ಸಂಚಾರ ನಿಯಮ ಉಲ್ಲಂಘನೆಯ ಚಲನ್ ಬಂದಿದೆಯೇ? ಎಚ್ಚರ.. ಸಮಸ್ಯೆಗೆ ಸಿಲುಕುತ್ತೀರಾ!
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು (Online fraud) ಮಿತಿ ಮೀರುತ್ತಿವೆ. ಜೊತೆಗೆ ಇವು ಸಾಮಾನ್ಯ ಘಟನೆಗಳಂತೆ ಆಗಿ ಬಿಟ್ಟಿವೆ. ಅದರಲ್ಲೂ ಹೊಸ ಹೊಸ ರೀತಿಯ ವಂಚನೆಗಳು ವರದಿ ಆಗುತ್ತಿದ್ದು, ಇವುಗಳನ್ನು ಭೇದಿಸಲು ಪೊಲೀಸರಿಗೆ ದೊಡ್ಡ ಸವಾಲಿನ ಕೆಲಸವೂ ಹೌದು. ಈ ನಡುವೆ ಮತ್ತೊಂದು ಹೊಸ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ದೇಶದಲ್ಲಿ ಎಲ್ಲೇ ವಂಚನೆ ಆದರೂ ಸಹ ಅದನ್ನು ಆಯಾ ರಾಜ್ಯಕ್ಕೆ ಸೀಮಿತಗೊಳಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಆನ್‌ಲೈನ್ ವಂಚನೆಯನ್ನು ಯಾರೋ ಒಬ್ಬ ವಂಚಕ ಅಥವಾ ಒಂದು ಗುಂಪು ಎಲ್ಲೋ ಕೂತು ಇನ್ನೆಲ್ಲೋ ಜನರಿಗೆ ಟೋಪಿ ಹಾಕುತ್ತಿರುತ್ತಾರೆ. ಅದೇ ರೀತಿಯ ಘಟನೆ ಈಗ ಹರಿಯಾಣದಲ್ಲಿ ನಡೆದಿದೆಯಾದರೂ ನಾವೂ ಸಹ ಈ ಘಟನೆಯಿಂದ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ. ಈ ಮೂಲಕ ನಮ್ಮ ಬ್ಯಾಂಕ್ ಅಕೌಂಟ್ ಭದ್ರಪಡಿಸಿಕೊಳ್ಳಬೇಕಿದೆ. ಹಾಗಿದ್ರೆ, ಏನಿದು ಈ ಹೊಸ ವಂಚನೆ?, ಇದರಿಂದ ಬಚಾವ್ ಆಗುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ನಕಲಿ ಚಲನ್: ಸಂಚಾರ ನಿಯಮ ಉಲ್ಲಂಘನೆ ಮಾಡುವುದು ದಂಡಾರ್ಹ ಅಪರಾಧ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರ ಗುಂಪು ಜನರಿಂದ ಭಾರೀ ಹಣ ವಸೂಲಿ ಮಾಡಿದೆ. ಅಂದರೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದೀರಿ, ತಕ್ಷಣವೇ ಆನ್‌ಲೈನ್ ಮೂಲಕ ದಂಡ ಪಾವತಿ ಮಾಡಿ ಎಂದು ಮೆಸೆಜ್ ಕಳುಹಿಸುವ ಮೂಲಕ ಜನರಿಂದ ಹಗಲು ದರೋಡೆ ಮಾಡುತ್ತಿದ್ದಾರೆ.
ಇನ್ನು ವಂಚಕರು ಕಳುಹಿಸುವ ನಕಲಿ ಲಿಂಕ್ ಕ್ಲಿಕ್ ಮಾಡಿದರೆ ನಕಲಿ ವೆಬ್‌ಸೈಟ್ ಓಪನ್ ಆಗಲಿದ್ದು, ಇದು ನೈಜ ಟ್ರಾಫಿಕ್ ಪೊಲೀಸ್ ವೆಬ್‌ಸೈಟ್‌ಗಳಂತೆ ಕಾಣಿಸಿಕೊಳ್ಳಲಿದೆ. ಈ ನಕಲಿ ವೆಬ್‌ಸೈಟ್‌ಗಳು ಗ್ರಾಹಕರ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಕೇಳುತ್ತದೆ. ಅಷ್ಟೇ ಅಲ್ಲ ಬಳಕೆದಾರರು ಈ ಲಿಂಕ್ ಅನ್ನು ಕ್ಲಿಕ್ ಮಾಡಿದ ಮೇಲೆ ವಂಚಕರಿಗೆ ರಿಮೋಟ್ ಕಂಟ್ರೋಲ್ ಆಯ್ಕೆಯನ್ನೂ ಸಹ ನೀಡುತ್ತದೆ ಎನ್ನಲಾಗಿದೆ.
ಇದಾದ ನಂತರದಲ್ಲಿ ಬಳಕೆದಾರರಿಂದ ಸ್ಲ್ಯಾಮರ್‌ಗಳು ಬ್ಯಾಂಕ್ ಸಂಬಂಧಿ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುವ ಸಾಮರ್ಥ್ಯ ಪಡೆಯಲಿದ್ದಾರೆ ಎಂದು ಸೈಬರ್ ಕ್ರೈಮ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ದೇಶದ ಅನೇಕ ಭಾಗಗಳಲ್ಲಿ ಈ ಹೊಸ ರೀತಿಯ ವಂಚನೆಯ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಇನ್ನು ಹರಿಯಾಣದ ಫರಿದಾಬಾದ್ ಸೈಬರ್ ಕ್ರೈಂ ಅಧಿಕಾರಿ ಹೇಮೇಂದ್ರ ಕುಮಾರ್ ಮೀನಾ ಅವರು ಇ-ಚಲನ್ ವಂಚನೆಯ ವಿರುದ್ಧ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಹಣವನ್ನು ಕದಿಯಲು ಮೋಸದ ಲಿಂಕ್‌ಗಳನ್ನು ಬಳಸಿಕೊಂಡು ಕಾನೂನುಬದ್ಧ ಚಲನ್‌ಗಳನ್ನು ಹೋಲುವ ನಕಲಿ ಮೆಸೆಜ್‌ಗಳನ್ನು ಕ್ರಿಯೇಟ್ ಮಾಡಿ ಜನರಿಗೆ ಕಳುಹಿಸುತ್ತಿದ್ದಾರೆ ಎಂದು ಉಲ್ಲೇಖ ಮಾಡಿದ್ದಾರೆ.
