ಲೂ ಉಪಗ್ರಹದ ಹೊಳಪನ್ನು ಕಡಿಮೆ ಮಾಡುವುದು ನಿರ್ಣಾಯಕದ ವಿಷಯವಾಗಿದೆ. ಯಾಕೆಂದರೆ ಸ್ಟಾರ್‌ಲಿಂಕ್ ಸಮೂಹದಲ್ಲಿ ಹೆಚ್ಚಿನ ಸಂಖ್ಯೆಯ ಉಪಗ್ರಹಗಳು ರಾತ್ರಿಯ ಆಕಾಶದಲ್ಲಿ ಬೆಳಕಿನ ಮಾಲಿನ್ಯವನ್ನು ಉಂಟುಮಾಡಬಹುದು.
ಇನ್ನು ಸ್ಟಾರ್‌ಲಿಂಕ್ ತನ್ನ ಉಪಗ್ರಹಗಳನ್ನು ಭೂಮಿಯಿಂದ ಕಡಿಮೆ ಗೋಚರಿಸುವಂತೆ ಮಾಡಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇದು ಸೂರ್ಯನ ಬೆಳಕನ್ನು ನಿರ್ಬಂಧಿಸಲು ಮತ್ತು ಅವುಗಳ ಪ್ರತಿಫಲನವನ್ನು ಕಡಿಮೆ ಮಾಡಲು ಉಪಗ್ರಹಗಳ ಮೇಲೆ ವಿಸರ್ ಅಥವಾ ಛಾಯೆಗಳನ್ನು ಸ್ಥಾಪಿಸಲಾಗುತ್ತಿದೆ. ಇದೆಲ್ಲಕ್ಕೂ ಮಿಗಿಲಾಗಿ ಈ ಸ್ಟಾರ್‌ಲಿಂಕ್ ತ್ಯಾಜ್ಯವನ್ನು ಕಡಿಮೆ ಮಾಡುವತ್ತ ಗಮನಹರಿಸಿದೆ.
ಅಂದರೆ ನಿಷ್ಕ್ರಿಯಗೊಂಡ ಉಪಗ್ರಹಗಳು, ಹಿಂದಿನ ಕಾರ್ಯಾಚರಣೆಗಳ ಅವಶೇಷಗಳು, ಸದ್ಯದ ಕಾರ್ಯಾಚರಣೆಯ ಉಪಗ್ರಹಗಳು ಮತ್ತು ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಅಪಾಯವನ್ನುಂಟು ಮಾಡುತ್ತವೆ. ಇದರಿಂದಾಗಿ ಸ್ಟಾರ್‌ಲಿಂಕ್ ತನ್ನ ಉಪಗ್ರಹ ಅವಶೇಷಗಳನ್ನು ಕಡಿಮೆ ಮಾಡಲು ಮಾರ್ಗಸೂಚಿಗಳನ್ನು ಹೊಂದಿದೆ. ಇದರಿಂದ ಬಾಹ್ಯಾಕಾಶದಲ್ಲಿ ಸಮಸ್ಯೆಗಳನ್ನು ಕಡಿಮೆ ಮಾಡಲು ತನ್ನದೇ ಆದ ಮಾರ್ಗ ಕಂಡುಕೊಂಡಿದೆ.
ಭಾರತದ ಇಂಟರ್ನೆಟ್ ಸೇವೆಯಲ್ಲಿ ಬದಲಾವಣೆ: ಇನ್ನುಳಿದಂತೆ ಈ ಸ್ಟಾರ್‌ಲಿಂಕ್ ಸೇವೆಯನ್ನು ಭಾರತಕ್ಕೆ ಪರಿಚಯಿಸುವುದರಿಂದ ಇಂಟರ್ನೆಟ್ ಸೇವೆಯಲ್ಲಿ ಖಂಡಿತಾ ಕ್ರಾಂತಿಯಾಗುತ್ತದೆ. ಯಾಕೆಂದರೆ ಇದು ದೂರದ ಪ್ರದೇಶಗಳಲ್ಲಿಯೂ ಹೆಚ್ಚಿನ ವೇಗದ ಇಂಟರ್ನೆಟ್ ಸೌಲಭ್ಯ ನೀಡುತ್ತದೆ. ಈ ಮೂಲಕ ಜನರಿಗೆ ಆನ್‌ಲೈನ್ ಸಂಪನ್ಮೂಲಗಳು, ಶಿಕ್ಷಣ, ಹಣಕಾಸಿನ ಅವಕಾಶಗಳನ್ನು ಒದಗಿಸುತ್ತದೆ.
