ಲವರ್ಸ್‌ಗಾಗಿ ಹೊಸ ಆಪ್ ಲಾಂಚ್ ಮಾಡಿದ ಫೇಸ್‌ಬುಕ್!
ಸಾಮಾಜಿಕ ಜಾಲತಾಣಗಳ ದೈತ್ಯ ಎಂದೆನಿಸಿಕೊಂಡಿರುವ ಫೇಸ್‌ಬುಕ್, ತನ್ನ ವಾಟ್ಸಪ್, ಇನ್‌ಸ್ಟಾಗ್ರಾಂ ಅಂಗಸಂಸ್ಥೆಗಳಿಂದಲೂ ಬಳಕೆದಾರರ ಮೆಚ್ಚುಗೆ ಪಡೆದಿದೆ. ಫೇಸ್‌ಬುಕ್ ಆಪ್‌ನಲ್ಲಿ ಬಳಕೆದಾರರಿಗೆ ಅನುಕೂಲಕರ ಫೀಚರ್ಸ್‌ಗಳನ್ನು ಹಾಗೂ ಹಲವು ನೂತನ ಸೇವೆಗಳನ್ನು ಪರಿಚಯಿಸಿರುವ ಫೇಸ್‌ಬುಕ್ ಇದೀಗ ಕಪಲ್ಸ್‌ಗಾಗಿಯೇ ಒಂದು ಪ್ರತ್ಯೇಕ ಅಪ್ಲಿಕೇಶನ್ ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದೆ.

ಹೌದು, ಫೇಸ್‌ಬುಕ್ ಸಂಸ್ಥೆಯು ಕಪಲ್ಸ್‌ಗಾಗಿಯೇ ಹೊಸದಾಗಿ ಟ್ಯೂನ್ಡ್(Tuned) ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದೆ. ಈ ಆಪ್ ಮುಖ್ಯವಾಗಿ ಲವರ್ಸ್ ಹಾಗೂ ದಂಪತಿಗಳಿಗೆ ಮಾತ್ರ ಎನ್ನಲಾಗಿದೆ. ಪ್ರೇಮಿಗಳು/ಜೋಡಿಗಳು ಮ್ಯೂಸಿಕ್, ಟೆಕ್ಟ್, ಫೋಟೊ, ವಿಡಿಯೊ, ವಾಯಿಸ್ ಮೆಸೆಜ್‌ಗಳನ್ನು ಪರಸ್ಪರ ಹಂಚಿಕೊಳ್ಳಲು ಫೇಸ್‌ಬುಕ್ ಟ್ಯೂನ್ಡ್ ಆಪ್ ಪ್ಲಾಟ್‌ಫಾರ್ಮ್ ಒದಗಿಸಲಿದೆ. ಈ ಆಪ್ ಡೇಟಿಂಗ್ ಆಪ್ ತರಹ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಫೇಸ್‌ಬುಕ್ ಟ್ಯೂನ್ಡ್ ಸೋಶಿಯಲ್ ಅಪ್ಲಿಕೇಶನಿನಲ್ಲಿ ಕಪಲ್ಸ್ ಪರಸ್ಪರ ಚಾಟ್ ಮಾಡಬಹುದಾಗಿದೆ ಹಾಗೂ ಅವರ ಮೋಡ್ ಆಧಾರಿತವಾಗಿ ಇಮೋಜಿಗಳನ್ನು ಶೇರ್ ಮಾಡಬಹುದು. ಜೊತೆಗೆ ಫೋಟೋ, ಮ್ಯೂಸಿಕ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳಲು ನೆರವಾಗಿದ್ದು, ವಾಯಿಸ್ ನೋಟ್ ಸಹ ಕಳುಹಿಸಬಹುದಾದ ಸೌಲಭ್ಯವು ಈ ಆಪ್‌ನಲ್ಲಿದೆ. ಪ್ರತ್ಯೇಕತೆಗಾಗಿ private space ಸೌಲಭ್ಯವನ್ನು ಈ ಆಪ್ ಒಳಗೊಂಡಿದೆ.

