ಭಾರತದಲ್ಲೇ ಆರಂಭ ಆಗುತ್ತಾ ಫಾಕ್ಸ್‌ಕಾನ್‌ನ ಇವಿ ಉತ್ಪಾದನಾ ಕೇಂದ್ರ? ಯಾವ ರಾಜ್ಯದಲ್ಲಿ ಸ್ಥಾಪನೆ?
ಭಾರತ ತಂತ್ರಜ್ಞಾನ ವಲಯದಲ್ಲಿ ದಾಪುಗಾಲು ಹಾಕಿಕೊಂಡು ಮುನ್ನುಗ್ಗುತ್ತಿದೆ. ಈ ಮೂಲಕ ಇತರೆ ರಾಷ್ಟ್ರಗಳು ನಿಬ್ಬೆರಗಾಗಿದ್ದು, ಅದರಲ್ಲೂ ಕೆಲವು ರಾಷ್ಟ್ರಗಳಿಗೆ ಭಾರತ ತೀವ್ರ ರೀತಿಯಲ್ಲಿ ಸ್ಪರ್ಧೆ ನೀಡುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಮತ್ತೊಂದು ಸಾಧನೆಗೆ ಮುಂದಾಗಿರುವ ನಮ್ಮ ದೇಶ ವಿಶ್ವದ ಹೊಸ ಉತ್ಪಾದನಾ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ.
ಹೌದು, ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಒಂದು ತಿಂಗಳ ಬಳಿಕ ಹಾನ್ ಹೈ ಟೆಕ್ನಾಲಜಿ ಗ್ರೂಪ್ (ಫಾಕ್ಸ್‌ಕಾನ್) ಅಧ್ಯಕ್ಷ ಮತ್ತು ಸಿಇಒ ಯಂಗ್ ಲಿಯು ಮತ್ತೊಮ್ಮೆ ಭಾರತದ ಉತ್ಪಾದನೆಯ ಗುಣಮಟ್ಟದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಜೊತೆಗೆ ದೇಶವು ಹೊಸ ಉತ್ವನ್ನದೊಂದಿಗೆ ಹೊರಹೊಮ್ಮಲು ಸಜ್ಜಾಗಿದೆ ಎಂದು ತಿಳಿಸಿದ್ದು, ಈ ಮೂಲಕ ವಿಶ್ವದ ಹೊಸ ಉತ್ಪಾದನಾ ಕೇಂದ್ರವು ವೇಗವಾಗಿ ಅಭಿವೃದ್ಧಿ ಹೊಂದುವ ಸಾಧ್ಯತೆಯಿದೆ ಎಂದಿದ್ದಾರೆ.

ಭಾರತದಲ್ಲಿ ಗ್ರಾಹಕರು ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ಮೂಲಕ ವ್ಯಾಪಾರ ಅಭಿವೃದ್ಧಿ ಆಗುತ್ತಿದ್ದು, ಪರಿಣಾಮ ಫಾಕ್ಸ್‌ಕಾನ್ (Foxconn) ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲಿದೆ ಎಂದು ಲಿಯು ಮಾಹಿತಿ ನೀಡಿದ್ದಾರೆ. ಗ್ರಾಹಕರ ಅಗತ್ಯಗಳಿಗೆ ಪ್ರತಿಕ್ರಿಯೆಯಾಗಿ ಫಾಕ್ಸ್‌ಕಾನ್ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವುದನ್ನು ಮುಂದುವರೆಸಿದೆ ಎಂದು ಎಂದು ತೈವಾನ್‌ನಲ್ಲಿ ಈ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ ಏನೂ ಸಮಸ್ಯೆಗಳು ಆಗದಿದ್ದಲ್ಲಿ ದೇಶವು ಜಗತ್ತಿಗೆ ಹೊಸ ಉತ್ಪಾದನಾ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ ಎಂದು ಹೇಳಿರುವ ಅವರು, ಚೀನಾದಿಂದ ಭಾರತಕ್ಕೆ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಯಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದು, ಚೀನಾ ತನ್ನನ್ನು ಉತ್ಪಾದನಾ ಶಕ್ತಿಯಾಗಿ ಸ್ಥಾಪಿಸಲು ತೆಗೆದುಕೊಂಡ ಮೂರು ದಶಕಗಳಿಗೆ ಹೋಲಿಸಿದರೆ ಈ ಬದಲಾವಣೆಯು ಹೆಚ್ಚು ವೇಗವಾಗಿ ಭಾರತದಲ್ಲಿ ಸಂಭವಿಸುತ್ತದೆ ಎಂದು ನಿರೀಕ್ಷಿಸಿದ್ದಾರೆ.
