Aadhaar ಕಾರ್ಡ್ ಬಳಕೆದಾರರೇ ಎಚ್ಚರ... ತಲೆ ಎತ್ತಿದೆ ದೊಡ್ಡ ಗ್ಯಾಂಗ್, ಎಚ್ಚರಿಕೆ ವಹಿಸೋದೇಗೆ?
ಆನ್‌ಲೈನ್ ಪಾವತಿ (Online payment) ಹೆಚ್ಚಾದಂತೆ ಈ ಸಂಬಂಧದ ಹಗರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ಆಧಾರ್ ಸಕ್ರಿಯಗೊಳಿಸಿದ ಪಾವತಿ ಆಯ್ಕೆಯಲ್ಲೂ ಮೋಸಗಳು ನಡೆಯುತ್ತಿರುವುದು ಜನರನ್ನು ಬೆಚ್ಚಿ ಬೀಳುವಂತೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ದೊಡ್ಡ ಹಗರಣವನ್ನು ಭೇದಿಸಿದ್ದಾರೆ.
ಹೌದು, ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ (AePS) ಇತ್ತೀಚಿನ ದಿನಗಳಲ್ಲಿ ಬಹುಪಾಲು ಕಡೆ ಬಳಕೆ ಆಗುತ್ತಿದೆ. ಅದರಲ್ಲೂ ರೈತರು, ಹಳ್ಳಿಗಾಡಿನ ಜನರಿಗೆ ಇದೊಂದು ವರದಾನ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಸ್ಕ್ಯಾಮರ್‌ಗಳು (Scammers) ವಿವಿಧ ಬ್ಯಾಂಕ್ ಖಾತೆಗಳಿಂದ 5.9 ಕೋಟಿ ರೂ.ಗಳನ್ನು ವಂಚಿಸಿದ್ದಾರೆ. ಹಾಗಿದ್ರೆ, ಏನಿದು ಹೊಸ ಹಗರಣ, ಹಾಗಿದ್ರೆ ಆಧಾರ್ ಕೂಡ ಸೇಫ್ ಅಲ್ವಾ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

5.9 ಕೋಟಿ ವಂಚನೆ: ಸ್ಕ್ಯಾಮರ್‌ಗಳು ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ (Aadhaar enabled payment system) ಅನ್ನು ದುರುಪಯೋಗಪಡಿಸಿಕೊಂಡು ಇಷ್ಟೊಂದು ದೊಡ್ಡ ಮೊತ್ತದ ಹಣ ಎಗರಿಸಿದ್ದು, ಐವರು ಆರೋಪಿಗಳನ್ನು ಕಡಪ ಜಿಲ್ಲಾ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿಗಳು ಬಳಸುತ್ತಿದ್ದ 12 ಬ್ಯಾಂಕ್ ಖಾತೆಗಳನ್ನು ಪೊಲೀಸರು ಪತ್ತೆಮಾಡಿದ್ದು, ಹೆಚ್ಚಿನ ತನಿಖೆಗಾಗಿ ವಿವರಗಳನ್ನು ಜಾರಿ ನಿರ್ದೇಶನಾಲಯಕ್ಕೆ (ED) ಕಳುಹಿಸಿದ್ದಾರೆ.
ಈ ಸಂಬಂಧ ಕಡಪಾ ಎಸ್‌ಪಿ ಕೆಕೆಎನ್ ಅನ್ಬುರಾಜನ್ ಅವರು ಮಾಹಿತಿ ನೀಡಿದ್ದು, ಆರೋಪಿಗಳು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಸೇರಿದಂತೆ ಸರ್ಕಾರಿ ವೆಬ್‌ಸೈಟ್‌ಗಳಿಂದ ಜನರ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಮತ್ತು ಫಿಂಗರ್‌ಪ್ರಿಂಟ್‌ಗಳನ್ನು ಕ್ಲೋನ್ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಚಿನ್ನಾಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಾಂಜನೇಯ ಪುರಂ ನಿವಾಸಿ ಶಂಕರಯ್ಯ ಎಂಬುವರು ತಮ್ಮ ಎಸ್‌ಬಿಐ ಖಾತೆಯಿಂದ 5,500 ರೂಪಾಯಿ ಡ್ರಾ ಮಾಡಿರುವುದನ್ನು ಗಮನಿಸಿದಾಗ ಹಗರಣ ಬೆಳಕಿಗೆ ಬಂದಿದೆ.
ಶಂಕರಯ್ಯ ಅವರು ಎನ್‌ಸಿಆರ್‌ಪಿ ಮೂಲಕ ದೂರು ದಾಖಲು ಮಾಡಿದ್ದಾರೆ. ಬಳಿಕ ಸೈಬರ್ ಕ್ರೈಮ್ ಪೊಲೀಸರು ಅಪರಾಧಿಗಳ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಿದ್ದು, ಬಾಕಿಯನ್ನು ಸ್ಥಗಿತಗೊಳಿಸಿದ್ದಾರೆ. ನಂತರ ಶಂಕರಯ್ಯಗೆ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಲಾಗಿದೆಯಂತೆ. ಇದಾದ ಬಳಿಕ ಚಿನ್ನಾ ಚೌಕ್ ಪೊಲೀಸರಿಗೆ ಮತ್ತೆ ದೂರು ನೀಡಲಾಗಿದೆ. ಐಪಿಸಿ ಸೆಕ್ಷನ್ 386 ಮತ್ತು ಸೆಕ್ಷನ್ 66 (D) ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಂತರದಲ್ಲಿ ಆರೋಪಿಗಳ ಮೊಬೈಲ್ ಸಂಖ್ಯೆಗಳನ್ನು ಟ್ರ್ಯಾಕ್ ಮಾಡಲಾಗಿ ಅವರನ್ನು ಬಂಧಿಸಲಾಗಿದೆ. ಈ ವೇಳೆ ತನಿಖಾಧಿಕಾರಿಗಳು ಆರೋಪಿಗಳ ವಾಟ್ಸಾಪ್ ಸಂಖ್ಯೆಗಳನ್ನು ಸಂಗ್ರಹಿಸಿ, ಕರೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈ ವೇಳೆ ಅವರು AePS ಮೂಲಕ ಶಂಕರಯ್ಯ ಅವರ ಬ್ಯಾಂಕ್ ಖಾತೆಯಿಂದ ಹಣವನ್ನು ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಈ ಗ್ಯಾಂಜ್ ಗುಂಟೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು ಸಹ ಈ ವೇಳೆ ತಿಳಿದುಬಂದಿದೆ.
ಆರೋಪಿಗಳು ಮಾಡಿದ ಮಹಾ ಮೋಸ ಏನು?: ಈ ಮೊದಲು ಆ ಮೋಸದ ಗ್ಯಾಂಗ್ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸಾವಿರಾರು ಜನರ ಬೆರಳಚ್ಚುಗಳು, ಆಧಾರ್ ಸಂಖ್ಯೆಗಳು ಮತ್ತು ಇತರ ರುಜುವಾತುಗಳನ್ನು ಸ್ಟೋರೇಜ್ ಮಾಡಿಕೊಂಡಿದ್ದಾರಂತೆ. ಅದನ್ನು ಬಾಹ್ಯ ಹಾರ್ಡ್ ಡಿಸ್ಕ್‌ನಲ್ಲಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಅಗತ್ಯ ಎಂದಾಗ ಹಣದ ವಂಚನೆ ಮಾಡಿಕೊಂಡು ಬಂದಿದ್ದಾರೆ.

