ಲ್ಯಾಪ್ಟಾಪ್ ಪ್ರವೀಣನ ಕೈಗೆ ಪೋಲೀಸರ ಸ್ಲೇಟ್ !

Posted By: Varun
ಲ್ಯಾಪ್ಟಾಪ್ ಪ್ರವೀಣನ ಕೈಗೆ ಪೋಲೀಸರ ಸ್ಲೇಟ್ !

ಈತನ ಹೆಸರು ಪಲವರ್ಮ ಕಮಲ್ ಕುಮಾರ್. ವಯಸ್ಸು 28 ವರ್ಷ. ಓದಿದ್ದು ಸೈಬರ್ ಹಾಗು ಕಂಪ್ಯೂಟರ್ ಫೋರೆನ್ಸಿಕ್ಸ್ ನಲ್ಲಿ ಮಾಸ್ಟರ್ ಆಫ್ ಸೈನ್ಸ್ (MS),ಅದೂ ಲಂಡನ್ ನಲ್ಲಿ. ಒಂದು ಕಾಲದಲ್ಲಿ ಈತನ ಸೇವೆಯನ್ನು ಬಹಳಷ್ಟು ಬಹು ರಾಷ್ಟ್ರೀಯ ಕಂಪನಿಗಳು ಸೈಬರ್ ಭದ್ರತೆಯ ವಿಷಯಕ್ಕೆ ಸಂಬಂಧಿಸಿದಂತೆ ಬಳಸಿಕೊಳ್ಳುತ್ತಿದ್ದವು. ಈತ ಯಾವುದಾದರೂ ಕಂಪನಿಯ ಮಾಹಿತಿ ಅಥವಾ ಸುರಕ್ಷಿತ ಸಿಸ್ಟಮ್ ಗಳನ್ನ ಹ್ಯಾಕ್ ಮಾಡಕ್ಕೆ ಆಗದಿದ್ದರೆ, ತಮ್ಮ ಕಂಪನಿಯ ಸೈಬರ್ ಸುರಕ್ಷತೆ ಸಮರ್ಪಕವಾಗಿದೆ ಎನ್ನುವಷ್ಟುರ ಮಟ್ಟಿಗೆ ಈತ ಖ್ಯಾತಿ ಪಡೆದಿದ್ದ.

ಆದರೆ ಅದ್ಯಾವ ಕಂತ್ರಿ ದೆವ್ವ ಈತನ ಮೈ ಮೇಲೆ ಹೊಕ್ಕಿತೋ ಗೊತ್ತಿಲ್ಲ. ಬರುತ್ತಿದ್ದ ಕೈ ತುಂಬಾ ಹಣವನ್ನ ಬಿಟ್ಟು ಅಕ್ರಮವಾಗಿ ಹಣ ಸಂಪಾದಿಸಲು ಹೋಗಿ ಕೈ ಅಲ್ಲಿ ಲ್ಯಾಪ್ಟಾಪ್ ಹಿಡಿದು ಎಥಿಕಲ್ ಹ್ಯಾಕಿಂಗ್ ಮಾಡುವುದನ್ನು ಬಿಟ್ಟು ಈತ ಪಲವರ್ಮ ಕಮಲ್ ಕುಮಾರ್, ಸನ್ ಆಫ್ ಪ್ರಸಾದ್, 28 ವರ್ಷ, 420 IPC & 43.66 IT ACT ಎಂದು ಬರೆದಿರುವ ಸ್ಲೇಟ್ ಹಿಡಿಯುವ ಹಾಗೆ ಮಾಡಿಕೊಂಡಿದ್ದಾನೆ.

ಮೂಲತಹ ಆಂಧ್ರದ ಗುಂಟೂರ್ ನವನಾದ ಈತ ಮಾಡಿದ್ದು ಇಷ್ಟೇ. ರಷಿಯಾದಿಂದ ATM ಮಶೀನುಗಳಿಗೆ ಹಾಕುವ ಸ್ಕಿಮ್ಮರ್ (ಈ ಎಲೆಕ್ಟ್ರಾನಿಕ್ ಯಂತ್ರವನ್ನು ATM , ಶಾಪಿಂಗ್ ಮಾಲ್ ಹಾಗು ಹೊಟೇಲುಗಳಲ್ಲಿ ಡೆಬಿಟ್/ ಕ್ರೆಡಿಟ್ ಕಾರ್ಡ್ ಅನ್ನು ಸ್ವೈಪ್ ಮಾಡುವ ಜಾಗದಲ್ಲಿ ಅಳವಡಿಸಿದರೆ, ಕಾರ್ಡ್ ನ ಸಂಪೂರ್ಣ ಮಾಹಿತಿಯನ್ನು ಕದಿಯುತ್ತದೆ) ಯಂತ್ರವನ್ನು ತರಿಸಿಕೊಂಡ.