ಮುಖೇಶ್ ಅಂಬಾನಿ ವಿರೋಧಿಸುತ್ತಿರೋದ್ಯಾಕೆ?: ಮಸ್ಕ್ ಅವರು ಭಾರತದಲ್ಲಿ ಸ್ಟಾರ್‌ಲಿಂಕ್ ಉಪಗ್ರಹ ಬ್ರಾಡ್‌ಬ್ಯಾಂಡ್ ಅನ್ನು ಭಾರತದಲ್ಲಿ ಪರಿಚಯಿಸಲು ಉತ್ಸುಕರಾಗಿದ್ದರೆ ಇತ್ತ ಮುಖೇಶ್ ಅಂಬಾನಿ ಮಾತ್ರ ಇದನ್ನು ವಿರೋಧಿಸಿದ್ದಾರೆ. ಯಾಕೆಂದರೆ ಸ್ಟಾರ್‌ಲಿಂಕ್ ಸ್ಪೆಕ್ಟ್ರಮ್ ಅನ್ನು ಹರಾಜು ಹಾಕದಂತೆ ಭಾರತವನ್ನು ಲಾಬಿ ಮಾಡುತ್ತಿದೆ ಎಂಬುದು ಅವರ ವಾದ. ಅದರಂತೆ ಜಾಗತಿಕ ಪ್ರವೃತ್ತಿಗೆ ಅನುಗುಣವಾಗಿ ಪರವಾನಗಿಗಳನ್ನು ನಿಯೋಜಿಸಬೇಕಿದೆ. ಇದು ಕಂಪನಿಗಳು ಹಂಚಿಕೊಳ್ಳಬೇಕಾದ ನೈಸರ್ಗಿಕ ಸಂಪನ್ಮೂಲವಾಗಿದೆ ಎಂದು ಹೇಳಲಾಗುತ್ತಿದೆ.

ವಿದೇಶಿ ಉಪಗ್ರಹ ಸೇವಾ ಪೂರೈಕೆದಾರರು ವಾಯ್ಸ್ ಮತ್ತು ಡೇಟಾ ಸೇವೆಗಳನ್ನು ನೀಡಬಹುದು ಮತ್ತು ಸಾಂಪ್ರದಾಯಿಕ ಟೆಲಿಕಾಂ ಪ್ಲೇಯರ್‌ಗಳೊಂದಿಗೆ ಸ್ಪರ್ಧಿಸಬಹುದು. ಆದ್ದರಿಂದ ಇದನ್ನು ಅವರು ಪಡೆಯಲು ಹರಾಜು ಪ್ರಕ್ರಿಯೆ ಇರಬೇಕು ಎಂದು ವಾದಿಸಿದೆ. ಇನ್ನು ವಾಸ್ತವವಾಗಿ ಉಪಗ್ರಹದ ಮೂಲಕ ಇಂಟರ್ನೆಟ್ ಸೇವೆಗಳನ್ನು ಮಸ್ಕ್ ನೀಡುವುದು ಬಹಳ ದೊಡ್ಡ ಬದಲಾವಣೆ ಆಗಲಿದೆ. ಯಾಕೆಂದರೆ ಜಿಯೋ ಸೇರಿದಂತೆ ಇತರೆ ಪ್ರಮುಖ ಕಂಪನಿಗಳು ಆಪ್ಟಿಕಲ್ ಫೈಬರ್ ಮೂಲಕ ಇಂಟರ್ನೆಟ್ ಸೇವೆಗಳನ್ನು ನೀಡುತ್ತಿದ್ದು, ಇದಕ್ಕೆ ಖಂಡಿತಾ ದೊಡ್ಡ ಹೊಡೆತ ಬೀಳುತ್ತದೆ.


Click it and Unblock the Notifications