ಇನ್ನು ಫಾಕ್ಸ್‌ಕಾನ್ 2005 ರಿಂದ ಭಾರತದಲ್ಲಿದೆ ಮತ್ತು ಈಗ ಸ್ಮಾರ್ಟ್‌ಫೋನ್‌ಗಳು ಮತ್ತು ಟೆಲಿವಿಷನ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳಂತಹ ಎಲೆಕ್ಟ್ರಾನಿಕ್ಸ್‌ಗಳ ಬೇಡಿಕೆಯನ್ನು ಪೂರೈಕೆ ಮಾಡಲು ಪ್ರಮುಖ ವಿಸ್ತರಣಾ ಡ್ರೈವ್ ಅನ್ನು ಆರಂಭ ಮಾಡಲು ಮುಂದಾಗಿದೆ. ಇದು ಈಗಾಗಲೇ ಆಪಲ್ ಉತ್ಪನ್ನಗಳ ವಿಶ್ವದ ಅತಿದೊಡ್ಡ ಒಪ್ಪಂದದ ತಯಾರಕವಾಗಿದ್ದು, ಅದರಲ್ಲೂ ಈಗ ಭಾರತದಲ್ಲಿನ ಐಫೋನ್‌ಗಳ ಉನ್ನತ ತಯಾರಕರಲ್ಲಿ ಒಂದಾಗಿದೆ.
ಇಷ್ಟೇ ಅಲ್ಲದೆ ಕಂಪನಿಯು ಶತಕೋಟಿ ಡಾಲರ್ ಮೌಲ್ಯದ ಹೂಡಿಕೆಗಳನ್ನು ತರಲಿದ್ದು, ಈ ವಿಭಾಗದಲ್ಲಿ 30 ಕ್ಕೂ ಹೆಚ್ಚು ಕಾರ್ಖಾನೆಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಎನ್ನಲಾಗಿದೆ. ಅದರಲ್ಲೂ ಆಗಸ್ಟ್‌ನಲ್ಲಿ ಕಂಪನಿಯ ಎರಡನೇ ತ್ರೈಮಾಸಿಕ ಫಲಿತಾಂಶಗಳ ಬಳಿಕ ಕಳೆದ ಕೆಲವು ವರ್ಷಗಳಿಂದ ಕಂಪನಿಯ ಆದಾಯ, ಉದ್ಯೋಗಿಗಳ ಸಂಖ್ಯೆ ಮತ್ತು ಹೂಡಿಕೆ ಪ್ರಮಾಣವು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ಎಂದು ಲಿಯು ಹೇಳಿದ್ದಾರೆ.