ಅದರ ಜೊತೆ ಚೀನಾದಿಂದ ಕಾರ್ಡ್ ನ ಹಿಂದಿರುವ ಮ್ಯಾಗ್ನೆಟಿಕ್ ಸ್ಟ್ರಿಪ್ ಅನ್ನು ನಕಲು ಮಾಡಬಹುದಾದ ಕಾರ್ಡ್, CCTV ಹಾಗು ಡೆಬಿಟ್/ ಕ್ರೆಡಿಟ್ ಕಾರ್ಡ್ ಉತ್ಪಾದನೆ ಮಾಡುವ ಮಶೀನುಗಳನ್ನೂ ಖರೀದಿ ಮಾಡಿದ, ನಂತರ ಮೈಕ್ರೋ ಚಿಪ್, ಲ್ಯಾಪ್ಟಾಪ್ ಬಳಸಿಕೊಂಡು, ATM ದರೋಡೆಗೆ ಸ್ಕೆಚ್ ಹಾಕಿದ.

ಈ ವರ್ಷದ ಜನವರಿ 21 ರಿಂದ 23ರ ವರೆಗೆ ಬೆಂಗಳೂರಿನ ಹಲವಾರು ಏಟಿಎಂ ಕೇಂದ್ರಗಳನ್ನು ಜಾಲಾಡಿ ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಜೆಪಿ ನಗರ, ಜಯನಗರ, ತಿಲಕ್ ನಗರ, ಆರ್ಟಿ ನಗರ, ಕಬ್ಬನ್ ಪಾರ್ಕ್ ನ ಹಲವಾರು ಏಟಿಎಂ ಕೇಂದ್ರಗಳಲ್ಲಿ ಸ್ಕಿಮ್ಮರ್ ಯಂತ್ರವನ್ನು ಅಳವಡಿಸಿದರು. ಅದು ಆದ ಒಂದೇ ವಾರಕ್ಕೆ ಹಲವಾರು ಜನರ ಕಾರ್ಡ್ ಗಳನ್ನು ನಕಲು ಮಾಡಿ ಸುಮಾರು 40 ಲಕ್ಷಕ್ಕೂ ಹೆಚ್ಚು ಹಣವನ್ನು ಎಗರಿಸಿಬಿಟ್ಟ! ಬಂದ ಬಿಟ್ಟಿ ಹಣದಿಂದ ಆಡಿ ಕಾರ್ ಹಾಗು ಹೈದರಾಬಾದಿನಲ್ಲೊಂದು ಮನೆ ಕೊಂಡುಕೊಂಡ.

ಆದರೆ ಸಿಕ್ಕಿ ಹಾಕಿಕೊಂಡಿದ್ದು ಮಾತ್ರ ಈತನ ಸಹಚರನ ಗರ್ಲ್ ಫ್ರೆಂಡ್ ಮಾಡಿದ ಒಂದು ಕರೆಯಿಂದ.

MS ಮಾಡಿ, ದೇಶ ವಿದೇಶಗಳಲ್ಲಿ ಹೆಸರು ಗಳಿಸಿದ್ದ ಈತ ಅದ್ಯಾಕೆ ಈ ರೀತಿಯ ಕಾನೂನುಬಾಹಿರ ರೀತಿಯಲ್ಲಿ ಹಣಮಾಡುವ ಕೆಲಸಕ್ಕೆ ಕೈ ಹಾಕಿದ ಎಂದು ಪೊಲೀಸರಿಗೂ ಗೊತ್ತಿಲ್ಲವಂತೆ.

ಇದನ್ನೆಲ್ಲಾ ತಿಳಿದ ಮೇಲೆ ನಮ್ಮಲ್ಲಿ ಮೂಡುವ ಕಟ್ಟ ಕಡೆಯ ಪ್ರಶ್ನೆ, ಲ್ಯಾಪ್ಟಾಪ್ ಹಿಡಿವ ಕೈ ಸ್ಲೇಟ್ ಹಿಡ್ಯೋ ಹಾಗೆ ಆಗಿದ್ದಾದ್ರೂ ಯಾಕೆ ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot