Earbuds:ನೀವು ಯಾವಾಗಲೂ ಇಯರ್‌ಬಡ್ಸ್ ಬಳಕೆ ಮಾಡುತ್ತೀರಾ? ಹಾಗಿದ್ರೆ ಈ ಸಮಸ್ಯೆ ಕಟ್ಟಿಟ್ಟಬುತ್ತಿ!
ಸ್ಮಾರ್ಟ್‌ಫೋನ್ ಬಳಕೆ ಮಾಡುವ ರೀತಿಯಲ್ಲಿಯೇ ಇತ್ತೀಚೆಗೆ ಇಯರ್‌ಫೋನ್ ಹಾಗೂ ಇಯರ್‌ಬಡ್ಸ್ ಬಳಕೆ ಸಹ ಹೆಚ್ಚಾಗುತ್ತಿವೆ. ಅದರಲ್ಲೂ ವಿವಿಧ ಸುಧಾರಿತ ಫೀಚರ್ಸ್ ಇರುವ ಇಯರ್‌ಬಡ್ಸ್‌ಗಳನ್ನು ಅನಾವರಣ ಕಂಪೆನಿಗಳು ಅನಾವರಣ ಮಾಡಿಕೊಂಡು ಬರುತ್ತಿವೆ. ಅದರಲ್ಲೂ ಇವು ಕೈಗೆಟಕುವ ದರದಲ್ಲಿ ಲಭ್ಯ ಇರುವುದರಿಂದಾಗಿ ಖರೀದಿ ಸಹ ಹೆಚ್ಚಾಗುಒತ್ತಿದೆ. ಈ ನಡುವೆ ಇಯರ್‌ಫೋನ್ ಸಂಬಂಧ ಶಾಕಿಂಗ್ ವರದಿ ಹೊರಬಿದ್ದಿದೆ.
ಹೌದು, ವರ್ಕ್ ಔಟ್ ಮಾಡುವಾಗ, ವಿಡಿಯೋಗಳನ್ನು ನೋಡುವಾಗ ಅಥವಾ ಕರೆಯಲ್ಲಿ ಮಾತನಾಡುವಾಗ ಈ ಇಯರ್‌ಬಡ್ಸ್ (Earbuds) ಬಳಕೆ ಮಾಡುವುದು ಸಾಮಾನ್ಯ. ಯಾಕೆಂದರೆ ಇವು ಡಿಜಿಟಲ್ ಪ್ರಪಂಚದ ಪ್ರಮುಖ ಭಾಗವಾಗಿದೆ. ಆದರೆ, ಇವುಗಳ ಅತಿಯಾದ ಬಳಕೆಯಿಂದ ಏನೆಲ್ಲಾ ಸಮಸ್ಯೆ ನಿರ್ಮಾನ ಆಗುತ್ತವೆ ಎಂಬ ಬಗ್ಗೆ ಹಲವರಿಗೆ ಮಾಹಿತಿ ತಿಳಿದಿಲ್ಲ. ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ದೆಹಲಿಯ ಆಸ್ಪತ್ರೆಯ ವೈದ್ಯರು ಯುಪಿಯ ಗೋರಖ್‌ಪುರದ 18 ವರ್ಷದ ಹುಡುಗನಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯೊಂದನ್ನು ನಡೆಸಿದ್ದಾರೆ. ಯಾಕೆಂದರೆ ಆತ ಇಯರ್‌ಫೋನ್‌ಗಳನ್ನು ಅತಿಯಾಗಿ ಬಳಕೆ ಮಾಡುತ್ತಿದ್ದ. ಈ ಮೂಲಕ ಕಿವಿಯಲ್ಲಿ ಸೋಂಕು ಉಂಟಾಗಿ ಕಿವುಡುತನ ಸಮಸ್ಯೆ ಉಂಟಾಗಿತ್ತು. ಈ ಕಾರಣಕ್ಕಾಗಿಯೇ ಇದೀಗ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಕಷ್ಟಪಟ್ಟು ಮತ್ತೆ ಆಲಿಸುವ ಶಕ್ತಿ ಪಡೆದುಕೊಂಡಿದ್ದಾನೆ. ಆದರೆ, ಈ ಶಸ್ತ್ರಚಿಕಿತ್ಸೆಯಲ್ಲಿ ಎಲ್ಲರಿಗೂ ಮತ್ತೆ ಕಿವಿ ಕೇಳಿಸುತ್ತವೆ ಎನ್ನುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ವೈದ್ಯರು ಕಳವಳ ವ್ಯಕ್ತಪಡಿಸಿದ್ದು, ಈ ರೀತಿಯ ಘಟನೆಗಳ ಏರಿಕೆಯನ್ನು ಗಮನಿಸುತ್ತಿದ್ದಾರಂತೆ. ಯಾಕೆಂದರೆ ಮನೆಯಿಂದಲೇ ಕೆಲಸ ಮಾಡುವವರು ಹಾಗೂ ಒಬ್ಬಂಟಿಯಾಗಿ ಇರುವವರು ಇಯರ್‌ಬಡ್ಸ್ ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದು, ಕಿವುಡುತನ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಈ ರೀತಿಯ ಸಮಸ್ಯೆಗೆ ಸಿಲುಕುವವರು ಹದಿಹರೆಯದವರು ಎಂಬುದು ಶಾಕಿಂಗ್ ವಿಚಾರ.