ಫೇಸ್‌ಬುಕ್ ಈ ರೀತಿ ಹೊಸ ಆಪ್‌ಗಳನ್ನು ಪರಿಚಯಿಸುವುದೇನು ಹೊಸದಲ್ಲ. ಕಳೆದ ಫೆಬ್ರವರಿಯಲ್ಲಿ ಸಂಸ್ಥೆಯು 'ಹೊಬ್ಬಿ''-Hobbi ಎಂಬ ಫೋಟೋ ಮತ್ತು ವೀಡಿಯೊ ಶೇರಿಂಗ್ ಅಪ್ಲಿಕೇಶನ್ ಅನ್ನು ಶುರು ಮಾಡಿತ್ತು. ಅಂದಹಾಗೆ ಫೇಸ್‌ಬುಕ್‌ನ ಈ ಹೊಸ ಟ್ಯೂನ್ಡ್ ಅಪ್ಲಿಕೇಶನ್ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಲಭ್ಯವಿದ್ದು, ಆಪಲ್‌ನ ಆಪ್ ಸ್ಟೋರ್‌ನಲ್ಲಿ ಮಾತ್ರ ಲಭ್ಯವಿದೆ. ಆಂಡ್ರಾಯ್ಡ್ ಓಎಸ್ ಆವೃತ್ತಿಯಲ್ಲಿ ಲಭ್ಯವಿಲ್ಲ ಎಂದು ಸೈಟ್ ಸೆನ್ಸರ್ ಟವರ್‌ನ ಮಾಹಿತಿ ಬಹಿರಂಗಪಡಿಸಿದೆ.

ಫೇಸ್‌ಬುಕ್ ಹೊಸ ಆಪ್‌ಗಳ ಪರಿಚಯಿಸುವ ಜೊತೆಗೆ ತನ್ನ ಸೇವೆಗಳಲ್ಲಿ ಅಪ್‌ಡೇಟ್ ಫೀಚರ್‌ಗಳನ್ನು ಅವಳವಡಿಸುತ್ತಾ ಸಾಗಿದೆ. ಈ ನಿಟ್ಟಿನಲ್ಲಿ ಫೇಸ್‌ಬುಕ್ ಹೊಸದಾಗಿ ಡೆಸ್ಕ್‌ಟಾಪ್ ಮೆಸೆಂಜರ್ ಆಪ್ ಆವೃತ್ತಿಗೂ ವಿಡಿಯೊ ಕಾಲಿಂಗ್ ಮತ್ತು ವಾಯಿಸ್ ಕಾಲಿಂಗ್ ಸೌಲಭ್ಯಗಳನ್ನು ಪರಿಚಯಿಸಿದೆ. ಹೀಗಾಗಿ ಇನ್ನೂ ಬಳಕೆದಾರರು ಸ್ಮಾರ್ಟ್‌ಫೋನಿನಲ್ಲಿ ಅಷ್ಟೇ ಅಲ್ಲದೇ ಡೆಸ್ಕ್‌ಟಾಪ್ ಸ್ಕ್ರೀನ್ ಹಾಗೂ ಲ್ಯಾಪ್‌ಟಾಪ್‌ನಲ್ಲಿಯೂ ಸಹ ಮೆಸೆಂಜರ್ ವಿಡಿಯೊ ಕಾಲಿಂಗ್ ಬಳಕೆ ಮಾಡಬಹುದಾಗಿದೆ.

ಸದ್ಯ ಕೊರೊನಾ ಎಫೆಕ್ಟ್‌ನಿಂದಾಗಿ ದೇಶದಲ್ಲಿ ಲಾಕ್‌ಡೌನ್ ಜಾರಿಯಿದೆ. ಹೀಗಾಗಿ ಎಲ್ಲರೂ ಮನೆಯಲ್ಲಿಯೇ ಇರುವುದರಿಂದ ಹಾಗೂ ಅನೇಕ ಸಂಸ್ಥೆಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ವಿಡಿಯೊ ಕಾನ್ಫರೆನ್ಸ್‌ಗಾಗಿ ವಿಡಿಯೊ ಕಾಲಿಂಗ್ ಆಪ್‌ಗಳ ಬಳಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಫೇಸ್‌ಬುಕ್ ಮೆಸೆಂಜರ್ ಡೆಸ್ಕ್‌ಟಾಪ್‌ನಲ್ಲಿಯೂ ವಿಡಿಯೊ ಕಾಲಿಂಗ್ ಸೌಲಭ್ಯವನ್ನು ಪರಿಚಯಿಸಿದೆ ಎನ್ನಲಾಗಿದೆ. ಅಂದಹಾಗೆ ಫೇಸ್‌ಬುಕ್ ಮೆಸೆಂಜರ್ ಡೆಸ್ಕ್‌ಟಾಪ್ ವಿಡಿಯೊ ಕಾಲಿಂಗ್ ಫೀಚರ್ ಮೈಕ್ರೋಸಾಫ್ಟ್ ವಿಂಡೊಸ್ ಹಾಗೂ ಆಪಲ್‌ನ ಮ್ಯಾಕ್ ಓಎಸ್ ಡೆಸ್ಕ್‌ಟಾಪ್‌ಗಳಲ್ಲಿಯೂ ಲಭ್ಯವಾಗಲಿದೆ ಎಂದು ಸಂಸ್ಥೆಯು ಹೇಳಿದೆ.


Click it and Unblock the Notifications