ಕಂಪನಿಯು ಸದ್ಯಕ್ಕೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಉತ್ಪನ್ನಗಳ ಜೋಡಣೆಯಲ್ಲಿ ತೊಡಗಿದೆ.ಆದರೆ, ಇನ್ಮುಂದೆ ಈ ಲಿಸ್ಟ್ ಮತ್ತಷ್ಟು ಬೆಳೆಯುತ್ತದೆ ಎಂದು ತಿಳಿಸಿದ್ದು, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಅಸ್ತಿತ್ವದಲ್ಲಿರುವ ಕಾರ್ಯಾಚರಣೆಗಳ ಜೊತೆಗೆ, ಕರ್ನಾಟಕ, ತೆಲಂಗಾಣ ಮತ್ತು ಇತರ ರಾಜ್ಯಗಳಲ್ಲಿಯೂ ಘಟಕಗಳನ್ನು ಸ್ಥಾಪನೆ ಮಾಡಲು ಉದ್ದೇಶಿಸಿದೆ. ಕೇಂದ್ರ ಮತ್ತು ಸ್ಥಳೀಯ ಸರ್ಕಾರಗಳೊಂದಿಗೆ ನಿಕಟ ಸಹಕಾರದ ಮೂಲಕ, ಫಾಕ್ಸ್‌ಕಾನ್ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಲು ಮತ್ತು ಮೂಲಸೌಕರ್ಯ, ನೀತಿಗಳು ಮತ್ತು ಕಾನೂನುಗಳ ವಿಷಯದಲ್ಲಿ ವ್ಯಾಪಾರದ ವಾತಾವರಣವನ್ನು ಉತ್ತಮಗೊಳಿಸಲು ಮುಂದಾಗಿದ್ದೇವೆ ಎಂದು ಅಧ್ಯಕ್ಷರು ಹೇಳಿದ್ದಾರೆ.
ಭಾರತದಲ್ಲಿ ಇವಿ ಉತ್ಪಾದನಾ ಕೇಂದ್ರ ಅನ್ವೇಷಣೆ: ಈ ನಡುವೆ ತನ್ನ ಇವಿ ಯೋಜನೆಗಳ ಬಗ್ಗೆ ತಮಿಳುನಾಡು ಸರ್ಕಾರದ ಜೊತೆ ಮಾತುಕತೆಯಲ್ಲಿ ತೊಡಗಿದೆ ಎಂದು ಲಿಯು ಅವರು ತಿಳಿಸಿದ್ದು, ತಮಿಳುನಾಡು ಸ್ಥಾವರಕ್ಕೆ ಸಂಭಾವ್ಯ ಸ್ಥಳವಾಗಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಕಂಪೆನಿಯು ಇತರ ಇವಿ ಕಂಪನಿಗಳಿಗೆ ಒಪ್ಪಂದದ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಲು ಉದ್ದೇಶಿಸಿದೆಯೇ ಅಥವಾ ಅದರ ಬ್ರ್ಯಾಂಡ್ ಅಡಿಯಲ್ಲಿ ಇವಿ ಉತ್ಪನ್ನಗಳನ್ನು ಮಾರಾಟ ಮಾಡಲು ಮಾಡಲು ಯೋಜಿಸಿದೆಯೇ ಎಂಬುದು ಅಸ್ಪಷ್ಟವಾಗಿದೆ.

ಬೀಜಿಂಗ್ ಮತ್ತು ವಾಷಿಂಗ್ಟನ್ ಡಿಸಿ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ, ಭಾರತವು ಗುತ್ತಿಗೆ ತಯಾರಕರ ಹೊಸ ಗಮನವನ್ನು ಸೆಳೆಯುತ್ತಿದೆ. ಈ ವರ್ಷದ ಮೇ ತಿಂಗಳಲ್ಲಿ, ತೆಲಂಗಾಣದ ಕೊಂಗರ್ ಕಲಾನ್‌ನಲ್ಲಿ $500 ಮಿಲಿಯನ್ ಉತ್ಪಾದನಾ ಘಟಕದ ನಿರ್ಮಾಣವನ್ನು ಫಾಕ್ಸ್‌ಕಾನ್ ಆರಂಭಿಸಿತ್ತು. ಸ್ವಲ್ಪ ಸಮಯದ ನಂತರ, ಸಂಭಾವ್ಯ ಘಟಕವನ್ನು ಸ್ಥಾಪಿಸುವ ಬಗ್ಗೆ ಕಂಪನಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನಡುವೆ ಚರ್ಚೆಗಳು ಸಹ ನಡೆದಿವೆ.


Click it and Unblock the Notifications