ಸೋಂಕು ಹೇಗೆ ಉಂಟಾಗುತ್ತದೆ?: ಇಯರ್‌ಫೋನ್‌ಗಳ ದೀರ್ಘಾವಧಿಯ ಬಳಕೆ ಬಗ್ಗೆ ಎಚ್ಚರಿಕೆ ನೀಡಿರುವ ವೈದ್ಯರು, ಇದು ಕಿವಿಯಲ್ಲಿ ತೇವಾಂಶವನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳಿಗೆ ಕಾರಣವಾಗುತ್ತದೆ. ನಮ್ಮ ದೇಹದಂತೆ, ಕಿವಿ ಕಾಲುವೆಗೆ ವಾತಾಯನ ಅಗತ್ಯವಿರುತ್ತದೆ ಮತ್ತು ಅದನ್ನು ದೀರ್ಘಕಾಲದವರೆಗೆ ಮುಚ್ಚುವುದರಿಂದಾಗಿ ಬೆವರು ಶೇಖರಣೆ ಆಗುತ್ತದೆ. ಈ ಬೆವರು ಸೋಂಕನ್ನು ಉಂಟುಮಾಡುತ್ತದೆ ಎಂದು ತಿಳಿಸಿದ್ದಾರೆ.
ವೈದ್ಯರ ಪ್ರಕಾರ, ಇಯರ್‌ಫೋನ್‌ಗಳ ಅಸಮರ್ಪಕ ಬಳಕೆಯಿಂದಾಗಿ ಆರಂಭದಲ್ಲಿ ಮಧ್ಯಮ ಕಿವಿ ಮತ್ತು ಮಾಸ್ಟಾಯ್ಡ್ (ಕಿವಿಯ ಹಿಂದಿನ ಮೂಳೆ) ನಲ್ಲಿ ಸಮಸ್ಯೆ ನಿರ್ಮಾಣ ಆಗುತ್ತದಂತೆ. ಇದಾದ ನಂತರ ಈ ಸಮಸ್ಯೆ ಉಲ್ಬಣವಾಗುವ ಮೂಲಕ ಬಳಕೆದಾರರು ಶಾಸ್ವತವಾಗಿ ಕಿವುಡುತನಕ್ಕೆ ಒಳಗಾಗುವ ಹಾಗೆ ಮಾಡುತ್ತದೆ ಎಂದು ಹೇಳಿದ್ದಾರೆ. ಅದರಲ್ಲೂ ಈ ಸೋಂಕು ಯಾವುದೇ ವೈದ್ಯಕೀಯ ಹಸ್ತಕ್ಷೇಪಕ್ಕೆ ಪ್ರತಿಕ್ರಿಯಿಸುವುದಿಲ್ಲವಂತೆ.
