ಇ-ಕಾಮರ್ಸ್ ಸೈಟ್ ಮೂಲಕ ಶಾಪಿಂಗ್ ಮಾಡುತ್ತೀರಾ!? ಹಾಗಿದ್ರೆ ಈ ಸಲಹೆ ಪಾಲಿಸಿ!
ಈಗಂತೂ ಬಹುಪಾಲು ಮಂದಿ ಸ್ಟೋರ್‌ಗಳಿಗೆ ಹೋಗಿ ಬೇಕಾದ ಸಾಮಾಗ್ರಿ ಖರೀದಿ ಮಾಡಿ ಬರುವ ಕೆಲಸಕ್ಕೆ ಮುಂದಾಗುವುದಿಲ್ಲ. ಇದರಿಂದಾಗಿಯೇ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ತಮ್ಮ ಸೇವೆಯನ್ನು ಮೂಲೆ ಮೂಲೆಗೂ ವಿಸ್ತರಣೆ ಮಾಡಿಕೊಂಡು ಬರುತ್ತಿವೆ. ಆದರೆ, ಈ ಆನ್‌ಲೈನ್ ಶಾಪಿಗ್ ವೇಳೆ ನೀವು ಅಗತ್ಯವಾಗಿ ಈ ವಿಷಯಗಳನ್ನು ತಿಳಿದಿರಲೇಬೇಕು.
ಹೌದು, ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿ, ಇಯರ್‌ಬಡ್ಸ್, ಲ್ಯಾಪ್‌ಟಾಪ್ ಸೇರಿದಂತೆ ವಿವಿಧ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವುದು ಸಹಜ. ಯಾಕೆಂದರೆ ರಿಟೇಲರ್ ಸ್ಟೋರ್‌ಗಿಂತ ಕಡಿಮೆ ಬೆಲೆಯಲ್ಲಿ ಇ-ಕಾಮರ್ಸ್ ಸೈಟ್‌ನಲ್ಲಿ ಲಭ್ಯ ಇರಲಿವೆ.ಆದರೆ, ದುಬಾರಿ ಬೆಲೆಯ ಅಥವಾ ಸೂಕ್ಷ್ಮ ವಸ್ತುಗಳನ್ನು ನೀವು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತೀರಿ ಎಂದಾದರೆ ಮೊದಲು ಈ ಅಂಶಗಳ ಕಡೆ ಗಮನಹರಿಸಿ, ಇದರಿಂದ ಯಾವುದೇ ಕಾರಣಕ್ಕೂ ನೀವು ಮೋಸ ಹೋಗುವುದಿಲ್ಲ.

ಸಾಮಾನ್ಯವಾಗಿ ಮೊಬೈಲ್ ಆರ್ಡರ್ ಮಾಡಿದ್ದಾಗ ಅಥವಾ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದಾಗ ಈ ಡಿವೈಸ್‌ಗಳ ಬದಲಿಗೆ ಸೋಪುಗಳನ್ನು ಅಥವಾ ಕಲ್ಲುಗಳನ್ನು ಸ್ವೀಕಾರ ಮಾಡಿದ ಅದೆಷ್ಟೋ ಘಟನೆಗಳು ನಮ್ಮ ಕಣ್ಣಮುಂದಿವೆ. ಇದರಲ್ಲಿ ಇ-ಕಾಮರ್ಸ್ ಸೈಟ್‌ನವರು ಮೋಸ ಮಾಡದೇ ಇದ್ದರು ಅದು ನಿಮ್ಮ ಕೈಗೆ ಬರುವಷ್ಟರಲ್ಲಿ ಎಲ್ಲಾದರೂ ಒಂದು ಕಡೆ ಅದನ್ನು ಚಾಣಾಕ್ಷತನದಿಂದ ಎಗರಿಸಿ ನಿಮಗೆ ಮೋಸ ಮಾಡುವ ಪ್ರಸಂಗ ನಡೆಯುತ್ತವೆ. ಇದರಿಂದ ನೀವು ಈ ಎಚ್ಚರಿಕೆ ಕ್ರಮಗಳನ್ನು ಪಾಲಿಸಿ.
ಬಾಕ್ಸ್ ಓಪನ್ ಮಾಡುವ ಮೊದಲು ವಿಡಿಯೋ ರೆಕಾರ್ಡ್ ಮಾಡಿ: ನೀವು ಏನಾದರೂ ದುಬಾರಿ ಬೆಲೆಯ ಸ್ಮಾರ್ಟ್‌ಡಿವೈಸ್ ಆರ್ಡರ್ ಮಾಡಿದ್ದಾಗ ಈ ವೇಳೆ ವಂಚನೆ ಏನಾದರೂ ಮಾಡುತ್ತಾರಾ ಎಂಬ ಭಾವನೆ ನಿಮ್ಮ ಮನಸ್ಸಿನಲ್ಲಿ ಮೂಡಿದ್ದರೆ ಆರ್ಡರ್ ಸ್ವೀಕಾರ ಮಾಡಿದ ತಕ್ಷಣವೇ ಅದನ್ನು ವಿಡಿಯೋ ರೆಕಾರ್ಡ್ ಮಾಡಲು ಮುಂದಾಗಿ. ಅದರಲ್ಲಿ ಏನಾದರೂ ಮೋಸ ಕಂಡು ಬಂದರೆ ನೀವು ಸುಲಭವಾಗಿ ದೂರು ದಾಖಲು ಮಾಡಬಹುದು. ಹಾಗೆಯೇ ಗ್ರಾಹಕ ನ್ಯಾಯಾಲಯದ ಮೊರೆ ಹೋಗಲು ಸುಲಭವಾಗುತ್ತದೆ.

ಅನವಶ್ಯಕವಾಗಿ ಓಟಿಪಿ ಮಾಹಿತಿ ಹೇಳದಿರಿ: ಯಾರೋ ನಿಮ್ಮ ಮನೆಗೆ ಬಂದು ನಿಮಗೆ ಈ ಆರ್ಡರ್ ಬಂದಿದೆ ತೆಗೆದುಕೊಳ್ಳಿ, ಹಾಗೆಯೇ ನಿಮ್ಮ ಫೋನ್‌ಗೆ ಬಂದಿರುವ ಓಟಿಪಿ ಹೇಳಿ ಎಂದು ಹೇಳಿದರೆ ಯಾವುದೇ ಕಾರಣಕ್ಕೂ ಹೇಳಬೇಡಿ. ಯಾಕೆಂದರೆ ನಿಮ್ಮ ಫೋನ್‌ನಲ್ಲಿ ಆರ್ಡರ್ ಮಾಡಿದರೆ ಮಾತ್ರ ನಿಮಗೆ ಓಟಿಪಿ ಬರುತ್ತದೆ. ಬೇರೆ ಯಾರೋ ಆರ್ಡರ್ ಮಾಡಿ ನಿಮ್ಮ ಮೊಬೈಲ್‌ಗೆ ಓಟಿಪಿ ಬಂದಿದೆ ಎಂದರೆ ಇದು ವಂಚನೆಯ ಕ್ರಮ ಎಂದು ಅರಿತುಕೊಳ್ಳಿ. ಇದು ಇತ್ತೀಚೆಗೆ ಹೆಚ್ಚಾಗುತ್ತಿರುವ ಮೋಸದ ಜಾಲವಾಗಿದೆ.
ಓಪನ್ ಬಾಕ್ಸ್ ಸೇವೆ ಪಡೆದುಕೊಳ್ಳಿ: ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಅದೆಷ್ಟೋ ಮಂದಿಗೆ ಈ ವಿಷಯ ಗೊತ್ತಿರುವುದಿಲ್ಲ. ನೀವು ಆರ್ಡರ್ ಮಾಡಿದ ವಸ್ತುವನ್ನು ಸ್ವೀಕರಿಸುವ ಮುನ್ನವೇ ಅದನ್ನು ತೆರೆದು ಅದು ಸರಿ ಇದೆಯೇ ಎಂದು ನೋಡಿ ಸ್ವೀಕಾರ ಮಾಡುವ ಆಯ್ಕೆ ಸಹ ಇದೆ. ಇದಕ್ಕೆ ಓಪನ್ ಬಾಕ್ಸ್ ಡೆಲಿವರಿ ಎಂದು ಕರೆಯಲಾಗುತ್ತಿದ್ದು, ನಿಮ್ಮ ಆರ್ಡರ್ ಅನ್ನು ಮನೆಗೆ ತಲುಪಿಸುವ ಡೆಲಿವರಿ ಬಾಯ್ ಬಾಕ್ಸ್ ಅನ್ನು ನಿಮ್ಮ ಮುಂದೆಯೇ ಓಪನ್ ಮಾಡಿ ಪರಿಶೀಲನೆ ಮಾಡಲು ಅವಕಾಶ ಮಾಡಿಕೊಡುತ್ತಾರೆ.
ವೆಬ್‌ಸೈಟ್‌ಗಳನ್ನು ಪರಿಶೀಲಿಸಿ: ಈಗಂತೂ ವಿವಿಧ ರೀತಿಯ ಇ-ಕಾಮರ್ಸ್ ತಾಣಗಳು ತಲೆ ಎತ್ತಿವೆ. ಆದರೆ, ಇವೆಲ್ಲವೂ ಅಧಿಕೃತ ಎಂದು ನಂಬಬೇಡಿ. ಕೆಲವು ಸೈಟ್‌ಗಳಲ್ಲಿ ಡಿವೈಸ್‌ಗಳು ತುಂಬಾ ಅಂದರೆ ತುಂಬಾ ಅಗ್ಗದ ಬೆಲೆಯಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗೆಯೇ ಈ ಆಯ್ಕೆಯಲ್ಲಿ ಮೊದಲೇ ನೀವು ಹಣ ಪಾವತಿ ಮಾಡಲು ಕೇಳುತ್ತವೆ. ಈ ವೇಳೆ ನೀವು ವಸ್ತುಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತದೆ ಎಂದು ಹಣ ಪಾವತಿ ಮಾಡಿದಿರಿ ಎಂದರೆ ನೀವು ಮೋಸ ಹೋದಿರಿ ಎಂದರ್ಥ. ಹೀಗಾಗಿ ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಅಧಿಕೃತ ಸೈಟ್ ಮೂಲಕ ಖರೀದಿ ಮಾಡಿ.

ಗಿಫ್ಟ್ ಕಾರ್ಡ್ ಸ್ವೀಕರಿಸಿದಾಗ ಅದನ್ನು ಪರಿಶೀಲಿಸಿ: ನೀವು ಯಾವುದೇ ಆರ್ಡರ್ ಮಾಡಿಲ್ಲ ಎಂದರೂ ಸಹ ನಿಮ್ಮ ಮನೆಗೆ ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ಗೆ ಗಿಫ್ಟ್ ಕಾರ್ಡ್ ಬರುತ್ತವೆ. ಈ ಗಿಫ್ಟ್ ಕಾರ್ಡ್ ಮೋಸ ಮಾಡುವ ಒಂದು ಭಾಗವಾಗಿದ್ದು, ಇವುಗಳು ಅಧಿಕೃತವೋ ಅಥವಾ ನಕಲಿಯೋ ಎಂಬುದನ್ನು ಕಂಡುಕೊಳ್ಳಿ. ಇದಕ್ಕಾಗಿ ಆ ಗಿಫ್ಟ್ ಕಾರ್ಡ್‌ನಲ್ಲಿ ಉಲ್ಲೇಖಿಸಲಾದ ನಿಯಮಗಳು ಹಾಗೂ ಷರತ್ತುಗಳ ಕಡೆ ಕಣ್ಣಾಯಿಸಿ. ಇದರಲ್ಲೂ ತಿಳಿಯುವುದಿಲ್ಲ ಎಂದಾದರೆ ಆನ್‌ಲೈನ್ ಮೂಲಕ ಸಂಬಂಧಿಸಿದ ಅಧಿಕೃತ ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.


Click it and Unblock the Notifications








