ಟೆಕ್ ಆಯ್ತು ಈಗ ವಾಹನ ಜಗತ್ತನ್ನು ಆಳಲು ಸಜ್ಜಾದ ಐಫೋನ್ ತಯಾರಕ: ಇವಿ ಕಾರಿಗೆ ಸಕಲ ಸಿದ್ಧತೆ!
ಆಪಲ್‌ನ ಐಫೋನ್‌ಗಳು(iPhones) ಇಂದು ಬಹುಬೇಡಿಕೆಯ ಫೋನ್‌ಳಾಗಿ ಗುರುತಿಸಿಕೊಂಡಿವೆ. ಅದರಲ್ಲೂ ಆಪಲ್ ಐಫೋನ್ 15(iPhone 15) ಫೋನ್ ಲಾಂಚ್ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿರುವಾಗಲೇ ಐಫೋನ್ ತಯಾರಕಾ ಕಂಪೆನಿ ಆಗಿರುವ ಫಾಕ್ಸ್‌ಕಾನ್(Foxconn) ಭಾರತೀಯರಿಗೆ ಜೊತೆಗೆ ಕರ್ನಾಟಕದ ಜನತೆಗೆ ಗುಡ್ ನ್ಯೂಸ್ ನೀಡಿದೆ.
ಹೌದು, ತೈವಾನ್ ಮೂಲದ ಗುತ್ತಿಗೆ ತಯಾರಕ ಕಂಪೆನಿ ಆಗಿರುವ ಫಾಕ್ಸ್‌ಕಾನ್ ಭಾರತ ಅಥವಾ ಥೈಲ್ಯಾಂಡ್‌ನಲ್ಲಿ ಸಣ್ಣ ಎಲೆಕ್ಟ್ರಿಕ್ ಕಾರನ್ನು(EV Car) ಉತ್ಪಾದಿಸಲು ಮುಂದಾಗಿದೆ. ಅದರಲ್ಲೂ ಪ್ರಮುಖವಾಗಿ ಏಷ್ಯಾದ ಕಾರ್ಪೊರೇಟ್ ಗ್ರಾಹಕರನ್ನು ಈ ಕಂಪೆನಿ ಗುರಿಯಾಗಿಸಿಕೊಂಡಿದೆ. ಹಾಗಿದ್ರೆ, ಐಫೋನ್ ತಯಾರಿಕೆ ಕೆಲಸ ಮಾಡುತ್ತಿದ್ದ ಫಾಕ್ಸ್‌ಕಾನ್ ಯಾಕೆ ಈ ನಿರ್ಧಾರ ಮಾಡಿದೆ?, ಈ ಇವಿ ಕಾರ್‌ಗಳ ಬೆಲೆ ಹೇಗಿರಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಕಾರು ತಯಾರಿಸಲು ಮುಂದಾದ ಐಫೋನ್ ತಯಾರಕ ಫಾಕ್ಸ್‌ಕಾನ್: ಫಾಕ್ಸ್‌ಕಾನ್ ಭಾರತ ಅಥವಾ ಏಷ್ಯಾವನ್ನು ಟಾರ್ಗೆಟ್ ಮಾಡಿಕೊಂಡು ಹೊಸ ಕಾರುಗಳನ್ನು ಪರಿಚಯಿಸಲಿದೆ. ಈ ಸಂಬಂಧ ಎಲ್ಲಾ ಸಿದ್ಧತೆಗಳು ಸಹ ನಡೆದಿವೆ. ಇದರಿಂದಾಗಿ ಐಫೋನ್ 15 ಲಾಂಚ್ ಆಗುವ ಸಂತೋಷ ಒಂದು ಕಡೆಯಾದರೆ ಕೈಗೆಟಕುವ ದರದಲ್ಲಿ ಕಾರ್ ಪರಿಚಯಿಸುತ್ತಿರುವುದು ಭಾರತೀಯರಿಗೆ ಸಂತಸ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಫಾಕ್ಸ್‌ಕಾನ್‌ನ 2020 ರ ಎಲೆಕ್ಟ್ರಿಕ್ ಕಾರ್ ಪ್ಲಾಟ್‌ಫಾರ್ಮ್ ಎಮ್‌ಐಹೆಚ್‌ನ ಮುಖ್ಯಸ್ಥ ಜ್ಯಾಕ್ ಚೆಂಗ್ ಈ ಬಗ್ಗೆ ರಾಯಿಟರ್ಸ್‌ಗೆ ಮಾಹಿತಿ ನೀಡಿದ್ದು, ಸಣ್ಣ ಕಾರು ಪ್ರಸ್ತುತ ಅಭಿವೃದ್ಧಿಯಲ್ಲಿದೆ ಮತ್ತು ಎಮ್‌ಐಹೆಚ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಜೊತೆಗೆ ಫ್ರಾಂಚೈಸಿಗಳು, ಕಾರು ಬಾಡಿಗೆ ಕಂಪನಿಗಳು ಮತ್ತು ಕೊರಿಯರ್ ಸೇವೆಗಳೊಂದಿಗೆ ಮುಂಗಡ ಮಾತುಕತೆಗಳು ಪ್ರಗತಿಯಲ್ಲಿವೆ ಎಂದಿದ್ದಾರೆ. ಈ ಮೂಲಕ ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ರಸ್ತೆಗೆ ಇಳಿಯಲು ಈ ಕಾರುಗಳು ಸಜ್ಜಾದಂತೆ ಕಂಡುಬಂದಿದೆ.
ಇನ್ನು ಅಕ್ಟೋಬರ್‌ನಲ್ಲಿ ನಡೆಯಲಿರುವ ಟೋಕಿಯೋ ಮೋಟಾರ್ ಶೋನಲ್ಲಿ ಫಾಕ್ಸ್‌ಕಾನ್ ಮೂಲಮಾದರಿಯನ್ನು ಅನಾವರಣಗೊಳಿಸಲು ಚರ್ಚೆ ನಡೆಸಲಾಗಿದೆ. ಸುಮಾರು 18 ರಿಂದ 24 ತಿಂಗಳ ನಂತರ 2025ರ ದ್ವಿತೀಯಾರ್ಧದಲ್ಲಿ ಉತ್ಪಾದನೆಯು ಭಾರತ ಅಥವಾ ಥೈಲ್ಯಾಂಡ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದ್ದು, ಇದು ಯಶಸ್ವಿ ಆದ ನಂತರ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಫಾಕ್ಸ್‌ಕಾನ್ ಇನ್ನೂ ಎರಡು ಎಲೆಕ್ಟ್ರಿಕ್ ಮಾದರಿಗಳನ್ನು ನಿರ್ಮಾಣ ಮಾಡಲು ಮುಂದಾಗಲಿದೆ ಎನ್ನಲಾಗಿದೆ.
ಅದರಂತೆ ಮುಂದೆ ಘೋಷಣೆ ಮಾಡಲಾಗುವ ಕಾರುಗಳು ಆರು ಆಸನಗಳು ಮತ್ತು ಒಂಬತ್ತು ಆಸನಗಳ ಕಾರ್ ಆಗಿರಲಿವೆಯಂತೆ. ಆದರೆ, ಸದ್ಯಕ್ಕೆ ಸುದ್ದಿಯಲ್ಲಿರುವ ಕಾರು ಮೂರು ಆಸನಗಳ ಸಾಮರ್ಥ್ಯ ಹೊಂದಿದ್ದು, 10,000 - 20,000 ಡಾಲರ್ ಒಳಗಿನ ಬೆಲೆ ಹೊಂದಿರಬಹುದು ಎಂದು ಹೇಳಲಾಗುತ್ತದೆ. ಅದಾಗ್ಯೂ ಈ ಬೆಲೆ ಬಗ್ಗೆ ನಿಖರ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಏಷ್ಯಾವನ್ನೇ ಯಾಕೆ ಟಾರ್ಗೆಟ್ ಮಾಡಲಾಗಿದೆ?: ಏಷ್ಯಾದ ಒಳ ನಗರಗಳು ಮತ್ತು ಏಷ್ಯಾದ ಹಲವು ಪ್ರದೇಶಗಳಂತಹ ಜನನಿಬಿಡ ಪ್ರದೇಶಗಳಿಗೆ ಸಣ್ಣ ಕಾರುಗಳು ಸೂಕ್ತವಾಗಿವೆ ಎಂದು ಕಂಪೆನಿ ಕಂಡುಕೊಂಡಿದೆ. ಅದರಲ್ಲೂ ಭಾರತ ಮತ್ತು ಆಗ್ನೇಯ ಏಷ್ಯಾ ಒಂದೇ ರೀತಿಯ ಜನನಿಬಿಡವಾಗಿದೆ. ಪ್ರಪಂಚದ ಕೆಲವು ದೊಡ್ಡ ಮಾರುಕಟ್ಟೆಗಳನ್ನು ಇವು ಪ್ರತಿನಿಧಿಸುತ್ತವೆ. ಪರಿಣಾಮ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಕಾರುಗಳಿಗಿಂತ ಹೆಚ್ಚು ಜನಪ್ರಿಯವಾಗುತ್ತವೆ.