ಈ ರೀತಿ ಆದರೆ ಮೊದಲೇ ಎಚ್ಚೆತ್ತುಕೊಳ್ಳಿ: ಕಿವಿಯಲ್ಲಿ ಸೋಂಕು ಉಂಟಾಗುತ್ತಿದೆ ಎನ್ನುವುದನ್ನು ನೀವೇ ಸುಲಭವಾಗಿ ಕಂಡುಕೊಳ್ಳಬಹುದು. ಹೇಗೆಂದರೆ ಕಿವಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಹೆಚ್ಚಾದಂತೆ ಕಿವಿಯಲ್ಲಿ ದ್ರವ ಬರಲು ಆರಂಭ ಆಗುತ್ತದೆ. ಇದು ನಿಮ್ಮ ಕಿವಿ ಮಿತಿಮೀರಿ ಹಾಳಾಗಿದೆ ಎಂದರ್ಥ. ಈ ಕ್ಷಣವೇ ಎಚ್ಚೆತ್ತುಕೊಂಡು ವೈದ್ಯರ ಬಳಿಗೆ ಹೋಗಲೇಬೇಕು. ಈ ಕಾರಣಕ್ಕಾಗಿಯೇ ಆ ಯುವಕನಿಗೆ ಚಿಕಿತ್ಸೆಯು ತಿಂಗಳುಗಳ ಕಾಲ ಜರುಗಿದೆ. ಹಾಗೂ ದೆಹಲಿಗೆ ಬರುವ ಮುನ್ನ ಎರಡು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾನೆ.
ಇಯರ್‌ಫೋನ್‌ಗಳನ್ನು ಹಂಚಿಕೊಳ್ಳಬೇಡಿ: ಇಯರ್‌ಫೋನ್‌ಗಳನ್ನು ಹಂಚಿಕೊಳ್ಳುವುದು ಸಹ ಕಿವಿ ಸೋಂಕುಗಳಿಗೆ ಕಾರಣವಾಗುವ ಪ್ರಮುಖ ವಿಷಯವಾಗಿದೆ. ಇದು ಇಂದಿನ ಯುವಕರಲ್ಲಿ ಹೆಚ್ಚಾಗುತ್ತಿದೆ. ಒಬ್ಬರಿಗೊಬ್ಬರು ತಮ್ಮ ಬಾಂಧವ್ಯವನ್ನು ಹೆಚ್ಚಿಗೆ ಮಾಡಿಕೊಳ್ಳುವ ಉದ್ದೇಶದಿಂದಾಗಿ ಸಿಗರೇಟ್, ಬಟ್ಟೆ , ಶೂ ಹಾಗೂ ಇನ್ನಿತರೆ ವಸ್ತುಗಳನ್ನು ಹಂಚಿಕೊಳ್ಳುವಂತೆ ಇಯರ್‌ಫೋನ್‌ಗಳನ್ನು ಸಹ ಹಂಚಿಕೊಂಡಿದ್ದಾರೆ. ಇದೇ ಕೆಲಸವನ್ನು ಈಗ ಶಸ್ತ್ರಚಿಕಿತ್ಸೆ ಒಳಗಾಗಿರುವ ಯುವಕ ಕೂಡ ಮಾಡಿರುವುದು.

ನೀವು ಈ ರೀತಿಯ ಸಮಸ್ಯೆಗಳಿಂದ ಎಚ್ಚೆತ್ತುಕೊಳ್ಳಬೇಕು ಎಂದರೆ ಈ ಸುಲಭ ಮಾರ್ಗ ಅನುಸರಿಸಿ. ಅಂದರೆ ಸಂಗೀತ ಆಲಿಸುವ ವೇಳೆ ಆಗಾಗ್ಗೆ ವಿರಾಮ ನೀಡಿ ನಿಮ್ಮ ಕಿವಿಯಿಂದ ಅವುಗಳನ್ನು ಹೊರಗೆ ತೆಗೆದಿಡಿ ಹಾಗೂ ಇಯರ್‌ಬಡ್‌ಗಳನ್ನು ಬಳಕೆ ಮಾಡುವಾಗ ವಾಲ್ಯೂಮ್ ಅನ್ನು ಕಡಿಮೆ ಮಾಡುವುದು ಸಹ ಪ್ರಮುಖವಾದ ವಿಷಯವಾಗಿದೆ. ಯಾಕೆಂದರೆ ಅನುಮತಿಸದ ಮಟ್ಟದಲ್ಲಿ ಸಂಗೀತವನ್ನು ಕೇಳುವುದು ಅಪಾಯಕಾರಿ ಮತ್ತು ಇದು ಶ್ರವಣ ನಷ್ಟಕ್ಕೆ ಕಾರಣವಾಗಬಹುದು. ಜೊತೆಗೆ ನಿಮ್ಮ ಬಡ್ಸ್‌ಗಳನ್ನು ಆಗಾಗ್ಗೆ ಕ್ಲೀನ್ ಮಾಡಿ.


Click it and Unblock the Notifications