ಇನ್ನು ಅಸಲಿ ಇ-ಚಲನ್ ಮೆಸೆಜ್‌ಗೂ ನಕಲಿ ಮೆಸೆಜ್‌ಗೂ ಇರುವ ವ್ಯತ್ಯಾಸವನ್ನೂ ಅವರು ಬಹಿರಂಗಪಡಿಸಿದ್ದಾರೆ. ಮೂಲ ಇ-ಚಲನ್ ಮೆಸೆಜ್‌ಗಳು ಇಂಜಿನ್ ಮತ್ತು ಚಾಸಿಸ್ ಸಂಖ್ಯೆಗಳಂತಹ ನಿರ್ಣಾಯಕ ವಾಹನ-ನಿರ್ದಿಷ್ಟ ವಿವರಗಳನ್ನು ಹೊಂದಿರುತ್ತವೆ ಎಂದು ತಿಳಿಸಿರುವ ಅವರು ಮೂಲ ಚಲನ್ ಅನ್ನು ಅಧಿಕೃತ ಸರ್ಕಾರಿ ವೆಬ್‌ಸೈಟ್ https://echallan.parivahan.gov.in/ ಗೆ ನಿರ್ದೇಶಿಸಲಾಗುತ್ತದೆ. ಆದರೆ, ನಕಲಿ ಚಲನ್ https://echallan.parivahan.in/ ಗೆ ನಿರ್ದೇಶಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದರಿಂದಾಗಿ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಜೊತೆಗೆ ನೀವು ಸ್ವೀಕರಿಸುವ ಇ-ಚಲನ್ ಮೆಸೆಜ್‌ನಲ್ಲಿ ನೀಡಿರುವ ವೆಬ್‌ಸೈಟ್ ಅನ್ನು ಎಚ್ಚರಿಕೆಯಿಂದ ಹಲವು ಬಾರಿ ಪರಿಶೀಲಿಸಬೇಕು. ಅದೆಲ್ಲದರ ಜೊತೆಗೆ ನಕಲಿ ವೆಬ್‌ಸೈಟ್.gov ಅನ್ನು ಹೊಂದಿರುವುದಿಲ್ಲ ಎಂದು ತಿಳಿಸಿದ್ದು, ಅದರಲ್ಲೂ ದೃಢೀಕರಣಕ್ಕಾಗಿ ಪಾವತಿ ಲಿಂಕ್ .gov.in ನೊಂದಿಗೆ ಕೊನೆಗೊಳ್ಳುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
ಇನ್ನು ವೆಬ್‌ಸೈಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರವೇ ಲಿಂಕ್ ಅನ್ನು ಕ್ಲಿಕ್ ಮಾಡಿ. ನಿಮ್ಮ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ನೀವು ನಕಲಿ ವೆಬ್‌ಸೈಟ್‌ನಲ್ಲಿ ನಮೂದಿಸಿದರೆ ಸ್ಕ್ಯಾಮರ್‌ಗಳು ನಿಮ್ಮ ಹಣವನ್ನು ಸುಲಿಗೆ ಮಾಡಬಹುದು. ಅದರಲ್ಲೂ ನೀವು ಇ-ಚಲನ್ ಸ್ವೀಕರಿಸಿದ್ದೇ ಆದರೆ ಟ್ರಾಫಿಕ್ ಪೊಲೀಸ್ ಇಲಾಖೆಯನ್ನು ನೇರವಾಗಿ ಸಂಪರ್ಕಿಸುವುದು ಇನ್ನೂ ಒಳ್ಳೆಯದು ಎಂದು ತಿಳಿಸಿದ್ದಾರೆ.

ಇದರೊಂದಿಗೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಫೋನ್ ಅಥವಾ ಟೆಕ್ಸ್ಟ್ ಮೆಸೆಜ್ ಮೂಲಕ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಕೇಳುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ. ಈ ರೀತಿಯ ಘಟನೆಗಳು ಆಗಾಗ್ಗೆ ನಮ್ಮ ನಡುವೆಯೇ ಜರುಗುತ್ತವೆ. ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಲಿಂಕ್ ನಿಮ್ಮ ಮೊಬೈಲ್ ಗೆ ಬಂದರೂ ಸಹ ಒಂದಲ್ಲ ಹತ್ತು ಬಾರಿ ಅದನ್ನು ಪರಿಶೀಲಿಸಿ. ಇದನ್ನು ಮಾಡದೆ ಭಯದಿಂದ ಅಥವಾ ಬೇಜವಬ್ದಾರಿಯಿಂದ ನೀವು ಅನಾಮಿಕ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಮುಂದುವರೆದಿದ್ದೇ ಆದರೆ ವಂಚಕರು ತೋಡಿದ ಹಳ್ಳಕ್ಕೆ ಬಿದ್ದಂತೆ.


Click it and Unblock the Notifications