ಭಾರತದಲ್ಲಿ 600 ಮಿಲಿಯನ್ ಹೂಡಿಕೆ: ಫಾಕ್ಸ್‌ಕಾನ್ ವಿಶ್ವದ ಅತಿದೊಡ್ಡ ಗುತ್ತಿಗೆ ಆಧಾರದ ಎಲೆಕ್ಟ್ರಾನಿಕ್ಸ್ ತಯಾರಕರಲ್ಲಿ ಒಂದಾಗಿದ್ದು, ಇದು ಆಪಲ್‌ನ ಐಫೋನ್‌ಗಳ ಮುಖ್ಯ ಅಸೆಂಬ್ಲರ್ ಆಗಿ ಗುರುತಿಸಿಕೊಂಡಿದೆ. ಈ ನಡುವೆ ಭಾರತದಲ್ಲಿ (ಕರ್ನಾಟಕ) ಫೋನ್ ಮತ್ತು ಚಿಪ್ ಯೋಜನೆಗೆ $600 ಮಿಲಿಯನ್ ಹೂಡಿಕೆ ಮಾಡಲು ಐಫೋನ್ ತಯಾರಕ ಫಾಕ್ಸ್‌ಕಾನ್ ಸಹಿ ಮಾಡಿದೆ.

ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಮುಂದಾಗಿರುವುದು ಸಂತಸದ ವಿಚಾರವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಉದ್ದೇಶಿತ ಹೂಡಿಕೆ ಒಪ್ಪಂದ ಪತ್ರಕ್ಕೆ ಫಾಕ್ಸ್‌ಕಾನ್ ಅಧ್ಯಕ್ಷ ಯಂಗ್ ಲಿಯು ಸಹಿ ಹಾಕಿದ್ದಾರೆ. ಈ ಮೂಲಕ ಐಫೋನ್‌ಗಳಿಗೆ ಬೇಕಾದ ಕೇಸಿಂಗ್ ಘಟಕಗಳು ಹಾಗೂ ಚಿಪ್ ತಯಾರಿಕೆಯ ಉಪಕರಣಗಳನ್ನು ರಾಜ್ಯದಲ್ಲಿ ನಿರ್ಮಾಣ ಮಾಡಲಾಗುತ್ತದೆ.
ಈ ಯೋಜನೆಯೊಂದಿಗೆ ರಾಜ್ಯದಲ್ಲಿ 12,000 ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಕಂಪೆನಿ ಹಾಗೂ ರಾಜ್ಯ ಸರ್ಕಾರ ಹೊಂದಿದೆ. ಉಳಿದಂತೆ ಐಫೋನ್ ಬಿಡಿಭಾಗಗಳನ್ನು ಉತ್ಪಾದಿಸುವ ಸೌಲಭ್ಯವನ್ನು ಸ್ಥಾಪನೆ ಮಾಡಲು 350 ಮಿಲಿಯನ್ ಡಾಲರ್ ಹಣವನ್ನು ಕಂಪನಿ ಹೂಡಿಕೆ ಮಾಡಲಿದ್ದು, ಚಿಪ್ ತಯಾರಿಕೆಯ ಡುವೈಸ್‌ಗಳನ್ನು ತಯಾರಿಸಲು ಅಪ್ಲೈಡ್ ಮೆಟೀರಿಯಲ್ಸ್‌ನೊಂದಿಗೆ 250 ಮಿಲಿಯನ್ ಡಾಲರ್ ಹೂಡಿಕೆ ಮಾಡಲಾಗುತ್ತದೆ.


Click it and Unblock the Notifications