ಈ ಮೋಸದ ಕಾರ್ಯಾಚರಣೆ ಹೇಗಿತ್ತು?: ಆರೋಪಿಗಳಲ್ಲಿ ಒಬ್ಬನಾದ ವೆಂಕಟೇಶ್ ಎಂಬುವವ ಸಂತ್ರಸ್ತೆಯ ಬೆರಳಚ್ಚು, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ಸಂಗ್ರಹಿಸಿದ್ದ ಎಂದು ಅನ್ಬುರಾಜನ್ ಮಾಹಿತಿ ನೀಡಿದ್ದಾರೆ. ಆತ ಇತರ ಐದು ಜನರ ಸಹಾಯವನ್ನು ಪಡೆದುಕೊಂಡಿದ್ದು, ಅವರ ಬೆರಳಚ್ಚುಗಳನ್ನು ಕ್ಲೋನಿಂಗ್ ಮಾಡುವ ಮೂಲಕ ಜನರ ಬ್ಯಾಂಕ್ ಖಾತೆಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಅಂದರೆ ಬಯೋಮೆಟ್ರಿಕ್ ಮತ್ತು ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಎಸ್ಕೆ ಜಾನಿ ಬಾಷಾ ಕೆಲಸ ಮಾಡಿದ್ದಾನೆ.
ಏನಿದು AePS ?: ಇದನ್ನು Aadhaar Enabled Payment System ಎಂದು ಕರೆಯಲಾಗುತ್ತದೆ. ಇದು ಪಾವತಿ ಸೇವೆಯಾಗಿದ್ದು, ಬ್ಯಾಂಕ್ ಗ್ರಾಹಕರು ಆಧಾರ್ ಅನ್ನು ಗುರುತಾಗಿ ತನ್ನ ಆಧಾರ್ ಸಕ್ರಿಯಗೊಳಿಸಿದ ಬ್ಯಾಂಕ್ ಖಾತೆಯನ್ನು ಪ್ರವೇಶಿಸಲು ಮತ್ತು ಬ್ಯಾಲೆನ್ಸ್ ವಿಚಾರಣೆ, ನಗದು ಹಿಂಪಡೆಯುವಿಕೆ, ರವಾನೆಗಳಂತಹ ಮೂಲಭೂತ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸಲು ಇದು ಅನುವು ಮಾಡಿಕೊಡುತ್ತದೆ.
ಈ ರೀತಿಯ ವಂಚನೆಯಿಂದ ಎಚ್ಚರಿಕೆ ವಹಿಸುವುದು ಹೇಗೆ?: ಆಧಾರ್ ವಿವರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ, ಯಾವುದೇ ರೂಪದಲ್ಲಿ ಬರುವ ವಿನಂತಿಗಳನ್ನು ಪರಿಶೀಲಿಸಿ ಹಾಗೂ OTP ಅನ್ನು ಯಾವುದೇ ಕಾರಣಕ್ಕೂ ಅನಾಮಿಕರೊಂದಿಗೆ ಹಂಚಿಕೊಳ್ಳಬೇಡಿ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಸುರಕ್ಷಿತಗೊಳಿಸಿ, ನಕಲಿ ಕರೆಗಳು ಮತ್ತು ಸಂದೇಶಗಳ ಬಗ್ಗೆ ಎಚ್ಚರದಿಂದಿರಿ, ಆಧಾರ್ ಚಟುವಟಿಕೆಯನ್ನು ಆಗಾಗ್ಗೆ ಪರಿಶೀಲಿಸಿ ಮತ್ತು ಲಾಕ್/ಅನ್‌ಲಾಕ್ ಫೀಚರ್ಸ್ ಬಳಸಿ ಮಾಡಿ.


Click it and Unblock the Notifications








